ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ಭೇಟಿಗೆ ಯಾತ್ರಿ ಸಂಘ ನಿರ್ಧಾರ

Last Updated 20 ಸೆಪ್ಟೆಂಬರ್ 2011, 9:20 IST
ಅಕ್ಷರ ಗಾತ್ರ

ಬೈಂದೂರು: ಕಾರವಾರ-ಬೆಂಗಳೂರು ನಡುವೆ ರಾತ್ರಿ ರೈಲು ಸಂಚಾರ ಆರಂಭ ಸೇರಿದಂತೆ ರಾಜ್ಯ ಕರಾವಳಿಯ ರೈಲು ಸಂಚಾರ ಅಭಿವೃದ್ಧಿಗೆ ಶೀಘ್ರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸುವ ಸಲುವಾಗಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರನ್ನು ಭೇಟಿಯಾಗಲು ಕರಾವಳಿಯ ಯಾತ್ರಿ ಸಂಘಗಳು ನಿರ್ಧರಿಸಿವೆ.

ಬೈಂದೂರು ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ, ಉಡುಪಿ ಯಾತ್ರಿ ಸಂಘ, ಹಾಗೂ ಪಶ್ಚಿಮ ಕರಾವಳಿ ಯಾತ್ರಿ ಸಂಘಗಳ ಪದಾಧಿಕಾರಿಗಳು ಭಾನುವಾರ ಇಲ್ಲಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡರು. 

`ಕಾರವಾರ-ಬೆಂಗಳೂರು ರಾತ್ರಿ ರೈಲಿನ ವಿಚಾರದಲ್ಲಿ ರಾಜ್ಯದ ಕರಾವಳಿಯ ಯಾತ್ರಿಗಳಿಗೆ ದೊಡ್ಡ ಅನ್ಯಾಯ ಆಗಿದೆ. ಈ ಕುರಿತಾದ ತೀರ್ಮಾನವನ್ನು ಅನುಷ್ಠಾನಿಸುವ ಬದಲಿಗೆ ಆ ರೈಲನ್ನು ಕೇರಳದ ಕಣ್ಣೂರಿಗೆ ತಿರುಗಿಸಲಾಯಿತು.

ಯಾತ್ರಿ ಸಂಘಗಳು ಕಾನೂನು ಹೋರಾಟಕ್ಕಿಳಿದಾಗ ರೈಲ್ವೆ ಇಲಾಖೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತು. ಆದುದರಿಂದ ಈಗ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವರನ್ನು, ಎಲ್ಲ ಶಾಸಕರನ್ನು ಕೂಡಿಕೊಂಡು ಕರಾವಳಿಯವರೇ ಆದ ಮುಖ್ಯಮಂತ್ರಿಯನ್ನು ಭೇಟಿಯಾಗಿ ಸಮಸ್ಯೆಯನ್ನು ವಿವರಿಸಬೇಕಿದೆ. ರೈಲ್ವೆ ಸಚಿವರನ್ನು ಸಂಪರ್ಕಿಸಿ ಈ ಬಗ್ಗೆ ಒತ್ತಡ ಹೇರುವಂತೆ ಮುಖ್ಯಮಂತ್ರಿಯನ್ನು ವಿನಂತಿಸಲು ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಧರಿಸಲಾಯಿತು.

`ಕರ್ನಾಟಕವು ಪ್ರತೀ ವರ್ಷ ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಗೆ ದೊಡ್ಡ ಮೊತ್ತದ ಹಣ ನೀಡುತ್ತಿದೆ. ಈ ಮೊತ್ತವು ಈ ಬಾರಿ 1000 ಕೋಟಿ ರೂಪಾಯಿ ತಲಪುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮುಂದಿನ ಬಜೆಟ್‌ನಲ್ಲಿ ಕೊಂಕಣ ರೈಲ್ವೇ ವ್ಯಾಪ್ತಿಯ ತೋಕೂರಿನಿಂದ ಕಾರವಾರದ ತನಕ ಹಳಿ ದ್ವಿಗುಣಗೊಳಿಸಲು ಕೊಂಕಣ ರೈಲ್ವೆ ಮತ್ತು ಕರ್ನಾಟಕ ರಾಜ್ಯ ಶೇ 50ರ ಅನುಪಾತದಲ್ಲಿ ಕನಿಷ್ಠ ರೂ 100 ಕೋಟಿ ಮೀಸಲಿಡಬೇಕು.

ಕರಾವಳಿಯ ಎಲ್ಲ ರೈಲು ನಿಲ್ದಾಣಗಳ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು ಎಂದೂ ಒತ್ತಾಯಿಸಲಾಗುವುದು~ ಎಂದು ಸಭೆಯ ವಿವರ ನೀಡಿದ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ತಿಳಿಸಿದ್ದಾರೆ.

ಉಡುಪಿ ರೈಲ್ವೆ ಯಾತ್ರಿ ಸಂಘದ ಆರ್. ಎಲ್. ಡಯಾಸ್, ಜೋನ್ ರೆಬೆಲ್ಲೋ, ಪಶ್ಚಿಮ ಕರಾವಳಿ ಯಾತ್ರಿಸಂಘದ ಉಪಾಧ್ಯಕ್ಷ ರಾಜೀವ ಗಾಂವ್‌ಕರ್, ಬೈಂದೂರು ಪುರಸಭೆಯ ಮಾಜಿ ಅಧ್ಯಕ್ಷ ಎಚ್.ಸುಬ್ರಾಯ ಶೇರೇಗಾರ್, ಸೋಡಿತಾರು ಸುಬ್ರಾಯ ಶೇರೆಗಾರ್, ಬೈಂದೂರು ಯಾತ್ರಿ ಸಂಘದ ಜಗದೀಶ ಪಟವಾಲ್, ಸಾಣೂರು ಗ್ರಾ.ಪಂ ಅಧ್ಯಕ್ಷ ನರಸಿಂಹ ಕಾಮತ್, ಹೆದ್ದಾರಿ ಹೋರಾಟಗಾರ ಕೆಂಚನೂರು ಸೋಮಶೇಖರ ಶೆಟ್ಟಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಯಾಣ ದರ ಏರಿಕೆ: ಯಾತ್ರಿ ಸಂಘ ಪತ್ರ
ಮಂಗಳೂರು:
ರೈಲ್ವೆ ಇಲಾಖೆ ನಷ್ಟದಲ್ಲಿ ಇದೆ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ, ರೈಲ್ವೆ ಬೋರ್ಡ್ ಅಧ್ಯಕ್ಷ ವಿನಯ್ ಮಿತ್ತಲ್ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಎಲ್ಲ ದರ್ಜೆಯ ಟಿಕೆಟ್ ದರವನ್ನು ಶೇ 10ರಷ್ಟು ಏರಿಸಬೇಕು. ಕೆಲವು ರಿಯಾಯಿತಿಗಳನ್ನೂ ಕಡಿತಗೊಳಿಸಬೇಕು ಎಂದು ಉಡುಪಿ ರೈಲ್ವೆ ಯಾತ್ರಿಕರ ಸಂಘ ಸಚಿವರಿಗೆ ಪತ್ರ ಬರೆದಿದೆ ಎಂದು ಸಂಘ ಅಧ್ಯಕ್ಷ ಆರ್.ಎಲ್.ಡಾಯಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ರೈಲ್ವೆ ಪ್ರತಿ ತಿಂಗಳು ರೂ.552 ಕೋಟಿ ನಷ್ಟ ಮಾಡಿಕೊಳ್ಳುತ್ತಿದೆ. ಲಾಲು ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ 10 ಸಾವಿರ ಹೆಕ್ಟೇರ್ ರೈಲ್ವೆ ಜಮೀನನ್ನು ಮಾರಾಟ ಮಾಡಿದ್ದರು. ಆದರೆ ಇದರ ಬಗ್ಗೆ ಸಂಸತ್ತಿನಲ್ಲಿ ಯಾರೂ ಪ್ರಶ್ನಿಸಿಲ್ಲ. ಟಿಕೆಟ್ ದರ ಏರಿಕೆ ಮಾಡದೆ ಜನರಿಗೆ ಉಪಕಾರ ಮಾಡಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ರೈಲ್ವೆ ಖಾತೆ ಮಾಜಿ ಸಚಿವೆ ಮಮತಾ ಬ್ಯಾನರ್ಜಿ ಕೂಡ ಇಲಾಖೆಗೆ ನಷ್ಟ ಉಂಟುಮಾಡಿದ್ದಾರೆ ಎಂದು  ಡಾಯಸ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT