ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಪ್ರಜಾವಾಣಿ ವಾರ್ತೆ
Last Updated 21 ಡಿಸೆಂಬರ್ 2013, 20:12 IST
ಅಕ್ಷರ ಗಾತ್ರ

ಹೆಬ್ಬಳ್ಳಿ (ತಾ.ಧಾರವಾಡ): ‘ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು...’ ಎಂಬ ದ.ರಾ.ಬೇಂದ್ರೆ ಅವರ ಕವಿತೆಯಂತೆ, ಅಕ್ಷರಶಃ ಜೀವನ­ದುದ್ದಕ್ಕೂ ಒಲವಿನಿಂದ ಬದುಕಿದ್ದ ವೃದ್ಧ ದಂಪತಿ ಗ್ರಾಮದಲ್ಲಿ ಶನಿವಾರ ಜೊತೆ­ಯಾಗಿಯೇ ಇಹಲೋಕ ತ್ಯಜಿಸಿದರು.

ಆರು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನೀಲವ್ವ ಬಡಿಗೇರ (62) ಬೆಳಿಗ್ಗೆ 6.30ಕ್ಕೆ ನಿಧನ ಹೊಂದಿದರು. ಪತ್ನಿಯ ನಿಧನ ಸುದ್ದಿ ತಿಳಿದ ಪತಿ ಈರಪ್ಪ (73) ಬೆಳಿಗ್ಗೆ 7.30ರ ಸುಮಾರಿಗೆ ಹೆಬ್ಬಳ್ಳಿ ಕೆರೆಯಲ್ಲಿ  ಮುಳುಗಿ ಆತ್ಮಹತ್ಯೆ ಮಾಡಿಕೊಂಡರು.

ದಂಪತಿ ಒಟ್ಟಿಗೇ ಸಾವಿಗೀಡಾಗಿದ್ದನ್ನು ತಿಳಿದ ಗ್ರಾಮಸ್ಥರು ಮನೆಗೆ ದೌಡಾ­ಯಿಸಿ­ದರು. ಈರಪ್ಪ ಅವರ ಶವದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಗ್ರಾಮದ ಜನತಾ ಪ್ಲಾಟ್‌ನಲ್ಲಿರುವ ಮನೆ ‘ಆರೂಢ ನಿಲಯ’ದಲ್ಲಿ ಇಬ್ಬರ ಶವಗಳನ್ನು ಅಕ್ಕಪಕ್ಕ ಮಲಗಿಸಲಾ­ಯಿತು. ಗ್ರಾಮಸ್ಥರು ಶವಗಳ ಮುಂದೆ ಕಣ್ಣೀರುಗರೆಯುವ ದೃಶ್ಯ ಮನ ಕಲಕುವಂತಿತ್ತು.

ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದ ಈರಪ್ಪ ಪ್ರತಿ ಬಾರಿಯೂ, ‘ನೀನು ಸತ್ತ ಮೇಲೆ 10 ನಿಮಿಷವೂ ನಾನು ಬದುಕಿ­ರುವುದಿಲ್ಲ’ ಎಂದು ಹೇಳುತ್ತಿದ್ದರು. ಇದೆಲ್ಲ ಸುಮ್ಮನೆ ಹೇಳುತ್ತಿರಬಹುದು ಅಂದುಕೊಂಡಿ­ದ್ದೆವು. ಆದರೆ, ಹೆಂಡತಿ ತೀರಿಕೊಂಡ ಬಳಿಕ ತಾವೂ ಆತ್ಮಹತ್ಯೆಗೆ ಶರಣಾಗುವ ಮೂಲಕ ನೀಲವ್ವ ಅವರ ಮೇಲೆ ತಾವಿಟ್ಟಿದ್ದ ಪ್ರೀತಿಯನ್ನು ಈರಪ್ಪ ಸಾಬೀತು ಮಾಡಿದ್ದಾರೆ ಎಂದು ಗ್ರಾಮಸ್ಥ ಬಸವರಾಜ ನಾಯ್ಕರ್‌ ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮೃತ ದಂಪತಿಯ ಪುತ್ರ ಮಡಿವಾಳ, ‘ಗ್ರಾಮದಲ್ಲಿರುವ ಇನ್ನೊಂದು ಮನೆಯಲ್ಲಿ ನಾನು ವಾಸಿಸುತ್ತಿದ್ದೆ. ಅವ್ವನಿಗೆ ರಕ್ತ ಕೊಡಿಸಲು ಶನಿವಾರ ಮುಂಜಾನೆ ಧಾರವಾಡದ ಜರ್ಮನ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಯಾರಾಗುತ್ತಿದ್ದೆ.

ಅಷ್ಟ­­ರಲ್ಲಿಯೇ ಆಕೆ ತೀರಿಕೊಂಡ ಸುದ್ದಿ ಗೊತ್ತಾಯಿತು. ನಾನು ಜನತಾ ಪ್ಲಾಟ್‌ನ ಮನೆಯತ್ತ ಬರುವ ಸಂದರ್ಭ­ದಲ್ಲಿಯೇ ಎದುರಿಗೆ ನಮ್ಮಪ್ಪ ಬಂದರು. ಇಲ್ಲೇಕೆ ಬರುತ್ತಿದ್ದಿ ಎಂದು ಕೇಳಿದೆ. ಇಲ್ಲಿಯೇ  ಹೋಗಿ ಬರುವೆ ಎಂದು ಹೊರಟರು. ಅವ್ವ ತೀರಿಕೊಂಡ ಸುದ್ದಿಯನ್ನು ಹೇಳಲು ಹೋಗುತ್ತಿರ­ಬಹುದು ಎಂದು ತಿಳಿದು ನಾನು ಮನೆಯತ್ತ ಬಂದೆ. ಆದರೆ, ಕೆಲವೇ ನಿಮಿಷಗಳಲ್ಲಿ ನಮ್ಮಪ್ಪ ಕೆರೆಯಲ್ಲಿ ಬಿದ್ದು ಸತ್ತ ಸುದ್ದಿ ಬಂತು. ನಾನು ಅವರನ್ನು ಒತ್ತಾಯ ಮಾಡಿ ಮನೆಗೆ ಕರೆತಂದಿದ್ದರೆ ಬದುಕುತ್ತಿದ್ದರೇನೋ’ ಎಂದು ಕಣ್ಣೀರಿಟ್ಟರು.

ಮೂಲತಃ ಗದಗ ಜಿಲ್ಲೆ ಹೊಳೆ­ಆಲೂರು ಬಳಿಯ ಅಸೂಟಿ ಗ್ರಾಮದ ಈರಪ್ಪ ಬಡಿಗೇರ, 40 ವರ್ಷಗಳ ಹಿಂದೆ ಹೆಬ್ಬಳ್ಳಿಯ ಖಾದಿ ಗ್ರಾಮೋ­ದ್ಯೋಗ ಕೇಂದ್ರದಲ್ಲಿ ಕಾರ್ಪೆಂಟರ್‌ ಆಗಿ ಕೆಲಸಕ್ಕೆ ಸೇರಿದ್ದರು. ಬಹಳ ಪ್ರಾಮಾಣಿಕ ವ್ಯಕ್ತಿ ಎಂದೇ ಹೆಸರು ಪಡೆದಿದ್ದ ಅವರು, ವಾಸಿಸಲು ಒಂದು ಚಿಕ್ಕ ಮನೆಯನ್ನು ಹೊರತುಪಡಿಸಿ ಬೇರೆ ಯಾವ ಆಸ್ತಿ­ಯನ್ನೂ ಮಾಡಿಕೊಂಡಿರಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಜಾತ್ಯತೀತ ವ್ಯಕ್ತಿಯಾಗಿದ್ದ ಈರಪ್ಪ ತಮ್ಮ ಮೂರನೇ ಪುತ್ರನಿಗೆ ಷರೀಫ್‌ ಎಂದು ಹೆಸರು ಇಟ್ಟಿದ್ದಾರೆ. ದಂಪತಿಗೆ ಮೂವರು ಪುತ್ರರು, ಒಬ್ಬರ ಪುತ್ರಿ ಇದ್ದಾರೆ. ಗ್ರಾಮಸ್ಥರು ಶನಿವಾರ ಸಂಜೆ ಶವಗಳನ್ನು ಊರಿನಲ್ಲಿ ಮೆರವಣಿಗೆ ಮಾಡಿ ನಂತರ ಅಂತ್ಯಕ್ರಿಯೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT