ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಧನ ಪಡೆಯಲು ‘ಆಧಾರ್‌’ ಅಪ್ಪಣೆ!

ಜಿಲ್ಲೆಯಲ್ಲಿಯೂ ಡಿ.1ರಿಂದ ನಗದು ನೇರ ವರ್ಗಾವಣೆ ಯೋಜನೆ ಜಾರಿ
Last Updated 5 ಡಿಸೆಂಬರ್ 2013, 6:29 IST
ಅಕ್ಷರ ಗಾತ್ರ

ದಾವಣಗೆರೆ: ‘ಸಬ್ಸಿಡಿ ಹಣ ನೇರವಾಗಿ ನಮ್ಮ ಖಾತೆಗೇ ಹಾಕ್ತಾರಂತೆ. ಸಿಲಿಂಡರ್‌ಗೆ ಈಗ ₨ 1,030 ಕೊಡಬೇಕಂತೆ. ಆಧಾರ್‌ ಜೋಡಿಸಬೇಕಂತೆ. ಆಧಾರ್‌ ಇಲ್ಲವಾದಲ್ಲಿ ಘೋಷಣಾ ಪತ್ರ ಕೊಡಬೇಕಂತೆ’.

‘ಜಿಲ್ಲಾಧಿಕಾರಿ ಆಧಾರ್‌ ಕಡ್ಡಾಯವಲ್ಲ ಎನ್ನುತ್ತಾರೆ. ಬ್ಯಾಂಕ್‌ನವರು, ಅನಿಲ ಏಜೆನ್ಸಿಯವರು ಆಧಾರ್‌ ಕಾರ್ಡ್‌ ಕೇಳುತ್ತಿದ್ದಾರೆ. ಏನಪ್ಪಾ ಈ ಕಿರಿಕಿರಿ ಸಾಕಾಗಿದೆ’.

– ಜಿಲ್ಲೆಯ ಮನೆ–ಮನೆ, ಬೀದಿ–ಬೀದಿಗಳಲ್ಲಿ, ಮಹಿಳೆಯರ ನಡುವೆ ಕೆಲ ದಿನಗಳಿಂದ ಚರ್ಚೆಗೀಡಾಗುತ್ತಿರುವ ಸಂಗತಿಗಳಿವು. ಇದಕ್ಕೆ ಕಾರಣ, ‘ನಗದು ನೇರ ವರ್ಗಾವಣೆ’ ಯೋಜನೆ. ಜನರಲ್ಲಿ ಹಲವು ಆತಂಕ, ಗೊಂದಲಗಳಿಗೆ ಈ ಯೋಜನೆ ಕಾರಣವಾಗಿದೆ.

ಯೋಜನೆಯನ್ನು ಡಿ.1ರಿಂದ ದಾವಣಗೆರೆ ಜಿಲ್ಲೆಗೂ ವಿಸ್ತರಿಸಲಾಗಿದೆ. ಸದ್ಯಕ್ಕೆ, ಅಡುಗೆ ಅನಿಲ(ಎಲ್‌ಪಿಜಿ)ದ ಸಹಾಯಧನ (ಸಬ್ಸಿಡಿ)ದ ಹಣವನ್ನು ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸಲಾಗುವುದು. ಗ್ರಾಹಕರು ತಮ್ಮ ಅಡುಗೆ ಅನಿಲ ಏಜೆನ್ಸಿ ಹಾಗೂ ಬ್ಯಾಂಕ್‌ನಲ್ಲಿ ‘ಆಧಾರ್‌’ ಸಂಖ್ಯೆಯನ್ನು ಮೂರು ತಿಂಗಳ ಒಳಗೆ ನೋಂದಣಿ ಹಾಗೂ ಜೋಡಿಸಬೇಕು (ಲಿಂಕಿಂಗ್‌). ನೋಂದಣಿ ನಂತರ ಗ್ರಾಹಕರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಣ ನೇರವಾಗಿ ಸಂದಾಯವಾಗಲಿದೆ.

2014ರ ಫೆಬ್ರುವರಿವರೆಗೆ ನೋಂದಣಿಗೆ ಅವಕಾಶವಿದ್ದು, ಈ ಅವಧಿವರೆಗೂ ಸಬ್ಸಿಡಿ ದರದಲ್ಲಿಯೇ ಸಿಲಿಂಡರ್‌ ವಿತರಿಸಲಾಗುವುದು. ಮೂರು ತಿಂಗಳ ಕಾಲಾವಕಾಶದ ನಂತರ, ಗ್ರಾಹಕರು ಮಾರುಕಟ್ಟೆ ದರದಲ್ಲೇ ಸಿಲಿಂಡರ್‌ ಖರೀದಿಸಬೇಕಾಗುತ್ತದೆ. ಇದರಿಂದಾಗಿ, ಬ್ಯಾಂಕ್‌ಗಳು ಹಾಗೂ ಅನಿಲ ಸಿಲಿಂಡರ್‌ ಏಜೆನ್ಸಿಗಳ ಬಳಿ ‘ಆಧಾರ್‌’ ಜೋಡಿಸಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಏಜೆನ್ಸಿಯವರು ‘ಕೇಳುವ’ ದಾಖಲೆಗಳನ್ನು ಪೂರೈಸುವ ವೇಳೆಗೆ, ಹೈರಾಣಾಗಿ ಹೋಗುತ್ತಿರುವುದು ಕಂಡುಬಂದಿದೆ.

ಏನಿದು ಯೋಜನೆ?: ನಗದು ನೇರ ವರ್ಗಾವಣೆ (ಡಿಸಿಟಿ)– ವಿವಿಧ ಯೋಜನೆಗಳ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆ. ಎಲ್ಲ ಯೋಜನೆಗಳಂತೆಯೇ ಇದಕ್ಕೂ ಆರಂಭದಲ್ಲಿ ಅಪಸ್ವರ, ವಿಘ್ನ ಎದುರಾಗಿದೆ. ಆಧಾರ್‌ ಕಾರ್ಡ್‌ ಹೊಂದಿರುವ ಫಲಾನುಭವಿಗಳಿಗೆ ಸಮೀಪದ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆಯುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಬ್ಯಾಂಕ್‌ಗಳಲ್ಲಿ ಗ್ರಾಹಕರಿಂದ ಬೇಡಿಕೆ ಹೆಚ್ಚಾಗುತ್ತಿದೆ. ಬ್ಯಾಂಕ್‌ನವರು ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ‘ಜೀರೋ ಬ್ಯಾಲೆನ್ಸ್‌’ ಖಾತೆ ತೆರೆದುಕೊಡಬೇಕಿದೆ.

‘ಡಿಸಿಟಿ’ ಯೋಜನೆಯಡಿ 42 ಕಾರ್ಯಕ್ರಮಗಳನ್ನು ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಮೊದಲ ಹಂತದಲ್ಲಿ ಅಡುಗೆ ಅನಿಲ ಸಿಲಿಂಡರ್‌ ಪಡೆಯಲು ಜಾರಿಗೊಳಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ, ವಿದ್ಯಾರ್ಥಿ ವೇತನ, ಪಿಂಚಣಿಗಳು ನಗದು ನೇರ ವರ್ಗಾವಣೆ ಅಡಿ ಬರುತ್ತವೆ. ನಂತರದ ಹಂತಗಳಲ್ಲಿ ರೈತರಿಗೆ ದೊರೆಯುವ ರಸಗೊಬ್ಬರ, ಬಿತ್ತನೆಬೀಜ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಇಂದಿರಾ ಆವಾಸ್‌ ಯೋಜನೆ ಮೊದಲಾದವುಗಳಿಗೂ ವಿಸ್ತರಣೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಏನೇನು ಅನುಕೂಲಗಳು?: ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಬಹಳಷ್ಟು ಕಾಗದ ಪತ್ರಗಳ ಕೆಲಸ ಹಾಗೂ
ಖರ್ಚು ಆಗುತ್ತದೆ. ಮಧ್ಯವರ್ತಿಗಳ ಹಾವಳಿ, ಹಣ ಸೋರಿಕೆಯೂ ಕಂಡುಬರುತ್ತದೆ. ಅನರ್ಹರು ಸರ್ಕಾರ ಸೌಲಭ್ಯದ ಪ್ರಯೋಜನ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಲು, ಅರ್ಹ ಫಲಾನುಭವಿಗಳನ್ನು ಗುರುತಿಸಿ ಬ್ಯಾಂಕ್‌ನಲ್ಲಿ ಅವರಿಗೊಂದು ಖಾತೆ ಮಾಡಿಸಿಕೊಟ್ಟಲ್ಲಿ ಎಲೆಕ್ಟ್ರಾನಿಕ್‌ ನಗದು ವರ್ಗಾವಣೆ ಮೂಲಕ ನೇರವಾಗಿ ಅವರ ಖಾತೆಗೆ ಹಣ ಜಮೆಯಾಗಲಿದೆ. ಈ ಮೂಲಕ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ನೇರವಾಗಿ ದೊರಕುತ್ತದೆ. ದುರುಪಯೋಗ ತಪ್ಪುತ್ತದೆ. ಅಧಿಕಾರಿ, ಸಿಬ್ಬಂದಿ ಬಳಿಗೆ ಫಲಾನುಭವಿಗಳು ಅಲೆಯುವುದು ತಪ್ಪುತ್ತದೆ ಎನ್ನುವುದು ಸರ್ಕಾರದ ಸಮರ್ಥನೆ.

ಹೀಗಾಗಿ, ಬ್ಯಾಂಕ್‌ ಖಾತೆ ಹೊಂದುವುದು ಇಂದಿನ ಅಗತ್ಯವಾಗಿದೆ. ಖಾತೆ ತೆರೆಯಲು ಗುರುತಿನ ಚೀಟಿ ಕಡ್ಡಾಯ. ಸದ್ಯದ ಪರಿಸ್ಥಿತಿಯಲ್ಲಿ ವ್ಯಕ್ತಿಯ ಬೆರಳಚ್ಚಿನ ಹಾಗೂ ಕಣ್ಣಿನ ರೆಟಿನಾ ಗುರುತು ಹೊಂದಿರುವ ‘ಆಧಾರ್‌’ ನಿಖರ ಗುರುತಿನ ಚೀಟಿ ಎಂದು ಸರ್ಕಾರ ಹೇಳಿದೆ. ಅದನ್ನೇ ಖಾತೆ ತೆರೆಯಲು ಕಡ್ಡಾಯ ಗೊಳಿಸಲಾಗಿದೆ. ಮುಂದೆ ಎಲ್ಲದಕ್ಕೂ ‘ಆಧಾರ್‌’ ಕೇಳುವ ಸಾಧ್ಯತೆ ಇದೆ. ಹೀಗಾಗಿ, ಆಧಾರ್‌ ಹೊಂದಿರುವುದು ಒಳ್ಳೆಯದು ಎಂಬ ಮಾತು ಬ್ಯಾಂಕಿಂಗ್‌ ವಲಯದಲ್ಲಿ ಕೇಳಿಬಂದಿದೆ.

ಮಾರ್ಗದರ್ಶಿ ಬ್ಯಾಂಕ್‌ನಿಂದ ಕ್ರಮ: ‘ಆಧಾರ್‌’ ಜೋಡಣೆ ಬಗ್ಗೆ 25 ಸಾವಿರ ಅರ್ಜಿಗಳನ್ನು ಅಚ್ಚು ಹಾಕಿಸಿ ಎಲ್‌ಪಿಜಿ ವಿತರಿಕರಿಗೆ ನೀಡಿದ್ದೇವೆ. ನಗರದ ಹೊಂಡದ ವೃತ್ತದಲ್ಲಿ ನಡೆದ ಅರಿವು ಕಾರ್ಯಕ್ರಮದಲ್ಲಿ 2,500 ಅರ್ಜಿ ವಿತರಿಸಲಾಗಿದೆ. ಎಲ್ಲ ಎಲ್‌ಪಿಜಿ ಏಜೆನ್ಸಿಗಳ ಬಳಿ ಪೋಸ್ಟರ್‌ ಅಂಟಿಸಲಾಗಿದೆ. 75 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಎಸ್‌ಎಂಎಸ್‌ ಕಳುಹಿಸ ಲಾಗಿದೆ ಎಂದು ಮಾರ್ಗದರ್ಶಿ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದರು. 

ಸಿಬ್ಬಂದಿ ಕೊರತೆಯಿಂದಲೂ ತೊಡಕು!
ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‌ ಹೊರತುಪಡಿಸಿ ವಿವಿಧ 204 ಬ್ಯಾಂಕ್ ಶಾಖೆಗಳಿವೆ. ಎಲ್ಲೆಡೆಯೂ ಖಾತೆ ತೆರೆಯುವುದು ಹಾಗೂ ಆಧಾರ್‌ ಜೋಡಣೆ ಕೆಲಸ ಜೋರಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ, ವೇಗವಾಗಿ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವುದರಿಂದ ಖಾತೆ ಅರ್ಜಿಗಳೇ ಸಾಕಾಗುತ್ತಿಲ್ಲ. ಕೆಲವೆಡೆ ಅರ್ಜಿಗಳಿಗೆ ಪರದಾಟವೂ ಕಂಡುಬಂದಿದೆ!
ಜಿಲ್ಲೆಯಲ್ಲಿ 2.95 ಲಕ್ಷ ಅಡುಗೆ ಅನಿಲ ಸಿಲಿಂಡರ್‌ ಗ್ರಾಹಕರಿದ್ದಾರೆ. ಡಿ.3ರವರೆಗೆ ಕೇವಲ 77,840 ಮಂದಿ ಮಾತ್ರ ಆಧಾರ್‌ ನೋಂದಣಿ ಮಾಡಿಸಿದ್ದಾರೆ. ಎಷ್ಟೋ ಮಂದಿಗೆ ಆಧಾರ್‌ ಕಾರ್ಡ್‌ ಈವರೆಗೂ ತಲುಪಿಲ್ಲ. ಹೀಗಿರುವಾಗ ಹೇಗೆ ಜೋಡಣೆ ಹೇಗೆ? ಎಂಬ ಪ್ರಶ್ನೆಯೂ ಗ್ರಾಹಕರಿಂದ ಕೇಳಿಬರುತ್ತಿದೆ. ಜನರಿಗೆ ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ಆಗಬೇಕು ಎಂಬ ಆಗ್ರಹವೂ ವ್ಯಕ್ತವಾಗುತ್ತಿದೆ.


ಖಾತೆ... ಮಾಹಿತಿ...
ಸಹಾಯಧನ ಪಡೆಯಲು ಗ್ಯಾಸ್‌ ವಿತರಕರಲ್ಲಿ ಆಧಾರ್‌ ನೋಂದಣಿ ಹಾಗೂ ಬ್ಯಾಂಕ್‌ ಶಾಖೆಯಲ್ಲಿ ಜೋಡಿಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ. ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆ ಹೊಂದಿರುವ ಯಾವುದೇ ಬ್ಯಾಂಕ್‌ ನಲ್ಲಿ ಆಧಾರ್‌ ಪ್ರತಿ ನೀಡಿ ಖಾತೆ ತೆರೆಯಬೇಕು. ಖಾತೆಗೆ ಸಬ್ಸಿಡಿ ಹಣ ಜಮಾ ಮಾಡಲಾಗುವುದು.
ಗ್ರಾಹಕರಿಗೆ ಉಚಿತ ಸಹಾಯ ವಾಣಿ: 18002333555. ‘ಆಧಾರ್‌’ ಜೋಡಣೆ ಮಾಹಿತಿಗೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ದೂರವಾಣಿ: 08192– 232453 ಸಂಪರ್ಕಿಸಬಹುದು.

ಅನುಕೂಲ ಕಲ್ಪಿಸಬೇಕು 
‘ಆಧಾರ್‌’ ಜೋಡಿಸಲು ಹೋದರೆ ಬ್ಯಾಂಕ್‌ನಲ್ಲಿ ಹೆಚ್ಚಿನ ಸಮಯ ಆಗುತ್ತಿದೆ. ಸಿಬ್ಬಂದಿ ಕೊರತೆ ಎನ್ನುತ್ತಾರೆ. ಇದನ್ನು ನಿವಾರಿಸಬೇಕು. ಹೆಚ್ಚಿನ ಕೌಂಟರ್‌ ತೆಗೆದು ಅನುಕೂಲ ಮಾಡಿ ಕೊಡಬೇಕು.
– ಅಲಿಪೀರ್‌, ವಿದ್ಯಾನಗರ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT