ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಡಿಕೇಟ್ ಸದಸ್ಯರ ಸಭೆಯಲ್ಲಿ ಆರೋಪ-ಪ್ರತ್ಯಾರೋಪ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಿಂಡಿಕೇಟ್ ಸದಸ್ಯರು ನನ್ನ ಮೇಲೆ ನೀರಿನ ಬಾಟಲಿ ಎಸೆದರು. ನನ್ನ ಪಕ್ಕದಲ್ಲಿದ್ದ ಪರೀಕ್ಷಾಂಗ ಕುಲಸಚಿವರ ಸುತ್ತ ಸುತ್ತುವರಿದು ದಾಳಿ ಮಾಡಲು ಯತ್ನಿಸಿದರು. ಕೆಟ್ಟ ಭಾಷೆಯಲ್ಲಿ ನಿಂದಿಸಿದರು. ಸಭೆ ಅಸಂವಿಧಾನಿಕವಾಗಿತ್ತು. ಇಂತಹ ಸಭೆ ಈ ವರೆಗೆ ನಡೆದಿರಲಿಲ್ಲ~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ಪ್ರಭುದೇವ್ ಗಂಭೀರ ಆರೋಪ ಮಾಡಿದರು.

`ನನ್ನ ಪಕ್ಕದಲ್ಲಿ ಕುಲಪತಿ ಅವರು ಕುಳಿತಿದ್ದರು. ಮತ್ತೊಂದು ಬದಿಯಲ್ಲಿ ಸಿಂಡಿಕೇಟ್ ಸದಸ್ಯರು ಇದ್ದರು. ಅವರು ನೀರಿನ ಬಾಟಲಿ ಎಸೆದಿದ್ದರೆ ಮೊದಲು ನನಗೆ ತಾಗಬೇಕಿತ್ತು. ನೀರಿನ ಬಾಟಲಿ ಜಾರಿ ಕೆಳಗೆ ಬಿದ್ದಿದ್ದಕ್ಕೆ ಕಟ್ಟುಕಥೆಗಳನ್ನು ಸೇರಿಸಿ ಹೇಳುತ್ತಿದ್ದಾರೆ. ಕುಲಪತಿ ಅವರು ಪ್ರತಿಷ್ಠೆ ಬಿಟ್ಟರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆ~ ಎಂದು ಕುಲಸಚಿವ ಡಾ.ಬಿ.ಸಿ. ಮೈಲಾರಪ್ಪ ತಿರುಗೇಟು ನೀಡಿದರು.

ಪೊಲೀಸ್ ಸರ್ಪಗಾವಲಿನಲ್ಲಿ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆಯ ಬಳಿಕ ಕುಲಪತಿ ಹಾಗೂ ಕುಲಸಚಿವರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದು ಹೀಗೆ. ಕುಲಪತಿ ಹಾಗೂ ಕುಲಸಚಿವರ ನಡುವಿನ ಮುಂದುವರಿದ ಬಿಕ್ಕಟ್ಟಿಗೆ ಸೆಂಟ್ರಲ್ ಕಾಲೇಜು ಮತ್ತೆ ಸಾಕ್ಷಿಯಾಯಿತು.

ಸಭೆಯಲ್ಲಿ 14 ಸಿಂಡಿಕೇಟ್ ಸದಸ್ಯರು, ಕುಲಪತಿ, ಕುಲಸಚಿವರು, ಪರೀಕ್ಷಾಂಗ ಕುಲಸಚಿವರು ಪಾಲ್ಗೊಂಡಿದ್ದರು. ಆದರೆ ಬಂದೋಬಸ್ತ್‌ನಲ್ಲಿ ಹಾಜರಿದ್ದ ಪೊಲೀಸರು 30ಕ್ಕೂ ಅಧಿಕ. ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಸಿಂಡಿಕೇಟ್ ಸದಸ್ಯರೆಂದು ವಿವಿಯ ಸಿಬ್ಬಂದಿ ಖಚಿತಪಡಿಸಿದ ಮೇಲೆಯೇ ಜ್ಞಾನಜ್ಯೋತಿ ಸಭಾಂಗಣದೊಳಗೆ ತೆರಳಲು ಪೊಲೀಸರು ಅವಕಾಶ ಕಲ್ಪಿಸಿದರು.

`ಹೆಚ್ಚು ಮಾತನಾಡಿದರೆ ನಿಮ್ಮ ಮೇಲೆ ಮತ್ತೆ 10 ಜಾತಿನಿಂದನೆ ಪ್ರಕರಣಗಳನ್ನು ದಾಖಲಿಸುವುದಾಗಿ ಕುಲಸಚಿವರು ಬೆದರಿಕೆ ಹಾಕಿದ್ದಾರೆ. ಸಭೆಯಲ್ಲಿದ್ದವರ ಕೈಯಲ್ಲಿ ಹೊಡೆಸಿಕೊಳ್ಳುವುದು ಪಾರದರ್ಶಕವಾ. ಸಭೆಯಲ್ಲಿ ಏನು ನಡೆದಿದೆ ಎಂಬುದು ನಿಮಗೆ ಗೊತ್ತಿದೆಯಾ~ ಎಂದು ಕುಲಪತಿ ಅವರು ಮಾಧ್ಯಮದವರನ್ನು ಪ್ರಶ್ನಿಸಿದರು.

`ಶಿಕ್ಷಕೇತರ ನೌಕರರ ಸಂಘದ ಹೋರಾಟ, ಪ್ರತಿಭಟನೆಗಳ ಹಿಂದೆ ಕೆಲವು ಶಕ್ತಿಗಳು ಇವೆ. ವಿಶ್ವವಿದ್ಯಾಲಯದಲ್ಲಿ ಹೊಂದಾಣಿಕೆ ಎಲ್ಲಿದೆ. ಆರು ತಿಂಗಳ ಹಿಂದಿನ ವರೆಗೆ ವ್ಯವಸ್ಥೆ ಚೆನ್ನಾಗಿ ನಡೆಯುತ್ತಿತ್ತು. ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದ್ದೆವು. ಈಗ ವ್ಯವಸ್ಥೆ ಕೆಟ್ಟಿದೆ~ ಎಂದು ಅವರು ಆರೋಪಿಸಿದರು.

`ಕುಲಪತಿ ಅವರು ತಾನೊಬ್ಬನೇ ಸರಿ ಇದ್ದೇನೆ ಎಂದು ಭಾವಿಸಿಕೊಂಡು ಇತರರ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಇಷ್ಟ ಇಲ್ಲ. ಹಾಗಾಗಿ ಬೇರೆಯವರ ಸಲಹೆಗಳನ್ನು ಕೇಳುವುದಿಲ್ಲ. ಸಮಸ್ಯೆಗಳ ವಿಚಾರ ಹೇಳಿದರೆ ಅದನ್ನು ಒಪ್ಪಲು ಸಿದ್ಧರಿಲ್ಲ~ ಎಂದು ಮೈಲಾರಪ್ಪ ದೂರಿದರು.

`ವಿವಿಯಲ್ಲಿ ಈಗ ಪ್ರಜಾಪ್ರಭುತ್ವವೇ ಇಲ್ಲ. ಸಿಂಡಿಕೇಟ್ ಸದಸ್ಯರ ಗಮನಕ್ಕೆ ತರದೆ, ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ತಪ್ಪಾದಾಗ ತಪ್ಪಾಗಿದೆ ಎಂಬುದನ್ನು ಒಪ್ಪಿಕೊಂಡು ಸರಿಪಡಿಸಬೇಕು. ಆದರೆ ಇಲ್ಲಿ ಹಾಗಾಗುತ್ತಿಲ್ಲ~ ಎಂದು ಸಿಂಡಿಕೇಟ್ ಸದಸ್ಯ ಕೆ.ವಿ. ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು.

`ಸಭೆಯಲ್ಲಿ ತೀವ್ರ ವಾಗ್ದಾದ ನಡೆದಿದೆ. ಕುಲಪತಿ ಸಹ ಬೈದಿದ್ದಾರೆ. ಆದರೆ ಯಾರೂ ನೀರಿನ ಬಾಟಲಿಗಳನ್ನು ಬಿಸಾಡಿಲ್ಲ. ಕುಲಪತಿ ಅವರು ಗಮನ ಬೇರೆಡೆ ಸೆಳೆಯಲು ವಿಷಯಾಂತರ ಮಾಡುತ್ತಿದ್ದಾರೆ. ಸಮಸ್ಯೆ ಬಗೆಹರಿಯುವುದು ಅವರಿಗೆ ಇಷ್ಟ ಇಲ್ಲ~ ಎಂದು ಸಿಂಡಿಕೇಟ್ ಸದಸ್ಯರೊಬ್ಬರು ಮಾಹಿತಿ ನೀಡಿದರು.

`ಈ ಹಿಂದೆಯೂ ಸಿಂಡಿಕೇಟ್ ಸಭೆಗೆ ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಇಂತಹ ಸರ್ಪಗಾವಲು ಇದೇ ಮೊದಲು. ಕುಲಪತಿ ಹಾಗೂ ಕುಲಸಚಿವರು ಇಬ್ಬರೂ ಇಲ್ಲಿಂದ ನಿರ್ಗಮಿಸಿದರೆ ಸಮಸ್ಯೆ ಪರಿಹಾರ ಆಗುತ್ತದೆ~ ಎಂದು ವಿಶ್ವವಿದ್ಯಾಲಯದ ಸಿಬ್ಬಂದಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

`ಪ್ರತಿ ಬಾರಿಯೂ ಸಣ್ಣ ಸಣ್ಣ ವಿಚಾರಕ್ಕೂ ಜಗಳ ಆಡುತ್ತಾರೆ. ಇವರಿಂದ ವಿವಿಯ ಮರ್ಯಾದೆ ಹೋಗಿದೆ. ಸಿಂಡಿಕೇಟ್ ಸಭೆಗೆ ಇಷ್ಟು ಮಂದಿ ಪೊಲೀಸರನ್ನು ಸೇರಿಸುವ ಅಗತ್ಯ ಏನಿತ್ತು. ಇಬ್ಬರನ್ನೂ ಬದಲಾಯಿಸಿದರೆ ನೆಮ್ಮದಿಯ ವಾತಾವರಣ ನಿರ್ಮಾಣವಾಗುತ್ತದೆ~ ಎಂದು ಬಂದೋಬಸ್ತ್‌ನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಭುದೇವ್ ಅಸಮಾಧಾನ
`ನನ್ನ ವಿರುದ್ಧ ನಡೆದ ಪ್ರತಿಭಟನೆ, ಹೇಳಿಕೆಗಳನ್ನು ದೊಡ್ಡದಾಗಿ ಪ್ರಕಟಿಸುತ್ತೀರಿ. ನನ್ನ ಹೇಳಿಕೆ ಯಾವುದೋ ಮೂಲೆಯಲ್ಲಿರುತ್ತದೆ. ಕಳೆದ ಕೆಲವು ಸಮಯದಿಂದ ಹೀಗಾಗುತ್ತಿದೆ. ಈ ಸಲವೂ ಇದೇ ರೀತಿ ಆದರೆ ಮುಂದಿನ ಬಾರಿ ನಿಮ್ಮ ಜತೆ ಮಾತನಾಡುವುದಿಲ್ಲ~ ಎಂದು ಕುಲಪತಿ ಡಾ.ಎನ್. ಪ್ರಭುದೇವ್ ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT