ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಾಸಕ್ತಿ ಮೆರೆಯಲಿ

Last Updated 5 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಡಿಕೇರಿಯಲ್ಲಿ ಜನವರಿಯಲ್ಲಿ ನಡೆಯಲಿರುವ  80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ  ನಾ.ಡಿಸೋಜ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.   ಕಳೆದ ಬಾರಿಯಂತೆ ಈ ಬಾರಿಯೂ ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ಸಮ್ಮೇಳನಾಧ್ಯಕ್ಷರ ಆಯ್ಕೆ ನಡೆದಿದೆ ಎಂಬುದು ವಿಶೇಷ.

ಶಿವಮೊಗ್ಗ ಜಿಲ್ಲೆ ಸಾಗರದ ನಾರ್‌ಬರ್ಟ್ ಡಿಸೋಜ ಅವರು ಕನ್ನಡದ ಜನಪ್ರಿಯ ಲೇಖಕರು. ಸಾಹಿತ್ಯದ ಒಂದು ವಲಯ, ಜನಪ್ರಿಯ ಸಾಹಿತ್ಯವನ್ನೇ ಅನುಮಾನದಿಂದ ನೋಡಿದ ಕಾಲವೊಂದಿತ್ತು. ಆದರೆ  ಕಥೆಗಾರ ಡಿಸೋಜ ತನ್ನ ಸುತ್ತಲಿನ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುತ್ತಾ ಹೋರಾಟಗಳಲ್ಲಿ ಪಾಲ್ಗೊಂಡ ವರು. ಅಂತೆಯೇ ‘ಮುಳುಗಡೆ- ಮಲೆನಾಡು’ ಅವರ ಸಾಹಿತ್ಯದ ಜೀವದ್ರವ್ಯ ವಾಯಿತು. ಅಭಿವೃದ್ಧಿ ಸೃಷ್ಟಿಸುವ ಸಮಸ್ಯೆಗಳನ್ನು  ಕಲಾತ್ಮಕವಾಗಿ ಕಟ್ಟಿಕೊಡುವ ಅವರ ಕಥೆಗಳು, ಅವಕ್ಕೆ ಪರಿಹಾರಗಳನ್ನೂ ಶೋಧಿಸುತ್ತವೆ. ಅವರು ತಮ್ಮ ಕಥೆಗಳಿಂದ, ಮಕ್ಕಳ ಸಾಹಿತ್ಯದಿಂದ ಕನ್ನಡ ಓದುಗಲೋಕದ ಕಣ್ಮಣಿಯಾಗಿದ್ದಾರೆ.

ಸಾಹಿತ್ಯ ಸಮ್ಮೇಳನಕ್ಕಾಗಿ ಸಿದ್ಧತೆಗಳು ನಡೆಯುತ್ತಿರುವ ಈ ಸಂದರ್ಭದಲ್ಲೇ,  ಹಲವು ಆತಂಕಗಳ ಕರಿ ನೆರಳು ಬಿದ್ದಿರುವುದು ಶೋಭೆ ತರುವ ಸಂಗತಿಯಲ್ಲ.     ಮೊದಲನೆಯದಾಗಿ ಸಮ್ಮೇಳನಕ್ಕೆ ಹಣದ ಕೊರತೆಯ ದೊಡ್ಡ ಭೀತಿ ಎದುರಾಗಿದೆ. ಸಮ್ಮೇಳನಕ್ಕಾಗಿ ಬಜೆಟ್‌ನಲ್ಲಿ ಮೀಸಲಿರಿಸಿರುವ ಒಂದು ಕೋಟಿ ರೂಪಾಯಿ ಇನ್ನೂ ಬಿಡುಗಡೆಯೇ ಆಗಿಲ್ಲ ಎಂಬುದು ಸಾಹಿತ್ಯ, ಸಂಸ್ಕೃತಿ ಕುರಿತಂತೆ ಸರ್ಕಾರದ ನಿಷ್ಕಾಳಜಿಯನ್ನು ಎತ್ತಿ ಹೇಳುತ್ತದೆ.

ಹಾಗೆಯೇ ಹೆಚ್ಚುವರಿ ಒಂದು ಕೋಟಿ ರೂಪಾಯಿ ನೀಡುವ ಆಶ್ವಾಸನೆಯನ್ನು ಮುಖ್ಯ ಮಂತ್ರಿಗಳು ನೀಡಿದ್ದು, ಆ ಹಣವೂ ಇನ್ನೂ ಬಿಡುಗಡೆಯಾಗಿಲ್ಲ.   ವಾಸ್ತವ ವಾಗಿ ಸಾಹಿತ್ಯ ಸಮ್ಮೇಳನಗಳು ನಿಗದಿತ ಸಮಯದಲ್ಲಿ ನಡೆಯುವಂತಾಗ ಬೇಕು. ಇದು ಸಾಧ್ಯವಾಗಬೇಕಾದಲ್ಲಿ,   ಘೋಷಿಸಿದ ಹಣವನ್ನು ಸೂಕ್ತಕಾಲಕ್ಕೆ ಬಿಡುಗಡೆ ಮಾಡುವ ಬದ್ಧತೆ ಸರ್ಕಾರಕ್ಕಿರಬೇಕು.

ಮಡಿಕೇರಿ ನಗರಸಭೆಗೆ ಈ ಮಾಸಾಂತ್ಯದಲ್ಲಿ ಚುನಾವಣೆಗೆ  ಸಿದ್ಧತೆ ನಡೆದಿರುವುದು ಮತ್ತೊಂದು ಆತಂಕಕ್ಕೆ ಕಾರಣವಾಗಿದೆ. ಇದು ಕೂಡ ಸಮ್ಮೇಳನ ಸಿದ್ಧತೆಗೆ ಅನಿಶ್ಚಯ ವಾತಾವರಣ ಸೃಷ್ಟಿಸಿದೆ. ಈಗ, ಸಮ್ಮೇಳನ ಸಿದ್ಧತೆಗಳಿಗೆ ಟೆಂಡರ್ ಕರೆಯಲು ಚುನಾವಣಾ ಆಯುಕ್ತರು ಅನುಮತಿ ನೀಡಿದ್ದಾರೆ.  ಆದರೆ ಈ ಮಧ್ಯೆ, ಕಸ್ತೂರಿ ರಂಗನ್ ಸಮಿತಿ ವರದಿಯನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಲು ಮುಂದಾದರೆ ಸಮ್ಮೇಳನದ ಮೊದಲ ದಿನ (ಜ.7) ಕೊಡಗು ಬಂದ್‌ ಆಚರಿಸಲಾಗುವುದು ಎಂಬ ಎಚ್ಚರಿಕೆಯನ್ನು  ಸ್ಥಳೀಯ ಹೋರಾಟ ಸಮಿತಿ ನೀಡಿರುವುದು  ವಿಪರ್ಯಾಸ.

ಸ್ಥಳೀಯ ಸಮಸ್ಯೆಗಳನ್ನು ಸಾಹಿತ್ಯ ಸಮ್ಮೇಳನಕ್ಕೆ  ಜೋಡಿಸಿಕೊಂಡು ಸರ್ಕಾರವನ್ನು ಮಣಿಸುವ ಪ್ರಯತ್ನಗಳು ನಡೆಯುತ್ತಿರುವುದು ದುರದೃಷ್ಟಕರ.  ಸಾಹಿತ್ಯ ಸಮ್ಮೇಳನಗಳು ಇಂತಹ ರಾಜಕೀಯ ವಿಚಾರಗಳಿಗೆ ವೇದಿಕೆ ಆಗುವುದು ಸಲ್ಲದು.  ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯಾಸಕ್ತಿಯೇ ಹೆಚ್ಚಾಗಿ ಮೆರೆಯಬೇಕು. ಉನ್ನತ ಸಾಹಿತ್ಯ ಚಿಂತನೆಗಳು ಭಿನ್ನ ನೆಲೆಗಳಲ್ಲಿ ವ್ಯಕ್ತವಾಗಬೇಕು ಎಂಬುದನ್ನು ನಾವು ಮನಗಾಣಬೇಕು. ಹೀಗಾಗಿ ಸ್ಥಳೀಯ ಸಮಸ್ಯೆಗಳಿಗೆ ರಾಜಕೀಯ ಪರಿಹಾರ     ಹುಡುಕುವ ಹೊಣೆ ಹೊತ್ತಿರುವ  ಸರ್ಕಾರ ಈ ಎಲ್ಲಾ ಅಡ್ಡಿಆತಂಕಗಳನ್ನು ನಿವಾರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT