ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂಗೆ ಮನವಿ ಸಲ್ಲಿಸಲು ನಿರ್ಧಾರ

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ವಿಚಾರಣೆ ನಡೆಸಲು ನೇಮಿಸಿದ್ದ ಆಂತರಿಕ ತನಿಖಾ ಆಯೋಗ ರಚನೆಯನ್ನು `ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ' ಎಂದು ಬಾಂಬೆ ಹೈಕೋರ್ಟ್ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಬಿಸಿಸಿಐ ತೀರ್ಮಾನಿಸಿದೆ.

ಶುಕ್ರವಾರ ಇಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಅಷ್ಟು ಮಾತ್ರವಲ್ಲದೇ, ತನಿಖಾ ಆಯೋಗದ ರಚನೆಯನ್ನು ರಾಜೀವ್ ಶುಕ್ಲಾ ಸಾರಥ್ಯದಲ್ಲಿ ನಡೆದ ಐಪಿಎಲ್ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ.

`ಸಭೆಯಲ್ಲಿ ತನಿಖಾ ಆಯೋಗದ ವರದಿ ಬಗ್ಗೆ ಚರ್ಚಿಸಲಾಯಿತು. ಐಪಿಎಲ್ ನಿಯಮಗಳ ಅನುಸಾರವೇ ಆಯೋಗ ರಚಿಸಲಾಗಿದೆ ಎಂಬ ತೀರ್ಮಾನಕ್ಕೆ ಬರಲಾಯಿತು. ಹಾಗಾಗಿ ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಗಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದರು.

`ಬಾಂಬೆ ಹೈಕೋರ್ಟ್ ತೀರ್ಪನ್ನು ಜೇಟ್ಲಿ ಸಭೆಗೆ ವಿವರಿಸಿದರು. ಬಳಿಕ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜಾ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಲು ನಿರ್ಧರಿಸಲಾಯಿತು. ಅಷ್ಟು ಮಾತ್ರವಲ್ಲದೇ, ಐಪಿಎಲ್ ನೀತಿ ಸಂಹಿತೆ ಸಮಿತಿಯಲ್ಲಿ ಹಿಂದೆ ಇದ್ದ ಸಂಜಯ್ ಜಗದಾಳೆ ಹಾಗೂ ಅಜಯ್ ಶಿರ್ಕೆ ಬದಲಿಗೆ ಸಂಜಯ್ ಪಟೇಲ ಮತ್ತು ರವಿ ಸಾವಂತ್ ಅವರನ್ನು ಸೇರಿಸಲಾಯಿತು' ಎಂದು ಬಿಸಿಸಿಐ ಮುಖ್ಯ ಆಡಳಿತಾಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ ನುಡಿದರು.

ಪಂಚತಾರಾ ಹೋಟೆಲ್‌ನಲ್ಲಿ ನಡೆದ ಸಭೆಗೆ ಹಾಜರಾಗಿ ತಮ್ಮ ನಿಲುವು ಪ್ರಕಟಿಸಲು ಎನ್.ಶ್ರೀನಿವಾಸನ್ ಪ್ರಯತ್ನಿಸಿದರು. ಆದರೆ ಅವರು ಪಾಲ್ಗೊಳ್ಳುವುದನ್ನು ಹಲವು ಸದಸ್ಯರು ಆಕ್ಷೇಪಿಸಿದರು ಎನ್ನಲಾಗಿದೆ.

ಆದರೆ `ಸಭೆಯ ಬಳಿಕ ಶ್ರೀನಿವಾಸನ್ ಅವರನ್ನು ಐಪಿಎಲ್ ಆಡಳಿತ ಮಂಡಳಿಯು ಆಹ್ವಾನಿಸಿತು. ಸಮಸ್ಯೆ ಬಗೆಹರಿಯುವವರೆಗೆ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿಯಲು ಜಗಮೋಹನ್ ದಾಲ್ಮಿಯ ಅವರಿಗೆ ತಿಳಿಸಲಾಯಿತು' ಎಂದೂ ಸಂಜಯ್ ಹೇಳಿದರು.

ಬಿಸಿಸಿಐ ನೇಮಿಸಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಟಿ.ಜಯರಾಮ್ ಚೌಟ ಹಾಗೂ ಆರ್.ಬಾಲಸುಬ್ರಮಣ್ಯಂ ಅವರನ್ನೊಳಗೊಂಡ ಆಂತರಿಕ ತನಿಖಾ ಆಯೋಗವು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ತಾನ ರಾಯಲ್ಸ್ ಯಾವುದೇ ತಪ್ಪು ಎಸಗಿಲ್ಲ ಎಂದು ದೋಷಮುಕ್ತಗೊಳಿಸಿ ವರದಿ ನೀಡಿತ್ತು. ಆದರೆ ಆಯೋಗದ ನೇಮಕವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಮತ್ತೊಂದು ಆಯೋಗ ರಚಿಸುವ ಬಗ್ಗೆ ಬಿಸಿಸಿಐ ಉಪಾಧ್ಯಕ್ಷರಾದ ನಿರಂಜನ್ ಷಾ ಹಾಗೂ ಚಿತ್ರಕ್ ಮಿತ್ರ ಒತ್ತಡ ಹೇರಿದರು ಎನ್ನಲಾಗಿದೆ. ಆದರೆ ಇದಕ್ಕೆ ಹೆಚ್ಚಿನ ಸಮಯ ಹಿಡಿಯುವುದರಿಂದ ಶ್ರೀನಿವಾಸನ್ ಮತ್ತೆ ಅಧಿಕಾರ ವಹಿಸಿಕೊಳ್ಳಲು ತಡವಾಗಬಹುದು ಎಂಬ ಆತಂಕವನ್ನು ವಕೀಲರು ವ್ಯಕ್ತಪಡಿಸಿದರು. ಹಾಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದೇ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT