ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧೇಶ್ವರ ಜಾತ್ರೆ; ಅದ್ದೂರಿ ಮೆರವಣಿಗೆ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಶುಕ್ರವಾರ ನಗರದಲ್ಲಿ ಸಪ್ತ ನಂದಿ ಧ್ವಜಗಳ ಅದ್ದೂರಿ ಮೆರವಣಿಗೆ ನಡೆಯಿತು. ಅಲಂಕೃತ ನಂದಿ ಧ್ವಜಗಳಿಗೆ ಸಿದ್ಧೇಶ್ವರ ದೇವಸ್ಥಾನದ ಎದುರು ದೇವಸ್ಥಾನದ ಅರ್ಚಕರು ವಿಧ್ಯುಕ್ತವಾಗಿ ಪೂಜೆ ನೆರವೇರಿಸಿದರು.

ಸಹಸ್ರಾರು ಭಕ್ತರ ಹರ್ಷೋದ್ಗಾರ-ವಿವಿಧ ವಾದ್ಯಗಳ ಹಿಮ್ಮೇಳದೊಂದಿಗೆ ಆರಂಭವಾದ ನಂದಿ ಧ್ವಜಗಳ ಮೆರವಣಿಗೆ 770 ಲಿಂಗದ ಗುಡಿಯವರೆಗೆ ನಡೆಯಿತು. ಸಂಪ್ರದಾಯದಂತೆ ಶ್ವೇವಸ್ತ್ರ ಧರಿಸಿದ್ದ ನೂರಾರು ಯುವಕರು ಸರದಿಯಲ್ಲಿ ನಂದಿ ಧ್ವಜಗಳನ್ನು ಹೊತ್ತು ಕುಣಿದು ಕುಪ್ಪಳಿಸಿದರು. ನಂದಿ ಧ್ವಜಗಳ ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ  ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಹೂವುಗಳನ್ನು ಹಾಕಿ ಭಕ್ತಿಯಿಂದ ನಮಸ್ಕರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

770 ಲಿಂಗದ ಗುಡಿಯಲ್ಲಿ ಲಿಂಗಗಳಿಗೆ ಎಣ್ಣೆ ಮಜ್ಜನ ಕಾರ್ಯಕ್ರಮ ನೆರವೇರಿಸಲಾಯಿತು. ನಂತರ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ 75ಭಜನಾ ತಂಡದವರಿಂದ ಭಜನೆ ಕಾರ್ಯಕ್ರಮ ನಡೆಯಿತು.

ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ, ಜಾತ್ರಾ ಸಮಿತಿ ಗೌರವಾಧ್ಯಕ್ಷ ನಾಗಪ್ಪ ಚಿಂಚಲಿ, ಅಧ್ಯಕ್ಷ ಸದಾಶಿವ ಗೊಡ್ಡೋಡಗಿ, ಕಾರ್ಯಾಧ್ಯಕ್ಷ ಎಚ್.ಎಸ್. ನಾಡಗೌಡ, ಉಪಾಧ್ಯಕ್ಷ ಶ್ರೀಶೈಲ ಗಚ್ಚಿನಮಠ, ಬಸಯ್ಯ ಹಿರೇಮಠ, ಸಂಗು ಸಜ್ಜನ, ಸದಾನಂದ ದೇಸಾಯಿ ಇತರರು ಪಾಲ್ಗೊಂಡಿದ್ದರು.

ಶನಿವಾರ ಭೋಗಿ: ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಶನಿವಾರ ಸಂಜೆ 5ಕ್ಕೆ ಸಿದ್ಧರಾಮನ ಯೋಗ ದಂಡದೊಂದಿಗೆ ಮದುವೆ-ಭೋಗಿ ಕಾರ್ಯಕ್ರಮ, ನಂತರ ನಂದಿ ಧ್ವಜಗಳ ಉತ್ಸವ ನಡೆಯಲಿವೆ. ರಾತ್ರಿ 10ಕ್ಕೆ ಸಿದ್ಧೇಶ್ವರ ಗುಡಿ ಆವರಣದಲ್ಲಿ ಮನರಂಜನೆ ಕಾರ್ಯಕ್ರಮ ನಡೆಯಲಿದೆ.

ಜಾತ್ರೆಯ ಅಂಗವಾಗಿ ನಗರದ ತೊರವಿ ಎಪಿಎಂಸಿ ಪ್ರಾಂಗಣದಲ್ಲಿ ಜಾನುವಾರು ಮೇಳವೂ ಆರಂಭವಾಗಿದ್ದು, ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಗುವುದು. ವಿವಿಧ ಭಾಗಗಳಿಂದ ರಾಸುಗಳು ಬಂದಿದ್ದು, ಎಪಿಎಂಸಿ ಪ್ರಾಂಗಣ ಕಳೆಗಟ್ಟಿದೆ. ವಾಣಿಜ್ಯ ಮೇಳ, ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವೂ ಆರಂಭವಾಗಿದ್ದು, ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT