ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಿ ಹಾಕಿದರೂ ದಾಖಲೆಯಲ್ಲಿ ಗೈರು!

Last Updated 7 ಜುಲೈ 2012, 10:35 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಯೋಮೆಟ್ರಿಕ್ ಸಹಿ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಒಂದೆಡೆ  ಹಾಜರಾತಿ ದಾಖಲೆಯಲ್ಲಿ ನಿಖರತೆ ಪಾಲಿಸುವ ಉದ್ದೇಶವಿದ್ದರೂ, ತಾಂತ್ರಿಕ ದೋಷ ಹಾಗೂ ಕರ್ತವ್ಯ ಬಿಟ್ಟು ಸಹಿ ಹಾಕಲು ಬರಲಾಗದ ಕಾರಣ ಹಲವಾರು ಉದ್ಯೋಗಿಗಳ ಹಾಜರಾತಿಯ ತಾಂತ್ರಿಕ ದಾಖಲೆಯಲ್ಲಿ ಗೈರು ಎಂದು ನಮೂದಾಗಿದೆ.

ಆಸ್ಪತ್ರೆ ವ್ಯವಸ್ಥೆಯಲ್ಲಿ ಸುಧಾರಣೆ, ಸಹಿ ಹಾಕಿ ಗೈರಾಗುವ `ಕಳ್ಳ~ರನ್ನು ಪತ್ತೆ ಹಚ್ಚಲು ಈ ವ್ಯವಸ್ಥೆಯನ್ನು ಕಳೆದ ತಿಂಗಳಿನಲ್ಲಿ ಜಾರಿ ಮಾಡಲಾಗಿದೆ. ಯಂತ್ರದ ಮುಂದೆ ನಿಂತರೆ ಸಾಕು, ಆ ವ್ಯಕ್ತಿಯ ಮುಖಚಹರೆ ಸೆರೆಹಿಡಿದು ಹಾಜರಾತಿಯನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುತ್ತದೆ. ಕರ್ತವ್ಯಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ಸಂದರ್ಭ ನಿಖರ ಸಮಯದಲ್ಲಿ ಹಾಜರಿರಲೇಬೇಕು. ಇಲ್ಲವಾದರೆ ತಂತ್ರಾಂಶ ಆ ವ್ಯಕ್ತಿಯ ಹೆಸರನ್ನು ಗೈರು ಎಂದು ನಮೂದಿಸುತ್ತದೆ. ಇದರಿಂದಾಗಿ ವೈದ್ಯಕೀಯ ಕರ್ತವ್ಯದಲ್ಲಿರುವ ಸಿಬ್ಬಂದಿ ಕೆಲಸ ಬಿಟ್ಟು ದಿಢೀರನೆ ಹಾಜರಾತಿ ನಮೂದಿಸಲು ಸಾಲುಗಟ್ಟಿ ನಿಲ್ಲಬೇಕಾಗುತ್ತದೆ. ಹಾಗಿದ್ದರೂ ಕಳೆದ ತಿಂಗಳಲ್ಲಿ ತಮ್ಮ ಹಾಜರಾತಿಯಲ್ಲಿ 19 ದಿನಗಳ ಗೈರು ಎಂದು ನಮೂದಾಗಿದೆ ಎಂದು ಶುಶ್ರೂಷಕಿ ಕಮಲಾ (ಎಲ್ಲ ಹೆಸರು ಬದಲಿಸಲಾಗಿದೆ) ಹೇಳುತ್ತಾರೆ. ತಮ್ಮದು 28 ದಿನಗಳ ಗೈರು ನಮೂದಾಗಿದೆ ಎಂದು ಲೀಲಾವತಿ ಬೇಸರ ವ್ಯಕ್ತಪಡಿಸಿದರು.

ಇದೇ ಆತಂಕ ಜವಾನನಿಂದ ಹಿಡಿದು ವೈದ್ಯಾಧಿಕಾರಿವರೆಗೂ ಇದೆ. ಸಿ.ಜಿ. ಆಸ್ಪತ್ರೆಯಲ್ಲಿ ಸುಮಾರು 530 ಸಿಬ್ಬಂದಿ ಈ ಬಯೋಮೆಟ್ರಿಕ್ ತಂತ್ರಜ್ಞಾನದ ಮೂಲಕ ಸಹಿ ಹಾಕಬೇಕು. ಆಸ್ಪತ್ರೆಯ ಐದು ಕಡೆಗಳಲ್ಲಿ ಈ ಯಂತ್ರ ಸ್ಥಾಪಿಸಲಾಗಿದೆ.

ಸಾರ್, ಪೋಟೋ ಬರುತ್ತೆ ನಮ್ಮ ಸಹಿಯೂ ಇರುತ್ತೆ. ಆದರೆ, ನಮ್ಮ ಹೆಸರಿನ ಮುಂದೆ ಗೈರು ಅಂತ ಮೂಡುತ್ತದೆ. ಕರ್ತವ್ಯ ಬಿಟ್ಟು ಸಹಿ ಹಾಕಲು ಓಡಿಬರಲಾಗುತ್ತದೆಯೇ? ಸಮಯಪಾಲನೆಯ ಹೆಸರಿನಲ್ಲಿ ಜೀವದ ಜತೆ ಚೆಲ್ಲಾಟ ಆಡಬೇಕೇ? ಆಸ್ಪತ್ರೆಯಲ್ಲಿ ಕೆಲಸ ಕಳ್ಳತನ ಅಸಾಧ್ಯ. ಒಂದು ಶಿಫ್ಟ್‌ನಲ್ಲಿ ಕನಿಷ್ಠ 4 ಬಾರಿ (ವಿಶ್ರಾಂತಿಗೆ ಹೋಗಿ ಬಂದದ್ದು ಸೇರಿ) ಈ ಸಹಿ ಹಾಕಬೇಕು. ಜತೆಗೆ, ಪುಸ್ತಕದಲ್ಲಿ ಸಹಿ ಮಾಡುವ ವ್ಯವಸ್ಥೆಯೂ ಇದೆ. ಆದರೂ ಈ ರೀತಿ ತಾಂತ್ರಿಕ ದಾಖಲಾತಿ ದೋಷ ಆಗುವುದಕ್ಕೆ ಯಾರು ಹೊಣೆ?

ಮಧ್ಯಾಹ್ನದ ಪಾಳಿ ಮುಗಿದವರು ಮನೆಗೆ ಹೋಗುವಾಗ 2 ಗಂಟೆಯ ಮೊದಲು ಸಹಿ ಮಾಡಬೇಕು. ಇಲ್ಲವಾದರೆ ಕೊಠಡಿಯ ಬಾಗಿಲು ಮುಚ್ಚಲಾಗುತ್ತದೆ. ಸಹಿಗೋಸ್ಕರ ನಾಲ್ಕುಗಂಟೆವರೆಗೆ ಕಾಯಬೇಕು. ವಿನಾಕಾರಣ ಸಮಯ ಹಾಳಾಗುತ್ತದೆ ಎಂದರು ಇನ್ನೊಬ್ಬರು ದಾದಿ.

ದೂರು ಸಾಮಾನ್ಯ; ಸಮಸ್ಯೆ ಪರಿಹಾರಕ್ಕೆ ಕ್ರಮ: ಈ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆ ಅಧೀಕ್ಷಕ ಡಾ.ಟಿ. ಪರಶುರಾಮಪ್ಪ, ಹೊಸ ವ್ಯವಸ್ಥೆ ಬಂದಾಗ ದೂರುಗಳು ಸಾಮಾನ್ಯ. ತಾಂತ್ರಿಕ ದೋಷ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಶೇ 70ರಷ್ಟಾದರೂ ಕರ್ತವ್ಯಲೋಪ ಎಸಗುವುದಕ್ಕೆ ಕಡಿವಾಣ ಹಾಕಬಹುದು. ಒಂದು ವೇಳೆ ಬಯೋಮೆಟ್ರಿಕ್ ಸಹಿ ಹಾಕಿಯೂ ಗೈರು ಎಂದು ತೋರಿಸಿದರೆ ಅಥವಾ ನಿಗದಿತ ಅವಧಿಗಿಂತ ಹೆಚ್ಚು ಹೊತ್ತು ಕರ್ತವ್ಯ ನಿರ್ವಹಿಸಿದ ಬಗ್ಗೆ ದಾಖಲೆಸಹಿತ ಬರೆದುಕೊಟ್ಟರೆ ಸಾಕು. ಅದನ್ನು ಪರಿಗಣಿಸಿ ಹಾಜರಾತಿ ದಾಖಲಿಸಲಾಗುತ್ತದೆ. ಆರಂಭಿಕ ಹಂತವಾಗಿರುವುದರಿಂದ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ. ಸರ್ಕಾರ ಕೊಡುವ ವೇತನಕ್ಕೆ ತಕ್ಕಂತೆ ಇಲ್ಲಿ ಕೆಲಸ ನಡೆಯಬೇಕು. ಈ ಬಗ್ಗೆ  ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಅವರೂ ಕೂಡಾ ಸೂಚನೆ ನೀಡಿದ್ದರು ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT