ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಮಂದಿಗೆ ಬೀದರ್ ಸೆಳೆತ

Last Updated 27 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಜ್ಯದ ತುತ್ತ ತುದಿಯಲ್ಲಿರುವ ಬೀದರ್ ಚಿತ್ರೀಕರಣದ ನೆಚ್ಚಿನ ತಾಣವಾಗುತ್ತಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಜಿಲ್ಲೆಯಲ್ಲಿ ಸಾಲು ಸಾಲಾಗಿ ನಡೆದ ಸಿನಿಮಾಗಳ ಚಿತ್ರೀಕರಣ ಇದಕ್ಕೆ ಪುಷ್ಟಿ ನೀಡುತ್ತದೆ.

ಶೇಖರ್ ನಿರ್ದೇಶನದ `ಪೆರೋಲ್~, ನಾಗಶೇಖರ್ ನಿರ್ದೇಶನದಲ್ಲಿ ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ನಟನೆಯ `ಸಂಜು ವೆಡ್ಸ್ ಗೀತಾ~, ದುನಿಯಾ ವಿಜಯ್ ಅಭಿನಯದ `ಜರಾಸಂಧ~, ಅಮೂಲ್ಯ ನಟನೆಯ `ಮನಸಾಲಜಿ~ ಹಾಗೂ ಇತ್ತೀಚೆಗಷ್ಟೇ ತೆರೆಗೆ ಬಂದ ಜಗ್ಗೇಶ್ ಅಭಿನಯದ `ಬಾಡಿಗಾರ್ಡ್~... ಹೀಗೆ ಅನೇಕ ಚಿತ್ರಗಳು ಬೀದರ್‌ನ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿವೆ. ಬೀದರ್‌ನ ಬಹಮನಿ ಕೋಟೆ, ಗವಾನ್ ಮದರಸಾ ಹಾಗೂ ಅಷ್ಟೂರಿನ ಸಮಾಧಿಗಳು ಸಿನಿಮಾ ಮಂದಿಯ ನೆಚ್ಚಿನ ತಾಣಗಳಾಗಿವೆ. ಇವುಗಳ ಪರಿಸರ, ವೈಭವ ಅವರ ಗಮನ ಸೆಳೆಯುತ್ತಿದೆ.

ಇವು ಕೇವಲ ಕನ್ನಡ ಚಿತ್ರೋದ್ಯಮದ ಮಂದಿಯಲ್ಲದೇ ಇತರೆ ಭಾಷೆಯ ಚಿತ್ರ ನಿರ್ಮಾಪಕರನ್ನೂ ಆಕರ್ಷಿಸಿವೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಖ್ಯಾತನಾಮರು ಈಗಾಗಲೇ ತಮ್ಮ ಚಿತ್ರದ ಕೆಲ ಭಾಗಗಳನ್ನು ಇಲ್ಲಿ ಚಿತ್ರೀಕರಿಸಿದ್ದಾರೆ. ಪ್ರಭುದೇವ್ ನಿರ್ಮಾಣದ `ಪ್ರಭಾಕರನ್~ (ತಮಿಳು), ಸಿಲ್ಕ್ ಸ್ಮಿತಾ ಜೀವನ ಆಧಾರಿತ `ಡರ್ಟಿ ಪಿಕ್ಚರ್~ (ಹಿಂದಿ) ಹಾಡಿನ ದೃಶ್ಯವೊಂದು ಇಲ್ಲಿಯೇ ಚಿತ್ರೀಕರಣವಾಗಿದೆ.

ಇಲ್ಲಿನ ಬಹಮನಿ ಕೋಟೆಯ ದಿವಾನ್- ಏ- ಆಮ್, ದಿವಾನ್- ಏ- ಖಾಸ್, ರಂಗೀನ್ ಮಹಲ್, ಸೋಲಾ ಕಂಬ ಮಸೀದಿ, ಚಾಂದಿನಿ ಚಬೂತರ್ ಹಾಗೂ ಕೋಟೆಯಿಂದ 2-3 ಕಿ.ಮೀ ಗಳ ಅಂತರದಲ್ಲಿ ಇರುವ ಅಷ್ಟೂರಿನ ಗುಂಬಜ್‌ಗಳು, ಗವಾನ್ ಮದರಸಾ ಚಿತ್ರೀಕರಣದ ಪ್ರಮುಖ ಕೇಂದ್ರಗಳಾಗಿ ಮಾರ್ಪಟ್ಟಿವೆ.

ಉತ್ಸವದ ಪ್ರೇರಣೆ
ಇದಕ್ಕೆಲ್ಲ ಕಾರಣವಾದದ್ದು ಪರೋಕ್ಷವಾಗಿ `ಬೀದರ್ ಉತ್ಸವ~ ಎನ್ನಬಹುದು. ನಾಲ್ಕು ವರ್ಷಗಳ ಹಿಂದೆ ಕೋಟೆ ಆವರಣದಲ್ಲಿ `ಬೀದರ್ ಉತ್ಸವ~ ಆಚರಣೆಗೆ ಚಾಲನೆ ನೀಡಲಾಗಿತ್ತು. ಅಲ್ಲಿಂದೀಚೆಗೆ ಪ್ರತಿ ವರ್ಷದ ಉತ್ಸವದಲ್ಲಿ ಸಿನಿ ತಾರೆಗಳು, ಹಿನ್ನೆಲೆ ಗಾಯಕರು ಪಾಲ್ಗೊಂಡು ಪ್ರದರ್ಶನ ನೀಡಿದ್ದಾರೆ. ಇಂಥ ಸಂದರ್ಭದಲ್ಲಿ ಬಂದ ಚಿತ್ರರಂಗದ ಮಂದಿ ಇಲ್ಲಿನ ಐತಿಹಾಸಿಕ ಸ್ಥಳಗಳಿಗೆ ಮನಸೋತು ಚಿತ್ರೀಕರಣ ನಡೆಸಲು ಸೂಕ್ತ ಸ್ಥಳವೆಂದು ನಿರ್ಧರಿಸಿ ಕಾರ್ಯಪ್ರವೃತ್ತರಾಗಿದ್ದು ಇಂದಿನ ಬೆಳವಣಿಗೆಗೆ ಮುಖ್ಯ ಕಾರಣ.
 
ಇದಕ್ಕೆ ಪೂರಕವಾಗಿ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಮನೀಷ್ ಮೌದ್ಗಿಲ್ ಮತ್ತು ಹರ್ಷ ಗುಪ್ತಾ ಅವರು ವಿಶೇಷ ಕಾಳಜಿ ವಹಿಸಿ ಸ್ಥಳೀಯ ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಒದಗಿಸುವ ಕಾರ್ಯ ಮಾಡಿದರು. ಇಡೀ ಜಿಲ್ಲೆಯಲ್ಲಿ ರಸ್ತೆ ವಿಸ್ತರಣೆ, ಅತಿಕ್ರಮಣ ತೆರವು, ನಗರ ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಂಡರು. ಸ್ಥಳೀಯ ಪ್ರವಾಸಿ ಕೇಂದ್ರಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುವಂತೆ ವ್ಯವಸ್ಥೆ ಮಾಡಿದರು.
 
ಪ್ರವಾಸಿ ತಾಣಗಳ ವಿವರವನ್ನು ಒಳಗೊಂಡ ಕಿರು ಹೊತ್ತಿಗೆಯನ್ನು ಹೊರತಂದರು.
ಬೀದರ್ ಕೋಟೆ ಹಾಗೂ ಅಷ್ಟೂರ್ ಗುಂಬಜ್‌ಗಳ ಪರಿಸರದಲ್ಲಿ `ಸಂಜು ವೆಡ್ಸ್ ಗೀತಾ~ ಚಿತ್ರದ ಹಾಡಿನ ದೃಶ್ಯವೊಂದನ್ನು ಸತ್ಯ ಹೆಗಡೆ ಅವರು ಕ್ಯಾಮೆರಾದಲ್ಲಿ ತುಂಬ ಅದ್ಭುತವಾಗಿ ಸೆರೆ ಹಿಡಿದಿದ್ದು, ಇನ್ನಷ್ಟು ಜನರನ್ನು ಬೀದರ್ ಕಡೆಗೆ ಸೆಳೆದು ತಂದಿತು. 
ಬೀದರ್ ಕೋಟೆ ಹಿಂದೆಂದೂ ಹೀಗೆ ಆಕರ್ಷಣೆಯ ಕೇಂದ್ರವಾಗಿರಲಿಲ್ಲ. ಈ ಹಿಂದೆ ಕೋಟೆ ಎಂದರೆ ಅಕ್ರಮ ಚಟುವಟಿಕೆಗಳ ತಾಣ ಮತ್ತು ಜೂಜುಕೋರರ ಅಡ್ಡೆ ಎಂಬ ಅಪಖ್ಯಾತಿಗೆ ಒಳಗಾಗಿತ್ತು. ರಜಾ ಸಮಯದಲ್ಲಿ ಕ್ರಿಕೆಟ್ ಆಡಲು, ನೂತನ ಚಾಲಕರಿಗೆ ವಾಹನ ಕಲಿಯಲು  ಇಲ್ಲಿಯ ಮೈದಾನ ಬಳಸಲಾಗುತ್ತಿತ್ತು.

ಆದರೆ, ಈಗ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿದೆ. ಅಕ್ರಮಗಳಿಗೆ ಕಡಿವಾಣ ಹಾಕಲು ಕೋಟೆಗೆ 24 ಗಂಟೆಗಳ ಕಾಲ ಸುರಕ್ಷೆ ಒದಗಿಸಲಾಗಿದೆ. ಐತಿಹಾಸಿಕ ಸ್ಥಳಗಳ ರಕ್ಷಣೆಗಾಗಿ ವಿಶೇಷ ನಿಗಾ ವಹಿಸಲಾಗಿದೆ. ಕೋಟೆ ಒಳಗಿನ ಉದ್ಯಾನವಂತೂ ದೆಹಲಿಯ ಮೊಗಲ್ ಉದ್ಯಾನವನ್ನೇ ನೆನಪಿಸುವಂತಿದೆ. ಕೋಟೆಯೊಳಗಿನ `ಒಳಕೋಟಿ ಕೆರೆ~ಗೆ ಪುನಶ್ಚೇತನ ನೀಡಲಾಗಿದೆ. ಪ್ರವಾಸಿಗರ ಅನುಕೂಲಕ್ಕೆ ಮಾಹಿತಿ ಕೇಂದ್ರ ಮತ್ತು ಕ್ಯಾಂಟೀನ್ ಸೌಲಭ್ಯ ಕಲ್ಪಿಸಲಾಗಿದೆ.

ಬೀದರ್ ಹೈದರಾಬಾದ್‌ಗೆ ಅಂಟಿಕೊಂಡಂತಿದೆ. ನಗರ ಜೀವನದಿಂದ ಬೇಸತ್ತ ಹೈದರಾಬಾದ್ ನಿವಾಸಿಗಳು ಕೇವಲ ಎರಡೂವರೆ ತಾಸು ಅಂತರದಲ್ಲಿರುವ ಬೀದರ್‌ನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಹವ್ಯಾಸ. ಭಾನುವಾರವಂತೂ ಇಲ್ಲಿನ ಸ್ಥಳಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತವೆ.

ಇದನ್ನೇ ಗಮನದಲ್ಲಿರಿಸಿಕೊಂಡು, ನೈಸರ್ಗಿಕ ಆಯಕಟ್ಟಿನ ತಾಣದಲ್ಲಿ ರೆಸಾರ್ಟ್ಸ್ ತಲೆ ಎತ್ತಿರುವುದು ಚಿತ್ರರಂಗದವರ ವಾಸ್ತವ್ಯಕ್ಕೆ ಅನುಕೂಲವಾಗಿದೆ. ಟಾಲಿವುಡ್‌ನ ಕೆಲ ನಿರ್ದೇಶಕರು ಇಲ್ಲಿನ ಸ್ಥಳಗಳ ಮೇಲೆ ಕಣ್ಣಿಟ್ಟಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ತಮ್ಮ ಮುಂದಿನ ಚಿತ್ರದ ಚಿತ್ರೀಕರಣವನ್ನು ಇಲ್ಲಿ ನಡೆಸುವ ಯೋಜನೆ ರೂಪಿಸಿದ್ದಾರೆ. 
ಬೀದರ್‌ಗೂ ಚಿತ್ರಗಳಿಗೂ ನಂಟು ಹೊಸದೇನಲ್ಲ. 1980ರಲ್ಲಿ ಎಂ.ಎಸ್. ಸತ್ಯು ನಿರ್ದೇಶನದ ಪ್ರಶಸ್ತಿ ವಿಜೇತ `ಬರ~ ಚಿತ್ರದ ಬಹುತೇಕ ಚಿತ್ರೀಕರಣ ಬೀದರ್‌ನಲ್ಲಿಯೇ ನಡೆದಿತ್ತು. ಶೀರ್ಷಿಕೆಯೇ ಹೇಳುವಂತೆ ಚಿತ್ರದಲ್ಲಿ `ಬರ~ದ ಭೀಕರತೆಯನ್ನು ಎತ್ತಿ ತೋರಿಸಲಾಗಿತ್ತು, `ಬರ~ದ ತಲ್ಲಣಗಳ ಮೇಲೆ ಬೆಳಕು ಚೆಲ್ಲಲಾಗಿತ್ತು. ಬಹುಶಃ ಬೀದರ್‌ನ ಅನುಕೂಲಕರ ವಾತಾವರಣದಿಂದಲೇ ಇಲ್ಲಿ ಚಿತ್ರೀಕರಣ ಮಾಡಲಾಗಿತ್ತು.

ಆದರೆ ಚಿತ್ರದಿಂದಾಗಿ   ನಕಾರಾತ್ಮಕ ಪರಿಣಾಮ ಉಂಟಾಯಿತು. ಚಿತ್ರ ನೋಡಿದವರು ಬೀದರ್ ಎಂದರೆ `ಬರ~ದ ಜಿಲ್ಲೆ ಎಂಬ ಭಾವನೆ ಬೆಳೆಸಿಕೊಂಡರು. `ಬರದ, ಬರಲಾರದ, ಬರಬಾರದ ತಾಣ~ ಎಂಬ ನಿರ್ಣಯಕ್ಕೆ ಬಂದರು. 
ಆದರೆ, ವಾಸ್ತವ ಪರಿಸ್ಥಿತಿಯೇ ಬೇರೆ. ಝರಿಗಳ ನಾಡು ಎಂದೇ ಕರೆಸಿಕೊಳ್ಳುವ ಬೀದರ್ ಜಿಲ್ಲೆ ಹಿತಕರ ವಾತಾವರಣದಿಂದ ಕೂಡಿದೆ. ಹಚ್ಚನೆಯ ಹಸಿರು ಸಿರಿಗೆ ಕೆಂಪು ಅಂಚು ನೀಡುವಂಥ ಕೆಮ್ಮಣ್ಣಿನ ದಖ್ಖನ್ ಭೂಮಿ ಇದು.  ಆದರೆ ಇದರ ಅರಿವಾಗಿ ಚಿತ್ರರಂಗದ ಮಂದಿ ಮತ್ತೆ ತನ್ನ ನೋಟ ಈ ಕಡೆ ಬೀರಲು, ಜಿಲ್ಲೆಯ ಬಗೆಗಿನ ದೃಷ್ಟಿಕೋನ ಬದಲಾಗಲು ಮೂರು ದಶಕಕ್ಕೂ ಹೆಚ್ಚು ಸಮಯವೇ ಬೇಕಾಯಿತು.

`ಹಲವು ಐತಿಹಾಸಿಕ ಸ್ಮಾರಕಗಳು ಒಂದೆಡೆ ಇರುವ ಸ್ಥಳ ನಮ್ಮ ದೇಶದಲ್ಲಿಯೇ ಇವೆ ಎಂಬುದು ಬೀದರ್‌ಗೆ ಬಂದ ಮೇಲೆಯೇ ಗೊತ್ತಾಯಿತು. ಚಿತ್ರೀಕರಣಕ್ಕೆ ಇದು ಹೇಳಿ ಮಾಡಿಸಿದ ಸ್ಥಳ~ ಎಂದು ಬಾಲಿವುಡ್ ನಿರ್ದೇಶಕ ಮಿಲನ್ ಲುಥಾರಿಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ಸವಕ್ಕೆ ಮುಂಬೈನಿಂದ ಬಂದ ಗಾಯಕ ಕಲಾವಿದರಾದ ಸೋನು ನಿಗಮ್, ಶಾನ್ ಮುಂತಾದವರೆಲ್ಲ ಬೀದರ್‌ನ ಸೌಂದರ್ಯ ಕಂಡು ಬೆರಗಾದವರು.
ನೀವು ಈ ಪಟ್ಟಿಯಲ್ಲಿ ಇಲ್ಲದಿದ್ದರೆ, ಮುಂದಿನ ರಜೆಗೆ ಯೋಜಿಸಿ, ಬೀದರ್ ನೋಡಿ ಆನಂದಿಸಿ.

ಕುದುರಿದ ಬೇಡಿಕೆ
ಚಿತ್ರ ನಿರ್ಮಾಪಕರು ಬೀದರ್‌ನತ್ತ ಮುಖ ಮಾಡಿರುವುದರಿಂದ ಸಹಜವಾಗಿಯೇ ಸ್ಥಳೀಯರಿಗೆ ಅನೇಕ ರೀತಿಯ ಲಾಭಗಳಾಗಿವೆ. ಚಿತ್ರೀಕರಣ ಎಂದರೆ ಚಿತ್ರತಂಡದ ದೊಡ್ಡ ದಂಡೇ ಜೊತೆಗೆ ಇರುತ್ತದೆ. ಹೀಗಾಗಿ ಸ್ಥಳೀಯ ಹೋಟೆಲ್, ವಸತಿ ಗೃಹಗಳಿಗೆ ಭಾರೀ ಬೇಡಿಕೆ. ಅಲ್ಲದೇ ಸುಸಜ್ಜಿತ, ಐಷಾರಾಮಿ ಹೋಟೆಲ್‌ಗಳು ತಲೆ ಎತ್ತುತ್ತಿವೆ. ಇತರೆ ನಗರಗಳಿಗೆ ಹೋಲಿಸಿದರೆ ಈ ಹಿಂದೆ ಬೀದರ್ ಹೋಟೆಲ್‌ಗಳಲ್ಲಿ ಬಾಡಿಗೆ ತೀರ ಕಡಿಮೆ ಇತ್ತು. ಈಗ ಅದು ಗಗನಕ್ಕೇರಿದೆ. ಮುಂಚೆ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಹೋಟೆಲ್‌ಗಳು ಇರಲಿಲ್ಲ. ಅದರಿಂದಾಗಿ ನಟರು ಚಿತ್ರೀಕರಣದ ನಂತರ ಸಮೀಪದಲ್ಲಿಯೇ ಇರುವ ಹೈದರಾಬಾದ್‌ಗೆ ತೆರಳುತ್ತಿದ್ದರು. ಈಗ ಅದು ತಪ್ಪಿದೆ.  ಇನ್ನು ಜನರೇಟರ್ ಮಾಲೀಕರಿಗಂತೂ ಶುಕ್ರದೆಸೆ. ಚುನಾವಣಾ ಪ್ರಚಾರ, ಮದುವೆ ಇನ್ನಿತರ ಸಮಾರಂಭದ ಸಂದರ್ಭದಲ್ಲಿ ಮಾತ್ರ ಜನರೇಟರ್‌ಗಳಿಗೆ ಬೇಡಿಕೆ ಇರುತ್ತಿತ್ತು. ಆದರೆ, ಈಗ ಅವರಿಗೂ ಬಿಡುವಿಲ್ಲದ ಕೆಲಸ. ಚಿತ್ರೀಕರಣದ ವೇಳೆ ತಿಂಡಿ ತಿನಿಸು ಪೂರೈಕೆ, ಲೈಟಿಂಗ್ ಮತ್ತಿತರ ಕೆಲಸಗಳಿಂದ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶವೂ ಸಿಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT