ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಯ ಹಾದಿಯಲ್ಲಿ ದೀಪಕ್!

Last Updated 20 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಕೆಲವರು ಹಾಗೆ. ತಾವು ಏನಾಗ ಬೇಕು ಎಂದು ಆರಂಭದಲ್ಲಿ ಬಯಸುತ್ತಾರೋ ಆ ಗುರಿಯನ್ನು ತಲುಪಲು ಅವರಿಗೆ ಸಾಧ್ಯವಾಗುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ದಿಢೀರ್ ಆಗಿ ಬಂದ ಅಡ್ಡಿಯೋ, ಅಥವಾ ಅಂತಿಮ ಕ್ಷಣದಲ್ಲಿ ಬದಲಾಯಿಸಿದ ಮನಸ್ಸಿನಿಂದಾಗಿಯೋ ಏನೋ ಅವರು ತಮ್ಮ ಗುರಿಯ ದೃಷ್ಟಿಯನ್ನು ಇನ್ನೊಂದು ದಿಕ್ಕಿಗೆ ತಿರುಗಿಸುತ್ತಾರೆ.

ದೀಪಕ್ ಕಾವೇರಿಯಪ್ಪ ಅವರ ವಿಚಾರದಲ್ಲೂ ಆದದ್ದು ಇದೇ. ಆದರೆ ಅವರಿಗೆ ಗುರಿಯನ್ನು ಬದಲಾಯಿಸಲು ಯಾವುದೇ ಅಡ್ಡಿಗಳು ಕಾರಣವಾಗಿರಲಿಲ್ಲ. ಬದಲಿಗೆ ಅವರ ಮನಸ್ಸೇ ಕಾರಣವಾಗಿತ್ತು. ತಮ್ಮ ಆರಂಭದ ಗುರಿಯೆಡೆಗೆ ಸಾಗಿದ್ದರೆ ಅವರು ಈಗ ಕ್ರಿಕೆಟಿಗನಾಗಿ ಮೈದಾನದಲ್ಲಿ ಬ್ಯಾಟ್, ಬಾಲ್ ಹಿಡಿಯಬೇಕಿತ್ತು. ಆದರೆ ಅದಾಗಲಿಲ್ಲ. ಅವರು ಮುಖಮಾಡಿದ್ದು ದೇಹದಾರ್ಢ್ಯದ ಕಡೆಗೆ. ಈಗ ಅದರಲ್ಲೇ ಸಾಧನೆ ಮಾಡುತ್ತಿದ್ದಾರೆ.

ದೀಪಕ್ ಕಾವೇರಿಯಪ್ಪ ಮೂಲತಃ ಮಡಿಕೇರಿಯ ವಿರಾಜಪೇಟೆಯವರು. ಅವರಿಗೆ ಬಾಲ್ಯದಿಂದಲೂ ಕ್ರಿಕೆಟಿಗನಾಗಬೇಕೆಂಬ ಆಸೆ. ತರಬೇತಿ ಪಡೆಯಲು ಹನ್ನೊಂದು ವರ್ಷಗಳ ಹಿಂದೆ ಅವರು ಬಂದದ್ದು ಬೆಂಗಳೂರಿಗೆ. ಕ್ರಿಕೆಟ್ ಅಂದರೆ ಅಲ್ಲಿ ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಪಾಶಸ್ತ್ಯ. ಅದಕ್ಕಾಗಿ ಅವರು ಜಿಮ್‌ಗೆ  ಸೇರಿದರು. ಪ್ರತಿ ನಿತ್ಯ ಜಿಮ್‌ಗೆ ಹೋಗಿ ದೈಹಿಕ ಕಸರತ್ತು ನಡೆಸುತ್ತಿರುವುವಾಗಲೇ ಅವರಲ್ಲಿ ಚಿಗುರಿದ್ದು ದೇಹದಾರ್ಢ್ಯ ಪಟುವಾಗಬೇಕೆಂಬ ಆಸೆ. ಹಾಗಾಗಿ ಕ್ರಿಕೆಟಿಗನಾಗಬೇಕೆಂಬ ಆಕಾಂಕ್ಷೆಗೆ ತಿಲಾಂಜಲಿ ಇಟ್ಟರು ದೀಪಕ್.

ಅಂದಿನಿಂದ ದೇಹದಾರ್ಢ್ಯದತ್ತ ಗಮನ ಹರಿಸಿದ ದೀಪಕ್ ಕಾವೇರಿಯಪ್ಪ ಇಂದು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಉತ್ತಮ ದೇಹದಾರ್ಢ್ಯ ಪಟು ಎಂದು ಗುರುತಿಸಿಕೊಳ್ಳುವತ್ತ ಮುನ್ನುಗುತ್ತಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಜರ್ಮನಿಯ ಆಲ್ಜಿಯಲ್ಲಿ ನಡೆದ ಮಿ.ಯುನಿವರ್ಸ್ ಚಾಂಪಿಯನ್‌ಷಿಪ್‌ನಲ್ಲಿ ಹಿರಿಯರ ವಿಭಾಗದಲ್ಲಿ ದೀಪಕ್ ಏಳನೇ ಸ್ಥಾನ ಪಡೆದಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ರಾಜ್ಯದಿಂದ ಮೂವರು ದೇಹದಾರ್ಢ್ಯ ಪಟುಗಳು ತೆರಳಿದ್ದರು. ಒಟ್ಟು 150 ಸ್ಪರ್ಧಿಗಳು ಭಾಗವಹಿಸಿದ್ದ ಈ ಚಾಂಪಿಯನ್‌ಷಿಪ್‌ನಲ್ಲಿ ಏಳನೇ ಸ್ಥಾನ ಪಡೆದ ದೀಪಕ್ ಅವರದ್ದು ಗಮನಾರ್ಹ ಸಾಧನೆ. ಈ ಮೊದಲು  ಅಂದರೆ 2006ರಲ್ಲಿ ಎರಡು ಬಾರಿ ಮಿ.ವರ್ಲ್ಡ್ ಚಾಂಪಿಯನ್‌ನಲ್ಲಿ ಭಾಗವಹಿಲು ಅವಕಾಶ   ಸಿಕ್ಕಿತ್ತಾದರೂ ಕಾರಣಾಂತರಗಳಿಂದ ದೀಪಕ್ ಅವರಿಗೆ ಭಾಗವಹಿಸಲು ಆಗಿರಲಿಲ್ಲ.  

 ‘ಮಿ.ಯುನಿವರ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಬೇಕೆಂಬುದು ನನ್ನ ಬಹುದಿನದ ಕನಸಾಗಿತ್ತು. ಅದು ಕಳೆದ ವರ್ಷ ನನಸಾಗಿದೆ.ಚಾಂಪಿಯನ್‌ಶಿಪ್‌ನಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲು ಅವಕಾಶವಿತ್ತು. ಐದು ಬಾರಿ ಈ ಸ್ಪರ್ಧೆಯಲ್ಲಿ ಭಾಗವಹಿಸಬೇಕನ್ನುವ ಮಹತ್ವಾಕಾಂಕ್ಷೆ ಇದೆ. ಭವಿಷ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಲು ಪ್ರಯತ್ನಿಸುವೆ’ ಎಂದು ದೀಪಕ್ ಕಾವೇರಿಯಪ್ಪ ವಿಶ್ವಾಸದಿಂದ ಹೇಳುತ್ತಾರೆ.
2010 ದೀಪಕ್ ಪಾಲಿಗೆ ಅತ್ಯಂತ ಮಹತ್ವದ ವರ್ಷ. ಆ ವರ್ಷ ನಡೆದ ಹಲವು ಪ್ರಮುಖ ಚಾಂಪಿಯನ್‌ಷಿಪ್‌ನಲ್ಲಿ ಅವರು ಜಯಗಳಿಸಿದ್ದಾರೆ.

ಮೈಸೂರು ದಸರಾ ಅಂಗವಾಗಿ ನಡೆದ  ‘ದಸರಾ ಶ್ರೀ’ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗಳಿಸಿರುವ ದೀಪಕ್,  ಆಗಸ್ಟ್‌ನಲ್ಲಿ  ನಡೆದ ‘ಭಾರತ್ ಶ್ರೀ’ ಪ್ರಶಸ್ತಿಗೂ ಭಾಜನಾರಾಗಿದ್ದಾರೆ.  ಈ ವರ್ಷದ ಜನವರಿಯಲ್ಲಿ   ‘ಕರ್ನಾಟಕ ಶ್ರೀ’ ಪ್ರಶಸ್ತಿಯೂ ಅವರಿಗೆ ಸಂದಿದೆ. ಬೆಂಗಳೂರಿನ ಮತ್ತಿಕೆರೆಯಲ್ಲಿ  ದೀಪಕ್ ಸ್ವಂತ ಜಿಮ್ ಒಂದನ್ನು ನಡೆಸುತ್ತಿದ್ದಾರೆ.  ಇದರ ಜೊತೆಗೆ ಇತರ ಮೂರು ಜಿಮ್‌ಗಳಲ್ಲಿ ಟ್ರೈನರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

 ರಾಜ್ಯದ ದೇಹದಾರ್ಢ್ಯ  ಪಟುಗಳ ಎಲ್ಲಾ ಅಗತ್ಯಗಳಿಗೆ ಸೂಕ್ತವಾಗಿ ಸ್ಪಂದಿಸಿ, ತಮ್ಮಂತಹ ಕ್ರೀಡಾಪಟುಗಳಿಗೆ ಸಾಧನೆ ಮಾಡಲು ಕರ್ನಾಟಕ ದೇಹದಾರ್ಢ್ಯ ಸಂಸ್ಥೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದೆ ಎಂದು ಹೇಳುವ ದೀಪಕ್ ಅವರಿಗೆ, ರಾಜ್ಯ ಸರ್ಕಾರ ಸೂಕ್ತ ಪ್ರೋತ್ಸಾಹ ನೀಡುತ್ತಿಲ್ಲ ಎನ್ನುವ ಕೊರಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT