ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಂಸ್ಕೃತಿಕ ಲೋಕಕ್ಕೆ ವಿಶ್ವಾಸಾರ್ಹತೆ'

Last Updated 10 ಏಪ್ರಿಲ್ 2013, 7:02 IST
ಅಕ್ಷರ ಗಾತ್ರ

ಬಳ್ಳಾರಿ:  ಪವಿತ್ರ ಪರಿಕಲ್ಪನೆಯಂತಿದ್ದ ರಾಜಕೀಯ ಕ್ಷೇತ್ರದ ಅರ್ಥವ್ಯಾಪ್ತಿ ಕುಗ್ಗುತ್ತ ಸಾಗಿದ್ದು, ವಿಶ್ವಾಸವನ್ನೇ ಕಳೆದುಕೊಂಡಿದೆ. ಸಾಮಾಜಿಕ ನಾಯ ಕತ್ವ ಕ್ಷೀಣವಾಗಿದ್ದರಿಂದ ಕೇವಲ ಸಾಂಸ್ಕೃ ತಿಕ ಲೋಕದ ಬಗ್ಗೆ ಮಾತ್ರ ವಿಶ್ವಾ ಸಾರ್ಹತೆ ಉಳಿದುಕೊಂಡಿದೆ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ನಗರದ ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಏರ್ಪಡಿಸಿದ್ದ `ಸಾಹಿತಿಯೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಕ್ಷೇತ್ರ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿರುವವರ ಬಗ್ಗೆ ಈಗಲೂ ಅಷ್ಟಿಷ್ಟು ವಿಶ್ವಾಸ ಉಳಿದಿದೆ. ಕಲಾವಿದರು ಮತ್ತು ಸಾಹಿತಿಗಳು ಜನಮನ್ನಣೆ ಬಯಸಿದರೆ, ಅದಕ್ಕೆ ಬದ ಲಾಗಿ ಜನತೆ ಜವಾಬ್ದಾರಿಯನ್ನು ಬಯ ಸುತ್ತಾರೆ ಎಂದು ಅವರು ಹೇಳಿದರು.

`ಉನ್ನತ ಶಿಕ್ಷಣದ ಆಶಯದೊಂದಿಗೆ ಪ್ರಜ್ಞಾಪೂರ್ವಕವಾಗಿ ಸಾಹಿತ್ಯದತ್ತ ಆಕರ್ಷಿತನಾದ ನಾನು, ಅರ್ಧಕ್ಕೇ ಶಾಲೆಬಿಟ್ಟಿದ್ದ ನನ್ನ ಸ್ನೇಹಿತ ಮಡ್ನಿ ಮಾದಯ್ಯನ ದಿಢೀರ್ ನಿರ್ಧಾರದ ಬಗ್ಗೆ `ಈ ಶಾಲೆಯಿಂದ ದೂರನಾದೆ ಏಕೆ ಗೆಳೆಯನೇ' ಎಂಬ ಹಾಡನ್ನು ಬರೆದಿದ್ದೆ. `ಓಹಿಲೇಶ್ವರ' ಚಿತ್ರ ನೋಡಿ, ಆ ಚಿತ್ರದಲ್ಲಿದ್ದ `ಈ ದೇಹದಿಂದ ದೂರವಾದೆ ಏಕೆ ಆತ್ಮವೇ' ಎಂಬ ಹಾಡಿನಿಂದ ಸ್ಪೂರ್ತಿ ಪಡೆದು, ಆ ಕವಿತೆ ರಚಿಸಿ ಜನಮೆಚ್ಚುಗೆ ಗಳಿಸಿದ್ದೆ. ಅಷ್ಟೇ ಅಲ್ಲ, ಸ್ನೇಹಿತನ ಶಿಕ್ಷಣ ಮೊಟಕು ಗೊಂಡಿದ್ದನ್ನು ಪದಗಳಲ್ಲಿ ಹಿಡಿದಿಟ್ಟು ಶಿಕ್ಷಣದ ಮಹತ್ವ ಸಾರಿದ್ದೆ' ಎಂದು ಅವರು ಬಾಲ್ಯ ನೆನಪಿಸಿಕೊಂಡರು.

`ತುಮಕೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನನ್ನೂರು ಬರಗೂರಿನಲ್ಲಿ ಕಳೆದ 60 ವರ್ಷಗಳಲ್ಲಿ ಗರಿಷ್ಠ 10 ಬಾರಿ ಕೆರೆ ತುಂಬಿರಬಹುದು. ಬರಗಾಲ, ಹಸಿರಿನಿಂದಿರದ ವಾತಾವರಣದಲ್ಲೂ ಸಾಹಿತ್ಯ ರಚನೆಗೆ ಪ್ರೇರಣೆಯಾಗಿದ್ದು ನನ್ನ ಬಡತನ' ಎಂದ ಅವರು, `ಅಸ್ಮಿತೆಯ ಕಾರಣದಿಂದ, ಊರಿನಲ್ಲಿ ಗುರುತಿಸಿಕೊಳ್ಳಬೇಕೆಂಬ ಛಲವೇ ನನಗೆ ಉನ್ನತ ಶಿಕ್ಷಣಕ್ಕೆ ಸ್ಪೂರ್ತಿ ಒದಗಿಸಿತು' ಎಂದು ಅವರು ಹೇಳಿದರು.

`ಅನಾರೋಗ್ಯದಿಂದ ಪ್ರಾಣ ಕಳೆದು ಕೊಂಡ ಅಕ್ಕ ಮತ್ತು ತಂಗಿಯರ ಅಗಲಿಕೆಯಿಂದಾಗಿ ವೈದ್ಯನಾಗಬೇಕೆಂಬ ಕನಸು ಕಂಡಿದ್ದ ನನಗೆ, ಮೌಢ್ಯದಿಂದಾಗಿ ಪ್ರಾಣ ಕಳೆದುಕೊಂಡ ಅಕ್ಕನ ಸಾವು ಬಹುವಾಗಿ ಕಾಡಿತು. ಮೌಢ್ಯದ ವಿರುದ್ಧ ಹೋರಾಡಲು ಸಾಹಿತ್ಯ ಕ್ಷೇತ್ರ ವನ್ನು ಆಯ್ದುಕೊಂಡು ಬರವಣಿಗೆ ಯಲ್ಲಿ ತೊಡಗಿದೆ.

ಪಿಯುಸಿ ವಿಜ್ಞಾನ ದಲ್ಲಿ ಶೇ 86 ಅಂಕ ಗಳಿಸಿದ್ದರೂ, ಕಲೆಯಲ್ಲಿ ಪದವಿ ಪಡೆದೆ. ನಂತರ ಪ್ರೌಢಶಾಲೆ ಶಿಕ್ಷಕನಾಗಿ ಕೆಲವು ದಿನ ಸೇವೆ ಸಲ್ಲಿಸಿ, ಅದನ್ನು ಬಿಟ್ಟು, ಸ್ನಾತ ಕೋತ್ತರ ಪದವಿಗಾಗಿ ಬೆಂಗಳೂರಿಗೆ ತೆರಳಿದೆ' ಎಂದು ನೆನಪಿನ ಸುರುಳಿ ಬಿಚ್ಚಿಟ್ಟರು. ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನ ಶೀಲತೆ ಅತ್ಯಂತ ಮುಖ್ಯ ವಾಗಿದ್ದು, ಅಧ್ಯಯನದಿಂದಲೇ ಏನೆಲ್ಲ ವನ್ನೂ ಸಾಧಿಸಬಹುದಾಗಿದೆ ಎಂದು ಅವರು ಕಿವಿಮಾತು ಹೇಳಿದರು.

`ಸಾಹಿತ್ಯಕ್ಕಿಂತಲೂ ಸಿನಿಮಾ ಹೆಚ್ಚು ಜವಾಬ್ದಾರಿಯುತ ಕ್ಷೇತ್ರವಾಗಿದೆ. ಈ ಕಾರಣದಿಂದಲೇ ಚಲನಚಿತ್ರ ನಿರ್ದೇಶಕ ನಾದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಿನಿಮಾ ಕ್ಷೇತ್ರ ತನ್ನ ಜವಾಬ್ದಾರಿಯನ್ನೇ ಮರೆತು ಅರ್ಥವಿಲ್ಲದ ಕಥೆ, ಅಬ್ಬರದ ಸಂಗೀತ, ಅಶ್ಲೀಲ ಸಾಹಿತ್ಯಕ್ಕೆ ಮೊರೆ ಹೋಗಿದೆ' ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಸಾಹಿತ್ಯ ಮತ್ತು ಜೀವನದ ನಡುವೆ ಅವಿನಾಭಾವ ಸಂಬಂಧವಿದೆ. ಜೀವನ ಬಹು ಆಯಾಮದ ಪ್ರಕ್ರಿಯೆಯಾಗಿದ್ದು, ಮನುಷ್ಯ ಜೀವನದಲ್ಲಿ, ಜೀವನವನ್ನು ಅರ್ಥ ಮಾಡಿಕೊಳ್ಳುವುದೇ ಅತ್ಯಂತ ದುಸ್ತರವಾದ ಕೆಲಸವಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಅರ್ಥ ಶಾಸ್ತ್ರಜ್ಞ ಡಾ.ಬಿ.ಶೇಷಾದ್ರಿ ಹೇಳಿದರು.

ಸಾಹಿತ್ಯ ಬಹುಶಿಸ್ತೀಯ ಚೌಕಟ್ಟನ್ನು ಒಳಗೊಂಡಿದ್ದು, ಸದ್ಯದ ಭ್ರಷ್ಟ ರಾಜಕೀಯ ಪರಿಸ್ಥಿತಿಯಲ್ಲಿ ಸಾಹಿತ್ಯದ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.

ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೇರಿ ಎರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಸಣ್ಣ ಬಸವರಾಜ್ ಉಪಸ್ಥಿತರಿದ್ದರು. ಡಾ.ಸಂಪಿಗೆ ನಾಗರಾಜ್ ಪರಿಚ ಯಿಸಿದರು. ಈರಮ್ಮ ಸ್ವಾಗತಿಸಿದರು.

ಡಾ.ಮಲ್ಲಿಕಾ ಘಂಟಿ, ಕತೆಗಾರ ರಾಜಶೇಖರ ನೀರಮಾನ್ವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೋರನೂರು ಕೊಟ್ರಪ್ಪ, ಟಿ.ಗುರುರಾಜಾಚಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT