ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಕ್ರಮ ಅನೂರ್ಜಿತ: ಹೈಕೋರ್ಟ್

ಪೊಲೀಸ್ ಸಿಬ್ಬಂದಿ ಮಂಡಳಿಯಿಂದ ಉಮಾಪತಿ ತೆರವು
Last Updated 3 ಏಪ್ರಿಲ್ 2013, 19:46 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಡಾ.ಬಿ.ಇ. ಉಮಾಪತಿ ಅವರನ್ನು ಪೊಲೀಸ್ ಸಿಬ್ಬಂದಿ ಮಂಡಳಿಯ (ಪಿ.ಇ.ಬಿ) ಸದಸ್ಯ ಸ್ಥಾನದಿಂದ ತೆರವುಗೊಳಿಸಿದ ಸರ್ಕಾರದ ಕ್ರಮವನ್ನು ಹೈಕೋರ್ಟ್ ಬುಧವಾರ ಅನೂರ್ಜಿತಗೊಳಿಸಿದೆ.

`ಯಾವುದೇ ನೋಟಿಸ್ ನೀಡದೆ, ನನ್ನನ್ನು ಪಿ.ಇ.ಬಿ ಸದಸ್ಯ ಸ್ಥಾನದಿಂದ ಸರ್ಕಾರ ತೆರವು ಮಾಡಿದೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ನಾನೂ ಒಬ್ಬ. ನನ್ನ ಸೇವಾ ಹಿರಿತನ ಪರಿಗಣಿಸದೆಯೇ ಸರ್ಕಾರ ಇಂಥ ಕ್ರಮ ಕೈಗೊಂಡಿದೆ' ಎಂದು ದೂರಿ ಉಮಾಪತಿ ಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, `ಸರ್ಕಾರದ ಕ್ರಮ ಸರಿಯಲ್ಲ. ಇದು ಪೊಲೀಸ್ ಕಾಯ್ದೆಯ ಆಶಯಗಳಿಗೆ ವಿರುದ್ಧ' ಎಂದು ಹೇಳಿ ಅರ್ಜಿಯನ್ನು ಮಾನ್ಯ ಮಾಡಿದರು.

ಆದರೆ, `ಆದೇಶವನ್ನು ವಿಭಾಗೀಯ ಪೀಠದ ಎದುರು ಪ್ರಶ್ನಿಸಲಾಗುವುದು. ಹಾಗಾಗಿ, ತಡೆಯಾಜ್ಞೆ ನೀಡಬೇಕು' ಎಂದು ಸರ್ಕಾರದ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿ, ಆದೇಶಕ್ಕೆ 10 ದಿನ ತಡೆಯಾಜ್ಞೆ ನೀಡಿದರು.

ರಾಜ್ಯದ ಪಿ.ಇ.ಬಿ. ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಅಧ್ಯಕ್ಷರಲ್ಲದೆ, ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಇದರ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಉಮಾಪತಿ ಈ ಹಿಂದೆ ಪಿ.ಇ.ಬಿ. ಸದಸ್ಯರಾಗಿದ್ದರು.

ಭಿಕ್ಷುಕರ ಸೆಸ್ ಪಾವತಿಸಲು ಸರ್ಕಾರಕ್ಕೆ ಆದೇಶ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಸಂಗ್ರಹಿಸುವ ಆಸ್ತಿ ತೆರಿಗೆಯಲ್ಲಿ ಭಿಕ್ಷುಕರ ಪುನರ್ವಸತಿಗೆ ಮೀಸಲಾದ ಸೆಸ್ ಅನ್ನು ಕೇಂದ್ರೀಯ ಪರಿಹಾರ ನಿಧಿಗೆ ಸರಿಯಾಗಿ ಪಾವತಿ ಮಾಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಆದೇಶಿಸಿದೆ.

`ರಾಷ್ಟ್ರೋತ್ಥಾನ ಸಂಕಲ್ಪ' ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ನೇತೃತ್ವದ ವಿಭಾಗೀಯ ಪೀಠ, `ಭಿಕ್ಷುಕರ ಪುನರ್ವಸತಿಗಾಗಿ ಸೆಸ್ ಸಂಗ್ರಹಿಸುವಲ್ಲಿ ಬಿಬಿಎಂಪಿ ಹಾಗೂ ಸರ್ಕಾರ ಅಲಕ್ಷ್ಯ ವಹಿಸಬಾರದು. ಭಿಕ್ಷುಕರ ಆರೋಗ್ಯದ ಕುರಿತೂ ನಿಗಾ ವಹಿಸಬೇಕು' ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ನಕಾರ: ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸ್ದ್ದಿದಾಗಿ ತಮ್ಮ ವಿರುದ್ಧ ದಾಖಲಾಗಿರುವ ದೂರು ರದ್ದು ಮಾಡಬೇಕು ಹಾಗೂ ತನಿಖೆಗೆ ತಡೆ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾಡಿದ ಮನವಿಯನ್ನು ಪುರಸ್ಕರಿಸಲು ಹೈಕೋರ್ಟ್ ಬುಧವಾರ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT