ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸುಪ್ರೀಂ' ಅಂಗಳಕ್ಕೆ ಕುಲಾಂತರಿ ವಿವಾದ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ನಾಲ್ಕು ವರ್ಷಗಳಷ್ಟು ಹಳೆಯದಾದ ಕುಲಾಂತರಿ ಬೆಳೆಗಳ ಪ್ರಯೋಗಕ್ಕೆ ಸಂಬಂಧಿಸಿದ ವಿವಾದ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಕುಲಾಂತರಿ ಬೆಳೆ ಪ್ರಯೋಗ ಕುರಿತಂತೆ ಪರ ಮತ್ತು ವಿರೋಧ ಗುಂಪುಗಳು ಪ್ರಯೋಗಶಾಲೆಯಲ್ಲಿ ಕುಲಾಂತರಿ ಬೆಳೆಯ ಸಾಧಕ-ಬಾಧಕ ಪರೀಕ್ಷೆಗೆ ಸಮ್ಮತಿ ಸೂಚಿಸಿವೆ.

ದೇಶದಲ್ಲಿ ಕುಲಾಂತರಿ ಬೆಳೆಗಳನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೆಪ್ಟೆಂಬರ್ ನಾಲ್ಕನೇ ವಾರ ವಿಚಾರಣೆಗಾಗಿ ಕೈಗೆತ್ತಿಕೊಳ್ಳುವುದಾಗಿ ಕೋರ್ಟ್ ಹೇಳಿದೆ.

ಕುಲಾಂತರಿ ತಳಿಗಳ ಉಪಯೋಗ ಮತ್ತು ದುಷ್ಪರಿಣಾಮ ಪರಿಶೀಲನೆಗೆ ಸುಪ್ರೀಂಕೋರ್ಟ್ ನೇಮಕ ಮಾಡಿದ್ದ ಆರು ಸದಸ್ಯರ ತಜ್ಞರ ಸಮಿತಿ ವಿಭಿನ್ನ ಅಭಿಪ್ರಾಯ ತಳೆದಿರುವುದು ವಿವಾದ ಮತ್ತಷ್ಟು ಜಟೀಲಗೊಳ್ಳಲು ಕಾರಣವಾಗಿದೆ. ಕುಲಾಂತರಿ ತಳಿಯ ಪರ ಮತ್ತು ವಿರೋಧಿ ಗುಂಪುಗಳು ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ತಜ್ಞರ ವಿಭಿನ್ನ ವರದಿ ಮತ್ತು ಭಿನ್ನಾಭಿಪ್ರಾಯವನ್ನು ಸಮರ್ಪಕವಾಗಿ ಬಳಸಿಕೊಂಡಿವೆ.

ತಜ್ಞರ ಸಮಿತಿಯಲ್ಲಿ ಎರಡು ಗುಂಪುಗಳು ಜೂನ್ 30ರಂದು ಸುಪ್ರೀಂಕೋರ್ಟ್‌ಗೆ ಎರಡು ಪ್ರತ್ಯೇಕ ವರದಿಗಳನ್ನು ಸಲ್ಲಿಸಿವೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಮಾಜಿ ಮುಖ್ಯಸ್ಥ ಆರ್.ಎಸ್. ಪರೋಡಾ ಅವರು 15 ದಿನಗಳ ನಂತರ ಪ್ರತ್ಯೇಕ ವರದಿ ಸಲ್ಲಿಸಿದ್ದಾರೆ. ದೇಶದ ಕೃಷಿ ಅಭಿವೃದ್ಧಿಯನ್ನು ಮತ್ತು ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಣಯವನ್ನು ಕೈಗೊಳ್ಳುವಂತೆ ಪರೋಡ ಅವರು ಸುಪ್ರೀಂಕೋರ್ಟ್‌ಗೆ ನೀಡಿದ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ.

ಕೃಷಿ ವಿಶ್ವವಿದ್ಯಾಲಯಗಳ ಪ್ರಯೋಗಶಾಲೆ ಅಥವಾ ನಿರ್ದಿಷ್ಟ ಜಾಗದಲ್ಲಿ ಕುಲಾಂತರಿ ಬೆಳೆ ಪ್ರಯೋಗ ನಡೆಸಲು ಉಭಯ ಗುಂಪುಗಳು ಸಮ್ಮತಿ ಸೂಚಿಸಿವೆ. ವಿಷಯ ತಜ್ಞರ ನಿರಂತರ ಮೇಲುಸ್ತವಾರಿ ಮತ್ತು ನಿಯಂತ್ರಣದಲ್ಲಿ ಈ ಪ್ರಯೋಗ ಕೈಗೊಳ್ಳಲು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.

ಅಕ್ಕಿ, ಗೋಧಿ, ಆಲೂಗಡ್ಡೆ, ಟೊಮೆಟೊ, ಬದನೆ, ಕಬ್ಬು, ಹೂಕೋಸು, ಎಲೆಕೋಸು ಸೇರಿದಂತೆ ಒಟ್ಟು 18 ಕುಲಾಂತರಿ ತಳಿಗಳ ಬಗ್ಗೆ ಪ್ರಯೋಗ ನಡೆಯಲಿದೆ. ನಿಗದಿತ ಪ್ರದೇಶದಲ್ಲಿ ತಜ್ಞರ ಮೇಲುಸ್ತುವಾರಿಯಲ್ಲಿ ಈ ಪ್ರಯೋಗ ನಡೆಯುವುದರಿಂದ ಆಯಾ ರಾಜ್ಯ ಸರ್ಕಾರಗಳ ನಿರಾಪೇಕ್ಷಣಾ ಪತ್ರ ಪಡೆಯುವ ಅಗತ್ಯವಿಲ್ಲ ಎಂದು ಪರೋಡಾ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT