ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಾಪಟ್ಟೆ ಲಲನೆಯರು

Last Updated 23 ಜೂನ್ 2011, 19:30 IST
ಅಕ್ಷರ ಗಾತ್ರ

ತಮ್ಮ ಮಧ್ಯಮ ವಯಸ್ಸಿನಲ್ಲೂ ಅರ್ಧ ದೇಹ ಹೊರಕಾಣುವಂಥ ಉಡುಗೆ ತೊಟ್ಟಿದ್ದ ಕಿರಣ್ ರಾಥೋಡ್ ಮೇಕಪ್ ಕಲಾವಿದನಿಂದ ಪದೇಪದೇ ಟಚ್‌ಅಪ್ ಮಾಡಿಸಿಕೊಂಡರು.
 
ಇನ್ನೊಂದೆಡೆ ಹೆಚ್ಚೂಕಡಿಮೆ ಅದೇ ರೀತಿಯ ಬಟ್ಟೆ ಧರಿಸಿದ್ದ ಮತ್ತೊಬ್ಬ ಹೆಣ್ಣುಮಗಳು ಯಾವುದೋ ಪಾನೀಯ ಹೀರುತ್ತಿದ್ದರು. ಹೀಗೇ ಕಣ್ಣಾಡಿಸಿದೆಡೆಯೆಲ್ಲಾ ತುಂಡುಲಂಗದ ಲಲನೆಯರದ್ದೇ ಮೆರವಣಿಗೆ. ಅವರೆಲ್ಲರೂ `ಸಿಕ್ಕಾಪಟ್ಟೆ ಇಷ್ಟಪಟ್ಟೆ~ ಚಿತ್ರದ ನಾಯಕಿಯರು.

ನಿರ್ಮಾಪಕ ಮನೋಹರನ್ ಚಿತ್ರದ ಶೀರ್ಷಿಕೆಯನ್ನು `ಶಿಕಾಪಟೆ ಇಸ್ಟಾಪಟೆ~ ಎಂದು ಉಚ್ಚಾರಣೆ ಮಾಡಲು ಕಾರಣ ಅವರು ತಮಿಳಿನವರಾಗಿರುವುದು. ಆ ಚಿತ್ರರಂಗದಲ್ಲಿ ವಿತರಕ, ನಿರ್ಮಾಪಕರಾಗಿ ಅನುಭವವಿರುವ ಅವರು ಹರಿಹರನ್ ಎಂಬ ಯುವ ನಿರ್ದೇಶಕನ ಸ್ಕ್ರಿಪ್ಟ್ ಮೆಚ್ಚಿಕೊಂಡೇ ಈ ಚಿತ್ರದ ಮೇಲೆ ಹಣ ಹೂಡಲು ಮುಂದಾಗಿರುವುದು.

ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿದ ಅನುಭವ ಬೆನ್ನಿಗಿಟ್ಟುಕೊಂಡು ಹರಿಹರನ್ ಹಿರಿತೆರೆಗೆ ಲಗ್ಗೆ ಇಡುವ ಧೈರ್ಯ ಮಾಡಿದ್ದಾರೆ. `ಗೋಕುಲ ನಿವಾಸ~ ಕನ್ನಡ ಧಾರಾವಾಹಿ ನಿರ್ದೇಶಿಸಿರುವ ಅನುಭವವೂ ಇವರಿಗೆ ಇದೆ. ತಮಿಳ್ಗನ್ನಡವನ್ನು ಮಾತಾಡುತ್ತಾರಾದರೂ, `ಈ ಚಿತ್ರ ಡಬಿಂಗ್ ಅಲ್ಲ~ ಎಂದು ಅವರು ಎದೆಮುಟ್ಟಿಕೊಂಡು ಹೇಳಿದರು.

ಪೊಲೀಸ್ ಕಮಿಷನರ್ ಪಾತ್ರಕ್ಕೆಂದು ಯೂನಿಫಾರ್ಮ್ ತೊಟ್ಟಿದ್ದ ನಟ ರವೀಂದ್ರನಾಥ್ ಇಡೀ ಚಿತ್ರತಂಡದ ವಕ್ತಾರರಂತೆ ಮಾತನಾಡಿದರು. ಅವರು ಚಿತ್ರದ ಕಥೆಯನ್ನು ತುಸುವೂ ಮುಚ್ಚಿಡದೆ ಹೇಳುತ್ತಾ ಹೋದರು: `ಅಷ್ಟೂ ನಾಯಕಿಯರಿಗೆ ಮೇಕಪ್ ಮಾಡುವ ಹುಡುಗರಿಗೆ ಒಂದೊಂದು ರೀತಿ ಪ್ರತಿಭೆ ಇರುತ್ತದೆ. ಆ ಹುಡುಗರೇ ಮುಂದೆ ನಾಯಕಿಯರಿಗೆ ಸಿನಿಮಾದಲ್ಲಿ ಜೋಡಿಯಾಗಬೇಕಾದ ಪ್ರಸಂಗ ಬರುತ್ತದೆ.

ಮೇಕಪ್‌ಮನ್‌ಗಳೇ ಹೀರೋಗಳಾಗುವುದನ್ನು ನಾಯಕಿಯರು ಸಹಿಸುವುದಿಲ್ಲ. ಅಲ್ಲಿಂದ ತಿರುವು. ನಾಯಕರು ನಾಯಕಿಯರನ್ನು ಕಿಡ್ನಾಪ್ ಮಾಡುತ್ತಾರೆ. ಆದರೆ, ಆ ಎಲ್ಲರನ್ನೂ ನಕ್ಸಲೀಯರು ಕಿಡ್ನಾಪ್ ಮಾಡುತ್ತಾರೆ. ಅಲ್ಲಿಂದಾಚೆಗೆ ಶುರುವಾಗುತ್ತದೆ ಹೋರಾಟ...~

ಸಿನಿಮಾದಲ್ಲೊಂದು ಸಿನಿಮಾ ಇರುವ ಕಥೆ `ಸಿಕ್ಕಾಪಟ್ಟೆ ಇಷ್ಟಪಟ್ಟೆ~ ಎಂಬುದಂತೂ ರವೀಂದ್ರನಾಥ್ ಮಾತಿನಿಂದ ಅರ್ಥವಾಯಿತು. ಜೆ.ಜೆ.ಕೃಷ್ಣ ಈ ಚಿತ್ರದ ಛಾಯಾಗ್ರಾಹಕರು. ಏನೇ ಆದರೂ ಡಬಿಂಗ್‌ಗೆ ಅವಕಾಶ ಕೊಡುವುದಿಲ್ಲ ಎಂದು ಅವರೂ ಪ್ರಮಾಣ ಮಾಡಿದರು.

ಸ್ಕ್ರಿಪ್ಟ್ ಆಯ್ಕೆಯಲ್ಲಿ ತಾವು ಜಾಗ್ರತೆ ವಹಿಸುತ್ತಿರುವುದರಿಂದಲೇ ಕಡಿಮೆ ಸಿನಿಮಾಗಳಲ್ಲಿ ನಟಿಸುತ್ತಿರುವುದು ಎಂದು ಕಿರಣ್ ರಾಥೋಡ್ ಹೇಳಿದಾಗ ಶಾಮಿಯಾನದ ಹೊರಗೆ ನಿಂತ ಯಾರೋ ಒಬ್ಬರು ನಕ್ಕರು. ಅದನ್ನು ಕೇಳಿಸಿಕೊಂಡ ಕಿರಣ್‌ಗೆ ತುಸು ಕಿರಿಕಿರಿಯಾಯಿತು. ಆದರೂ, ಅದನ್ನು ಲೆಕ್ಕಿಸದಂತೆ ಅವರು ನಟಿಸಿದರು.

ಮೇಘನಾ ನಾಯ್ಡು, ಶಿವಾನಿ ಗ್ರೋವರ್, ಆರತಿ ಉರುಫ್ ತಾವರೆ, ಕೀರ್ತಿ ಚಾವ್ಲಾ ಚಿತ್ರದ ಇತರೆ ನಾಯಕಿಯರು. ಹಿರಿಯ ನಟ ಅಶೋಕ್ ರಾವ್ ಅವರಿಗೂ ಸ್ಕ್ರಿಪ್ಟ್ ಇಷ್ಟವಾಗಿದೆ.

ಕರ್ನಾಟದ ವ್ಯಾಪ್ತಿಗೆ ಬರುವ ತಮಿಳುನಾಡು ಗಡಿ ಪ್ರದೇಶದಲ್ಲಿ ಶೂಟಿಂಗ್ ಎಂದು ನಿರ್ದೇಶಕರು ಹೇಳಿ ಇನ್ನೊಂದು ಗೊಂದಲವನ್ನು ತೇಲಿಬಿಟ್ಟರು. ಅವರೂ ಇದು ಡಬ್ಬಿಂಗ್ ಸಿನಿಮಾ ಅಲ್ಲ, ಕನ್ನಡಲ್ಲೇ ಸಂಪೂರ್ಣವಾಗಿ ಚಿತ್ರೀಕರಿಸುತ್ತೇವೆ ಎಂದು ವಾಗ್ದಾನ ಮಾಡುವವರಂತೆ ಹೇಳಿದರು. ಇಷ್ಟೆಲ್ಲಾ ನಾಯಕಿಯರಿಗೆ ನಾಯಕರು ಇನ್ನೂ ಸಿಕ್ಕಿಲ್ಲವೆಂಬುದೇ ಉಳಿದಿರುವ ಅವರ ಚಿಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT