ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಿಬಿದ್ದ ಸೈಕೊ ಶಂಕರ್

Last Updated 6 ಸೆಪ್ಟೆಂಬರ್ 2013, 20:59 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ `ಸೈಕೊ ಕಿಲ್ಲರ್' ಕುಖ್ಯಾತಿಯ ಜೈಶಂಕರ್ ಅಲಿಯಾಸ್ ಶಂಕರ್‌ನನ್ನು (36) ಬಂಧಿಸುವಲ್ಲಿ ನಗರ ಪೊಲೀಸರು ಶುಕ್ರವಾರ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಸಾರ್ವಜನಿಕರ ಆತಂಕ ದೂರವಾಗಿದೆ.

ಕಾರಾಗೃಹದಿಂದ ಸುಮಾರು ಎರಡೂವರೆ ಕಿ.ಮೀ ದೂರದಲ್ಲಿರುವ ಕೂಡ್ಲು ಪ್ರದೇಶದ ನರೇಂದ್ರರೆಡ್ಡಿ ಜಲ ಶುದ್ಧೀಕರಣ ಘಟಕದ ಬಳಿಯ ಗುಡಿಸಲು ಒಂದರಲ್ಲಿ ಅಡಗಿಕೊಂಡಿದ್ದ ಜೈಶಂಕರ್‌ನ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಸೆರೆ ಹಿಡಿದರು.

`ಜೈಶಂಕರ್, ಕೂಡ್ಲು ಪ್ರದೇಶದ ಗುಡಿಸಲಿನಲ್ಲಿ ಅಡಗಿಕೊಂಡಿರುವ ಬಗ್ಗೆ ಪೊಲೀಸ್ ಮಾಹಿತಿದಾರನೊಬ್ಬ ಸಿಬ್ಬಂದಿಗೆ ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಮಾಹಿತಿ ನೀಡಿದ. ಇದನ್ನು ಆಧರಿಸಿ ಕಾರ್ಯೋನ್ಮುಖರಾದ ಸಿಬ್ಬಂದಿ ಕೂಡಲೇ ಆ ಸ್ಥಳಕ್ಕೆ ತೆರಳಿ ಗುಡಿಸಲು ಸುತ್ತುವರಿದು ಆತನನ್ನು ಬಂಧಿಸಿದರು' ಎಂದು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರ ಪೊಲೀಸ್, ಸಿಸಿಬಿ ಮತ್ತು ಈ ಹಿಂದೆ 2011ರ ಏಪ್ರಿಲ್‌ನಲ್ಲಿ ಜೈಶಂಕರ್‌ನನ್ನು ಬಂಧಿಸಿದ್ದ ಪೊಲೀಸ್ ತಂಡದಲ್ಲಿದ್ದ ಚಿತ್ರದುರ್ಗ, ತುಮಕೂರು, ವಿಜಾಪುರ ಜಿಲ್ಲೆಯ ಸಿಬ್ಬಂದಿಯನ್ನು ಒಳಗೊಂಡ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಜೈಶಂಕರ್‌ನ ವೈಯಕ್ತಿಕ ವಿವರ, ನೈಜ ಭಾವಚಿತ್ರ, ವಿವಿಧ ಭಂಗಿಗಳ ಫೋಟೊಗಳನ್ನು ಒಳಗೊಂಡ 10 ಸಾವಿರ ಪೋಸ್ಟರ್‌ಗಳನ್ನು ಮುದ್ರಿಸಿ ರಾಜ್ಯವೂ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಅಂಟಿಸಲಾಗಿತ್ತು. ಜತೆಗೆ 75 ಸಾವಿರ ಕರಪತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಂಚಲಾಗಿತ್ತು ಎಂದರು.

ತಮಿಳುನಾಡಿನ ಈಡಪ್ಪಾಡಿ ತಾಲ್ಲೂಕಿನ ಕಟ್ಟುವಾಳ್ ಕನ್ನಿಯಾಪಟ್ಟಿ ಗ್ರಾಮದ ಜೈಶಂಕರ್ ವಿರುದ್ಧ ಕೊಲೆ, ಅತ್ಯಾಚಾರ ಸೇರಿದಂತೆ 24 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆತ 2009ರ ಆ.3ರಂದು ತಮಿಳುನಾಡಿನಲ್ಲಿ ಎಂ.ಜಯಮ್ಮ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಆತನನ್ನು ಬಂಧಿಸಿದ್ದ ಸ್ಥಳೀಯ ಪೊಲೀಸರು 2011ರ ಮಾ.18ರಂದು ಕೊಯಮತ್ತೂರಿನ ಸೆಂಟ್ರಲ್ ಜೈಲಿನಿಂದ ಸೇಲಂ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಬಸ್ ನಿಲ್ದಾಣದಲ್ಲಿ ತಪ್ಪಿಸಿಕೊಂಡಿದ್ದ. ಬಳಿಕ ಲಾರಿಯೊಂದರಲ್ಲಿ ರಾಜ್ಯಕ್ಕೆ ಬಂದಿದ್ದ ಆತ ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಅಪರಾಧ ಕೃತ್ಯಗಳನ್ನು ಎಸಗಿದ್ದ. ಚಿತ್ರದುರ್ಗದಲ್ಲಿ ಗಂಡನ ಎದುರೇ ಪತ್ನಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ.

ಇದಾದ ಕೆಲ ದಿನಗಳಲ್ಲೇ ನೆಲಮಂಗಲದಲ್ಲಿ ತೋಟ ಕಾಯುತ್ತಿದ್ದ ಮಹಿಳೆಯ ಮೇಲೆ ಆಕೆಯ ಪತಿಯ ಎದುರೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ.
ಶಂಕರ್‌ನನ್ನು ಬಂಧಿಸಿದ ಸಿಬ್ಬಂದಿಯ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಕೆ.ಜೆ.ಜಾರ್ಜ್ ಮೆಚ್ಚುಗೆ ವ್ಯಕ್ತಪಡಿಸಿ, ನಗದು ಬಹುಮಾನ ಘೋಷಿಸಿದ್ದಾರೆ.

ಸುಳಿವು ನೀಡಿದ ಸ್ನೇಹಿತ
ಶಂಕರ್ ಈ ಹಿಂದೆ ಮಾಡಿದ್ದ ಅಪರಾಧ ಪ್ರಕರಣಗಳನ್ನು ವಿಶ್ಲೇಷಣೆ ಮಾಡಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಜೈಲಿನಲ್ಲಿದ್ದಾಗ ಆತನನ್ನು ಭೇಟಿಯಾಗಿದ್ದ ವ್ಯಕ್ತಿಗಳ ಬಗ್ಗೆ ಸಂದರ್ಶಕರ ಹಾಜರಾತಿ ಪುಸ್ತಕದಿಂದ ಮಾಹಿತಿ ಕಲೆ ಹಾಕಲಾಯಿತು. ಆತನ ಜತೆಗೆ ಬ್ಯಾರಕ್‌ನಲ್ಲಿದ್ದು ಬಿಡುಗಡೆಯಾಗಿದ್ದವರನ್ನು ಸಂಪರ್ಕಿಸಿ, ಶಂಕರ್‌ನ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿತ್ತು. ಜೈಲಿನಿಂದ ತಪ್ಪಿಸಿಕೊಂಡ ನಂತರ ನಗರದ ವಿವಿಧೆಡೆ ಸುತ್ತಾಡಿದ್ದ ಆತ, ಕೂಡ್ಲುನಲ್ಲಿರುವ ಸ್ನೇಹಿತನಿಗೆ ಶುಕ್ರವಾರ ಬೆಳಿಗ್ಗೆ 11.30ರ ಸುಮಾರಿಗೆ ಕರೆ ಮಾಡಿ, `ವ್ಯಕ್ತಿಯೊಬ್ಬರಿಗೆ ಬಸ್ ಗುದ್ದಿಸಿ ಪರಾರಿಯಾಗಿದ್ದೇನೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ ಬೇಕಿದೆ. ನಿನ್ನ ಮನೆಗೆ ಬರುತ್ತಿದ್ದು, ಬೈಕ್ ವ್ಯವಸ್ಥೆ ಮಾಡಿಕೊಡು' ಎಂದು ಕೇಳಿದ್ದ. ಈ ಬಗ್ಗೆ ಆತನ ಸ್ನೇಹಿತ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದರು. ಈ ಸುಳಿವು ಆಧರಿಸಿ ಶಂಕರ್‌ನನ್ನು ಬಂಧಿಸಲಾಯಿತು ಎಂದು ಪ್ರಕರಣದ ನೇತೃತ್ವ ವಹಿಸಿದ್ದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ಸಮವಸ್ತ್ರ ಧರಿಸಿಲ್ಲ
`ಶಂಕರ್ ಜೈಲಿನಿಂದ ಪರಾರಿಯಾಗುವಾಗ ಪೊಲೀಸ್ ಸಮವಸ್ತ್ರ ಧರಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು. ಆದರೆ, ಆತ ಘಟನಾ ದಿನ ತೊಟ್ಟಿದ್ದ ಬಟ್ಟೆಯಲ್ಲೇ ಪರಾರಿಯಾಗಿದ್ದ. ಆತನನ್ನು ಬಂಧಿಸಿದಾಗಲೂ ಅದೇ ಬಟ್ಟೆಗಳನ್ನು ಧರಿಸಿದ್ದ. ಕೊಠಡಿಯ ಬೀಗ ತೆರೆಯಲು ಬಳಸಿದ್ದ ನಕಲೀ ಕೀಯನ್ನು ಆತ ಉದ್ಯಾನದೊಳಗೆ ಎಸೆದು ಹೋಗಿದ್ದ. ಆ ಕೀ ಸಿಕ್ಕಿದೆ' ಎಂದು ಕಾರಾಗೃಹಗಳ ಇಲಾಖೆಯ ಎಡಿಜಿಪಿ ಕೆ.ವಿ.ಗಗನ್‌ದೀಪ್ ಹೇಳಿದರು.

`ಮದ್ಯ ಸರಬರಾಜು ಮಾಡಲು ಜೈಲಿನ ಸಿಬ್ಬಂದಿ ಶಂಕರ್‌ನನ್ನು ಬಳಸಿಕೊಳ್ಳುತ್ತಿದ್ದರು ಮತ್ತು ಮೋಜುಕೂಟದ ವೇಳೆ ಆತ ಪರಾರಿಯಾಗಿದ್ದ ಎಂಬ ಆರೋಪ ಸುಳ್ಳು. ಇದೀಗ ಆತನನ್ನು ಹೆಚ್ಚಿನ ಭದ್ರತೆ ಇರುವ ಸೆಲ್‌ನಲ್ಲಿ ಇಡಲಾಗುವುದು. ಕಾವಲಿಗೆ ದಿನದ 24 ಗಂಟೆಯೂ ಸಿಬ್ಬಂದಿಯನ್ನು ನೇಮಿಸಲಾಗುತ್ತದೆ' ಎಂದರು.

ಪರಾರಿ ಹೇಗೆ?
ಮನೋರೋಗಿಯಾಗಿದ್ದ ಶಂಕರ್‌ನನ್ನು ಜೈಲಿನ ಆಸ್ಪತ್ರೆ ಕಟ್ಟಡದ ನೆಲ ಅಂತಸ್ತಿನಲ್ಲಿ ಬಂಧಿಸಿಡಲಾಗಿತ್ತು. ಕೃತ್ಯಕ್ಕೆ ಹಲವು ತಿಂಗಳಿನಿಂದ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದ ಆತ, ಆ.31ರ ರಾತ್ರಿ ನಕಲಿ ಕೀಯಿಂದ ಕೊಠಡಿಯ ಬೀಗ ತೆರೆದು ಹೊರಬಂದಿದ್ದ. ಅಲ್ಲಿಂದ ಮೆಟ್ಟಿಲು ಹತ್ತಿಕೊಂಡು ಕಟ್ಟಡದ ಮಹಡಿಗೆ ಹೋಗಿ ಬಾಳೆ ಉದ್ಯಾನಕ್ಕೆ ಜಿಗಿದಿದ್ದಾನೆ. ನಂತರ ಕಾಂಪೌಂಡ್ ಗೇಟ್‌ನ ಕಬ್ಬಿಣದ ಸರಳುಗಳನ್ನು (ಗ್ರಿಲ್ಸ್) ಹಿಡಿದುಕೊಂಡು 20 ಅಡಿ ಎತ್ತರದ ಗೋಡೆ ಏರಿದ್ದಾನೆ. ಬಳಿಕ ಸುಮಾರು 150 ಮೀಟರ್ ದೂರ ಗೋಡೆಯ ಮೇಲೆ ನಡೆದು ಹೋಗಿ, ಆ ಗೋಡೆಗೆ ಹೊಂದಿಕೊಂಡಿರುವ 30 ಅಡಿ ಎತ್ತರದ ಮತ್ತೊಂದು ಗೋಡೆ ಹತ್ತಿದ್ದಾನೆ ಎಂದು ಔರಾದಕರ್ ಮಾಹಿತಿ ನೀಡಿದರು.

ಈ ಮೊದಲೇ ಆಸ್ಪತ್ರೆ ಕೊಠಡಿಯಿಂದ ತಂದಿದ್ದ ಎಂಟು ಅಡಿ ಉದ್ದದ ಬೆಡ್‌ಶೀಟ್, ಬೆಲ್ಟ್ ಮತ್ತು ಬ್ಯಾಗನ್ನು ಒಂದಕ್ಕೊಂದು ಜೋಡಿಸಿ ಒಂದು ತುದಿಯನ್ನು ಕಾಂಪೌಂಡ್ ಮೇಲಿನ ವಿದ್ಯುತ್ ತಂತಿಯ ಕಂಬಿಗೆ ಕಟ್ಟಿದ್ದ. ಮತ್ತೊಂದು ತುದಿಯನ್ನು ಹಿಡಿದುಕೊಂಡು ಕೆಳಗೆ ಜಿಗಿದು ಪರಾರಿಯಾಗಿದ್ದ. ಕಾಂಪೌಂಡ್ ಮೇಲಿನ ಗಾಜಿನ ಚೂರುಗಳು ಚುಚ್ಚಿರುವುದರಿಂದ ಪಾದಗಳಿಗೆ ಗಾಯವಾಗಿದೆ. ಕಾಂಪೌಂಡ್‌ನಿಂದ ಕೆಳಗೆ ಜಿಗಿದಾಗ ಬೆನ್ನು ಮತ್ತು ಮೊಣಕಾಲಿಗೆ ಪೆಟ್ಟಾಗಿ ಊದಿಕೊಂಡಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT