ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟ್ಟ್ಯಾಕೆ ಸಿಡುಕ್ಯಾಕೆ...

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಇದು ಹೇಳಿಕೇಳಿ ಒತ್ತಡದ ಯುಗ. ಇಂತಹ ಒತ್ತಡದ ಬದುಕಿನ ಫಲಿತಾಂಶವೇ ಸಿಟ್ಟು. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾಮಾನ್ಯವಾಗಿ ಎಲ್ಲರಲ್ಲೂ ನಾವು ಸಿಟ್ಟನ್ನು ಕಾಣುತ್ತೇವೆ. ಅಲ್ಲಿಗೆ ಈ ಸಿಟ್ಟು ಯಾರನ್ನೂ ಬಿಟ್ಟಿಲ್ಲ ಎಂದಾಯಿತು. ಹೀಗೆ ಸರ್ವರನ್ನೂ ವ್ಯಾಪಿಸಿರುವ ಸಿಟ್ಟನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.

1.ಪೂರ್ವಯೋಜಿತ ಸಿಟ್ಟು
2.ದೈಹಿಕ ಪ್ರತೀಕಾರದ ಸಿಟ್ಟು
3.ಕರ್ತವ್ಯದಲ್ಲಿ ಸಿಟ್ಟು

ಪೂರ್ವಯೋಜಿತ ಸಿಟ್ಟು ಎಂದರೆ, ಬೇಕಾಗಿಯೇ ಯಾರ ಮೇಲೋ ಸಿಟ್ಟು ಮಾಡಿಕೊಳ್ಳುವುದು. ಅವರು ಬಂದಾಗ ನಾನು ಈ ರೀತಿ ಅನ್ನಬೇಕು, ಆ ರೀತಿ  ದೂಷಿಸಬೇಕು ಎಂದು ಹತ್ತು ಹಲವು ಯೋಚನೆಗಳನ್ನು ಮಾಡಿಕೊಂಡು ವಿನಾಕಾರಣ ಸಿಟ್ಟಾಗುವುದು.

ಹೀಗೆ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ ಸಂಬಂಧಪಟ್ಟವರು ಕಂಡಾಗ ಕಾರಿಕೊಳ್ಳುವ ಇಂತಹ ಸಿಟ್ಟು ದಿನನಿತ್ಯದ ಕಿರಿಕಿರಿಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಿಟ್ಟಿಗೆದ್ದವರು ತಾವೂ ಒಳ್ಳೆಯ ಕೆಲಸ ಮಾಡದೆ, ತಮ್ಮಿಂದ ಬೈಸಿಕೊಂಡವರೂ ಕೆಲಸ ಮಾಡದಂತೆ ಮಾಡಿ, ಮನಸ್ಸನ್ನು ತಾವಾಗಿಯೇ ಕೆಡಿಸಿಕೊಳ್ಳುತ್ತಾರೆ.

ಎರಡನೆಯದು ದೇಹದ ಅಂಗಾಂಗಗಳ ಮೇಲೆ ಅಭಿವ್ಯಕ್ತವಾಗುವ ಸಿಟ್ಟು. ಈ ಬಗೆಯ ಸಿಟ್ಟಿನಲ್ಲಿ ಮನುಷ್ಯ ಮತ್ತೊಬ್ಬರಿಗೆ ಹೊಡಿ, ಬಡಿ ಕೃತ್ಯಗಳಿಗೆ ಮೀಸಲಾಗಿರುತ್ತಾನೆ. ಅಂದರೆ ಯಾವುದೋ ಕಾರಣಕ್ಕಾಗಿ ಕಡು ಕೋಪದಿಂದ ಇನ್ನೊಬ್ಬರ ಹತ್ಯೆ ಮಾಡುವುದು, ಅತ್ಯಾಚಾರ, ಸುಲಿಗೆಯಂತಹ ದುಷ್ಕೃತ್ಯಗಳಿಂದ ಇತರರಿಗೆ ತೊಂದರೆ ಕೊಡುತ್ತಾನೆ.

ಇಂತಹ ಕೆಲಸ ಮಾಡಿದವರ ದೇಹದ ಎಲ್ಲ ಭಾಗಗಳೂ ನಿಸ್ತೇಜವಾಗುತ್ತವೆ. ಬೆವರುವುದು, ತಡವರಿಸುವುದು, ಎದ್ದು ಓಡಾಡಲಾಗದಂತಹ ಪರಿಸ್ಥಿತಿ ಉಂಟಾಗುತ್ತದೆ. ಈ ಮೂಲಕ ಅವರು ತಮ್ಮ ವಿನಾಶಕ್ಕೆ ಕಾರಣರಾಗುತ್ತಾರೆ. ಹಲವರು ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಹೃದಯಾಘಾತಗಳಂತಹ ತೀವ್ರ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ಇನ್ನು ಮೂರನೆಯದು ಕರ್ತವ್ಯದಲ್ಲಿ ಸಿಟ್ಟನ್ನು ತೋರಿಸುವುದು. ಆ ಸಂದರ್ಭದಲ್ಲಿ ಮಾಡಿದ ಯಾವ ಕೆಲಸವೂ ಪರಿಪೂರ್ಣವಾಗುವುದಿಲ್ಲ. ಜೊತೆಗೆ ನಮ್ಮ ಕೈಕೆಳಗೆ ಕೆಲಸ ಮಾಡುವ ಕಿರಿಯ ಸಿಬ್ಬಂದಿಯ ಮೇಲೆ, ಸಹೋದ್ಯೋಗಿಗಳ ಮೇಲೆ, ಅಷ್ಟೇ ಅಲ್ಲ ಕುಟುಂಬ ಸದಸ್ಯರ ಮೇಲೂ ಸಿಟ್ಟನ್ನು ತೋರಿಸುತ್ತೇವೆ.

ಈ ಸಂದರ್ಭದಲ್ಲಿ, ಸಿಟ್ಟಾದ ವ್ಯಕ್ತಿಯ ಕೆಲಸದ ಜೊತೆಗೆ ಅವರನ್ನು ಆಶ್ರಯಿಸಿದವರ ಕೆಲಸವೂ ಹಾಳಾಗುತ್ತದೆ. ಅಕ್ಕಪಕ್ಕದವರು, ಮನೆಯವರು, ಮಕ್ಕಳು, ಪ್ರಾಣಿ ಪಕ್ಷಿಗಳೂ ಕೆಲವೊಮ್ಮೆ ತೊಂದರೆಗೆ ಒಳಗಾಗಬೇಕಾಗುತ್ತದೆ. ಅಷ್ಟೇ ಏಕೆ ದಿನಬಳಕೆಯ ನಿರ್ಜೀವ ವಸ್ತುಗಳು ಸಹ ಬಲಿಯಾಗುತ್ತವೆ.

ಸಾಧನೆಯಲ್ಲದ ಸಾಧನೆ
ಬಹುತೇಕ ಸಂದರ್ಭಗಳಲ್ಲಿ ನಾವು ಅನಿವಾರ್ಯವಾಗಿ ಸಿಟ್ಟಿಗೇಳುತ್ತಾ ಇರುತ್ತೇವೆ. ಆಯಾಯ ಪರಿಸ್ಥಿತಿಗೆ ಸಿಟ್ಟು ಅನಿವಾರ್ಯ ಎನಿಸಿದರೂ ಅದರಿಂದ ಯಾವ ಸಾಧನೆಯೂ ಆಗುವುದಿಲ್ಲ ಎಂಬುದು ಮಾತ್ರ ನಿಜ. ಒಂದು ವೇಳೆ ಸಿಟ್ಟಿನಿಂದ ಏನನ್ನಾದರೂ ಸಾಧಿಸಬಹುದು ಎಂದುಕೊಂಡರೆ ಅದು ಸರ್ವನಾಶ  ಮಾತ್ರ.

ಇದನ್ನು ಅರಿಯದೆ ಸಿಟ್ಟನ್ನು ಮುಂದುವರಿಸಿಕೊಂಡು ಹೋಗುವ ವ್ಯಕ್ತಿಗೆ ಪದೇ ಪದೇ ಸಿಟ್ಟಾಗುವಂತಹ ಪರಿಸ್ಥಿತಿಗಳೇ ಎದುರಾಗುತ್ತಿರುತ್ತವೆ. ಆದ್ದರಿಂದ ಸಿಟ್ಟನ್ನು ದೂರ ಮಾಡಿ ಆ ಜಾಗದಲ್ಲಿ ಪ್ರೀತಿ, ಸಹನೆ, ತಾಳ್ಮೆಯನ್ನು ತುಂಬಿಕೊಂಡಾಗ ಮಾತ್ರ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬಹುದು.

ಅಲ್ಲದೆ ಪರಿಪೂರ್ಣ ಮನುಷ್ಯರಾಗಬಹುದು. ಇತರರಿಗೆ ಪ್ರೀತಿ, ಸಹನೆ, ತಾಳ್ಮೆ, ಪ್ರೋತ್ಸಾಹ ಕೊಡಲು ಪರಿಶ್ರಮ ಹಾಕಬೇಕಾಗುತ್ತದೆ ಮತ್ತು ಅದಕ್ಕೆ ಹೆಚ್ಚು ಸಮಯವೂ ಬೇಕು. ಕೋಪ ಮಾತ್ರ ಕ್ಷಣಮಾತ್ರದಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಆದರೆ `ಮಾಡಿದ್ದುಣ್ಣೋ ಮಹರಾಯ~ `ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು~ ಎಂಬ ನಮ್ಮ ನಾಣ್ನುಡಿಗಳಂತೆ, ಕ್ರೋಧದಲ್ಲಿ ನಾವು ಮಾಡುವ ಅನರ್ಥಗಳಿಗೆ ನಾವೇ ಹೊಣೆಯಾಗಬೇಕಾಗುತ್ತದೆ.

ಸಿಟ್ಟನ್ನು ಬಿಡುವುದು ಹೇಗೆ ಎಂದು ವೈದ್ಯರನ್ನು ಕೇಳಿದರೆ ಅವರು, ಒಂದರಿಂದ ಹತ್ತರವರೆಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಹೇಳಿ, ನೀರನ್ನು ಹೆಚ್ಚಾಗಿ ಕುಡಿಯಿರಿ ಅಥವಾ ಆ ಸ್ಥಳದಿಂದ ಸ್ವಲ್ಪ ಕಾಲ ಹೊರನಡೆಯಿರಿ ಎಂದು ಹೇಳುತ್ತಾರೆ. ಆದರೆ ಇದು ತಾತ್ಕಾಲಿಕವಾಗಿ ಸರಿ ಎನಿಸಿದರೂ ಶಾಶ್ವತ ಪರಿಹಾರ ಅಲ್ಲ.

ಅಧ್ಯಾತ್ಮ ಚಿಂತನೆ ಎಡೆಗೆ ನಮ್ಮ ಮನಸ್ಸನ್ನು ಓಲೈಸುವುದು ಶಾಶ್ವತ ಪರಿಹಾರ ನೀಡಬಲ್ಲದು. ಇದು ಬಹಳ ಕಠಿಣವಾದ ಕೆಲಸ. ಇದಕ್ಕೆ ನಿರಂತರ ಪ್ರಯತ್ನ  ಅಗತ್ಯ. ಧ್ಯಾನ, ಪ್ರಾಣಾಯಾಮ, ಯೋಗ, ಒಳ್ಳೆಯ ಪುಸ್ತಕಗಳನ್ನು ಓದುವುದು, ಮನಸ್ಸಿಗೆ ಹಿತಕರವಾದ ಸಂಗೀತ ಕೇಳುವುದರಿಂದಲೂ ಸಿಟ್ಟಿನ ಮೇಲೆ ನಿಯಂತ್ರಣ ಸಾಧಿಸಬಹುದು. ಆಗ ನೋಡಿ ನಮ್ಮೆಲ್ಲರ ಜೀವನವೂ ಸುಂದರವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT