ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಾರು ಅಭಿಮಾನಿಗಳಿಂದ ವಿಷ್ಣು ಹುಟ್ಟುಹಬ್ಬ ಆಚರಣೆ

Last Updated 18 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ನಟ ವಿಷ್ಣುವರ್ಧನ್ ಅವರ 61ನೇ ಜನ್ಮದಿನವನ್ನು ಅಭಿಮಾನಿಗಳು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಿದರು. ಜಯನಗರದಲ್ಲಿರುವ ಅವರ ಸ್ವಗೃಹದಲ್ಲಿ ಕೇಕ್ ಹಂಚಲಾಯಿತು. ನಟನ ಮನೆ ಎದುರು ಇರುವ ಉದ್ಯಾನಕ್ಕೆ ಬಿಬಿಎಂಪಿ ವಿಷ್ಣುವರ್ಧನ್ ವಿಶ್ರಾಂತಿವನ ಎಂದು ನಾಮಕರಣ ಮಾಡಿದೆ. ಈ ಮಧ್ಯೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಚೇರಿಯಲ್ಲಿ ವಿಷ್ಣು ಪ್ರತಿಮೆ ಸ್ಥಾಪಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಜಯನಗರದ 4ನೇ ಟಿ ಬ್ಲಾಕ್‌ನಲ್ಲಿರುವ ವಿಷ್ಣುವರ್ಧನ್ ಸ್ವಗೃಹಕ್ಕೆ ಆಗಮಿಸಿದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ನಟಿ ಭಾರತಿ ತಮ್ಮ ಪತಿ ವಿಷ್ಣು ಅವರೊಂದಿಗಿನ ಬದುಕನ್ನು ಸ್ಮರಿಸಿದರು. ಅಭಿಮಾನಿಗಳು ಹಾಗೂ ಕುಟುಂಬ ವರ್ಗ ಪರಸ್ಪರ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ಉದ್ಯಾನಕ್ಕೆ ವಿಷ್ಣು ಹೆಸರು: ಇದೇ ವೇಳೆ ವಿಷ್ಣುವರ್ಧನ್ ಮನೆ ಎದುರು ಇರುವ ಉದ್ಯಾನಕ್ಕೆ `ಡಾ.ವಿಷ್ಣುವರ್ಧನ್ ವಿಶ್ರಾಂತಿ ವನ~ ಎಂದು ಬಿಬಿಎಂಪಿ ನಾಮಕರಣ ಮಾಡಿತು. ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ, `ತಮ್ಮ ಪತಿ ಪ್ರಕೃತಿಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಹೆಸರಿನಲ್ಲಿ ಉದ್ಯಾನಕ್ಕೆ ನಾಮಕರಣ ಮಾಡಿರುವುದು ಸಂತಸ ತಂದಿದೆ~ ಎಂದು ಹೇಳಿದರು.

`ರಾಜ್ಯದೆಲ್ಲೆಡೆ ಅಭಿಮಾನಿಗಳು ಅವರ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಅವರಿಗೆ ಋಣಿಯಾಗಿದ್ದೇನೆ ಎಂದರು. ಅವರ ಬಗ್ಗೆ ಹೃದಯ ಸ್ಪರ್ಶಿ ಮಾತುಗಳನ್ನಾಡುತ್ತಿರುವುದನ್ನು ಕೇಳಿ ಹೃದಯ ತುಂಬಿ ಬಂದಿದೆ~ ಎಂದು ಭಾವುಕರಾದರು.

ಮೇಯರ್ ಶಾರದಮ್ಮ, `ಭೂಮಿ ಇರುವವರೆಗೂ ವಿಷ್ಣುವರ್ಧನ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ಚಿತ್ರರಂಗ ಹಾಗೂ ನಾಡು ನುಡಿಯ ಬೆಳವಣಿಗೆಗೆ ಅವರು ನೀಡಿದ ಕೊಡುಗೆ ಅಪಾರವಾದುದು~ ಎಂದು ಸ್ಮರಿಸಿದರು.

ಶಾಸಕ ಬಿ.ಎನ್.ವಿಜಯಕುಮಾರ್ ಮಾತನಾಡಿ, `ಉದ್ಯಾನಕ್ಕೆ ವಿಷ್ಣು ಅವರ ಹೆಸರಿಟ್ಟಿರುವುದು ಅತ್ಯಂತ ಸಮಂಜಸವಾಗಿದೆ. ಇದಕ್ಕಾಗಿ ಅನೇಕರು ಶ್ರಮಿಸಿದ್ದಾರೆ. ಅವರೆಲ್ಲರಿಗೂ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ~ ಎಂದರು.

ನಟರಾದ ರಮೇಶ್ ಅರವಿಂದ್,ಬ್ಯಾಂಕ್ ಜನಾರ್ದನ್, ಸ್ನೇಹಲೋಕ ಸಂಸ್ಥೆಯ ಶೋಭರಾಜ್, ನಟಿ ಮೇಘನಾ, ವಿಷ್ಣುವರ್ಧನ್ ಅಳಿಯ ಅನಿರುದ್ಧ ನಿರ್ಮಾಪಕರಾದ ಕೆ.ಮಂಜು, ವಿಜಯಕುಮಾರ್, ಉಪ ಮೇಯರ್ ಎಸ್.ಹರೀಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ಬಿ.ಆರ್.ನಂಜುಂಡಪ್ಪ, ಬಿಬಿಎಂಪಿ ನಗರ ಮತ್ತು ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಕೆ.ರಾಮಮೂರ್ತಿ ಪಾಲಿಕೆ ಆಯುಕ್ತ ಸಿದ್ದಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಾಜರಾಜೇಶ್ವರಿ ನಗರ ವರದಿ: ಸಾವಿರಾರು ಅಭಿಮಾನಿಗಳು ಕೆಂಗೇರಿ ಬಳಿಯಿರುವ ಅಭಿಮಾನ್ ಸ್ಟುಡಿಯೋದ ವಿಷ್ಣುಸ್ಮಾರಕಕ್ಕೆ ಬೆಳಿಗ್ಗೆಯಿಂದಲೇ ಭೇಟಿ ನೀಡಿ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಹುಟ್ಟುಹಬ್ಬದ ಅಂಗವಾಗಿ ವಿಭಾ ಚಾರಿಟಾಬಲ್ ಟ್ರಸ್ಟ್ ಆರೋಗ್ಯ ಶಿಬಿರ, ರಕ್ತದಾನ, ಹಾಗೂ ನೇತ್ರದಾನ ಶಿಬಿರ ಹಮ್ಮಿಕೊಂಡಿತ್ತು. ವಿಷ್ಣುವರ್ಧನ್ ಅಭಿಮಾನಿಗಳ ಸಂಘ, ಸ್ನೇಹಲೋಕ ಹಾಗೂ ವಿಷ್ಣುಸೇನಾ ಸಮಿತಿ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿದ್ದವು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತಿ `ಅಭಿಮಾನಿಗಳು ಹಾಗು ನಮ್ಮ ನಡುವೆ ನಿರಂತರವಾದ ಪ್ರೀತಿ, ವಿಶ್ವಾಸ, ಬಾಂಧವ್ಯ ಮುಂದುವರೆದಿದೆ. ಅಭಿಮಾನಿಗಳು ಅವರದೇ ಶೈಲಿಯಲ್ಲಿ ವಿಷ್ಣು ಅವರನ್ನು ಅನುಕರಿಸಿ ಸಮಾಜಕ್ಕೆ ಸೇವೆ ಸಲ್ಲಿಸಲಿ~ ಎಂದು ಹಾರೈಸಿದರು.

ನಟರಾದ ಶಿವರಾಂ, ಜೈ ಜಗದೀಶ್ ಮತ್ತಿತರರು ಈ ಸಂದರ್ಭದಲ್ಲಿ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು.

ಅಭಿಮಾನಿಗಳ ಪ್ರತಿಭಟನೆ: `ಎರಡು ವರ್ಷಗಳು ಕಳೆದರೂ ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ಸ್ಮಾರಕದ ಬಳಿ ನಟನ ಜೀವನ ಗಾಥೆ ಬಿಂಬಿಸುವ ಭಾವಚಿತ್ರ ಗ್ಯಾಲರಿ, ಗ್ರಂಥಾಲಯ ಹಾಗೂ ಯೋಗ ಕೇಂದ್ರವನ್ನು ರೂಪಿಸಬೇಕು. ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ ವಿಷ್ಣು ಪ್ರತಿಮೆ ಸ್ಥಾಪಿಸಬೇಕು~ ಎಂದು ಆಗ್ರಹಿಸಿ ಅಭಿಮಾನಿಗಳು ಕೆಲಕಾಲ ಪ್ರತಿಭಟನೆ ನಡೆಸಿದರು.

ಕಂಚಿನ ಪ್ರತಿಮೆ ಜತೆ ಪ್ರತಿಭಟನೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ವಿಷ್ಣು ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಹೈಗ್ರೌಂಡ್ಸ್‌ನಲ್ಲಿರುವ ಮಂಡಳಿಯ ಕಚೇರಿ ಎದುರು ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
 ಸುಮಾರು 150 ಕೆ.ಜಿ. ಭಾರದ ವಿಷ್ಣು ಅವರ ಕಂಚಿನ ಪ್ರತಿಮೆಯೊಂದಿಗೆ ಆಗಮಿಸಿದ ನೂರಾರು ಅಭಿಮಾನಿಗಳು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
 
ಆಗ ಮಧ್ಯ ಪ್ರವೇಶಿಸಿದ ಪೊಲೀಸರು, ಪ್ರತಿಮೆ ಸ್ಥಾಪನೆಗೆ ಮಂಡಳಿ ಕೂಡ ಬಯಸಿದೆ. ಇದೇ 24ರಂದು ಮಂಡಳಿಯ ಪದಾಧಿಕಾರಿಗಳ ಸಭೆ ಇದೆ. ಅಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತದೆ. ಅಲ್ಲಿಯವರೆಗೆ ಕಾದುನೋಡುವಂತೆ ಮನವೊಲಿಸಿದರು. ಇದಕ್ಕೆ ಒಪ್ಪಿದ ಅಭಿಮಾನಿಗಳು ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT