ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೊರೆ: ಬಗಲಿ

Last Updated 15 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ವಿಜಾಪುರ: `ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿರುವ ಅಕ್ರಮಗಳು ಹಾಗೂ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಜನರಿಕ್ ಔಷಧಿ ಮಳಿಗೆ ಆರಂಭಿಸುವಲ್ಲಿ ಸಚಿವ ರಾಮದಾಸ್ ಅವರು ನಿರ್ವಹಿಸಿರುವ ಪಾತ್ರದ ಕುರಿತು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕೋರ್ಟ್ ಮೊರೆ ಹೋಗುತ್ತೇನೆ~ ಎಂದು ಆಡಳಿತಾರೂಢ ಬಿಜೆಪಿಯ ಇಂಡಿ ಕ್ಷೇತ್ರದ ಶಾಸಕ ಡಾ.ಸಾರ್ವಭೌಮ ಬಗಲಿ ಹೇಳಿದರು.

`ಜನರಿಕ್ ಔಷಧಿ ಮಳಿಗೆ ಆರಂಭಿಸುವ ವಿಷಯದಲ್ಲಿ ನಡೆದ ಅವ್ಯಹಾರದ ಕುರಿತು ಸ್ಪೀಕರ್ ಅವರಿಗೆ ಈಗಾಗಲೇ ದಾಖಲೆ ಸಲ್ಲಿಸಿದ್ದೇವೆ. ಮತ್ತಷ್ಟು ದಾಖಲೆ ಕಲೆ ಹಾಕಿದ್ದು, ಮುಂಬರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ. ಆಗಲೂ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುತ್ತೇನೆ~ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ರಾಜ್ಯದ 22 ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳಲ್ಲಿ ಜನರಿಕ್ ಔಷಧಿ ಮಾರಾಟ ಮಳಿಗೆ ಆರಂಭಿಸುವುದು ಸಚಿವ ರಾಮದಾಸ ಅವರ ವೈಯಕ್ತಿಕ ತೀರ್ಮಾನ. ಸರ್ಕಾರಿ ಆಸ್ಪತ್ರೆಗಳಿಗೆ ವಿತರಿಸಲು ಸರ್ಕಾರ ಖರೀದಿಸುವ ಹಾಗೂ ಖಾಸಗಿ ಮಳಿಗೆಯಲ್ಲಿ ದೊರೆಯುವ ದರಕ್ಕಿಂತಲೂ ಕೆಲ ಔಷಧಿಗಳನ್ನು ಜನರಿಕ್ ಮಳಿಗೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ~ ಎಂದು ದೂರಿದರು.

`ರಾಜ್ಯದ ಸರ್ಕಾರಿ ಕಾಲೇಜುಗಳಿಗೆ ಹೊಂದಿಕೊಂಡಿರುವ ಆಸ್ಪತ್ರೆಗಳಲ್ಲಿ ಜನರಿಕ್ ಔಷಧಿ ಮಳಿಗೆ ಆರಂಭಿಸಲು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ (ಕೆಸಿಸಿಎಫ್) ಮುಂದೆ ಬಂದಿದೆ. ಈ ಮಂಡಳಿಯನ್ನು ಸಂಪರ್ಕಿಸಿ ಜನರಿಕ್ ಮಳಿಗೆ ತೆರೆಯಲು ಕಾರ್ಯೋನ್ಮುಖರಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವರು ಸೂಚಿಸಿದ್ದಾರೆ.

ಆದರೆ, ಕೆಸಿಸಿಎಫ್‌ನವರು 37 ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಎಸ್‌ಕ್ಯೂಬ್ಸ್ ಎಂಬ ಕಂಪೆನಿಯ ಜೊತೆ ಜನರಿಕ್ ಔಷಧಿ ಮಳಿಗೆ ಆರಂಭಿಸಲು ಒಪ್ಪಂದ ಮಾಡಿಕೊಂಡಿದ್ದಾರೆ. ಒಪ್ಪಂದ ಮಾಡಿಕೊಳ್ಳುವಾಗ ಎಸ್‌ಕ್ಯೂಬ್ಸ್ ಸಂಸ್ಥೆ ಡ್ರಗ್ ಲೈಸನ್ಸ್ ಸಹ ಹೊಂದಿರಲಿಲ್ಲ. ಆ ನಂತರ ಪಡೆದುಕೊಂಡಿದೆ. ಈ ಸಂಸ್ಥೆ ಯಾವುದೇ ಔಷಧಿ, ಸರ್ಜಿಕಲ್, ಜನರಿಕ್ ಮೆಡಿಸಿನ್ ತಯಾರು ಮಾಡುವುದಿಲ್ಲ. ಆದರೂ ಈ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಏಕೆ~ ಎಂದು ಬಗಲಿ ಪ್ರಶ್ನಿಸಿದರು.

`ಹುಬ್ಬಳ್ಳಿಯ ಕಿಮ್ಸನವರು ತಮ್ಮಲ್ಲಿ ಜನರಿಕ್ ಔಷಧಿ ಮಳಿಗೆ ಆರಂಭಿಸಲು ಕೆಸಿಸಿಎಫ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಉಪ ಗುತ್ತಿಗೆ ನೀಡುವಂತಿಲ್ಲ ಎಂದು ಕರಾರು ವಿಧಿಸಿದ್ದಾರೆ. ಆದರೂ, ಕೆಸಿಸಿಎಫ್‌ನವರು ನಿಯಮ ಉಲ್ಲಂಘಿಸಿ ಎಸ್‌ಕ್ಯೂಬ್ಸ್ ಸಂಸ್ಥೆಗೆ ಇಲ್ಲಿ ಮಳಿಗೆ ಆರಂಭಿಸಲು ಉಪ ಗುತ್ತಿಗೆ ನೀಡಿದ್ದಾರೆ~ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT