ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗ್ರೀವ ಸ್ವಾಮಿ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಸಹಸ್ರಾರು ದೇವ ದೇವತೆಗಳಿದ್ದಾರೆ. ಎಲ್ಲಾ ದೇವರಿಗೂ ದೇವಸ್ಥಾನಗಳನ್ನು ನಿರ್ಮಿಸಿ ಶ್ರದ್ಧಾ ಭಕ್ತಿಗಳಿಂದ ಪೂಜೆ ಸಲ್ಲಿಸುವ ಪರಿಪಾಠ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಪುರಾಣ, ಕಾವ್ಯಗಳಲ್ಲಿ ಬರುವ ಅಪರೂಪದ ವ್ಯಕ್ತಿಗಳಿಗೆ ದೈವತ್ವವನ್ನು ಆರೋಪಿಸಿ ಪೂಜಿಸುವ ಪದ್ಧತಿ ಇದೆ.

ಕಾವ್ಯಗಳಲ್ಲಿ ಉಲ್ಲೇಖವಾದ ಪಾತ್ರಗಳಿಗೆ ದೈವತ್ವವನ್ನು ಆರೋಪಿಸಿ ದೇವಸ್ಥಾನ ನಿರ್ಮಿಸಿದ ಸಂದರ್ಭಗಳು ವಿರಳ. ಅಂತಹ ಅಪರೂಪದ ದೇವಸ್ಥಾನವೊಂದು ಬೆಂಗಳೂರಿನಲ್ಲಿದೆ. ಅದು ರಾಮಾಯಣದ ಸುಗ್ರೀವನದು!

ಬೆಂಗಳೂರಿನಲ್ಲಿ ಸುಗ್ರೀವನ ದೇವಸ್ಥಾನ ಇದೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಬಳೇಪೇಟೆಯ ಮುಖ್ಯ ರಸ್ತೆಯಲ್ಲಿ ಸುಗ್ರೀವನ ದೇವಸ್ಥಾನವಿದೆ. ಅಲ್ಲಿ ನಿತ್ಯ ಪೂಜೆ ನಡೆಯುತ್ತದೆ.

ರಾಮಾಯಣದಲ್ಲಿ ಬರುವ ಸುಗ್ರೀವ ವಾನರ ವೀರ. ವಾಲಿಯ ಸೋದರ. ಅವನು ಕಿಷ್ಕಿಂಧೆಯ ರಾಜ. ರಾವಣ ಅಪಹರಿಸಿದ ಸೀತಾ ಮಾತೆಯನ್ನು ಹುಡುಕಲು ರಾಮನಿಗೆ ಸಹಕಾರ ನೀಡಿದ ವಾನರ ವೀರರಲ್ಲಿ ಸುಗ್ರೀವನೂ ಒಬ್ಬ. ಆದರೆ  ಸುಗ್ರೀವನಿಗೆ ದೇಶದಲ್ಲಿ ಬೇರೆಲ್ಲೂ ದೇವಸ್ಥಾನ ಕಟ್ಟಿಸಿದ ನಿದರ್ಶನ ಇಲ್ಲ.

ಬಳೇಪೇಟೆಯ ಮುಖ್ಯರಸ್ತೆಯಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನವಿದೆ. ಅದಕ್ಕೆ 300 ವರ್ಷಗಳ ಇತಿಹಾಸವಿದೆ. ಅದರ  ಎದುರಿಗೇ ಸುಗ್ರೀವನ ದೇವಸ್ಥಾನವಿದೆ. ಬಹಳ ವರ್ಷಗಳ ಹಿಂದೆ ಬೆಂಗಳೂರಿನ ನಿವಾಸಿಯೊಬ್ಬರ ಕನಸಿನಲ್ಲಿ ಬಂದ ಸುಗ್ರೀವ `ನಾನು ಕೆಂಪಾಂಬುಧಿ ಕೆರೆಯಲ್ಲಿ ಸಿಗುತ್ತೇನೆ, ನನ್ನನ್ನು ಪ್ರತಿಷ್ಠಾಪಿಸು~ ಎಂದು ಹೇಳಿದ್ದನಂತೆ. ಅದರಂತೆ ಕೆಂಪಾಂಬುಧಿ ಕೆರೆಯಲ್ಲಿ ಸುಗ್ರೀವನ ವಿಗ್ರಹ ಸಿಕ್ಕಿತು. ಜನರು ಅದನ್ನು ತಂದು ಪ್ರತಿಷ್ಠಾಪಿಸಿ ದೇವಸ್ಥಾನ ನಿರ್ಮಿಸಿದರು.

ಸುಗ್ರೀವನ ವಿಗ್ರಹ ಹದಿನಾಲ್ಕು ಅಡಿಗಳಷ್ಟು ಎತ್ತರವಿದೆ. ಅದರ ಪಕ್ಕದಲ್ಲಿ ಆರು ಅಡಿಗಳ ಎತ್ತರದ ವಾಲಿಯ  ವಿಗ್ರಹವಿದೆ. ವೆಂಕಟೇಶ್ವರನ ಎದುರಿಗೆ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಾಪಿಸಿರುವ ಸುಗ್ರೀವ ಮತ್ತು ವಾಲಿಯರ ವಿಗ್ರಹಗಳು ಕೈಮುಗಿದು ನಿಂತ ಭಂಗಿಯಲ್ಲಿವೆ. ಸುಗ್ರೀವನ ವಿಗ್ರಹ ನೋಡಲು ಆಂಜನೇಯನಂತೆ ಕಾಣುತ್ತದೆ. ಆದರೆ ಸೊಂಟದಲ್ಲಿ ಚಿಕ್ಕದೊಂದು ಕತ್ತಿ ಇರಿಸಿಕೊಂಡ ಕೆತ್ತನೆಯಿದೆ. ಮುಖದಲ್ಲಿ ಗಾಂಭೀರ್ಯ ಎದ್ದು ಕಾಣುತ್ತದೆ.

ಪ್ರತಿ ವರ್ಷ ಜೂನ್ ತಿಂಗಳಲ್ಲಿ ವೆಂಕಟೇಶ್ವರ ಸ್ವಾಮಿ ರಥೋತ್ಸವ ನಡೆಯುತ್ತದೆ. ಅಂದು ಸುಗ್ರೀವ ಮತ್ತು ವಾಲಿಯರಿಗೂ ವಿಶೇಷ ಪೂಜೆ ಹಾಗೂ ಅಭಿಷೇಕಗಳು ನಡೆಯುತ್ತವೆ. ಪ್ರತಿ ಅಮಾವಾಸ್ಯೆಯಂದು ಅಭಿಷೇಕ ಮಾಡುತ್ತಾರೆ. ಚರ್ಮ ರೋಗಗಳಿಂದ ಬಳಲುವವರು ಇಲ್ಲಿ ಪವಮಾನಸೂಕ್ತ ಅಭಿಷೇಕ ಮಾಡಿಸಿದರೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಸುಗ್ರೀವ ದೇವಸ್ಥಾನಕ್ಕೆ ಶ್ರಾವಣ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ  ಭಕ್ತರು ಬರುತ್ತಾರೆ. ಉಳಿದ ದಿನಗಳಲ್ಲಿ ಕಡಿಮೆ ಎನ್ನುತ್ತಾರೆ ಅರ್ಚಕ ಎಸ್. ರಾಮನಾಥನ್.

ಬೆಳಿಗ್ಗೆ 6.30ರಿಂದ ಮಧ್ಯಾಹ್ನ 12 ಮತ್ತು ಸಂಜೆ 6ರಿಂದ 8 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಸದಾ ಜನ ಜಂಗುಳಿ ಇರುವ ಬಳೇ ಪೇಟೆಯಲ್ಲಿ ಸುಗ್ರೀವನ ದೇವಸ್ಥಾನ ಇರುವುದು ಬೆಂಗಳೂರಿನ ವಿಶೇಷ. ರಾಮಾಯಣ ಸಾಹಿತ್ಯಾಸಕ್ತರಿಗೆ ಪ್ರಿಯವಾದ ಕಾವ್ಯ. ಸಂಪ್ರದಾಯಸ್ಥರಿಗೆ ಅದು ಪಾರಾಯಣ ಗ್ರಂಥ. ರಾಮಾಯಣದ ಪ್ರಮುಖ ವ್ಯಕ್ತಿಯಾದ ಸುಗ್ರೀವನಿಗೆ ಪೂಜೆ ಸಲ್ಲುತ್ತದೆ ಎನ್ನುವುದು ಮಹತ್ವದ ಸಂಗತಿ. ಈ ದೇವಸ್ಥಾನಕ್ಕೆ ಸಾಂಸ್ಕೃತಿಕ ಮಹತ್ವವೂ ಇದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊಬೈಲ್ ನಂಬರ್: 97413 24593.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT