ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಸಂತೆಗೆ ಬನ್ನಿ!

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತೋಟದಿಂದ ತಟ್ಟೆಗೆ ಬರುವ ತರಕಾರಿ ವಿಷಯುಕ್ತವೇ? ಮಾರುಕಟ್ಟೆಯಿಂದ ಹೊಟ್ಟೆಗೆ ಸೇರುವ ಹಣ್ಣುಗಳೂ ವಿಷಮುಕ್ತವಲ್ಲವೇ? ಇಂಥದ್ದೊಂದು ಆತಂಕ ಹುಟ್ಟಿದ್ದು ಕಳೆದ ದಶಕದಲ್ಲಿ.

ಹೆಚ್ಚಿನ ಇಳುವರಿ ಅಥವಾ ಹೆಚ್ಚಿನ ಲಾಭ ಇವೆರಡಕ್ಕಾಗಿ ಸಾಕಷ್ಟು ರಾಸಾಯನಿಕ ಸಿಂಪರಣೆಯಿಂದ ಹಣ್ಣು, ತರಕಾರಿ ಧಾನ್ಯಗಳ ಮೂಲಕ ವಿಷ ಸೇವನೆಯಾಗುತ್ತಿದೆ ಎಂಬ ಆತಂಕ ಹರಡಿಕೊಂಡಿತು.

ಆಗಲೇ ಸುರಕ್ಷಿತ ಆಹಾರ, ವಿಷಮುಕ್ತ ಆಹಾರಕ್ಕಾಗಿ ಹುಡುಕಾಟ ಆರಂಭವಾಯಿತು. ಬೆಳೆಯುವ ಪ್ರದೇಶ, ಅದಕ್ಕೆ ಬಳಸುವ ನೀರು ನಿರ್ಮಲವಾಗಿದೆಯೇ? ಬಳಸುವ ಗೊಬ್ಬರ ಯಾವುದು? ಇದೆಲ್ಲವೂ ಮಹತ್ವ ಪಡೆದವು. 

ಇಂಥ ಸಂದರ್ಭದಲ್ಲಿಯೇ  ಯಾವ ಗೊಬ್ಬರ ಬಳಸದ, ವಿಷ ರಸಾಯನಿಕಗಳೊಂದಿಗೆ ಸಂಪರ್ಕಕ್ಕೆ ಬರದ ಸಾವಯವ ಉತ್ಪನ್ನಗಳತ್ತ ಜನ ಹೊರಳ ತೊಡಗಿದರು. 

ಆದರೆ ಸಾವಯವದ ಹೆಸರಿನಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದೊಡ್ಡ ಮಳಿಗೆಗಳನ್ನೇ ಆರಂಭಿಸಿದರು. ಉಳ್ಳವರಿಗೆ ಅದೆಲ್ಲವೂ ಚಂದದ ಪ್ಯಾಕಿನಲ್ಲಿ ಕಾಣುವ ಹಣ್ಣು-ತರಕಾರಿ ಆಯಿತು. ಆದರೆ ಸಾಮಾನ್ಯರಿಗೆ? ಬೆಳೆದವರಿಗೆ?

ಬೆಳೆದವರು ಹಾಗೂ ಸಾಮಾನ್ಯರ ನಡುವೆಯೊಂದು ಸಂಪರ್ಕ ಸೇತು ಇರಲಿ ಎಂದೇ ಸಂತೆಯ ಪರಿಕಲ್ಪನೆ ಬಂದಿತು. ಲಾಲ್‌ಬಾಗ್‌ನಲ್ಲಿ ಪ್ರತಿವರ್ಷ ಸಾವಯವ ಸಂತೆ ನಡೆಯುತ್ತಿದೆ.

ವಿಷಮುಕ್ತ ಆಹಾರ ಜನಪ್ರಿಯಗೊಳಿಸುವುದು ಅಷ್ಟೇ ಅಲ್ಲ, ರೈತರಿಗೂ ಪ್ರೋತ್ಸಾಹ ಸಿಗಲಿ ಎಂದೇ ಸಂತೆಯನ್ನು ಆರಂಭಿಸಲಾಯಿತು. 2005ರಿಂದ ಸಾವಯವ ಸಂತೆ ಶುರುವಾಗಿದ್ದು, 2009ರಿಂದೀಚೆಗೆ ಪ್ರತಿವರ್ಷ ನಡೆಯುತ್ತಿದೆ.

ರಾಜ್ಯದ ವಿವಿಧ ಭಾಗಗಳಿಂದ ಸಾವಯವ ಕೃಷಿಕರು ಈ ಸಂತೆಯಲ್ಲಿ ಭಾಗವಹಿಸುತ್ತಾರೆ. ತಾವು ಹಗಲು ರಾತ್ರಿ ದುಡಿದು ಬೆಳೆದ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸುತ್ತಾರೆ. ಮಧ್ಯವರ್ತಿಗಳ ಹಾವಳಿ ಇಲ್ಲ. ರಾಜ್ಯದ ಎಲ್ಲೆಡೆಯಿಂದ ಬರುವುದರಿಂದ ಪರಸ್ಪರ ಮಾಹಿತಿ ವಿನಿಮಯವೂ ಆಗುತ್ತದೆ. ತಜ್ಞರೂ ದೊರೆಯುವುದರಿಂದ ಅವರ ಸಮಸ್ಯೆಗಳಿಗೆ ಸಮಾಧಾನವೂ ದೊರೆಯುತ್ತದೆ. ತಾವೇ ಕಂಡುಕೊಂಡ ಇತರ ತಂತ್ರಗಳನ್ನೂ ಇಲ್ಲಿ ಹಂಚಿಕೊಳ್ಳುತ್ತಾರೆ. 

 ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿರುವ ಕಾರಣ ಪ್ರತಿ ಎರಡು ತಿಂಗಳಿಗೊಮ್ಮೆ ಸಂತೆ ನಡೆಸುವ ಯೋಜನೆಯೂ ಆಯೋಜಕರ ಮುಂದಿದೆ.

ಯಾಕಿಷ್ಟು ಬೇಡಿಕೆ?
ಮೂರು ಹೊತ್ತೂ ಕೀಲಿ ಮಣೆಯ ಮುಂದೆ ಕುಳಿತು ಬದುಕು ಸಾಗಿಸುವ ಅನಿವಾರ್ಯ ಇಲ್ಲಿಯವರದು. ಹೀಗಿರುವಾಗ ಆರೋಗ್ಯ ಕಾಳಜಿಯ ಮಾತೆಲ್ಲಿ? ಪರಿಣಾಮ ಅರೆ ವಯಸ್ಸಿಗೆ ಇಲ್ಲದ ಕಾಯಿಲೆಗಳು ಮೆತ್ತಿಕೊಳ್ಳುತ್ತವೆ. 

ಜನರೀಗ ಊಟ ಹಾಗೂ ಸ್ವಾಸ್ಥ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಸಂತೆಯಲ್ಲಿ ವೈವಿಧ್ಯಮಯ ಉತ್ಪನ್ನಗಳು ಒಂದೇ ಕಡೆ ದೊರೆಯುತ್ತವೆ. ಕೈಗೆಟಕುವ ದರದಲ್ಲಿ. ತಾವು ನೀಡಿದ ಹಣ ನೇರ ರೈತನಿಗೇ ಸಲ್ಲುತ್ತದೆ ಎಂಬ ಬಗ್ಗೆ ಖಚಿತವಾಗಿರುತ್ತದೆ. 

 ಈ ಹಿನ್ನೆಲೆಯಿಂದಾಗಿ ಗ್ರಾಹಕರು ಹಾಗೂ ಉತ್ಪಾದಕರಿಬ್ಬರೂ ಸಂತೆಗಾಗಿ ಬೇಡಿಕೆಯನ್ನಿರಿಸಿದ್ದಾರೆ. ಹಾಗಾಗಿ ಸಂತೆ ಈಗ ಜನಪ್ರಿಯಗೊಂಡಿದೆ. ಅದರ ಉದ್ದೇಶವೂ ಈಡೇರಿದೆ. ಈ ಮೂಲಕ ಅನ್ನದಾತನಿಗೆ ಸ್ವಲ್ಪ ಮಟ್ಟಿನ ಸಹಾಯವೂ ಆಗುತ್ತದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ.ಕೆ.ರಾಮಕೃಷ್ಣಪ್ಪ.

ಸಂತೆಯಲ್ಲಿ ಏನೇನಿದೆ?
ರುಚಿಕಟ್ಟಾದ ದೇಸಿ ಆಹಾರ, ತರಕಾರಿಗಳು, ಹಣ್ಣುಗಳು ಸಂತೆಯಲ್ಲಿ ಪಾರುಪತ್ಯ ಪಡೆದಿರುತ್ತವೆ.

ಪ್ರತಿ ವರ್ಷವೂ ಸಂತೆಯಲ್ಲಿ ಒಂದೊಂದು ಬೆಳೆ ರಾಜ ಮರ್ಯಾದೆ ಪಡೆದಿರುತ್ತದೆ. ಈ ಸಲ ಮೈಸೂರು ಭಾಗದಲ್ಲಿ ಬೆಳೆದಿರುವ `ನಂಜನಗೂಡು ರಸ ಬಾಳೆ~ಗೆ ಆ ಆತಿಥ್ಯ.

ಸೀಡ್‌ಲೆಸ್ ದ್ರಾಕ್ಷಿ, ಸಪೋಟ, ಬೆಟ್ಟದ ನೆಲ್ಲಿ, ಸೀಬೆ, ನವಣೆ, ಸಜ್ಜೆ, ಸಾವೆ, ಕೊರ‌್ಲೆ, ಬರಗು, ರಾಗಿ, ಜೋಳ ಇತ್ಯಾದಿ ಕಿರುಧಾನ್ಯಗಳು, ಕೆಂಪಕ್ಕಿ, ಪಲಾವ್‌ಗೆ ಸೂಕ್ತವಾದ ಗಂಧಸಾಲೆ, ಬಿರಿಯಾನಿಗೆ ಹೊಂದುವ ಜೀರಿಗೆ ಸಾಭ, ರಾಜಮುಡಿ, ಗಡಲೆ ಅಕ್ಕಿ, ಔಷಧೀಯ ಗುಣವುಳ್ಳ ಕರಿಭತ್ತ, ಕರಿಗಜವಲಿ, ನವರ ಅಕ್ಕಿ, ಪಾಯಸಕ್ಕೆ ಸೂಕ್ತವಾದ ಬರ್ಮಾ ಕಪ್ಪು ಅಕ್ಕಿ, ಬೆಲ್ಲ, ಪುಡಿ ಬೆಲ್ಲ, ಸಾಂಬಾರ ಪದಾರ್ಥಗಳು, ವಿವಿಧ ಧಾನ್ಯಗಳ ಹಿಟ್ಟುಗಳು, ಉಪ್ಪಿನಕಾಯಿ, ಜಾಮ್, ಜೆಲ್ಲಿಗಳು, ಮಸಾಲ ಪದಾರ್ಥಗಳು, ಕೊಬ್ಬರಿ ಎಣ್ಣೆ, ವಿವಿಧ ಸೋಪು-ಶಾಂಪು ಹಾಗೂ ಸೌಂದರ್ಯವರ್ಧಕಗಳು ಇತ್ಯಾದಿ ಉತ್ಪನ್ನಗಳು ಇಲ್ಲಿ ದೊರೆಯುತ್ತವೆ.

ಪದೇ ಪದೇ ಕಾಡುವ ಅಮ್ಮನ ಕೈರುಚಿಯನ್ನು ಸವಿಯಲು ಇದೊಂದು ಅವಕಾಶ. ಹೊಟ್ಟೆ ತುಂಬಿಕೊಂಡು ಬ್ಯಾಗನ್ನೂ ತುಂಬಿಕೊಳ್ಳಬಹುದು.

ಜೈವಿಕ ಕೃಷಿಕ್ ಸೊಸೈಟಿ ರಾಜ್ಯದಲ್ಲಿ ಸಾವಯವ ಕೃಷಿ ಉತ್ತೇಜನಕ್ಕಾಗಿ ರಚಿತವಾದ ಕೃಷಿಕರ ಒಂದು ಸಂಸ್ಥೆ. ತೋಟಗಾರಿಕೆ ಇಲಾಖೆಯ ಅಪರ ನಿರ್ದೇಶಕ ಡಾ.ಕೆ.ರಾಮಕೃಷ್ಣಪ್ಪ ಇದರ ಅಧ್ಯಕ್ಷರು.

ಇದೇ ಶನಿವಾರ ಮತ್ತು ಭಾನುವಾರ (ಫೆ.11-12) ಸಾವಯವ ಸಂತೆಯನ್ನು ಸಂಸ್ಥೆಯು ಲಾಲ್‌ಬಾಗ್‌ನ ಡಾ.ಮರಿಗೌಡ ಸಭಾಂಗಣದಲ್ಲಿ ಆಯೋಜಿಸಿದೆ. ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ವನಿತಾ ಶರ್ಮಾ ಶನಿವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೆ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT