ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಿನಿಮಾ ಕ್ಷೇತ್ರದಲ್ಲಿ ದಕ್ಷಿಣದವರದ್ದೇ ಮೇಲುಗೈ'

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಂಭ್ರಮದ ತೆರೆ
Last Updated 27 ಡಿಸೆಂಬರ್ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: ಐದನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಗುರುವಾರ ತೆರೆ ಬಿತ್ತು. ಬಹುಭಾಷೆಯ ಅತ್ಯುತ್ತಮ ಸಿನಿಮಾಗಳನ್ನು ನಗರದ ವಿವಿಧೆಡೆ ಪ್ರದರ್ಶಿಸುವ ಮೂಲಕ ಕಲಾರಸಿಕರಿಗೆ ಸಿನಿ ಔತಣವನ್ನು ಉಣಬಡಿಸಿದ ತೃಪ್ತಿ ಉತ್ಸವದ ಆಯೋಜಕರಲ್ಲಿ ಎದ್ದು ಕಾಣುತ್ತಿತ್ತು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ `ಸಾಹಿತ್ಯ, ಸಂಗೀತ, ಸಿನಿಮಾ ಕ್ಷೇತ್ರದಲ್ಲಿ ದಕ್ಷಿಣ ಭಾರತೀಯರದ್ದೇ ಮೇಲುಗೈ. ಸೃಜನಶೀಲತೆ ಹಾಗೂ ಸೌಜನ್ಯಕ್ಕೆ ಹೆಸರಾದವರು ದಕ್ಷಿಣ ಭಾರತೀಯರು' ಎಂದು ಶ್ಲಾಘಿಸಿದರು.

`ದಕ್ಷಿಣ ಭಾರತದ ಭಾಷೆಗಳ ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ಸಿನಿಮಾದಂತಹ ಪ್ರಬಲ ಮಾಧ್ಯಮ ಬೇರೊಂದಿಲ್ಲ. ತೆಲುಗುನಟ ಎನ್.ಟಿ.ರಾಮರಾವ್ ಅವರ ಶ್ರೀಕೃಷ್ಣ ಪಾತ್ರ ಅವರನ್ನು ರಾತ್ರಿ ಕಳೆದು ಬೆಳಗಾಗುವುದರೊಳಗೆ ಜನನಾಯಕನ್ನಾಗಿ ಮಾಡಿತ್ತು. ದೇಶಪ್ರೇಮವನ್ನು ಹೆಚ್ಚಿಸುವ, ಇತಿಹಾಸವನ್ನು ತಿಳಿಸುವ `ಭಗತ್‌ಸಿಂಗ್'ನಂತಹ ಉತ್ತಮ ಸಿನಿಮಾ ಇನ್ನಷ್ಟು ನಿರ್ಮಾಣಗೊಳ್ಳಬೇಕು' ಎಂದು ಹೇಳಿದರು.

ನಟಿ ಜಯಮಾಲಾ, `ಗೋವಾದಲ್ಲಿ ನಡೆಯುವ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಭಾರತದ ಭಾಷೆಗಳು ಅದರಲ್ಲೂ ಕನ್ನಡ ಸಿನಿಮಾಗಳು ಪ್ರವೇಶ ಪಡೆಯುವುದು ಕಷ್ಟಸಾಧ್ಯ. ಹೀಗಿರುವಾಗ ಬೆಂಗಳೂರು ಚಲನಚಿತ್ರೋತ್ಸವವು ದಕ್ಷಿಣ ಭಾರತ ಸಿನಿಮಾಗಳ ಉತ್ಸವವಾಗಿ ರೂಪುಗೊಳ್ಳಬೇಕು' ಎಂದು ಸಲಹೆ ನೀಡಿದರು.

`ಕೇವಲ ಸಿನಿ ನಿರ್ದೇಶಕರು ಮಾತ್ರ ಪಾಲ್ಗೊಳ್ಳದೇ ಸಿನಿಮಾ ತಂತ್ರಜ್ಞರು ಇದರಲ್ಲಿ ಭಾಗಿಯಾಗಬೇಕು. ಸತತ ವಿಚಾರಸಂಕಿರಣವನ್ನು ಹಮ್ಮಿಕೊಳ್ಳುವ ಮೂಲಕ ಚಿತ್ರರಂಗದ ಏಳಿಗೆಗಾಗಿ ಅಳವಡಿಸಿಕೊಳ್ಳಬೇಕಾದ ಹೊಸ ತಂತ್ರಜ್ಞಾನ, ಪರಿಕಲ್ಪನೆಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಮುಂದಿನ ಚಿತ್ರೋತ್ಸವ ಈ ಹಾದಿಯಲ್ಲಿ ಸಾಗಲಿ' ಎಂದು ಆಶಿಸಿದರು.

`ಕನ್ನಡ ಚಿತ್ರರಂಗದ ಕಲಾವಿದರೆಲ್ಲ ಒಂದೇ ಸೂರಿನಡಿ ಸೇರಲು `ಅಮೃತಮಹೋತ್ಸವ' ಭವನ ನಿರ್ಮಾಣವಾಗಬೇಕು. ಕನ್ನಡ ಚಿತ್ರಗಳಿಗೆ ಜಾಗತಿಕ ಮಾರುಕಟ್ಟೆಯನ್ನು ಒದಗಿಸಲು ಅನುಕೂಲವಾಗುವಂತೆ ಮುಂದಿನ ಚಿತ್ರೋತ್ಸವ ಈ ಭವನದಲ್ಲಿ ನಡೆಯುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು' ಎಂದು ಮನವಿ ಮಾಡಿದರು.

ಹಿರಿಯ ನಟಿ ಹರಿಣಿ, ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ನಟರಾದ ಅಂಬರೀಶ್, ಪ್ರಭುದೇವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು,  ಉತ್ಸವದ ಕಾರ್ಯಕಾರಿ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷೆ ತಾರಾ ಅನೂರಾಧ ಇತರರು ಉಪಸ್ಥಿತರಿದ್ದರು.

ಪ್ರಶಸ್ತಿ ಪಡೆದ ಚಿತ್ರಗಳು
ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಜಹ್ನು ಬರುವಾ ಅವರ `ಬಾಂದೊನ್', ಕನ್ನಡ ಸಿನಿಮಾ ವಿಭಾಗದಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ `ಕೂರ್ಮಾವತಾರ', ಏಷ್ಯಾ ಚಲನಚಿತ್ರ ವಿಭಾಗದಲ್ಲಿ ಸೂಸನ್ ಯೂಸೂಫ್ ಅವರ `ಹಬೀಬಿ' ಚಿತ್ರಗಳಿಗೆ ಚಿತ್ರೋತ್ಸವದ `ಶ್ರೇಷ್ಠ ಚಲನಚಿತ್ರ' ಪ್ರಶಸ್ತಿ ದೊರಕಿತು.ಭಾರತೀಯ ಸಿನಿಮಾ ಸ್ಪರ್ಧಾ ವಿಭಾಗದ ವಿಜೇತರಿಗೆ ಸ್ಮರಣಿಕೆಯೊಂದಿಗೆ 4 ಲಕ್ಷ ರೂಪಾಯಿ ಚೆಕ್, ಇತರ ಎರಡು ವಿಭಾಗಗಳಿಗೆ 2 ಲಕ್ಷ ರೂಪಾಯಿ ಚೆಕ್ ಹಾಗೂ ಸ್ಮರಣಿಕೆಯನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT