ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸುಧಾರಿತ ತಳಿ ಬಳಸಿ, ಹೆಚ್ಚಿನ ಇಳುವರಿ ಪಡೆಯಿರಿ'

Last Updated 17 ಡಿಸೆಂಬರ್ 2012, 9:23 IST
ಅಕ್ಷರ ಗಾತ್ರ

ಪಾಂಡವಪುರ: ವಿ.ಸಿ.ಫಾರಂನ ಕೃಷಿ ಸಂಶೋಧನಾ ಕೇಂದ್ರವು ಅಭಿವೃದ್ಧಿಪಡಿಸಿರುವ ಸುಧಾರಿತ ಬತ್ತದ ತಳಿಗಳನ್ನು ಬಳಸುವ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಸಹ ವಿಸ್ತರಣಾ ನಿರ್ದೇಶಕ ಡಾ.ಪಿ.ಆರ್.ಕೃಷ್ಣಪ್ರಸಾದ್ ಹೇಳಿದರು.

ತಾಲ್ಲೂಕಿನ ಕನಗನಮರಡಿ ಗ್ರಾಮದ ಜಯರಾಮೇಗೌಡ ಅವರ ಜಮೀನಿನಲ್ಲಿ ಶನಿವಾರ ಬೆಂಗಳೂರು ಕೃಷಿ ವಿವಿ, ವಲಯ ಕೃಷಿ ಸಂಶೋಧನಾ ಕೇಂದ್ರ, ಮಂಡ್ಯದ ವಿ.ಸಿ.ಫಾರಂ ಹಾಗೂ ರಾಜ್ಯ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಗಣಕೀಕೃತ ಬತ್ತದ ಮಾಹಿತಿ ಭಂಡಾರದ ಅರಿವು ಹಾಗೂ ಕೆ.ಸಿ.ಪಿ-1 ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಮಾರು 102.75 ಲಕ್ಷ ಟನ್‌ಗಳಷ್ಟು ಅಕ್ಕಿ ಉತ್ಪಾದಿಸಲಾಗುತ್ತಿದೆ. ಜನಸಂಖ್ಯೆಗನುಗುಣವಾಗಿ 2025ರ ವೇಳೆಗೆ ಉತ್ಪಾದನಾ ಮಟ್ಟವನ್ನು 125 ಮಿಲಿಯನ್ ಟನ್‌ಗೆ ಹೆಚ್ಚಿಸಬೇಕಿದೆ. ಹೀಗಾಗಿ, ಕೃಷಿ ಸಂಶೋಧನಾ ಕೇಂದ್ರವು ಇದುವರೆಗೂ ಸುಮಾರು 32 ಬತ್ತದ ತಳಿಗಳನ್ನು ಅಭಿವೃದ್ದಿಪಡಿಸಿದೆ. ಇದರಲ್ಲಿ ರಕ್ಷಾ, ಕೆಸಿಪಿ ಹಾಗೂ ಕೆಆರ್‌ಎಚ್ ತಳಿಗಳು ಪ್ರಮುಖವಾಗಿವೆ ಎಂದರು. ಬೆಂಕಿ ರೋಗಕ್ಕೆ ಸಹಿಷ್ಣತೆ ಹೊಂದಿರುವ ರಕ್ಷಾ ತಳಿಯ ಕಾಳುಗಳು ಸಣ್ಣದಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿವೆ.

ನೀರಾವರಿ ಕಡಿಮೆ ಇರುವ ಕಾಲುವೆ ಕೊನೆ ಭಾಗಗಳು, ಬಾವಿ ನೀರಾವರಿ ಪ್ರದೇಶಗಳು ಹಾಗೂ ಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಈ ತಳಿ ಹೆಚ್ಚು ಅನುಕೂಲವಾಗಿದ್ದು,  ಎಕರೆಗೆ ಸುಮಾರು 24 ಕ್ವಿಂಟಾಲ್ ಇಳುವರಿ ಪಡೆಯಬಹುದು ಎಂದು ತಿಳಿಸಿದರು. ಕೆಸಿಪಿ ಎಂಬ ಮತ್ತೊಂದು ತಳಿಯ ಬತ್ತವನ್ನು ಪರಿಚಯಿಸಲಾಗಿದ್ದು, ಸುಮಾರು 135 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಈ ಬತ್ತವು ದಪ್ಪವಾಗಿದ್ದು, ಜಯ ತಳಿಯನ್ನು ಹೋಲುತ್ತದೆ. ಎಕರೆಗೆ ಸುಮಾರು 28 ಕ್ವಿಂಟಾಲ್ ಬೆಳೆಯಬಹುದೆಂದರು. ಕೃಷಿ ವಿಜ್ಞಾನಿ ಡಾ.ಎಂ.ಪಿ.ರಾಜಣ್ಣ, ಸಹಾಯಕ ಕೃಷಿ ನಿರ್ದೇಶಕರಾದ ಕೆ.ವಿ.ಶ್ರೀನಿವಾಸ್‌ಶೆಟ್ಟಿ, ಮಹಾದೇವಯ್ಯ, ರೈತ ಜಯರಾಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT