ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಣೆಗೆ ಸಕಾಲ

Last Updated 14 ಫೆಬ್ರುವರಿ 2011, 16:00 IST
ಅಕ್ಷರ ಗಾತ್ರ

ಚುನಾವಣೆಯಲ್ಲಿನ ಭ್ರಷ್ಟಾಚಾರ, ದುಂದು ವೆಚ್ಚ ಮತ್ತು ಅಪರಾಧದ ಹಿನ್ನೆಲೆ ಹೊಂದಿರುವವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವುದು ಸೇರಿದಂತೆ ಹಲವು ಬಗೆಯ ಅಕ್ರಮಗಳನ್ನು ನಿಯಂತ್ರಿಸಲು ಚುನಾವಣಾ ಕಾಯ್ದೆಗೆ ಮತ್ತೆ ಸಮಗ್ರ ತಿದ್ದುಪಡಿ ತರುವ ಚುನಾವಣಾ ಆಯೋಗದ ಪ್ರಯತ್ನ ಸ್ವಾಗತಾರ್ಹ.

ಮತದಾರರಿಗೆ ಆಮಿಷ ಒಡ್ಡುವುದನ್ನು ತಡೆಯಲು ಮತದಾನಕ್ಕೆ 48 ಗಂಟೆಗಳ ಮುಂಚೆ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡುವ ಮತ್ತು ಮಾಧ್ಯಮಗಳಲ್ಲಿನ ಕಾಸಿಗಾಗಿ ಸುದ್ದಿ ಪ್ರಕಟಣೆಯ ನಿಷೇಧಿಸುವ ಕ್ರಮಗಳು ಪರಿಶೀಲನಾರ್ಹವಾದದ್ದು. ಚುನಾವಣಾ ಸುಧಾರಣೆಗಾಗಿ ಈಗಾಗಲೇ ದಿನೇಶ್ ಗೋಸ್ವಾಮಿ ಆಯೋಗ, ಕಾನೂನು ಸಲಹಾ ಆಯೋಗ, ಅಭ್ಯರ್ಥಿಗಳ ಚುನಾವಣೆ ವೆಚ್ಚವನ್ನು ಸರ್ಕಾರವೇ ಭರಿಸುವ ಸಂಬಂಧ ಇಂದರ್‌ಜಿತ್ ಗುಪ್ತಾ ಸಮಿತಿ ವರದಿ ಸಲ್ಲಿಸಿವೆ. ಇವುಗಳ ಶಿಫಾರಸಿನ ಆಧಾರದ ಮೇಲೆ 1951ರ ಪ್ರಜಾಪ್ರತಿನಿಧಿ ಕಾಯ್ದೆಗೆ ಈಗಾಗಲೇ ಹಲವಾರು ತಿದ್ದುಪಡಿಗಳನ್ನು ತರಲಾಗಿದೆ. ಅಭ್ಯರ್ಥಿಗಳ ಆಸ್ತಿಪಾಸ್ತಿ ವಿವರ ಘೋಷಣೆ ಮತ್ತು ಅವರ ಮೇಲಿನ ಅಪರಾಧಗಳ ಹಿನ್ನೆಲೆ ಕುರಿತ ಪ್ರಮಾಣ ಪತ್ರ ಸಲ್ಲಿಕೆಯಂತಹ ಕ್ರಮಗಳು ಜಾರಿಯಲ್ಲಿವೆ. ಈ ಎಲ್ಲಾ ಕ್ರಮಗಳ ನಡುವೆಯೂ ಚುನಾವಣೆ ವ್ಯವಸ್ಥೆ ದಿನೇ ದಿನೇ ಭ್ರಷ್ಟವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ಆಡಳಿತ ವ್ಯವಸ್ಥೆ ಭ್ರಷ್ಟರು ಮತ್ತು ಅನರ್ಹರ ಕೈಗೆ ಸಿಕ್ಕಿ ನಲುಗುವಂತಾಗಿರುವುದು ಜನತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತಾಗಿದೆ.

ಒಂದು ಕ್ಷೇತ್ರಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವನ್ನು ಸಾಧಿಸಿದಾಗ ಮತ್ತೊಂದು ಕ್ಷೇತ್ರದಲ್ಲಿ ಮರುಚುನಾವಣೆಗೆ ಕಾರಣವಾಗುವುದನ್ನು ತಪ್ಪಿಸಬೇಕಿದೆ. ಮರುಚುನಾವಣೆ ವೆಚ್ಚಕ್ಕೆಂದು ಅಂತಹ ಅಭ್ಯರ್ಥಿಗಳಿಂದ ಹತ್ತು ಲಕ್ಷ ರೂಪಾಯಿವರೆಗೆ ಠೇವಣಿ ಪಡೆಯುವ ಸಲಹೆಯನ್ನು ಜಾರಿಗೆ ತರುವುದು ಅವಶ್ಯ. ಚುನಾವಣೆ ಕಾಲದಲ್ಲಿ ಹಣ ಹಂಚಿಕೆ ಮಾತ್ರವಲ್ಲದೆ, ಮತದಾರರಿಗೆ ಹಲವು ಬಗೆಯ ಉಡುಗೊರೆ ನೀಡುವ ಭ್ರಷ್ಟ ವ್ಯವಸ್ಥೆಯನ್ನು ಸರಿದಾರಿಗೆ ತರಬೇಕಿದೆ.

ಚುನಾವಣೆಗೆ ಸ್ಪರ್ಧಿಸಿ ದುಂದು ವೆಚ್ಚ ಮಾಡುವ ಮತ್ತು ಅಪಾರ ಆಸ್ತಿಪಾಸ್ತಿ ಹೊಂದಿರುವ ಅಭ್ಯರ್ಥಿಗಳ ಸಂಪನ್ಮೂಲದ ಹಿನ್ನೆಲೆಯನ್ನು ಶೋಧಿಸಲು ಆದಾಯ ತೆರಿಗೆ ಇಲಾಖೆಯನ್ನು ಚುರುಕುಗೊಳಿಸಬೇಕಿದೆ. ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಚರ್ಚಿಸಲು ಚುನಾವಣಾ ಆಯೋಗದ ಸಭೆಯಲ್ಲಿ ಭಾಗವಹಿಸಿ ಹತ್ತಾರು ಸಲಹೆಗಳನ್ನು ನೀಡಿ, ಅವುಗಳಿಗೆ ಬದ್ಧರಾಗುವ ಆಶ್ವಾಸನೆಯ ಬೆನ್ನಲ್ಲೇ ಅಕ್ರಮ ಮತ್ತು ಭ್ರಷ್ಟ ಮಾರ್ಗಗಳನ್ನು ಅನುಸರಿಸುವ ಅನೈತಿಕ ಮಾರ್ಗವನ್ನು ರಾಜಕೀಯ ಪಕ್ಷಗಳು ಕೈಬಿಡಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಾಮಾಣಿಕರು ಮತ್ತು ದಕ್ಷರ ಕೈಗೆ ಆಡಳಿತದ ಚುಕ್ಕಾಣಿ ಸಿಗುವಂತೆ ಮಾಡಲು ಚುನಾವಣಾ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ತರಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT