ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ವಾರ್ಷಿಕ ರೂ. 175 ಕೋಟಿ ನಷ್ಟ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಟ್ಟು 3.70 ಲಕ್ಷ ನಕಲಿ ಫಲಾನುಭವಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕವಾಗಿ ರೂ. 175 ಕೋಟಿ ನಷ್ಟವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.

ವೃದ್ಧಾಪ್ಯ, ವಿಧವಾ, ಅಂಗವಿಕಲ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳಡಿ ನಕಲಿ ದಾಖಲೆ ಸೃಷ್ಟಿಸಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಿದೆ. ರಾಜ್ಯದಲ್ಲಿ ಶೇ. 20ರಿಂದ 25ರಷ್ಟು ನಕಲಿ ಕಾರ್ಡ್ ವಿತರಿಸಲಾಗಿದೆ.

ಈ ಸಂಬಂಧ ನಕಲಿ ಫಲಾನುಭವಿಗಳ ದಾಖಲೆಯನ್ನು ಪರಿಶೀಲನೆ ನಡೆಸಿ ಅವರಿಗೆ ನೀಡಿರುವ ಸೌಲಭ್ಯ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ಹೊರಡಿಸಿದೆ.

ಕಳೆದ ನಾಲ್ಕು ವರ್ಷದಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಸೌಲಭ್ಯ ಪಡೆದಿರುವ ಫಲಾನುಭವಿಗಳ ಸಂಖ್ಯೆ ಎರಡೂವರೆಪಟ್ಟು ಹೆಚ್ಚಳವಾಗಿದೆ. 2006- 07ನೇ ಸಾಲಿನಡಿ 16.48 ಲಕ್ಷವಿದ್ದ ಫಲಾನುಭವಿಗಳ ಸಂಖ್ಯೆ 2010-11ನೇ ಸಾಲಿಗೆ 40.89 ಲಕ್ಷ ಮುಟ್ಟಿದೆ.

ಇದರಿಂದ ವಾರ್ಷಿಕವಾಗಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹೊರೆಯಾಗುತ್ತಿದೆ. ಕಳೆದ 4 ವರ್ಷದಲ್ಲಿ ಫಲಾನುಭವಿಗಳಿಗೆ ತಿಂಗಳುವಾರು ಭರಿಸುತ್ತಿರುವ ವೆಚ್ಚ ಐದು ಪಟ್ಟು ಹೆಚ್ಚಳವಾಗಿದೆ. 2006-07ನೇ ಸಾಲಿನಡಿ ಸರ್ಕಾರ 391 ಕೋಟಿ ರೂಪಾಯಿ ವೆಚ್ಚ ಭರಿಸಿತ್ತು.

2010- 11ನೇ ಸಾಲಿಗೆ ಈ ವೆಚ್ಚ 1,964 ಕೋಟಿ ರೂಪಾಯಿಗೆ ಮುಟ್ಟಿದೆ. ಈ ಹಿನ್ನೆಲೆಯಲ್ಲಿ ನಕಲಿ ಫಲಾನುಭವಿಗಳಿಗೆ ಸಂಪೂರ್ಣ ಕಡಿವಾಣ ಹಾಕಿ ಸರ್ಕಾರಕ್ಕೆ ಆಗುತ್ತಿರುವ ನಷ್ಟದ ಪ್ರಮಾಣ ತಪ್ಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಪರಿಶೀಲನಾ ವರದಿ: ಸರ್ಕಾರದ ಸೂಚನೆ ಮೇರೆಗೆ ಎಲ್ಲ ಜಿಲ್ಲೆಗಳ್ಲ್ಲಲೂ ಫಲಾನುಭವಿಗಳ ಭೌತಿಕ ಪರಿಶೀಲನಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ, ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ.

ಗುಲ್ಬರ್ಗ- ಶೇ. 22, ದಾವಣಗೆರೆ- ಶೇ. 20, ಬೆಳಗಾವಿ- ಶೇ. 20, ತುಮಕೂರು- ಶೇ. 20 ಹಾಗೂ ರಾಯಚೂರು ಜಿಲ್ಲೆಯಲ್ಲಿ ಶೇ. 18ರಷ್ಟು ನಕಲಿ ಫಲಾನುಭವಿಗಳು ಇರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಈ ಐದು ಜಿಲ್ಲೆ ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ನಕಲಿ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದೆ.

ಬಳ್ಳಾರಿ, ಬೆಂಗಳೂರು, ಕೊಪ್ಪಳ, ಚಾಮರಾಜನಗರ, ಧಾರವಾಡ, ರಾಮನಗರ, ವಿಜಾಪುರ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ನಕಲಿ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆ ತೃಪ್ತಿಕರವಾಗಿಲ್ಲ. ಉಳಿದ ಜಿಲ್ಲೆಗಳಿಂದ ವರದಿ ಸಲ್ಲಿಕೆಯಾಗಿದ್ದರೂ ಸಮರ್ಪಕವಾಗಿಲ್ಲ. ಈ ಕುರಿತು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಅತೃಪ್ತಿ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಅ.31ರೊಳಗೆ ಪರಿಷ್ಕೃತ ಪರಿಶೀಲನಾ ವರದಿ ಸಲ್ಲಿಸಲು ಸರ್ಕಾರ ಅಂತಿಮ ಗಡುವು ನೀಡಿದೆ. ಜತೆಗೆ, ಈ ಅವಧಿಯೊಳಗೆ ಅರ್ಹ ಫಲಾನುಭವಿಗಳ ದಾಖಲಾತಿಯನ್ನು ಕಂಪ್ಯೂಟರ್‌ನಲ್ಲಿ ನಮೂದಿಸಲು ಸೂಚಿಸಿದೆ. ನ.15ರೊಳಗೆ ನಕಲಿ ಫಲಾನುಭವಿಗಳಿಗೆ ನೀಡಿರುವ ಕಾರ್ಡ್ ರದ್ದುಪಡಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT