ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರಿಗೆ ಸಿಗದ ಅಭ್ಯರ್ಥಿ ಆಸ್ತಿ ವಿವರ

Last Updated 24 ಏಪ್ರಿಲ್ 2013, 10:44 IST
ಅಕ್ಷರ ಗಾತ್ರ

ಯಾದಗಿರಿ: ತಮ್ಮನ್ನು ಪ್ರತಿನಿಧಿಸುವ ಅಭ್ಯರ್ಥಿಗಳು ಗಳಿಸಿರುವ ಆಸ್ತಿಯ ವಿವರವನ್ನು ತಿಳಿದುಕೊಳ್ಳಲು ಜಿಲ್ಲೆಯ ಸಾರ್ವಜನಿಕರು ಪರದಾಡುವಂತಾಗಿದೆ. ಚುನಾವಣಾ ಅಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಿ ಸಿಗದೇ ಬರಿಗೈಲಿ ವಾಪಸ್ಸಾಗುವಂತಾಗಿದೆ.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಸುಮಾರು 47 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಸಲ್ಲಿಕೆಗೂ ಆಯಾ ಕ್ಷೇತ್ರಗಳಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿಯೇ ಚುನಾವಣಾ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದೆ. ಇದೀಗ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮವಾಗಿ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಗಳಿಸಿರುವ ಆಸ್ತಿ ಎಷ್ಟು ಎಂಬುದು ಮಾತ್ರ ಸಾರ್ವಜನಿಕರಿಗೆ ತಿಳಿಯದಂತಾಗಿದೆ.

ಚುನಾವಣಾ ಪ್ರಕ್ರಿಯೆಯಂತೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಭ್ಯರ್ಥಿಗಳು ಆಸ್ತಿಯ ವಿವರವನ್ನು ಸಲ್ಲಿಸುತ್ತಾರೆ.
ಆ ವಿವರದ ಪ್ರತಿಯನ್ನು ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಸೂಚನಾ ಫಲಕದಲ್ಲಿ ಹಾಕಬೇಕು. ಅಲ್ಲದೇ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲೂ ಪ್ರಕಟಿಸಬೇಕು. ಆದರೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಅನಕ್ಷರಸ್ಥರೇ ಇದ್ದು, ಅವರಿಗೆ ಇಂಟರ್‌ನೆಟ್, ವೆಬ್‌ಸೈಟ್‌ಗಳ ಪರಿಚಯವೇ ಇಲ್ಲ. ಹೀಗಾಗಿ ಚುನಾವಣಾ ಅಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕದಲ್ಲಾದರೂ ಅಭ್ಯರ್ಥಿಗಳ ಆಸ್ತಿ ವಿವರ ಸಿಕ್ಕೀತು ಎಂದುಕೊಂಡರೆ, ಅಲ್ಲಿಯೂ ಲಭ್ಯವಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಜಿಲ್ಲಾಡಳಿತದ ಪ್ರಕಾರ ಎಲ್ಲ ಅಭ್ಯರ್ಥಿಗಳ ಆಸ್ತಿ ವಿವರವನ್ನು ಆಯಾ ಚುನಾವಣಾ ಅಧಿಕಾರಿಗಳ ಕಾರ್ಯಾಲಯ ಹಾಗೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ ವೆಬ್‌ಸೈಟ್‌ನಲ್ಲಿ ಕೆಲ ಅಭ್ಯರ್ಥಿಗಳ ಆಸ್ತಿ ವಿವರ ಲಭ್ಯವಾಗಿದ್ದರೆ, ಚುನಾವಣಾ ಅಧಿಕಾರಿಗಳ ಕಾರ್ಯಾಲಯ ಸೂಚನಾ ಫಲಕದಲ್ಲಿಯೂ ಸಿಗುತ್ತಿಲ್ಲ ಎಂಬುದು ಜನರ ಆಕ್ರೋಶ.
ಗುರುಮಠಕಲ್, ಯಾದಗಿರಿ, ಶಹಾಪುರ ಹಾಗೂ ಸುರಪುರ ಮತಕ್ಷೇತ್ರಗಳ ಅಭ್ಯರ್ಥಿಗಳ ಆಸ್ತಿ ವಿವರಕ್ಕಾಗಿ ಕೆಲ ಮತದಾರರು ಈಗಾಗಲೇ ಚುನಾವಣಾ ಅಧಿಕಾರಿಗಳ ಕಾರ್ಯಾಲಯಕ್ಕೂ ಹೋಗಿ ಬಂದಿದ್ದಾರೆ. ಆದರೆ ಸಿಗದೇ ನಿರಾಸೆಯಿಂದ ವಾಪಸ್ಸಾಗಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಆಸ್ತಿ ವಿವರ ತಿಳಿದುಕೊಳ್ಳಬೇಕು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಅದಕ್ಕಾಗಿಯೇ ಕಾರ್ಯಾಲಯಕ್ಕೆ ಹೋಗಿ ಸೂಚನಾ ಫಲಕಗಳನ್ನು ನೋಡಿದರೆ, ಯಾವುದೇ ಮಾಹಿತಿ ಇಲ್ಲ. ಇನ್ನು ವೆಬ್‌ಸೈಟ್‌ನಲ್ಲಿ ನೋಡಬೇಕೆಂದರೂ ದುಸ್ತರವಾಗುತ್ತಿದೆ ಎನ್ನುತ್ತಾರೆ ವೀರ ಕನ್ನಡಿಗ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣಮೂರ್ತಿ ಕುಲಕರ್ಣಿ.

ಚುನಾವಣೆ ನಿಂತಿರುವ ಅಭ್ಯರ್ಥಿಗಳು ಘೋಷಣೆ ಮಾಡಿರುವ ಆಸ್ತಿ ವಿವರವನ್ನು ಸೂಚನಾ ಫಲಕದಲ್ಲಿ ಹಾಕದೇ ಇರುವುದರಿಂದ ಸಾರ್ವಜನಿಕರು ನಿರಾಸೆ ಅನುಭವಿಸುವಂತಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಎಂಥವರು? ಯಾರಿಗೆ ಮತ ಹಾಕಬೇಕು ಎನ್ನುವ ಯೋಚನೆಯಲ್ಲಿರುವ ಮತದಾರರಿಗೆ, ಅವರನ್ನು ಪ್ರತಿನಿಧಿಸುವವರ ಆಸ್ತಿ ವಿವರವೇ ಸಿಗದಿದ್ದರೇ ಹೇಗೆ ಎನ್ನುವ ಪ್ರಶ್ನೆ ಪ್ರಜ್ಞಾವಂತ ನಾಗರಿಕರದ್ದು.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ಸ್ಥಿತಿಯೂ ಭಿನ್ನವಾಗಿಲ್ಲ. ಎಲ್ಲೆಡೆಯೂ ಆಸ್ತಿ ವಿವರ ಪಡೆಯಲು ಹರಸಾಹಸ ಮಾಡಬೇಕು. ಕೆಲ ಮಾಧ್ಯಮದವರು ಆಸ್ತಿ ವಿವರ ಕೇಳಿದರೂ, ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೆಡೆ ಕೇಳಿದರೂ, ಹಣ ನೀಡಿ, ಝರಾಕ್ಸ್ ಪಡೆದುಕೊಳ್ಳುವಂತೆಯೇ ಅಧಿಕಾರಿಗಳು ಹೇಳುತ್ತಿದ್ದಾರೆ ಎಂಬ ದೂರು ಕೇಳಿ ಬಂದಿವೆ.

ಮತದಾನಕ್ಕೆ ಇನ್ನೂ 11 ದಿನಗಳು ಬಾಕಿ ಉಳಿದಿದ್ದು, ಈಗಲಾದರೂ ಅಭ್ಯರ್ಥಿಗಳ ಆಸ್ತಿ ವಿವರವನ್ನು ಚುನಾವಣಾ ಅಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಕಟಿಸುವ ಮೂಲಕ ಸಾರ್ವಜನಿಕರಿಗೆ ಅವರ ಅಭ್ಯರ್ಥಿಗಳ ವಿವರ ತಿಳಿದುಕೊಳ್ಳಲು ಅನುವು ಮಾಡಿಕೊಡಬೇಕು ಎಂಬುದು ಜನರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT