ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನಾರಾಯಣಸ್ವಾಮಿ ಜಾತ್ರೆಗೆ ಚಾಲನೆ

Last Updated 24 ಜನವರಿ 2012, 5:25 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಅಪ್ಪಟ ಬುಡಕಟ್ಟು ಸಂಸ್ಕೃತಿಗಳ ಪ್ರತಿಬಿಂಬ ಹಾಗೂ ಮ್ಯಾಸನಾಯಕರ ಆರಾಧ್ಯದೈವ ಎಂದು ಬಿಂಬಿತವಾಗಿರುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹಿರೇಹಳ್ಳಿಯಲ್ಲಿ ಸೋಮವಾರ ದಡ್ಡಿ ಸೂರ್ಯನಾರಾಯಣ ಸ್ವಾಮಿ ಜಾತ್ರೆಗೆ ವೈಭವದ ಚಾಲನೆ ದೊರೆಯಿತು.

ಪ್ರತಿವರ್ಷ ಪುಷ್ಯಮಾಸ ಮುಗಿದ ಮಾರನೇ ಸೋಮವಾರ ಈ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾನುವಾರ ಜಾತ್ರೆ ಇದರ ಆಂಗವಾಗಿ ಕೆಲ ಧಾರ್ಮಿಕ ವಿಧಿವಿಧಾನಗಳು ನಡೆದವು.  ಮ್ಯಾಸನಾಯಕರು ಕುಲ ದೇವರಿಗೆ ಪೂಜೆ ಸಲ್ಲಿಸುವ ಕಾರ್ಯಗಳ ಆರಂಭಕ್ಕೆ ಈ ಜಾತ್ರೆ ಮೂಲಕ ಅಧಿಕೃತ ಚಾಲನೆ ಸಿಗುತ್ತಿದೆ.

ಮ್ಯಾಸನಾಯಕರ ಒಳ ಪಂಗಡಗಳಾದ ನಲಬಾಪುಲು, ಗುಡ್ಡದ ಎತ್ತಿನವರು, ನಲದಂಮ ನಾಯಕ ಹಾಗೂ ಮಲ್ಲಿಕೇತಿ ಎತ್ತಿನವರು ಒಳ ಪಂಗಡದವರಿಗೆ ಸೂರ್ಯನಾರಾಯಣ ಸ್ವಾಮಿ ಮನೆದೇವರು ಆಗಿದೆ ಎಂದು ಜನಾಂಗದ ಮುಖಂಡರು ತಿಳಿಸಿದರು.

ಸೋಮವಾರ ಸಂಜೆ ದೇವಸ್ಥಾನದಿಂದ ಎರಡು ಕಿ.ಮೀ ದೂರದಲ್ಲಿನ ರುದ್ರಮ್ಮನಹಳ್ಳಿ ಕ್ರಾಸ್ ಬಳಿ ಕಾಶಿತೀರ್ಥ ತರಲು ನೂರಾರು ಬಿಂದಿಗೆ ಸಹಿತವಾಗಿ ಭಕ್ತರು ದೇವರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಲಾಯಿತು.
 
ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಸಮೀಪದಿಂದ ಕರೆದುಕೊಂಡು ಬರಲಾಗಿದ್ದ ಈ ದೇವರಿಗೆ ಸಂಬಂಧಪಟ್ಟ ನೂರಾರು ದೇವರ ಎತ್ತುಗಳನ್ನು ವಾಡಿಕೆಯಂತೆ ಉತ್ತಮ ಆರೋಗ್ಯ ಕೋರಿ ದೇವರ ಮುಂದೆ ಓಡಿಸಿದ ನಂತರ ದೇವರನ್ನು ದೇವಸ್ಥಾನಕ್ಕೆ ವಾಪಸ್ ಕರೆದುಕೊಂಡು ಬರಲಾಯಿತು.

ನಂತರ ದೇವಸ್ಥಾನ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ರುದ್ರಮ್ಮನಹಳ್ಳಿ ಕ್ರಾಸ್ ಬಳಿ ತರಲಾಗಿರುವ ಕಾಶಿತೀರ್ಥದಲ್ಲಿ ಸೋಮವಾರ ರಾತ್ರಿ ಗುಗ್ಗರಿ ಬೇಯಿಸಿ ಸ್ವಾಮಿಗೆ ಅಭಿಷೇಕ ಮಾಡಲಾಗುವುದು. ಆದ್ದರಿಂದ ಈ ಜಾತ್ರೆಗಳನ್ನು ಆಡುಭಾಷೆಯಲ್ಲಿ `ಗುಗ್ಗರಿಹಬ್ಬ~ ಎಂದು ಕರೆಯಲಾಗುತ್ತದೆ.

ಬೆಳಗಿನ ಜಾವ 4ಕ್ಕೆ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ 6ಕ್ಕೆ ದೇವರ ಎತ್ತುಗಳನ್ನು ಓಡಿಸುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT