ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಧರಣಿ

Last Updated 16 ಜುಲೈ 2013, 9:19 IST
ಅಕ್ಷರ ಗಾತ್ರ

ಅರಸೀಕೆರೆ: ಇಲ್ಲಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯ ಅಶುಚಿತ್ವ ಹಾಗೂ ವೈದ್ಯರ ಕರ್ತವ್ಯ ಲೋಪ ಖಂಡಿಸಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಹಾಗೂ ತಾಲ್ಲೂಕು ಹಸಿರು ಸೇನೆ ಕಾರ್ಯಕರ್ತರು ಆಸ್ಪತ್ರೆಯ ಮುಂಭಾಗ ಸೋಮವಾರ ಉಪವಾಸ ಧರಣಿ ಆರಂಭಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜು, ಜಿಲ್ಲಾ ರೈತ ಸಂಘದ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಆಸ್ಪತ್ರೆಯ ಮುಂಭಾಗ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರ ಇಟ್ಟು ಸರ್ಕಾರದ ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಮೇಳೇನಹಳ್ಳಿ ನಾಗರಾಜು ಮಾತನಾಡಿ, ರೋಗಿಗಳು ಮಲಗುವ ಹಾಸಿಗೆ ಹಾಗೂ ಹೊದಿಕೆಗಳನ್ನು ಒಗೆಯದೆ ಇರುವುದರಿಂದ ಕಮಟು ವಾಸನೆ ಬರುತ್ತಿದೆ. ಚಿಕಿತ್ಸೆಗೆ ಬರುವ ರೋಗಿಗಳನ್ನು ಗುಣಪಡಿಸುವ ಕೇಂದ್ರವೇ ರೋಗವನ್ನು ಹರಡುವ ತಾಣವಾಗಿರುವುದು ವಿಪರ್ಯಾಸ ಎಂದರು.

150 ಹಾಸಿಗೆಯನ್ನು ಹೊಂದಿರುವ ಈ ಆಸ್ಪತ್ರೆ ದೊಡ್ಡ ಆಸ್ಪತ್ರೆ ಎನಿಸಿದೆ. ಆದರೆ ಇಲ್ಲಿ ಇರುವಷ್ಟು ಭ್ರಷ್ಟಾಚಾರ ಹಾಗೂ ಅವ್ಯವಹಾರ ಯಾವ ಆಸ್ಪತ್ರೆಗಳಲ್ಲೂ ಇಲ್ಲ. 14 ಮಂದಿ ವೈದ್ಯರಲ್ಲಿ ಸಮರ್ಪಕವಾಗಿ ಐದು ವೈದ್ಯರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂವರು ಸ್ವಯಂ ನಿವೃತ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ ಇವರಿಗೆ ಸರ್ಕಾರದ ಅನುಮತಿ ದೊರಕದಿದ್ದರೂ, ಅವರು ಕರ್ತವ್ಯಕ್ಕೆ ಹಾಜರಾಗದೆ ಸರ್ಕಾರದಿಂದ ವೇತನ ಪಡೆಯುತ್ತಿದ್ದಾರೆ ಎಂದು ದೂರಿದರು.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಬರುವಂತೆ ಸೂಚಿಸಿ ಹಣ ವಸೂಲಿ ಮಾಡುತ್ತಾರೆ ಎಂದು ಕಿಡಿಕಾರಿದರು. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಬೇಡಿಕೆಗಳನ್ನು ಈಡೇರಿಸುವವರೆವೆಗೆ ಈ ಧರಣಿಯನ್ನು ಕೈಬಿಡುವುದಿಲ್ಲ ಎಂದು ಹೇಳಿದರು.

ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ ಜವನಹಳ್ಳಿ ನಿಂಗಪ್ಪ, ಮುಖಂಡರಾದ ಬೋರನಕೊಪ್ಪಲು ಶಿವಲಿಂಗಪ್ಪ, ಅಣ್ಣಾಯಕನಹಳ್ಳಿ ಶಿವಮೂರ್ತಿ, ತಾಲ್ಲೂಕು ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಕಮ್ಮ, ರಮೇಶ್, ಮಾಗೇನಹಳ್ಳಿ ಮಲ್ಲಿಕಾರ್ಜುನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT