ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರೋಜಿನಿಗೆ ಗರಿಷ್ಠ ಮತಗಳ ಗೆಲುವಿನ ದಾಖಲೆ

ಕನಿಷ್ಠ ಅಂತರದಿಂದ ಗೆದ್ದದ್ದು ಡಿ.ಕೆ. ನಾಯ್ಕರ್‌
Last Updated 29 ಮಾರ್ಚ್ 2014, 10:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನಡೆದಿರುವ ಒಟ್ಟು 15 ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಯೇ ಗರಿಷ್ಠ ಮತಗಳ ಅಂತರದಲ್ಲಿ ಆಯ್ಕೆಯಾಗಿರುವುದು ವಿಶೇಷ. ಈ ಕ್ಷೇತ್ರದಿಂದ ತಲಾ ನಾಲ್ಕು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದ ಸರೋಜಿನಿ ಮಹಿಷಿ ಹಾಗೂ ಡಿ.ಕೆ. ನಾಯ್ಕರ್‌ ಕ್ರಮವಾಗಿ ಗರಿಷ್ಠ ಹಾಗೂ ಕನಿಷ್ಠ ಮತಗಳ ಅಂತರದಲ್ಲಿ ಆಯ್ಕೆಯಾದ ದಾಖಲೆಯನ್ನು ಹೊಂದಿದ್ದಾರೆ.

ರಾಜ್ಯದಿಂದ ಸಂಸತ್ತಿಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಹಿರಿಮೆ ಹೊಂದಿರುವ ಸರೋಜಿನಿ ಅವರ ದಾಖಲೆ ಗೆಲುವಿಗೆ ಸಾಕ್ಷಿಯಾದುದು 1962ರ ಲೋಕಸಭಾ ಚುನಾವಣೆ. ಆ ವರ್ಷ ಕಾಂಗ್ರೆಸ್‌ನಿಂದ ಮೊದಲ ಬಾರಿ ಕಣಕ್ಕೆ ಇಳಿದಿದ್ದ ಸರೋಜಿನಿ ಅವರು ಬರೋಬ್ಬರಿ 1,53,550 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು.

ಒಟ್ಟು ಚಲಾವಣೆಯಾದ ಮತಗಳ ಪೈಕಿ ಅವರು ಶೇ 71.64 ಮತಗಳನ್ನು ತಮ್ಮದಾ­ಗಿಸಿ­-ಕೊಂಡಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಎ. ಶಿವಳ್ಳಿ ಶೇ 13.02 ಮತಗಳೊಂದಿಗೆ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಮುಂದಿನ ಮೂರು ಚುನಾವಣೆಗಳಲ್ಲೂ ಸರೋಜಿನಿ ಅವರ ಗೆಲುವಿನ ಅಂತರ ಉತ್ತಮವಾಗಿಯೇ ಇತ್ತು. ಆದರೆ 1980ರ ಚುನಾವಣೆಯಲ್ಲಿ ಅವರು 96,694 ಮತಗಳ ಭಾರಿ ಅಂತರದಿಂದ ಡಿ.ಕೆ. ನಾಯ್ಕರ್‌ ಎದುರು ಸೋಲು ಕಾಣುವ ಮೂಲಕ ನಿರ್ಗಮಿಸಿದರು.

ಎರಡನೇ ಗರಿಷ್ಠ ಗೆಲುವಿನ ಅಂತರಕ್ಕೆ ಸಾಕ್ಷಿಯಾದುದು ಕಳೆದ ಬಾರಿಯ ಚುನಾವಣೆ. ಎರಡನೇ ಬಾರಿಗೆ ಸಂಸದರಾಗುವ ಕನಸು ಹೊತ್ತು ಬಿಜೆಪಿಯಿಂದ ಕಣಕ್ಕೆ ಇಳಿದಿದ್ದ ಪ್ರಹ್ಲಾದ ಜೋಶಿ 2009ರ ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿ­ಯನ್ನು 1,37,663 ಮತಗಳ ಅಂತರದಿಂದ ಮಣಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಂಜುನಾಥ ಕುನ್ನೂರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಪಕ್ಷೇತರರು ಸೇರಿ ಒಟ್ಟು 16 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

1998ರಲ್ಲಿ ಬಿಜೆಪಿ ಅಭ್ಯರ್ಥಿ ವಿಜಯ ಸಂಕೇಶ್ವರ 1,29,201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು ಈ ಕ್ಷೇತ್ರದ ಮೂರನೇ ಗರಿಷ್ಠ ಪ್ರಮಾಣದ ಜಯ.

ಕನಿಷ್ಠ ಅಂತರದ ಗೆಲುವು: ಕನಿಷ್ಠ ಅಂತರದ ಗೆಲುವಿಗೆ ಸಾಕ್ಷಿಯಾಗಿ­ರುವುದು 1991ರ ಚುನಾವಣೆ. ಆ ಚುನಾವ­ಣೆಯಲ್ಲಿ ಡಿ.ಕೆ. ನಾಯ್ಕರ್‌ ಕೇವಲ 21,791 ಮತಗಳ ಅಂತರದಿಂದ ಗೆದ್ದರು. ಒಟ್ಟು ಚಲಾವಣೆಯಾದ ಮತಗಳಲ್ಲಿ ಅವರು ಶೇ 33.26 ರಷ್ಟು ಮತಗಳನ್ನು ಪಡೆದರೆ, ಚಂದ್ರ­ಕಾಂತ ಬೆಲ್ಲದ ಶೇ 28.66 ಮತ ಪಡೆಯುವ ಮೂಲಕ ನಿರಾಸೆ ಅನುಭವಿಸಿದರು. ಮರು ಚುನಾವಣೆಯಲ್ಲಿಯೇ ನಾಯ್ಕರ್‌ ಮುಗ್ಗರಿ­ಸಿದರು. 1996ರಲ್ಲಿ ನಡೆದ ಮತದಾ­ನದಲ್ಲಿ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು­ಕೊಳ್ಳಬೇಕಾಯಿತು.

ಮೂರು ಬಾರಿ ಸಂಸದರಾಗಿ ಆಯ್ಕೆಯಾದ ವಿಜಯ ಸಂಕೇಶ್ವರ 1996ರ ಚುನಾವಣೆಯಲ್ಲಿ 40,353 ಮತಗಳ ಅಂತರದಿಂದ ಶಂಕರಣ್ಣ ಮುನವಳ್ಳಿ ವಿರುದ್ಧ ಹಾಗೂ 1999ರಲ್ಲಿ 41,580 ಅಂತರದಿಂದ ಕಾಂಗ್ರೆಸ್‌ನ ವೀರಣ್ಣ ಮತ್ತಿಕಟ್ಟಿ ವಿರುದ್ಧ ಪ್ರಯಾಸದ ಗೆಲುವು ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT