ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ: ಡಿಸಿ ನಿರ್ದೇಶನ

Last Updated 23 ಮಾರ್ಚ್ 2011, 9:25 IST
ಅಕ್ಷರ ಗಾತ್ರ

ಮಡಿಕೇರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದೇ ತಿಂಗಳ 26ರಂದು ಕೊಡಗು ಜಿಲ್ಲೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಚ್. ಅಶ್ವತ್ಥನಾರಾಯಣಗೌಡ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಅಂದು ಮುಖ್ಯಮಂತ್ರಿಗಳು ಆಗಮಿಸುವ ಆಲೂರು ಸಿದ್ದಾಪುರಕ್ಕೆ ಆಗಮಿಸಬೇಕು. ತಪ್ಪಿದಲ್ಲಿ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಲೂರು ಸಿದ್ದಾಪುರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಾಮಿಯಾನ, ಕುಡಿಯುವ ನೀರು, ಆಸನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಆಲೂರು ಸಿದ್ದಾಪುರ ಹಾಗೂ ಕಂಬಿಬಾಣೆಗಳಿಗೆ ಆರೋಗ್ಯ ಇಲಾಖೆ ಆಂಬುಲೆನ್ಸ್ ವ್ಯವಸ್ಥೆ ಮಾಡುವುದೂ ಸೇರಿದಂತೆ ವೈದ್ಯರು, ಶುಶ್ರೂಷಕರನ್ನು ನಿಯೋಜಿಸಬೇಕು. ಅಗ್ನಿಶಾಮಕ ಇಲಾಖೆಯಿಂದಲೂ ವಾಹನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಅದೇ ದಿನ ಮಧ್ಯಾಹ್ನ ಕಂಬಿಬಾಣೆಯಲ್ಲಿ ಸಾವಯವ ಕೃಷಿ ಸಂವಾದ ಕಾರ್ಯಕ್ರಮಕ್ಕೆ ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿಗಳು ಜಂಟಿ ಕೃಷಿ ನಿರ್ದೇಶಕರಿಂದ ಮಾಹಿತಿ ಬಯಸಿದರು. ಈಗಾಗಲೇ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್ ಅವರು ಕಂಬಿಬಾಣೆ ಗ್ರಾಮಕ್ಕೆ ಆಗಮಿಸಿ ಯಾವ ಯಾವ ರೀತಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ನಿರ್ದೇಶನ ನೀಡಿದ್ದಾರೆ. ಅದರಂತೆ, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಂಬಿಬಾಣೆ ಶಾಲಾ ಆವರಣದಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಹೇಳಿದರು.

ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಶಶಿಕಾಂತ ರೈ ಮಾತನಾಡಿ, ಸಾವಯವ ಕೃಷಿ ಸಂವಾದ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಅಷ್ಟು ಜನರಿಗೆ ಕುಳಿತುಕೊಳ್ಳಲು ಆಸನ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಕೆ.ಅಣ್ಣಿಗೇರಿ ಮಾತನಾಡಿ, ಆಲೂರು ಸಿದ್ದಾಪುರಕ್ಕೆ 400 ಹಾಗೂ ಕಂಬಿಬಾಣೆಗೆ 500ಕ್ಕೂ ಅಧಿಕ ಪೊಲೀಸರೂ ಸೇರಿದಂತೆ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೆರವಾಗುವಂತೆ ಸೂಚಿಸಲಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಸೂಕ್ತ ಸಲಹೆ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆನಂದ್, ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT