ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿಯಳಿದ ಜೇನು (ಚಿತ್ರ: ತೂನೀಗ ತೂನೀಗ (ತೆಲುಗು))

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ನಿರ್ಮಾಪಕ: ಮಾಗಂಟಿ ರಾಮಚಂದ್ರನ್
ನಿರ್ದೇಶಕ: ಎಂ.ಎಸ್.ರಾಜು
ತಾರಾಗಣ: ಸುಮಂತ್ ಅಶ್ವಿನ್, ರಿಯಾ ಚಕ್ರವರ್ತಿ, ನಾಗಬಾಬು, ಪ್ರಭು, ಸಯ್ಯಾಜಿ ಶಿಂಧೆ, ಗೀತಾ, ವಿನೋದ್ ಕುಮಾರ್, ಪರಚೂರಿ ವೆಂಕಟೇಶ್ವರರಾವ್, ವಿಜಯ ಚಂದರ್ ಮತ್ತಿತರರು.

ಜೇನೊಂದಕ್ಕೆ ಗೂಡು ಕಟ್ಟುವ ಕನಸು. ಆ ಕನಸಿನೊಂದಿಗೆ ಮತ್ತೊಂದು ಜೇನಿನ ಸಂಗ ಬಯಸಿದೆ. ಇನ್ನೂ ಗೂಡು ಪೂರ್ಣವಾಗಿಲ್ಲ ಆಗಲೇ ಬೇರೆಯವರಿಂದ ಕಲ್ಲು ಹೊಡೆಯುವ ಯತ್ನ. ಹೀಗಾಗಿ ಗೂಡಿಗೆ ಘಾಸಿ. ಆದರೇನಂತೆ ಜೇನಿನ ಛಲ ಮುಂದುವರಿದಿದೆ. ಇದನ್ನು `ತೂನೀಗ ತೂನೀಗ~ ಕಥಾ ಹಂದರ ಎಂದರೂ ಅಡ್ಡಿಯಿಲ್ಲ. ತೂನೀಗ ಎಂದರೆ ತೆಲುಗಿನಲ್ಲಿ ಜೇನ್ನೊಣ.

ಶ್ರೀಮಂತ ವ್ಯಕ್ತಿ ಹಾಗೂ ಅಡುಗೆ ಭಟ್ಟನ ನಡುವೆ ಬಾಲ್ಯದ ಗೆಳೆತನ. ಕೃಷ್ಣ ಕುಚೇಲರಂತೆ ಅವರ ಸ್ನೇಹ. ಭಟ್ಟನ ಮಗ ಕಾರ್ತಿಕ್ ರಾಮಸ್ವಾಮಿಗೂ ಶ್ರೀಮಂತನ ಮಗಳು ನಿಧಿಗೂ ಬಾಲ್ಯದ ಸ್ನೇಹ. ಆದರೆ ಇವರಿಬ್ಬರದೂ ಎಣ್ಣೆ- ಸೀಗೆಯ ಮೈತ್ರಿ. ಅಮೆರಿಕದಲ್ಲಿ ಓದು ಮುಗಿಸಿ ಬಂದ ನಿಧಿಗೆ ಕಾರ್ತಿಕ್ ಹೊಸ ರೀತಿಯಲ್ಲಿ ಪರಿಚಿತನಾಗುತ್ತಾನೆ. ಇಬ್ಬರ ನಡುವೆಯೂ ಪ್ರೇಮ ಅಂಕುರಿಸುತ್ತದೆ. ಆದರೆ ಇದಕ್ಕೆ ಹುಳಿ ಹಿಂಡುವ ಯತ್ನ ಶ್ರೀಮಂತನ ಕೆಲವು ಸ್ನೇಹಿತರಿಂದ. ಅದು ಕೇವಲ ಪ್ರೇಮವನ್ನು ಒಡೆಯುವ ಯತ್ನವಾಗಿರದೆ, ಶ್ರೀಮಂತ ಹಾಗೂ ಅಡುಗೆ ಭಟ್ಟನ ಸ್ನೇಹವನ್ನೂ ಬಲಿ ತೆಗೆದುಕೊಳ್ಳುತ್ತದೆ. ಹೀಗಿರುವಾಗ ಕಾರ್ತಿಕ್ ನಿಧಿಯನ್ನು ಮತ್ತೆ ಪಡೆಯುತ್ತಾನೆ. ಅದು ಹೇಗೆ ಎಂಬುದನ್ನು ಚಿತ್ರಮಂದಿರದಲ್ಲಿ ಕಾಣಬಹುದು.

`ಮುಂಗಾರು ಮಳೆ~ ಚಿತ್ರವನ್ನು `ವಾನ~ ಹೆಸರಿನಲ್ಲಿ ನಿರ್ದೇಶಿಸಿದ್ದ ಎಂ.ಎಸ್.ರಾಜು ಚಿತ್ರದ ನಿರ್ದೇಶಕರು. ನಿರ್ಮಾಪಕರಾಗಿ ನಿರ್ದೇಶಕರಾಗಿ `ಒಕ್ಕಡು~, `ಆಟ~, `ನುವ್ವೊಸ್ತಾವಂಟೆ...~ ಮತ್ತಿತರ ಯಶಸ್ವಿ ಚಿತ್ರಗಳನ್ನು ನೀಡಿದವರು. ತಮ್ಮ ಮಗ ಸುಮಂತ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುವ ಉದ್ದೇಶದಿಂದಲೇ `ತೂನೀಗ~ ಸೃಷ್ಟಿಸಿದ್ದಾರೆ. ಪ್ರೇಮ ಹಾಗೂ ಕೌಟುಂಬಿಕ ಸೆಂಟಿಮೆಂಟ್ ನಡುವೆ ಕತೆ ತೂಗಿದೆ.

ಆದರೆ ಚರ್ವಿತ ಚರ್ವಣ ಕತೆಗೇ ಒಗ್ಗರಣೆ ಹಾಕಲು ಹೊರಟಿರುವುದು ನಿರ್ದೇಶಕರ ಲೋಪ. ಒಗ್ಗರಣೆಯೂ ಸರಿಯಾಗಿಲ್ಲ. ಕತೆಗೆ ಅತಿ ಎನ್ನಿಸುವಷ್ಟು ತಿರುವುಗಳಿವೆ. ಇವು ಪ್ರೇಕ್ಷಕರಿಗೆ ರೇಜಿಗೆ ಹುಟ್ಟಿಸಿದರೆ ಅಚ್ಚರಿಯಿಲ್ಲ. ಅನೇಕ ಹಾಸ್ಯ ದೃಶ್ಯಗಳಿದ್ದರೂ ನಗು ಉಕ್ಕಿಸುವ ಶಕ್ತಿ ಇರುವುದು ಕೆಲವಕ್ಕೆ ಮಾತ್ರ. ಮೊದಲರ್ಧದಲ್ಲಿರುವಷ್ಟು ಜೀವಂತಿಕೆ ದ್ವಿತೀಯಾರ್ಧದಲ್ಲಿ ಇಲ್ಲ. 

ಪ್ರಥಮ ಯತ್ನದಲ್ಲಿ ಸುಮಂತ್ ಅಷ್ಟೇನೂ ಯಶ ಕಂಡಿಲ್ಲ. ಆದರೆ ಅವರೊಬ್ಬ ಉತ್ತಮ ನೃತ್ಯಪಟು ಎಂಬುದು ಸಾಬೀತಾಗಿದೆ. ನಿಧಿಯಾಗಿ ಕಾಣಿಸಿಕೊಂಡಿರುವ ರಿಯಾರ ಮಾತುಗಳು ಕರ್ಣ ಕಠೋರ.

ಅವರು ತೀರಾ ಕೃತಕವಾಗಿ ತೆಲುಗನ್ನು ಬಳಸುವ ಅಗತ್ಯವಿರಲಿಲ್ಲ. ಆಕೆಯ ನಟನೆ ನಟಿ ಜೆನಿಲಿಯಾ ಅಭಿನಯವನ್ನು ಅನುಕರಿಸಿದಂತಿದೆ. ಎರಡನೇ ನಾಯಕಿಯಾಗಿರುವ ಮನೀಷಾರಿಗೆ ಹೆಚ್ಚೇನೂ ಕೆಲಸವಿಲ್ಲ. ರಿಯಾರಿಗೆ ಹೋಲಿಸಿದರೆ ಮನೀಷಾ ನಟನೆಯಲ್ಲಿ ಒಂದು ಕೈ ಮೇಲು. ನಾಗಬಾಬು, ಪ್ರಭು ಗೆಳೆಯರಾಗಿ ಪ್ರಬುದ್ಧ ಅಭಿನಯ ನೀಡಿದ್ದಾರೆ.

ಸಯ್ಯಾಜಿ ಶಿಂಧೆ, ಗೀತಾ, ವಿನೋದ್ ಕುಮಾರ್, ಪರಚೂರಿ ವೆಂಕಟೇಶ್ವರರಾವ್, ವಿಜಯ ಚಂದರ್ ಮುಂತಾದವರಿಂದ ಪೋಷಕ ಪಾತ್ರಗಳು ಜೀವ ಪಡೆದಿವೆ. ತಾಂತ್ರಿಕ ದೃಷ್ಟಿಯಿಂದ ಸಿನಿಮಾ ಹಿತಕರ. ನಿಸರ್ಗದ ನಯನ ಮನೋಹರ ದೃಶ್ಯಗಳನ್ನು ಕಲಾತ್ಮಕವಾಗಿ ಸೆರೆ ಹಿಡಿದಿದ್ದಾರೆ ಛಾಯಾಗ್ರಾಹಕ          ಎಸ್.ಗೋಪಾಲರೆಡ್ಡಿ.

ಕೆಲವು ದೃಶ್ಯಗಳಲ್ಲಿ ಕಲಾ ನಿರ್ದೇಶಕರ ಕೈಚಳಕ ಪ್ರೇಕ್ಷಕರನ್ನು ಸೆಳೆಯುತ್ತದೆ. ಕಾರ್ತಿಕ್ ರಾಜಾ ಸಂಗೀತ ನಿರ್ದೇಶನದ ಹಾಡುಗಳಿಗೆ ಸೊಗಸು ಬೆರೆತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT