ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧತೆ, ಸ್ಥಿರತೆ, ತಿಳಿವಳಿಕೆ ಕಾರ್ಯಾಗಾರ

Last Updated 13 ಫೆಬ್ರುವರಿ 2012, 5:10 IST
ಅಕ್ಷರ ಗಾತ್ರ

ಬಳ್ಳಾರಿ: ಪದವಿ ಶಿಕ್ಷಣದ ನಂತರ ಉನ್ನತ ಶಿಕ್ಷಣ, ಸಂಶೋಧನೆಗೆ ರಹದಾರಿ ಇದ್ದೇ ಇದೆ. ಬೇಡ ಎಂದರೆ, ಒಂದಿಲ್ಲೊಂದು ಉದ್ಯೋಗ ಕಂಡುಕೊಳ್ಳಬಹುದು. ಉದ್ಯೋಗಕ್ಕೆ ಎಲ್ಲಿ ಅವಕಾಶಗಳಿವೆ? ಆ ಅವಕಾಶಗಳನ್ನು ಹೇಗೆ ಯಶಸ್ಸನ್ನಾಗಿ ಪರಿವರ್ತಿಸಿಕೊಳ್ಳಬೇಕು, ಇತರ ಸ್ಪರ್ಧಿಗಳ ಜತೆ ಹೆಣಗುವ ಮೂಲಕ ಅವಕಾಶವನ್ನು ತನ್ನದಾಗಿಸಿಕೊಳ್ಳುವ ಬಗೆ ಹೇಗೆ?

ಈ ಪ್ರಶ್ನೆಗಳು ಅನೇಕ ವಿದ್ಯಾರ್ಥಿಗಳಲ್ಲಿ ಪದವಿ ಮುಗಿಯುವವರೆಗೂ ಉದ್ಭವಿಸುವುದೇ ಇಲ್ಲ.
ನಿತ್ಯ ಕಾಲೇಜಿಗೆ ಹೋಗಿ, ತರಗತಿಗಳಲ್ಲಿ ಕುಳಿತು, ಪಾಠ ಕೇಳುವುದು, ನೋಟ್ಸ್ ಬರೆದುಕೊಳ್ಳುವುದು, ಪುಸ್ತಕ ಓದುವುದು, ಪರೀಕ್ಷೆ ಬರೆಯುವುದು, ಅಂಕ ಗಳಿಸುವುದು... ಇಷ್ಟರಲ್ಲಿ ಮೂರು ವರ್ಷ ಮುಗಿದೇ ಹೋಗಿಬಿಡುತ್ತವೆ.

ಪದವಿ ಪ್ರಮಾಣಪತ್ರ ಕೈಗೆ ಬಂದ ನಂತರವಷ್ಟೇ ಅಲ್ಲಿ- ಇಲ್ಲಿ ಉದ್ಯೋಗಕ್ಕೆ ಅವಕಾಶವಿದ್ದರೆ, ಅರ್ಜಿ ಸಲ್ಲಿಸಿ, ನೇರ ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗುವುದು. ಫಲಿತಾಂಶ ಬಂದ ನಂತರವಷ್ಟೇ ನಿಜವಾದ ಬಣ್ಣ ಬಯಲಾಗುತ್ತದೆ. `ಈ ಪರೀಕ್ಷೆಯ ಮಟ್ಟಕ್ಕೆ ನಾವಿನ್ನೂ ಬೆಳೆದಿಲ್ಲ~ ಎಂಬುದೂ ಗೊತ್ತಾಗುವುದರೊಳಗೆ ಸಮಯ ಕೈಜಾರಿ ಹೋಗಿರುತ್ತದೆ.

ಇದು ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಸಮಸ್ಯೆ. ಈ ಸಮಸ್ಯೆಯನ್ನು ನೀಗಿಸಲೆಂದೇ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಪದವಿ ಹಂತದಲ್ಲೇ ಉದ್ಯೋಗಾವಕಾಶಗಳ ಕುರಿತು ತರಬೇತಿ, ತಿಳಿವಳಿಕೆ ನೀಡುವ ವಿಶೇಷ ಯೋಜನೆಯೊಂದನ್ನು ರೂಪಿಸಿದೆ.

ಅಂತೆಯೇ ಆಯಾ ಕಾಲೇಜುಗಳಲ್ಲಿ ಕರಿಯರ್ ಅಂಡ್ ಕೌನ್ಸಿಲಿಂಗ್ ಸೆಲ್ ತೆರೆದು ವಿಶಿಷ್ಟ ಕಾರ್ಯಾಗಾರ ಆಯೋಜಿಸುವಂತೆ ಸೂಚಿಸಿದೆ.

ಯುಜಿಸಿ ನಿರ್ದೇಶನದ ಮೇರೆಗೆ ಬಳ್ಳಾರಿಯ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಂತಹ ಒಂದು ಸೆಲ್ ರೂಪುಗೊಂಡಿದೆ. ಯುಜಿಸಿ ಸೂಚನೆ ಮೇರೆಗೇ ಕಾಲೇಜಿನಲ್ಲಿ ಇದೇ 9ರಿಂದ ಮೂರು ದಿನಗಳ ಕಾಲ ವಿಶೇಷ ಕಾರ್ಯಾಗಾರವನ್ನೂ ಆಯೋಜಿಸಿತ್ತು.

ಬಿಎ, ಬಿಕಾಂ, ಬಿಎಸ್‌ಸಿ, ಬಿಬಿಎಂನ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ನಡೆದ ಈ ಕಾರ್ಯಾಗಾರದಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಅಗತ್ಯ ಮಾಹಿತಿ ಪಡೆದರು.

ಸಂಪನ್ಮೂಲ ವ್ಯಕ್ತಿಗಳಾದ ಎಸ್.ವಿ. ಪಾಟೀಲ, ವೀರೇಶ ಸವಡಿ, ಎಸ್.ಅಯ್ಯನಗೌಡರ್ ಮೂರು ದಿನಗಳ ಕಾಲ, ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿನ ಉದ್ಯೋಗಾವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ವಿಧಾನ,  ಅವುಗಳನ್ನು ಎದುರಿಸುವ ಬಗೆ, ಅನಗತ್ಯ ಭಯ, ಆತುರ, ಆತಂಕದಿಂದ ಮುಕ್ತಿ ಹಾಗೂ ವ್ಯಕ್ತಿತ್ವ ವಿಕಸನ ಕುರಿತು ಪಾಠ ಮಾಡಿ ತಿಳಿವಳಿಕೆ ನೀಡಿದರು.

ನಗರದ ಹೃದಯ ಭಾಗದಲ್ಲಿರುವ ಈ ಸರ್ಕಾರಿ ಕಾಲೇಜಿನಲ್ಲಿ 2000ಕ್ಕೂ ಅಧಿಕ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಅವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದವರೇ.

ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಈ ಎಲ್ಲ ವಿಷಯಗಳನ್ನು ತಿಳಿಸಿ, ಅವರ ತಿಳಿವಳಿಕೆ ಮಟ್ಟಿವನ್ನು ಅಭಿವೃದ್ಧಿಪಡಿಸಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಏರ್ಪಡಿಸ ಲಾಗಿದ್ದ ಕಾರ್ಯಾಗಾರದ ಯಶಸ್ಸಿಗೆ ಕಾಲೇಜಿನ ಕರಿಯರ್ ಅಂಡ್ ಕೌನ್ಸೆಲಿಂಗ್ ಸೆಲ್‌ನ ಮುಖ್ಯಸ್ಥ ಹನುಮೇಶ ವೈದ್ಯ, ಸದಸ್ಯರು ಹಾಗೂ ಪ್ರಾಚಾರ್ಯ ಪ್ರೊ.ಡಿ. ಗಂಗಣ್ಣ ಶ್ರಮಿಸುತ್ತಿದ್ದಾರೆ.

ಹಿಂದುಳಿದ ಭಾಗಗಳ ಯುವಕರಿಗೂ ಉದ್ಯೋಗಾವಕಾಶ ಸದುಪಯೋಗ ಕುರಿತು, ಕಾಳಜಿಯೊಂದಿಗೆ ಆಯೋಜಿಸಲಾದ ಕಾರ್ಯಾಗಾರ ಪ್ರತಿ ವಿದ್ಯಾರ್ಥಿಗೆ ವೈಯಕ್ತಿಕವಾಗಿ ಲಾಭ ತಂದುಕೊಟ್ಟಿದೆ.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಬಗೆ ಹೇಗೆ? ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವೇದ ಗಣಿತದ ಪ್ರಾಮುಖ್ಯತೆ ಏನು? ಎಂಬ ಕುರಿತು ಈಗಾಗಲೇ ತರಬೇತಿ ಶಿಬಿರದ ಮೂಲಕ ಹೇಳಿಕೊಡ ಲಾಗಿದ್ದು, ಯುಪಿಎಸ್‌ಸಿ, ಕೆಪಿಎಸ್‌ಸಿಯಿಂದ ಆಯೋಜಿಸ ಲಾಗುವ ಐಎಎಸ್, ಐಪಿಎಸ್, ಐಎಫ್‌ಎಸ್, ಕೆಎಎಸ್ ಪರೀಕ್ಷೆಗಳು ಮಾತ್ರವಲ್ಲದೆ, ಕ್ಲರ್ಕ್, ಪಿಡಿಓ ಹುದ್ದೆ, ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ, ನೇಮಕಕ್ಕೆ ಇರುವ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗೆಯನ್ನು ಸಮಗ್ರವಾಗಿ ತಿಳಿಸಲಾಗುತ್ತಿದೆ.

ಈ ಸಂದರ್ಭ ಕಾಲೇಜಿಗೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿ ಎದುರು ಕೆಲವು ವಿದ್ಯಾರ್ಥಿಗಳು ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದ ಅನುಭವ ಹಂಚಿಕೊಂಡರು.

ಈ ಕಾರ್ಯಾಗಾರದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ, ಅನಗತ್ಯ ಭಯ, ಪೂರ್ವತಯಾರಿ, ಅಗತ್ಯ ತರಬೇತಿ, ಶಿಬಿರಗಳ ಸದುಪಯೋಗ, ಅಭ್ಯಾಸ ವಿಧಾನ, ಅಚಲ ವಿಶ್ವಾಸ, ಗುರಿ ತಲುಪುವ ಛಲ, ವಿದ್ಯಾರ್ಥಿ ಜೀವನದ ಜವಾಬ್ದಾರಿ, ಪಠ್ಯೇತರ ಚಟುವಟಿಕೆಗಳ ಮಹತ್ವ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ರಾಜಕೀಯ, ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನ, ಭಾಷೆಯ ಮೇಲಿನ ಹಿಡಿತ, ಧ್ಯಾನ, ಇತರರಲ್ಲಿ ಗೌರವ ಭಾವ, ವರ್ತನೆ, ಅವಕಾಶಗಳ ಸದ್ಬಳಕೆ ಮತ್ತಿತರ ವಿಷಯಗಳ ಕುರಿತು ಸಮಗ್ರ ಮಾಹಿತಿ ಲಭಿಸಿದೆ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂತಹ ಕಾರ್ಯಾಗಾರಗಳ ಔಚಿತ್ಯದ ಬಗ್ಗೆ ವಿವರಿಸಿದ ಮಂಜುನಾಥ, ಪದ್ಮಾವತಿ, ಕೆ.ಹರ್ಷಿತಾ, ಈ.ಸುಧಾಕರರೆಡ್ಡಿ, ಜಟ್ಟೆಪ್ಪ, ಡಿ.ವೀರೇಶ, ಕೆ.ಕೋಮಲಾ, ಡಿ.ಸರಸ್ವತಿ, ಕೆ.ರವೀಂದ್ರ, ಜೆ. ರಾಘವೇಂದ್ರ, ಅನ್ನಪೂರ್ಣಾ ಮತ್ತಿತರರು ನಗರ ಪ್ರದೇಶದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಎದುರಾಗುವ ಸ್ಫರ್ಧೆ, ಆ ಕುರಿತ ಭಯ ನಿವಾರಿಸಿಕೊಳ್ಳುವ ಬಗೆ, ಉದ್ಯೋಗಾವಕಾಶಗಳ ಸದ್ಬಳಕೆಗೆ ತೊಡಗಿಕೊಳ್ಳುವ ರೀತಿಯ ಕುರಿತ ಉಪನ್ಯಾಸಗಳು ಧೈರ್ಯ, ಕೆಚ್ಚನ್ನು ಮೂಡಿಸಿವೆ ಎಂದರು. ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ, ಆಸಕ್ತಿ ಕುರಿತು ಗಂಗಾವತಿಯಿಂದ ಬಂದಿದ್ದ ಉಪನ್ಯಾಸಕ ಎಸ್.ಅಯ್ಯನಗೌಡರ್ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT