ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯ ಕಾಯ್ದುಕೊಳ್ಳಲು ಶ್ರೀಗಳ ಸಲಹೆ

Last Updated 3 ಜನವರಿ 2011, 7:20 IST
ಅಕ್ಷರ ಗಾತ್ರ

ಮುಂಡರಗಿ: ‘ಡಂಬಳ ಗ್ರಾಮದಲ್ಲಿ ಎರಡೂ ಕೋಮಿನ ಜನರು ಮೊದಲಿನಂತೆ ಸಾಮರಸ್ಯದಿಂದ ಧಾರ್ಮಿಕ ಭಾವೈಕ್ಯತೆಯನ್ನು ಕಾಯ್ದುಕೊಂಡು ಹೋಗಬೇಕು’ ಎಂದು ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಲಹೆ ನೀಡಿದರು. ಸ್ಥಳೀಯ ತೋಂಟದಾರ್ಯ ಶಿವಾನುಭವ ಸಮಿತಿಯು ತೋಂಟದಾರ್ಯ ಶಾಖಾ ಮಠದಲ್ಲಿ ಶನಿವಾರ ಏರ್ಪಡಿಸಿದ್ದ ತ್ರೈಮಾಸಿಕ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಭೂಮಿ, ನೀರು, ಬೆಂಕಿ ಮೊದಲಾದ ಪಂಚಭೂತಗಳು ಜಗತ್ತಿನಲ್ಲಿರುವ ಸರ್ವ ಜನರಿಗೆ ಸೇರಿದವುಗಳಾಗಿವೆ ಎಂಬ ಉದಾತ್ತ ಭಾವನೆ ಎಲ್ಲರಲ್ಲಿ ಬರಬೇಕು. ಅಂದಾಗ ಮಾತ್ರ ನಮ್ಮಲ್ಲಿಯ ಮೇಲು, ಕೀಳು, ಉಚ್ಛ ನೀಚ ಎಂಬ ಭಾವಗಳು ಮರೆಯಾಗುತ್ತವೆ’ ಎಂದು ಅವರು ತಿಳಿಸಿದರು.

‘ಸಾಮರಸ್ಯವೆ ಸುಂದರ ಹಾಗೂ ಸುಸೂತ್ರ ಬದುಕಿನ ಮೂಲಮಂತ್ರವಾಗಿದ್ದು ಜಗತ್ತಿನ ಎಲ್ಲ ಧರ್ಮ ಗುರುಗಳು, ದಾರ್ಶನಿಕರು ಇದನ್ನೇ ಪ್ರತಿಪಾದಿಸಿದ್ದಾರೆ. ಆ ಕಾರಣದಿಂದಲೆ ಶರಣರು ಮನುಷ್ಯರನ್ನು ಒಳಗೊಂಡಂತೆ ಸಕಲ ಜೀವರಾಶಿಗಳನ್ನು ಸಮನಾಗಿ ಕಂಡರು’ ಎಂದು ಶಿವಾನುಭವದಲ್ಲಿ ಭಾಗವಹಿಸಿದ್ದ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಎಂ.ಆರ್.ಚೂರಿ ತಿಳಿಸಿದರು.

ರಾಜ್ಯ ವಾರ್ತಾ ಇಲಾಖೆಯು ಈಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ‘ಭಾಗ್ಯಲಕ್ಷ್ಮಿ’ ಛಾಯಾಚಿತ್ರ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತಿಯ ಸ್ಥಾನ ಪಡೆದ ಸ್ಥಳೀಯ ಛಾಯಾಗ್ರಾಹಕ ಮುತ್ತಣ್ಣ ಹಾಳಕೇರಿ ಹಾಗೂ ಕಲಾಶ್ರಿ ಪ್ರಶಸ್ತಿ ಪುರಸ್ಕೃತ ಸುಷ್ಮಾ ಅರಿಷಣದ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುತ್ತಣ್ಣ ಹಾಳಕೇರಿ ಸನ್ಮಾನಿತರ ಪರವಾಗಿ ಮಾತನಾಡಿದರು. ರೂಪಾ ಚವಡಿ ಗ್ರಂಥ ಪಠಣ ಮಾಡಿದರು. ಕಾಜಲ ಹಂಪಸಾಗರ ಚಿಂತನ ನಡೆಸಿದರು. ವೇದಿಕೆಯಲ್ಲಿ ತಹಸೀಲ್ದಾರ ರಮೇಶ ಕೋನರಡ್ಡಿ, ನಾಗೇಶ ಹುಬ್ಬಳ್ಳಿ, ಕೊಟ್ರಯ್ಯ ಅಮರಗೋಳ ಹಿರೇಮಠ, ಈಶ್ವರಪ್ಪ ಬೆಟಗೇರಿ, ನೀಲಕಂಠಪ್ಪ ಪತ್ತಾರ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಪ್ರಶಸ್ತಿ ಪುರಷ್ಕೃತ ಶರಣಪ್ಪ ವಡಗೇರಿ ಇವರಿಂದ ಸಂಗಿತ ಕಾರ್ಯಕ್ರಮ ಜರುಗಿತು. ಇತ್ತೀಚೆಗೆ  ನಿಧನರಾದ ಸ್ಥಳೀಯ ಬಸಪ್ಪ ಕುರಡಗಿ ಹಾಗೂ ಬಸವರಾಜ ಅಂಗಡಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶರಣಪ್ಪ ಕುಬಸದ ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು. ಗಿರೀಶ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಕುಸುಗಲ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT