ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಭಾಷೆ ಅವಲಂಬಿಸಿದೆ: ಡಿಸೋಜ

Last Updated 26 ಫೆಬ್ರುವರಿ 2012, 7:30 IST
ಅಕ್ಷರ ಗಾತ್ರ

ಸಾಗರ: ಕನ್ನಡ ನಾಡಿನ ಜನರ ಬದುಕು ಹಾಗೂ ಸಾಹಿತ್ಯ ಪರಂಪರೆ ಇವೆರಡರ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಸಾಹಿತಿ ಡಾ.ನಾ. ಡಿಸೋಜ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಸಾಹಿತ್ಯ ಪರಂಪರೆ, ಸಾಂಸ್ಕೃತಿಕ ಸೊಬಗು ಕಾರ್ಯಕ್ರಮದಲ್ಲಿ `ಸಾಹಿತ್ಯ ಪರಂಪರೆ~ ಕುರಿತು ಅವರು ಮಾತನಾಡಿದರು.

ಸಾಹಿತ್ಯ ಭಾಷೆಯನ್ನು ಅವಲಂಬಿಸಿದೆ. ಹೀಗಾಗಿ ಭಾಷೆಯ ಪರಂಪರೆ ಸಾಹಿತ್ಯ ಪರಂಪರೆ ಎರಡೂ ಒಂದೇ ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹಾಗೆಯೇ, ಸಾಹಿತ್ಯ ಜನರ ಬದುಕಿಗೆ ಸಂಬಂಧಪಟ್ಟಿದ್ದಾದ್ದರಿಂದ ಸಾಹಿತ್ಯದ ಪರಂಪರೆ ಜನರ ಬದುಕಿನ ಪರಂಪರೆಯೂ ಆಗಿರುತ್ತದೆ ಎಂದು ವಿಶ್ಲೇಷಿಸಿದರು.

ಪರಂಪರೆ ಎನ್ನುವುದಕ್ಕೆ ಹುಟ್ಟು ಇದೆ ವಿನಾ ಕೊನೆ ಎಂಬುದು ಇಲ್ಲ. ಹೊಸ ಶೈಲಿಯಲ್ಲಿ ತನ್ನದೆ ಆದ ನಡಿಗೆಯನ್ನು ಸದಾ ಅದು ಮುಂದುವರಿಸುತ್ತಲೆ ಇರುತ್ತದೆ. ಪರಂಪರಾಗತ ಸಾಹಿತ್ಯ ಎಂದು ಹಣೆಪಟ್ಟಿ ಕಟ್ಟಿ ಕನ್ನಡ ಪ್ರಾಚೀನ ಸಾಹಿತ್ಯವನ್ನು ಕಡೆಗಣಿಸುವುದು ಕನ್ನಡ ಸಾಹಿತ್ಯಕ್ಕೆ ಎಸಗುವ ಅಪಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚೆಗೆ ವಿಶ್ವವಿದ್ಯಾಲಯವೊಂದರ ಕನ್ನಡ ಅಧ್ಯಾಪಕರು ಬೋಧಿಸಲು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಹಳೆಗನ್ನಡದಲ್ಲಿರುವ ಕಾವ್ಯವನ್ನು ಪಠ್ಯದಿಂದ ಕೈಬಿಡುವಂತೆ ಕುಲಪತಿಗಳಲ್ಲಿ ಮನವಿ ಮಾಡಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು ಓದಲು, ಅರ್ಥೈಸಲುಕಷ್ಟ ಎಂದು ಕೆಲವು ಪ್ರಕಾರಗಳ ಸಾಹಿತ್ಯವನ್ನು ದೂರವಿಟ್ಟರೆ ಅದರಿಂದ ಸಾಹಿತ್ಯಕ್ಕೆ ನಷ್ಟವಿಲ್ಲ ಎಂದರು.

ಎಲ್ಲವೂ ಸರಳವಾಗಿರಬೇಕು ಎಂಬ ಇಂದಿನ ದಿನಗಳಲ್ಲಿ ಸಾಹಿತ್ಯಕ್ಕೂ ಇದೇ ಮಾನದಂಡವನ್ನು ಅನುಸರಿಸಲಾಗುತ್ತಿದೆ. ಈ ಧೋರಣೆಯಿಂದ ಸಾಹಿತ್ಯ ಅಥವಾ ಯಾವುದೇ ಒಂದು ಭಾಷೆಯ ಬೆಳವಣಿಗೆ ಆಗಲಾರದು ಎಂದು ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ್, ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಾ.ಸ. ನಂಜುಂಡಸ್ವಾಮಿ, ದಾನಿಗಳಾದ ಸಿ.ಗೋಪಾಲಕೃಷ್ಣರಾವ್ ವೇದಿಕೆಯಲ್ಲಿದ್ದರು.

ನಾಗರಾಜ್ ತೊಮ್ರಿ ಮತ್ತು ಸಂಗಡಿಗರಿಂದ ಜೋಗಿಪದ, ವಸಂತ ಕುಗ್ವೆ ಅವರಿಂದ ಲಾವಣಿ, ಕವನ ಮತ್ತು ತಂಡದವರಿಂದ ಪುಗಡಿ ನೃತ್ಯ, ತುಮರಿಯ ಯಕ್ಷ ಬಳಗದಿಂದ `ಯಕ್ಷ ಹಾಸ್ಯ~ ಪ್ರಸಂಗಗಳ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT