ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ವಿರುದ್ಧ ತನಿಖೆಗೆ ಸಚಿವ ಆದೇಶ

ಅವ್ಯವಸ್ಥೆಯ ಆಗರವಾದ ಶ್ರೀರಂಗಪಟ್ಟಣ ತಾಲ್ಲೂಕು ಆಸ್ಪತ್ರೆ
Last Updated 10 ಜುಲೈ 2013, 8:07 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: `ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರು ಕರ್ತವ್ಯಕ್ಕೆ ಸರಿಯಾಗಿ ಬಾರದೆ ಚಕ್ಕರ್ ಹೊಡೆಯುತ್ತಿದ್ದಾರೆ. ರಕ್ತ, ಕಫ ಇತರ ಪರೀಕ್ಷೆಗಳಿಗೆ ರೋಗಿಗಳನ್ನು ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸುತ್ತಿದ್ದಾರೆ, ಆಸ್ಪತ್ರೆಯಲ್ಲಿ ಮಾಲಿನ್ಯ ತಾಂಡವವಾಡುತ್ತಿದೆ, ಔಷಧಗಳನ್ನು ಖಾಸಗಿ ಔಷಧ ಅಂಗಡಿಗಳಲ್ಲಿ ತೆಗೆದುಕೊಳ್ಳುವಂತೆ ಚೀಟಿ ಬರೆಯುತ್ತಾರೆ, ದಂತ ವೈದ್ಯರು ಆಸ್ಪತ್ರೆಯಲ್ಲಿ ಹಗಲು ಹೊತ್ತಿನಲ್ಲೇ ಮದ್ಯಪಾನ ಮಾಡುತ್ತಾರೆ...

ಪಟ್ಟಣದಲ್ಲಿರುವ ತಾಲ್ಲೂಕು ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಮುಂದೆ ರೋಗಿಗಳು ನೀಡಿದ ಸಮಸ್ಯೆಗಳ ಪಟ್ಟಿ ಇದು.

`ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಶೋಕ್ ಅವರು ರೋಗಿಗಳ ಜತೆ ಅನುಚಿತವಾಗಿ ವರ್ತಿಸುತ್ತಾರೆ. ರೋಗಿಗಳಿಗೆ ಹೊದಿಯಲು ಬೆಡ್‌ಶೀಟ್ ಕೊಡುತ್ತಿಲ್ಲ. ಸ್ವಚ್ಛತೆ ಇಲ್ಲದೆ ಆಸ್ಪತ್ರೆಯ ಆವರಣ ಗಬ್ಬು ನಾರುತ್ತಿದೆ. ಸರ್ಕಾರಿ ಆಸ್ಪತ್ರೆ ನರಕ ಸದೃಶವಾಗಿದೆ' ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ಲಿಂಗರಾಜು, ಮುಖಂಡ ಸಚ್ಚಿದಾನಂದ ಇತರರು ದೂರಿದರು.

ಗಂಜಾಂನ ಮಚ್ಚಿಬಜಾರ್ ಪ್ರದೇಶದಲ್ಲಿ 15 ದಿನಗಳ ಅವಧಿಯಲ್ಲಿ ಜ್ವರದಿಂದಾಗಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಆದರೂ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ ನೀಡಿದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ದಲಿತ ಸಂಘರ್ಷ ಸಮಿತಿ, ಕರವೇ, ಸ್ಥಳೀಯ ಪುರಸಭೆ ಸದಸ್ಯರು ಆಸ್ಪತ್ರೆಯ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಬ್ಬಂದಿ ಮೇಲೆ ದೂರುಗಳ ಸುರಿಮಳೆ
ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ವಿರುದ್ಧ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದರು.

`ಮಾತ್ರೆ, ಔಷಧವನ್ನು ಖಾಸಗಿ ಅಂಗಡಿಗಳಲ್ಲಿ ಕೊಳ್ಳುವಂತೆ ವೈದ್ಯರು ಬರೆದರೆ ಅದರ ಹಣವನ್ನು ಆಸ್ಪತ್ರೆಯಿಂದಲೇ ಭರಿಸಬೇಕು. ಮೂವರು ಮಕ್ಕಳು ಸಾವನ್ನಪ್ಪಿರುವ ಗಂಜಾಂನಲ್ಲಿ ತಕ್ಷಣದಿಂದ ಎಫ್‌ಟಿಡಿ (ಫಿವರ್ ಟೆಸ್ಟ್ ಡಿಪೊ) ತೆರೆಯಬೇಕು. ಅಲ್ಲಿನ ಪ್ರತಿ ಮನೆಯ ಸದಸ್ಯರ ರಕ್ತ ಪರೀಕ್ಷೆ ನಡೆಸಬೇಕು' ಎಂದು ಸಚಿವರು ತಾಲ್ಲೂಕು ಆರೋಗ್ಯಾಧಿಕಾರಿಗೆ ತಿಳಿಸಿದರು.

ಮಂಡ್ಯದಲ್ಲಿ ಡೆಂಗೆ ಜ್ವರ ಪರೀಕ್ಷಾ ಘಟಕ ಇಲ್ಲದಿರುವ ಬಗ್ಗೆ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವರು, ಈ ಸಂಬಂಧ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ಡೆಂಗೆ ಪರೀಕ್ಷೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ವೈರಲ್ ಎನ್‌ಸೆಪ್ಟಾಲಿಟಿಸ್ ಎಂಬ ಜ್ವರದಿಂದ ಮೃತಪಟ್ಟಿರುವ ಮಕ್ಕಳ ಪೋಷಕರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT