ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲತೆ: ಧರ್ಮ, ರಾಜಕೀಯ ಪ್ರತಿರೋಧಕ

ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಮತ
Last Updated 15 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಧರ್ಮ ಹಾಗೂ ರಾಜಕೀಯಕ್ಕೆ ಪ್ರತಿ­ರೋಧ ತೋರುವ ಶಕ್ತಿ ಸೃಜನಶೀಲತೆಗಿದೆ’ ಎಂದು ವಿಮ­ರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯ­ಪಟ್ಟರು.

ಬೆಂಗಳೂರು ನಾರ್ಥ್‌ ಎಜುಕೇಷನ್‌ ಸೊಸೈಟಿ  ನಗರದಲ್ಲಿ  ಶನಿವಾರ ಆಯೋಜಿಸಿದ್ದ ‘ಜನ್ನ ಸಾಹಿತ್ಯ ಚರಿತ್ರೆ’ ರಾಷ್ಟ್ರೀಯ ವಿಚಾರ ಸಂಕಿರಣ­ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಧರ್ಮ ಹಾಗೂ ರಾಜಕೀಯ ಜನ ಸಾಮಾನ್ಯರನ್ನು ಸದಾ ಅಂಕೆಯಲ್ಲಿಟ್ಟು-­ಕೊಳ್ಳಲು ಹವಣಿಸುತ್ತವೆ. ಆದರೆ, ಅದನ್ನು ಪ್ರತಿರೋಧಿಸುವ ಶಕ್ತಿ ಸೃಜನಶೀಲತೆಗಿದೆ. ಪಂಪ, ರನ್ನ, ಜನ್ನ, ರತ್ನಾಕರ ವರ್ಣಿ ಮೊದಲಾದ ಕವಿಗಳು ತಮ್ಮ ಸೃಜನಶೀಲತೆಯ ಮೂಲದ ಈ ಪ್ರತಿರೋಧವನ್ನು ತೋರುತ್ತಲೇ ಬಂದಿದ್ದಾರೆ. ಸೃಜನಶೀಲತೆ ಜಡತೆ-ಯನ್ನು ನೀಗಿಸಿ ಚೈತನ್ಯ ತುಂಬಬಲ್ಲದು’ ಎಂದು ನುಡಿದರು.

‘ಕನ್ನಡ ಸಾಹಿತ್ಯ ಚರಿತ್ರೆಯನ್ನು ಇಂದು ಹೊಸದಾಗಿ ಬರೆಯಬೇಕಿದೆ. ಹಳೆಯ ಕವಿಗಳ ಕಾವ್ಯದ ರೂಪಕಗಳ ಮಾದರಿಯಲ್ಲಿ ಇಂದಿನ ಸಂದರ್ಭವನ್ನು ಎದುರಿಸ­ಬೇಕಾಗಿದೆ. ಕನ್ನಡದಲ್ಲಿ ಉತ್ತಮ ಸಾಹಿತ್ಯವಿದೆ. ಆದರೆ, ಅದನ್ನು ಜನರಿಗೆ ತಲುಪಿಸಬೇಕಾದ ಕಾರ್ಯ ಸರಿ­ಯಾಗಿ ಆಗುತ್ತಿಲ್ಲ. ಇಂದಿನ ಹಲವರಿಗೆ ಹಳ­ಗನ್ನಡ­ವನ್ನು ಸರಿಯಾಗಿ ಓದಲೂ ಬರುವುದಿಲ್ಲ. ಹೀಗಾಗಿ ನಮ್ಮ ಸಾಹಿತ್ಯ ಪರಂಪರೆಯ ಸರಿಯಾದ ಪರಿಚಯ ಇಂದಿನ ಪೀಳಿಗೆಗೆ ಆಗುತ್ತಿಲ್ಲ’ ಎಂದು ಅಭಿಪ್ರಾಯ ಪಟ್ಟರು.

‘ಸಾರ್ವತ್ರಿಕವಾಗಿ ಮನುಷ್ಯನನ್ನು ಬಾಧಿಸುವ ಧರ್ಮ, ಕಾಮ, ಪ್ರೇಮಗಳಂಥ ವಿಷಯಗಳನ್ನು ಜನ್ನ ತನ್ನ ಕಾವ್ಯಗಳಲ್ಲಿ ತಂದಿದ್ದಾನೆ. ಈ ಮೂಲಕ ಜನ್ನ ಎಲ್ಲ ಕಾಲಕ್ಕೂ ಸಲ್ಲುವ, ಬಗೆದಷ್ಟೂ ಅರಿವಿನ ವಿಸ್ತಾರಕ್ಕೆ ದಕ್ಕುವ ಕವಿಯಾಗಿದ್ದಾನೆ’ ಎಂದು ಸಾಹಿತಿ  ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ನುಡಿದರು.

‘ರಾಜ್ಯದಲ್ಲಿ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ಹೆಚ್ಚಾಗಿದೆ. ವಿಷಯಕ್ಕೆ ಒಂದೊಂದು ವಿಶ್ವವಿದ್ಯಾಲಯ­ಗಳು ಸ್ಥಾಪನೆಯಾಗಿ, ವಿಶ್ವವಿದ್ಯಾಲಯಗಳ ಪರಿ­ಕಲ್ಪನೆಯೇ ಬದಲಾಗಿದೆ. ಸಾಮಾಜಿಕ ಬದಲಾವಣೆ­ಗಾಗಿ ಶಿಕ್ಷಣವನ್ನು ಬಳಸಿಕೊಳ್ಳಬೇಕಾದ್ದು ಇಂದಿನ ಅಗತ್ಯ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹೇಳಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನಾ.ಮೊಗಸಾಲೆ, ಡಾ.ಕೆ.ಆರ್‌.ಗಣೇಶ್‌, ರಂಜಾನ್‌ ದರ್ಗಾ, ಡಾ.­ನರ­ಹಳ್ಳಿ ಬಾಲಸುಬ್ರಹ್ಮಣ್ಯ, ಪ್ರೊ.ಎಸ್‌.ಜಿ.­ಸಿದ್ದರಾಮಯ್ಯ ಮತ್ತು ಪ್ರೇಮಾಭಟ್‌ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT