ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಿಸುವ ಛಲಕ್ಕೆ ಅಡ್ಡಿಯಾಗದ ಎಂಪಿಎಸ್ ರೋಗ

Last Updated 30 ಮೇ 2012, 19:30 IST
ಅಕ್ಷರ ಗಾತ್ರ

ಮಂಡ್ಯ: ಹತ್ತು ಲಕ್ಷಕ್ಕೆ ಒಬ್ಬರಿಗೆ ಬರುವ ಎಂಪಿಎಸ್ ರೋಗದಿಂದ ಬಳಲುತ್ತಿದ್ದರೂ, ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ 80 ರಷ್ಟು ಅಂಕ ಗಳಿಸುವ ಮೂಲಕ `ಸಾಧಿಸುವ ಛಲವೊಂದಿದ್ದರೆ ಯಾವ ರೋಗವೂ ಅಡ್ಡಿಯಾಗಲಾರದು~ ಎಂಬುದನ್ನು ಇಲ್ಲಿನ ವಿದ್ಯಾರ್ಥಿನಿಯೊಬ್ಬರು ನಿರೂಪಿಸಿದ್ದಾರೆ.

ಮಂಡ್ಯ ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕೆ.ರೇಖಾ ಈ ದಿಟ್ಟ ಛಲಗಾತಿ. ಇವರ ಸಹೋದರ ಕೆ. ಜಯಂತ್ ಸಹ ಇದೇ ಸಮಸ್ಯೆಯಿಂದ ಬಳಲುತ್ತಿದ್ದು, ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎರಡನೇ ವರ್ಷದಲ್ಲಿದ್ದಾರೆ.
ಮೂಲತಃ ಮಂಡ್ಯ ತಾಲ್ಲೂಕಿನ ಕಾಳೇನಹಳ್ಳಿಯವರಾದ ಈ ವಿದ್ಯಾರ್ಥಿಗಳು ತಮ್ಮ ತಾಯಿ ಭವಾನಿ ಅವರೊಂದಿಗೆ ಮಂಡ್ಯದ ವಿ.ವಿ.ನಗರದಲ್ಲಿ ವಾಸವಾಗಿದ್ದಾರೆ.

ಎಂಪಿಎಸ್-4 (ಮ್ಯುಕೊ ಪಾಲಿ ಸೈಕರಾಲೋಸಿಸ್) ರೋಗದಿಂದ ಬಳಲುತ್ತಿರುವವರಿಗೆ ಮೂಳೆಗಳು ಗಟ್ಟಿಯಾಗುವುದೇ ಇಲ್ಲ. ಜತೆಗೆ ಅವರ ಬೆಳವಣಿಗೆಯೂ ಆಗುವುದಿಲ್ಲ. ನಿತ್ಯ ಒಂದಲ ಒಂದು ಆರೋಗ್ಯ ಸಮಸ್ಯೆ ಎದುರಾಗುತ್ತಿರುತ್ತದೆ. ಈ ಅಡ್ಡಿಗಳ ನಡುವೆಯೂ ಸಾಧನೆ ಮಾಡುವ ಹಂಬಲವನ್ನು ಈ ವಿದ್ಯಾರ್ಥಿಗಳು ಹೊಂದಿದ್ದಾರೆ.

ಮೂರು ವರ್ಷದವರೆಗೆ ಇಬ್ಬರೂ ಎಲ್ಲರಂತೇ ಇದ್ದರು. ಆ ನಂತರ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಬೆಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ತೋರಿಸಿದ ನಂತರ ಎಂಪಿಎಸ್ -4 ರೋಗದಿಂದ ಬಳಲುತ್ತಿರುವುದು ಪತ್ತೆಯಾಯಿತು.

`ಜಾಸ್ತಿ ಹೊತ್ತು ನಿಲ್ಲಲು ಸಾಧ್ಯವಾಗುವುದಿಲ್ಲ. ಕೂಡಲಿಕ್ಕೂ ಆಗುವುದಿಲ್ಲ. ಹೆಚ್ಚು ಹೊತ್ತು ಓದಲಿಕ್ಕೂ ತೊಂದರೆಯಾಗುತ್ತಿದೆ. ಆದರೂ ಸಾಧಿಸಬೇಕು ಎಂಬ ಛಲದಿಂದ ಓದುತ್ತಿದ್ದೇವೆ~ ಎನ್ನುತ್ತಾರೆ ರೇಖಾ.
ನಿತ್ಯವೂ ಅವರನ್ನು ಶಾಲೆಗೆ ಬಿಟ್ಟು, ಕರೆದುಕೊಂಡು ಬರಬೇಕು. ಪುಸ್ತಕದ ಚೀಲವನ್ನು ಹೊರಲು ಅವರಿಗೆ ಸಾಧ್ಯವಾಗುವುದಿಲ್ಲ. ತಿಂಗಳಿಗೊಮ್ಮೆ ಚನ್ನೈನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಅವರಿಬ್ಬರ ಚಿಕಿತ್ಸೆಗೆ ಪ್ರತಿ ತಿಂಗಳೂ 10 ಸಾವಿರ ರೂಪಾಯಿಯಷ್ಟು ಖರ್ಚಾಗುತ್ತದೆ ಎನ್ನುತ್ತಾರೆ ಅವರ ತಾಯಿ ಭವಾನಿ.

`ಇವರ ತಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಚಿಕಿತ್ಸೆ ವೆಚ್ಚ ಭರಿಸುವುದು ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ಬೇರೆ ತೊಂದರೆಗಳು ಬಾರದಂತೆ ಚಿಕಿತ್ಸೆ ಕೊಡಿಸಲು ರೂ 20 ಲಕ್ಷಕ್ಕೂ ಹೆಚ್ಚು ಹಣ ಬೇಕಿದೆ. ಸಹೃದಯಿಗಳು ನೆರವು ನೀಡಬೇಕು~ ಎಂದು ಅವರು ಕೋರಿದರು.

ರೇಖಾ ಅವರ ಪ್ರಥಮ ವರ್ಷದ ಎಂಜಿನಿಯರಿಂಗ್‌ಗೆ ಬೇಕಾಗುವ ರೂ 40 ಸಾವಿರವನ್ನು ಸಹೃದಯಿಗಳಿಂದ ಸಂಗ್ರಹಿಸಿ, ಅವರು ಆಯ್ಕೆ ಮಾಡಿಕೊಳ್ಳುವ ಕಾಲೇಜಿಗೆ ಚೆಕ್ ಮೂಲಕ ನೀಡಲಾಗುವುದು ಎಂದು ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರೇಖಾ ಅವರಿಗೆ ಕಿವಿ ಕೇಳಿಸುವುದು ಕಡಿಮೆಯಾಗಿದೆ. ಆಗಾಗ ಉಸಿರಾಟದ ತೊಂದರೆಯೂ ಅವರಿಬ್ಬರನ್ನು ಕಾಡುತ್ತದೆ. ಸಾಧನೆಯ ಹಂಬಲ ಮಾತ್ರ ಕೈಬಿಟ್ಟಿಲ್ಲ.
ಅವರ ಸಾಧನೆಯನ್ನು ಪ್ರೋತ್ಸಾಹಿಸ ಬಯಸುವವರು ರೇಖಾ, ಖಾತೆ ಸಂಖ್ಯೆ: 31553462160, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮುಖ್ಯ ಶಾಖೆ, ಮಂಡ್ಯ ಇಲ್ಲಿಗೆ ಧನ ಸಹಾಯ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT