ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಶಾಸ್ತ್ರಜ್ಞನ ಪೌರಪ್ರಜ್ಞೆ

Last Updated 22 ಜನವರಿ 2011, 11:05 IST
ಅಕ್ಷರ ಗಾತ್ರ

ಪೌರನೀತಿ ಎಂಬುದು ನಾಗರಿಕ ನಡವಳಿಕೆಯನ್ನು ಉದ್ದೇಶಿಸಿದ ಅಧ್ಯಯನ ಶಿಸ್ತು. ಇದರ ಪರಿಕಲ್ಪನೆ ಪಾಶ್ಚಾತ್ಯ ಪ್ರಭಾವದಿಂದ ಮೂಡಿದೆ ಎಂಬ ಭಾವನೆ ಇದ್ದರೂ ವಾಸ್ತವವಾಗಿ ಭಾರತೀಯ ಪ್ರಾಚೀನ ದಾಖಲೆಗಳಲ್ಲಿ ಇದರ ನೆ ಮತ್ತು ಅನುಷ್ಠಾನ ಇರುವುದನ್ನು ಗುರುತಿಸುವುದು ಕುತೂಹಲದ ಅಂಶ. ಅದರಲ್ಲಿಯೂ ಸಸ್ಯಶಾಸ್ತ್ರದ ಪ್ರಾಧ್ಯಾಪಕರೊಬ್ಬರು ನಾಗರಿಕ ವರ್ತನೆಗೆ ಸಂಬಂಧಪಟ್ಟ ಅಂಶಗಳನ್ನೆಲ್ಲ ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿರುವುದು ವಿಶೇಷ. ‘ಪೌರ ಪ್ರಜ್ಞಾಯನ’ ಇಂಥ ವಿಶಿಷ್ಟ ಚಿಂತನೆಯ ಕೃತಿ.

ಡಾ. ಎಸ್.ಎನ್.ರಾಮಸ್ವಾಮಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ 35 ವರ್ಷ ಸಸ್ಯಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಕೆನಡಾದ ರೆಜೈನ ಮತ್ತು ವಿನ್ನಿಪೆಗ್ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮತ್ತು ಬೋಧನೆಯ ಅನುಭವ ಇರುವವರು. ಅಮೆರಿಕ, ಇಂಗ್ಲೆಂಡ್ ಮೊದಲಾದ ದೇಶಗಳ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಪರಿಸರ ಮತ್ತು ಸಂಶೋಧನೆಗಳ ಪರಿಚಯ ಇರುವವರು. ದೇಶ ವಿದೇಶಗಳಲ್ಲಿ ಮಾಡಿದ ಪ್ರವಾಸ ಕಾಲದಲ್ಲಿ ಕಂಡ ನಾಗರಿಕ ಪ್ರಜ್ಞೆಯ ಚಿಂತನೆ ಅವರ ಈ ಕೃತಿಯಲ್ಲಿ ವ್ಯಕ್ತವಾಗಿದೆ.

ವೇದಯುಗದಿಂದ ಆಧುನಿಕ ಕಾಲದವರೆಗಿನ ಪೌರಪ್ರಜ್ಞೆಯನ್ನು ದಾಖಲಿಸುವ ರಾಮಸ್ವಾಮಿ ಅವರ ಪ್ರಯತ್ನಕ್ಕೆ ವಿಫುಲ ಓದಿನ ಹಿನ್ನೆಲೆ ಇರುವುದು ಇಲ್ಲಿ ವ್ಯಕ್ತವಾಗುತ್ತದೆ. ಋಗ್ವೇದ, ಯಜುರ್ವೇದ, ಅಥರ್ವ ಮತ್ತು ಸಾಮವೇದಗಳಲ್ಲಿನ ಪ್ರಕೃತಿ ಮತ್ತು ಪರಿಸರದ ಪ್ರಾಮುಖ್ಯ ಇರುವ ಮಂತ್ರಗಳನ್ನು ಸಂಗ್ರಹಿಸಿ ಪ್ರಾಚೀನ ಕಾಲದಲ್ಲಿದ್ದ ಪೌರಪ್ರಜ್ಞೆಯನ್ನು ಪರಿಚಯಿಸಿದ್ದಾರೆ.

‘ಇಂದಿನ ಸಾಮಾಜಿಕ, ನೈತಿಕ, ರಾಜಕೀಯದಲ್ಲಿ ಇರುವ ಮೂಢನಂಬಿಕೆಗಳು, ಸಂಕುಚಿತ ಮನೋಭಾವನೆ, ಭ್ರಷ್ಟಾಚಾರ, ದುರಾಸೆ, ದುರ್ನಡತೆ, ಅರಿಷಡ್ವರ್ಗಗಳಿಗೆ ದಾಸ್ಯ ಇವೆಲ್ಲ ನಾಶವಾಗಬೇಕಾದರೆ, ವೈಚಾರಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ದೃಷ್ಟಿಯಿಂದ ವೇದಗಳನ್ನು ನೋಡಬೇಕಾಗುತ್ತದೆ..’ (ಪು.2) ಎಂಬುದು ಲೇಖಕರು ಈ ವಿಷಯಕ್ಕೆ ಸಂಬಂಧಿಸಿ ತಾಳಿದ ಮನೋಭಾವ. ಈ ಭಾವವೇ ಕೃತಿಯುದ್ದಕ್ಕೂ ಆವರಿಸಿಕೊಂಡಿದೆ. ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಯಿಂದಲೇ ವೇದಗಳನ್ನೂ, ನಂತರ ಬಂದ ಪೌರಾಣಿಕ ಹಾಗೂ ಧಾರ್ಮಿಕ ಗ್ರಂಥಗಳನ್ನೂ ಅವರು ಪರಾಂಬರಿಸಿದ್ದಾರೆ. ಸಾಹಿತ್ಯಕೃತಿಗಳನ್ನೂ ಮಾಹಿತಿ ಆಕರವಾಗಿ ಬಳಸಿಕೊಂಡಿದ್ದಾರೆ.

ವೇದಗಳಲ್ಲಿ ವ್ಯಕ್ತವಾದ ಪೌರಪ್ರಜ್ಞೆ, ವಿವಿಧ ಧರ್ಮಗಳಲ್ಲಿ ಕಂಡು ಬರುವ ನೈತಿಕತೆ, ರಾಷ್ಟ್ರಪ್ರೇಮ, ಜೈವಿಕ ವೈವಿಧ್ಯ, ಪರಿಸರ ಚಳವಳಿ, ಪ್ಲಾಸ್ಟಿಕ್, ಜಾಗತಿಕ ತಾಪಮಾನ, ವಿಶ್ವವಿದ್ಯಾಲಯಗಳಲ್ಲಿನ ಪೌರಪ್ರಜ್ಞೆ, ವೈದ್ಯಕೀಯ ಕ್ಷೇತ್ರ, ಮಕ್ಕಳು ಮತ್ತು ಮಹಿಳೆಯರ ಹಕ್ಕಿನ ಹಿನ್ನೆಲೆಯಲ್ಲಿ ಪೌರನೀತಿ, ಗ್ರಹಣ ಕಾಲದ ನಡವಳಿಕೆ, ದೇವಾಲಯಗಳಲ್ಲಿ ನಡೆಯುವ ಮಡೆಸ್ನಾನದಂತಹ ಆಚರಣೆಗಳವರೆಗೆ ಬಹು ವಿಶಾಲ ಅಧ್ಯಯನದ ಹರವು ಇಲ್ಲಿದೆ. ಇಲ್ಲಿನ ಪ್ರಮುಖ ಅಧ್ಯಾಯಗಳು ಸಮಾಜ ವಿಜ್ಞಾನದ ಹತ್ತಾರು ಶಾಖೆಗಳನ್ನೂ ಉಪಶಾಖೆಗಳನ್ನೂ ಹೊಂದಿವೆ ಎಂಬುದೇನೂ ಅತಿಶಯೋಕ್ತಿ ಅಲ್ಲ. ಕಲೆಹಾಕಿದ ಅಪರಿಮಿತ ಮಾಹಿತಿಯನ್ನು ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಯಿಂದ ವಿವೇಚಿಸುವ ಎಚ್ಚರಿಕೆಯನ್ನು ಲೇಖಕರು ಪ್ರಕಟಿಸಿದ್ದಾರೆ.

ಪೌರಪ್ರಜ್ಞೆಯನ್ನು ಕೇಂದ್ರವಾಗಿರಿಸಿಕೊಂಡ ಈ ಅಧ್ಯಯನ ಈಗಿನ ಸಮಾಜ ಎದುರಿಸುತ್ತಿರುವ ಎಲ್ಲ ಬಗೆಯ ಸಮಸ್ಯೆಗಳನ್ನೂ ವಿಶ್ಲೇಷಿಸುತ್ತದೆ. ಜಾಗತೀಕರಣದ ಹಿನ್ನೆಲೆಯಲ್ಲಿ ವಿಶ್ವವಷ್ಟೇ ಸಂಕುಚಿತವಾಗಿಲ್ಲ; ಭಾರತೀಯ ಕುಟುಂಬ ವ್ಯವಸ್ಥೆಯೂ, ಅದನ್ನೂ ಪೋಷಿಸಿಕೊಂಡು ಬಂದಿದ್ದ ಮೌಲ್ಯಗಳೂ ಸಂಕುಚಿತವಾಗಿರುವುದನ್ನು ನಿದರ್ಶನಗಳ ಮೂಲಕ ಹೃದ್ಯವಾಗಿ ನಿರೂಪಿಸಿದೆ. ಸ್ವಾರ್ಥವೇ ಕೇಂದ್ರವಾದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರ ದುರುಪಯೋಗದಂಹ ದುಷ್ಟ ಪ್ರವೃತ್ತಿ ಅಧಿಕಾರಸ್ಥರಲ್ಲಿ ನೆಲೆಗೊಂಡರೆ ಅದರಿಂದ ಸಮಾಜದಲ್ಲಿ ಆಗುವ ಕೆಟ್ಟ ಪರಿಣಾಮಗಳನ್ನು ದಾಖಲಿಸಿದೆ.

ಸಮಾಜಶಾಸ್ತ್ರ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿಲ್ಲ ಈ ಕೃತಿ. ನಾಗರಿಕ ಜಗತ್ತಿನಲ್ಲಿ ಶಾಂತಿ ಸಾಮರಸ್ಯದ ಬದುಕಿಗೆ ಅವಶ್ಯಕವಾದ ಜೀವನಮೌಲ್ಯಗಳ ಆಪ್ತವಾಗಿ ಪ್ರತಿಪಾದಿಸುವ ಮೂಲಕ ಸಾಮಾಜಿಕ ಚಿಂತನೆಗೆ ಹೊಸದೊಂದು ಆಯಾಮ ನೀಡಿದೆ. ಆದ್ದರಿಂದಲೇ ಈ ‘ಪೌರ ಪ್ರಜ್ಞಾಯನ’ ವಿಶಿಷ್ಟ ಕೃತಿಯಾಗಿದೆ.

ಪೌರ ಪ್ರಜ್ಞಾಯನ
ಲೇ: ಡಾ.ಎಸ್.ಎನ್. ರಾಮಸ್ವಾಮಿ
ಪು: 584; ಬೆ: ರೂ. 400
ಪ್ರ: ಪ್ರತಿಭಾ ಪ್ರಕಾಶನ, ‘ಪ್ರಥಮ ಛಾಯಾ’, ಗೋಕುಲಂ 3ನೇ ಹಂತ, ಮೈಸೂರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT