ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲತೆಯ ಅಗ್ನಿದಿವ್ಯ

Last Updated 25 ಜೂನ್ 2011, 19:30 IST
ಅಕ್ಷರ ಗಾತ್ರ

ನಾನು ಕೇರಳದ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ರಾಜಕಾರಣಿ, ತತ್ವಜ್ಞಾನಿ ಎಲ್ಲವೂ ಆಗಿದ್ದ ಇ.ಎಂ.ಎಸ್. ನಂಬೂದಿರಿಪಾಡ್ ಅವರು ಸಾಹಿತ್ಯದ ಬಗ್ಗೆ ಮಾತನಾಡುವುದಕ್ಕೆ ವಿಶ್ವವಿದ್ಯಾಲಯಕ್ಕೆ ಬಂದರು. ದೀಪ ಹಚ್ಚಿ ಉದ್ಘಾಟನೆ ಮಾಡಬೇಕಾದ ಕಾರ್ಯಕ್ರಮವದು. ಇ.ಎಂ.ಎಸ್.ಗೆ ವಯಸ್ಸಾಗಿತ್ತು. ಕೈ ನಡುಗುತ್ತಿತ್ತು. ಎಷ್ಟು ಪ್ರಯತ್ನಿಸಿದರೂ ದೀಪದ ಬತ್ತಿಗಳು ಹೊತ್ತಿಕೊಳ್ಳಲೇ ಇಲ್ಲ.

ಅವರೂ ಹಟ ಬಿಡದವರಂತೆ ದೀಪ ಹಿಡಿದುಕೊಂಡು ನಿಂತರು. ನಾನು ಆಗ `ನೀವು ಕಮ್ಯುನಿಸ್ಟರು ಈ ಬತ್ತಿಗಳಿಗೆ ಎಷ್ಟು ಎಣ್ಣೆ ಕುಡಿಸಿಬಿಟ್ಟ್ದ್ದಿದೀರೆಂದರೆ ಅವುಗಳಿಗೆ ಹೊತ್ತಿಕೊಳ್ಳಲು ಆ ಎಣ್ಣೆಯೇ ಅವಕಾಶ ಕೊಡುತ್ತಿಲ್ಲ~ ಎಂದೆ. ಇ.ಎಂ.ಎಸ್.ಗೂ ನಗು ಬಂತು. ಸಭೆಯಲ್ಲಿದ್ದವರೆಲ್ಲಾ ನಕ್ಕರು.
***
ಪಶ್ಚಿಮಕ್ಕೆ ಎದುರಾದಾಗ ನಿಜವಾಗಿಯೂ ನಾವು ಅಲ್ಲಿಂದ ಹೊಸತಾಗಿ ಕಲಿತದ್ದೇನು ಎಂಬುದರ ಕುರಿತು ನಾನು, ಅಡಿಗರು, ಸುಬ್ಬಣ್ಣ ಯಾವಾಗಲೂ ಚರ್ಚಿಸುತ್ತಿದ್ದೆವು. ಇದೂ ಅಂಥದ್ದೇ ಒಂದು ನೆನಪು. ಹ್ಯಾಮ್ಲೆಟ್ ಬಗ್ಗೆ ಬರೆದ ಎಲಿಯಟ್ `ಈ ಕೃತಿ ಯಾಕೆ ಸೋಲುತ್ತದೆ ಎಂದರೆ ಇದರ `ಆಬ್ಜೆಕ್ಟಿವ್ ಕೊರಿಲೇಟಿವ್~ ಸರಿಯಾಗಿಲ್ಲ~ ಎಂದಿದ್ದ. ಹ್ಯಾಮ್ಲೆಟ್‌ನ ಒಳಗಿನ ಕಥೆ ಷೇಕ್ಸ್‌ಪಿಯರ್ ಹೇಳುವ ತಾತ್ವಿಕತೆಯನ್ನು ಧರಿಸುವಷ್ಟು ದೊಡ್ಡ ಕಥನ ಶಕ್ತಿಯನ್ನು ಹೊಂದಿಲ್ಲ ಎಂಬುದು ಈ ಮಾತಿನ ಅರ್ಥ. ಅಡಿಗರು ಇದರ ಕುರಿತಂತೆ ಬಹಳ ತಲೆಕೆಡಿಸಿಕೊಂಡು `ಆಬ್ಜೆಕ್ಟಿವ್ ಕೋರಿಲೇಟಿವ್~ ಎಂಬುದನ್ನು ಕನ್ನಡದ ಸಂದರ್ಭದಲ್ಲಿ `ವಸ್ತು ಪ್ರತಿರೂಪ~ ಎಂದು ಗ್ರಹಿಸಿ ಹೇಳಿದ್ದರು. ನಾವೆಲ್ಲರೂ ಇದೇ ಪದವನ್ನು ಉಪಯೋಗಿಸುತ್ತಿದ್ದೆವು. ಒಂದು ದಿನ ಇದ್ದಕ್ಕಿದ್ದಂತೆಯೇ ಈ ವಿಷಯಕ್ಕೆ ಸಂಬಂಧಿಸಿದಂತೆ ನನಗೊಂದು ಸತ್ಯ ಹೊಳೆಯಿತು. ಇದು ಬೇರೆಯವರಿಗೂ ಹೊಳೆದಿರಬಹುದು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ `ವಿಭಾವ~ ಎಂಬ ಶಬ್ದವಿದೆ. ಭಾವವೊಂದು ಸಾಹಿತ್ಯ ಕೃತಿಯಾಗುವಾಗ ಅದಕ್ಕೊಂದು ವಿಭಾವದ ಅಗತ್ಯವಿದೆ. ಅಂದರೆ ಆ ಭಾವವನ್ನು ಧರಿಸಿಬಲ್ಲ ಒಂದು ಅಥವಾ ಅದನ್ನು ಹೊತ್ತು ಹೆರಬಲ್ಲ ಒಂದು ದೇಹದ ಅಗತ್ಯವಿದೆ- ಅದೇ ವಿಭಾವ. ನಾವು ಎಲಿಯಟ್‌ನಿಂದ ತಿಳಿದುಕೊಂಡ `ಆಬ್ಜೆಕ್ಟಿವ್ ಕೋರಿಲೇಟಿವ್~ ಕೂಡಾ ಇದೇ ವಿಭಾವ. ಈ ವಿಷಯವನ್ನು ನಾನು ಡಿ.ಆರ್.ನಾಗರಾಜ್‌ಗೆ ಹೇಳಿದಾಗ ಹಳತು ಮತ್ತು ಹೊಸತನ್ನೆಲ್ಲಾ ಒಟ್ಟಿಗೇ ಇಟ್ಟುಕೊಂಡು ಒಂದು ಸಂಶ್ಲೇಷಣೆಗೆ ಪ್ರಯತ್ನಿಸುತ್ತಿದ್ದ ಅವನು `ವಿಭಾವ~ ಎಂಬ ಹೆಸರಿನಲ್ಲಿ ಒಂದು ಮ್ಯಾಗಝೀನ್ ಕೂಡಾ ಹೊರತಂದ.
ಬಹುಶಃ ಎಲಿಯಟ್ `ಆಬ್ಜೆಕ್ಟಿವ್ ಕೊರಿಲೇಟಿವ್~ ಬಗ್ಗೆ ತಿಳಿದುಕೊಂಡದ್ದು ಅವನು ಸಂಸ್ಕೃತದ ಬಗ್ಗೆ ಓದುತ್ತಿದ್ದಾಗ. ಅಂದರೆ ಅವನು `ವಿಭಾವ~ವನ್ನು `ಆಬ್ಜೆಕ್ಟಿವ್ ಕೊರಿಲೇಟಿವ್~ ಎಂದು ತನ್ನ ಸಂಸ್ಕೃತಿಗೆ ಅನುವಾದಿಸಿಕೊಂಡಿದ್ದ. ಅದು ನಮಗೆ ಹಿಂದಕ್ಕೆ ಬರುವಾಗ `ವಸ್ತು ಪ್ರತಿರೂಪ~ವಾಯಿತು. ನಮ್ಮ ಜ್ಞಾನ ಪರಂಪರೆಯಲ್ಲಿ ಹೀಗೆ ಒಬ್ಬರ ಜೇಬಿನಲ್ಲಿ ಮತ್ತೊಬ್ಬರ ಕೈಯಿರುತ್ತೆ. ಒಂದು ದೀಪ ಇನ್ನೊಂದು ದೀಪವನ್ನು ಹಚ್ಚುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲಿ ನಾವು ಹೊಸತೊಂದನ್ನು ಪಡೆದುಕೊಳ್ಳುತ್ತಿರುತ್ತೇವೆ.

ಇದಕ್ಕೆ ಸಂಬಂಧಿಸಿದಂತೆ ಬುದ್ಧನ ದೃಷ್ಟಾಂತವೊಂದಿದೆ. ಪುನರ್ಜನ್ಮ, ಮತ್ತೆ ಮತ್ತೆ ಹುಟ್ಟುವುದು ಮುಂತಾದವುಗಳ ಅರ್ಥವೇನು ಎಂದು ಕೇಳಿದಾಗ ಬುದ್ಧ ಅಲ್ಲಿದ್ದ ಒಂದು ದೀಪವನ್ನು ಬಳಸಿ ಮತ್ತೊಂದು ದೀಪವನ್ನು ಹೊತ್ತಿಸುತ್ತಾನೆ. ಆಗ ಹೊತ್ತಿಕೊಂಡ ದೀಪವನ್ನು ತೋರಿಸಿ ಶಿಷ್ಯನನ್ನು `ಇದು ಅದೇ ದೀಪವೇ?~ ಎಂದು ಕೇಳುತ್ತಾನೆ.

ಅವನು `ಅಲ್ಲ~ ಎಂದು ಉತ್ತರಿಸುತ್ತಾನೆ. ಇದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿದಾಗ ಶಿಷ್ಯ `ಹೌದು~ ಎಂದು ಉತ್ತರಿಸುತ್ತಾನೆ. ಮೊದಲಿಗೆ ಈ ದೀಪ ಅದೇ ದೀಪವಲ್ಲ ಎಂಬುದನ್ನು ಭೌತಿಕವಾದ ಅರ್ಥದಲ್ಲಿ ಹೇಳಿದ್ದ ಶಿಷ್ಯ, `ಅದೇ ದೀಪ~ ಎಂದು ಹೇಳುವ ಹೊತ್ತಿಗೆ ಅದು ಬೆಳಗುತ್ತಿರುವ ಜ್ಯೋತಿಯನ್ನು ಪರಿಗಣಿಸಿರುತ್ತಾನೆ.

ಪಶ್ಚಿಮದ ಜೊತೆಗಿನ ಮುಖಾಮುಖಿಯಲ್ಲಿ ನಾವು ಪಡೆದುಕೊಂಡ ಹೊಸತನ್ನು ನಾನು ಅರ್ಥ ಮಾಡಿಕೊಳ್ಳುವುದು ಹೀಗೆ: ದೀಪವನ್ನು ದೀಪ ಹೊತ್ತಿಸಿತು; ಹಾಗೆಂದು ಹೊತ್ತಿಕೊಂಡ ದೀಪ ಹೊತ್ತಿಸಿದ ದೀಪವೇ? ಇದಕ್ಕಿರುವ ಹೌದು ಮತ್ತು ಅಲ್ಲ. ನಮ್ಮ ಮೀಮಾಂಸೆಗಳು ಇರಬೇಕಾದದ್ದೇ ಹೀಗೆ. ಇದನ್ನೇ ನಾನು `ವಿಭಾವ~ ಪರಿಕಲ್ಪನೆಯ ಕುರಿತು ಸುಬ್ಬಣ್ಣನಿಗೆ ಹೇಳಿದ್ದೆ. `ವಿಭಾವ~ ಎಂಬುದು ನಮ್ಮ ಪರಿಕಲ್ಪನೆಯೇ. ಇದನ್ನು ನಾವು ಬಳಸುತ್ತಿದ್ದಾಗ, ಬಳಸುತ್ತಿದ್ದ ಕ್ರಮದಲ್ಲಿ ಏನು ಹೇಳಲು ಸಾಧ್ಯವಾಗಿರಲಿಲ್ಲವೋ ಅದನ್ನು ನಾವು `ಆಬ್ಜೆಕ್ಟಿವ್ ಕೊರಿಲೇಟಿವ್~ ಆಗಿ ನಮಗೆ ಬಂದಾಗ ಹೇಳಲು ಸಾಧ್ಯವಾಯಿತು.
***
ಭಾರತೀಯ ಸಿನಿಮಾ ಇರುವ ಹಾಗೆಯೇ ಕನ್ನಡ ಸಿನಿಮಾ ಅನ್ನುವುದೂ ಒಂದಿದೆ. ಇದು ಕನ್ನಡಕ್ಕೆ ತನ್ನದೇ ಆದ ಕೆಲವು ಕೊಡುಗೆಗಳನ್ನು ಕೊಟ್ಟಿದೆ. ಇದು ಕೇವಲ ಸಿನಿಮಾ ಕಲೆಗೆ ಕನ್ನಡ ಕೊಟ್ಟ ಕಾಣಿಕೆಯಷ್ಟೇ ಅಲ್ಲ.

ಡಾ.ರಾಜ್‌ಕುಮಾರ್ ಅವರು ಇಡೀ ಕರ್ನಾಟಕಕ್ಕೆ ಒಪ್ಪಿಗೆ ಆಗುವ ಒಂದು `ಶಿಷ್ಟ~ ಅಂದರೆ ಸ್ಟ್ಯಾಂಡರ್ಡ್ ಆದ ಭಾಷೆಯನ್ನು ಕೊಟ್ಟರು. ಹೀಗೊಂದು ಭಾಷೆ ಬೇಕು ಅಂತ ಎಲ್ಲರಿಗೂ ಆಸೆ ಇತ್ತು. ಬೇಂದ್ರೆ ಕೂಡಾ ಇದರ ಬಗ್ಗೆ ಯೋಚನೆ ಮಾಡಿದ್ದರು. ಧಾರವಾಡದ ಕನ್ನಡ, ಬಿಜಾಪುರದ ಕನ್ನಡ, ಬೀದರ್‌ನ ಕನ್ನಡ ಇವೆಲ್ಲಾ ಸೇರಿ ಒಂದು ಹೆದ್ದಾರಿಯಾಗಲಿ ಎಂದು ಅವರು ಭಾವಿಸಿದ್ದರು. ಆದರೆ ಇಂಥದ್ದೊಂದು ಕನ್ನಡ ಸೃಷ್ಟಿಯಾಗಿರಲಿಲ್ಲ. ಮೈಸೂರಿನಿಂದ ಬೀದರ್‌ನ ತನಕದ ಎಲ್ಲರಿಗೂ ಅರ್ಥವಾಗುವ ಒಂದು ಕನ್ನಡ ಭಾಷೆಯೊಂದನ್ನು ಪರಿಕಲ್ಪನೆಯ ಮಟ್ಟದಿಂದ ವಾಸ್ತವವಾಗಿಸಿ ಆಡುಮಾತಿನಲ್ಲಿ ತೋರಿಸಿಕೊಟ್ಟದ್ದು ಡಾ.ರಾಜ್‌ಕುಮಾರ್. ಕೃತಕವಾಗಬಹುದಾಗಿದ್ದ ಆ ಕನ್ನಡವನ್ನು ಅವರು ಸಹಜವಾಗಿ ಆಡಿ ತೋರಿಸಿಕೊಟ್ಟರು. ಇದು ಕನ್ನಡ ಸಿನಿಮಾ ಕನ್ನಡ ಭಾಷೆಗೆ ಕೊಟ್ಟ ದೊಡ್ಡ ಕಾಣಿಕೆ.

ಬಹಳ ಘನವಾದ ಪದ್ಯದ ಸಾಲೊಂದನ್ನು ನಾವು ಎತ್ತಿಕೊಂಡರೆ ಅದು ಬಹಳ ಕೃತಕವಾಗಿರುತ್ತದೆ. ಇಲ್ಲಿ `ಕೃತಕ~ ಎಂಬುದನ್ನು ನಾನು ನಕಾರಾತ್ಮಕ ಅರ್ಥದಲ್ಲಿ ಬಳಸುತ್ತಿಲ್ಲ. ಇಲ್ಲಿ ಕಾವ್ಯಕ್ರಿಯೆಗೆ ಅಗತ್ಯವಾದ ವಿಭಾವವನ್ನು ಸೃಷ್ಟಿಸುವ ಒಂದು ಮಾರ್ಗವಾಗಿ ಇಲ್ಲಿ ಕೃತಕತೆ ಇರುತ್ತದೆ. ಅಂದರೆ ಭಾಷೆಯ `ಘೆಟ್ಟಞ~ನಿಂದ ಆಚೆಗಿರುತ್ತದೆ. ಸಿನಿಮಾ ಕೂಡಾ ಅಷ್ಟೇ, ಅದು ತುಂಬಾ ರಿಯಲಿಸ್ಟಿಕ್ ಆಗಿದ್ದರೆ ಸಿನಿಮಾ ಆಗುವುದಿಲ್ಲ. ರಿಯಲಿಸಂ ಅನ್ನು ಬಳಸಿಕೊಳ್ಳುತ್ತಲೇ ಅದನ್ನು ಮೀರಿದಾಗಲೇ ಅಲ್ಲೊಂದು ಮ್ಯಾಜಿಕ್ ಸಂಭವಿಸುವುದು.

ರಾಜ್‌ಕುಮಾರ್ ಪೌರಾಣಿಕ ಮತ್ತು ಸಾಮಾಜಿಕ ವಸ್ತುಗಳುಳ್ಳ ಸಿನಿಮಾಗಳೆರಡರಲ್ಲೂ ಅಭಿನಯಿಸಿದವರು. ಈ ಎರಡೂ ಬಗೆಯ ಕಥಾನಕಗಳನ್ನು ಅಭಿನಯಿಸುವಾಗಲೂ ಅವರು ಬಳಸುತ್ತಿದ್ದ ಭಾಷೆ ಒಂದೇ. ಸಣ್ಣ ಪುಟ್ಟ ಸಾಂದರ್ಭಿಕ ವ್ಯತ್ಯಾಸಗಳಿದ್ದವಷ್ಟೇ.

ಕನ್ನಡ ಮಾತನಾಡುವ ಪ್ರದೇಶಗಳೆಲ್ಲಾ ಒಂದಾಗಿ ಒಂದು ರಾಜ್ಯವಾದರೆ ಆ ಎಲ್ಲಾ ಭಾಗದವರಿಗೂ ಅರ್ಥವಾಗುವ ಒಂದು ಕನ್ನಡವನ್ನು ಅವರು ಅಭಿನಯಿಸುತ್ತಿದ್ದ ಪಾತ್ರಗಳು ಮಾತನಾಡುತ್ತಿದ್ದವು. ಇದೊಂದು ಬಗೆಯಲ್ಲಿ ಕನ್ನಡವನ್ನು, ಕನ್ನಡದ ಮನಸ್ಸನ್ನು ಕಟ್ಟುವ ಕೆಲಸ.

ಕನ್ನಡ ಸಿನಿಮಾ ಮತ್ತೊಂದು ಬಗೆಯಲ್ಲೂ ಕನ್ನಡವನ್ನು ಕಟ್ಟಿದೆ. ಇದನ್ನು ಹೇಳುವ ಹೊತ್ತಿಗೆ ನನಗೆ ಅಲ್ಲಮನ ಒಂದು ವಚನ ನೆನಪಾಗುತ್ತಿದೆ. `ಹಿಂದಣ ಕವಿಗಳು ನನ್ನ ತೊತ್ತಿನ ಮಕ್ಕಳು. ಮುಂದಣ ಕವಿಗಳು ಕರುಣೆಯ ಕಂದಮ್ಮಗಳು~ ಎಂದೆಲ್ಲಾ ಹೇಳಿ ಕೊನೆಯಲ್ಲಿ  `ನೀ ಮಾವ ನಾ ಅಳಿಯ~ ಎಂದು ಮುಗಿಸುತ್ತಾನೆ. ಆ ಅರ್ಥದಲ್ಲಿ ಗಿರೀಶ್ ಕಾಸರವಳ್ಳಿ ಕನ್ನಡ ಸಾಹಿತ್ಯದ ಅಳಿಯ.

ನಾನು ಈ ಮಾತನ್ನು ಹೇಳುತ್ತಿರುವುದಕ್ಕೆ ಒಂದು ಕಾರಣವಿದೆ. ಭೈರಪ್ಪನವರ ಯಾವ ಕಾದಂಬರಿಯನ್ನೂ ಓದಿ ಇದೊಂದು ಕಲಾಕೃತಿ ಎಂದು ಅನ್ನಿಸಿರಲಿಲ್ಲ. ಇವು ಓದುಗರನ್ನು ಭಾವಾಕ್ರಮಮಣಕ್ಕೆ ಒಳಪಡಿಸುವ ಹುನ್ನಾರದ ಕೃತಿಗಳು ಮಾತ್ರ ಅನ್ನಿಸಿದ್ದವು. ಅವು ಶೋಧವಲ್ಲ; ಮಂಡನೆ. ಆಕ್ರಮಣಕಾರಿ ಡಿಬೇಟ್ ತರಹದ ಮಂಡನೆ. ಅಂಥ ಕೃತಿಗಳನ್ನೂ ಕೂಡ ಅದರ ಒಳಗಿರುವ ಶಕ್ತಿಯನ್ನು ಗಮನಿಸಿ (ಭೈರಪ್ಪನವರು ಶಕ್ತ ಲೇಖಕರೂ ಆದ್ದರಿಂದ) ಸಿನಿಮಾ ಮಾಡಿ ಅದರ ಮರು ಓದನ್ನು ಸಾಧ್ಯ ಮಾಡಿದವರು ಗಿರೀಶ್ ಕಾಸರವಳ್ಳಿ. ಸತ್ಯಜಿತ್ ರಾಯ್ ಇದೇ ಕೆಲಸವನ್ನು ಟ್ಯಾಗೋರ್ ಹಾಗೂ ಉಳಿದ ಬಂಗಾಳಿ ಸಾಹಿತಿಗಳಿಗಾಗಿ ಮಾಡಿದ್ದಾರೆ. ಆದರೆ ಅವರಿಗೆ ಕಾಸರವಳ್ಳಿಯವರಷ್ಟು ಲಾಗ ಹಾಕಬೇಕಾದ ಅಗತ್ಯವಿರಲಿಲ್ಲ ಎಂಬುದಷ್ಟೇ ವ್ಯತ್ಯಾಸ.

ಬೇರೆಲ್ಲರಿಗಿಂತ ಗಿರೀಶ್ ವಿಶಿಷ್ಟರಾಗುವುದು ಇಲ್ಲಿಯೇ. ಭೈರಪ್ಪನವರಂಥ ಲೇಖಕರ ಕೃತಿಯನ್ನೂ ಗಿರೀಶ್ ಸಿನಿಮಾ ಭಾಷೆಯಲ್ಲಿ ಓದಿ ಮಂಡಿಸುವ ಹೊತ್ತಿಗೆ ಅದರೊಳಗಿನ ಧಾರಣದ ತಿರುಳು ಮಾತ್ರ ಹೊರಬಂದು ಒಂದು ಉತ್ತಮ ಕಲಾಕೃತಿಯಾಗಿಬಿಟ್ಟಿರುತ್ತದೆ. ಈ ಮಾತು ಹೇಳುವ ಮೂಲಕ ನಾನು ಬೈಯಿಸಿಕೊಳ್ತೀನಿ ಅನ್ನೋದು ನನಗೆ ಗೊತ್ತಿದೆ. ಇದಕ್ಕೆ ಹೆದರುವುದರಲ್ಲಿ ಅರ್ಥವಿಲ್ಲ. ಮಹತ್ವದ ಸಮಕಾಲೀನರ ಬಗ್ಗೆ ಹೇಳಲೇಬೇಕಲ್ಲವೇ? ವೈಚಾರಿಕ ವಿಕೃತಿಗಳಿಗೆ ಪ್ರತಿಸ್ಪಂದಿಸಲೇ ಬೇಕಲ್ಲವೇ?

ಕಲಾಕೃತಿ ಎಂದು ಅನ್ನಿಸದಂಥ ಭೈರಪ್ಪನವರ ಕೃತಿಯನ್ನು ಆರಿಸಿಕೊಂಡಾಗಲೂ ಗಿರೀಶ್ ಮತ್ತೊಂದು ಮಾಧ್ಯಮದಲ್ಲಿ ಕಲಾಕೃತಿಯೊಂದನ್ನು ಸೃಷ್ಟಿಸಿದ್ದು ಹೇಗೆ? ನನಗೆ ತೋಚುವ ಉತ್ತರ ಇದು: ಭೈರಪ್ಪ ಒಬ್ಬ ದೊಡ್ಡ ಲೇಖಕರೂ ಹೌದು. ಆದರೆ ಅವರ ಐಡಿಯಾಲಜಿ ಅವರೊಳಗಿನ ಲೇಖಕನನ್ನು ನುಂಗಿ ಹಾಕುತ್ತಿದೆ. ಒಂದು ರೀತಿಯಲ್ಲಿ ಅವರು `ರಾಹುಗ್ರಸ್ತ~ನಾದ ಲೇಖಕ. ಈ `ರಾಹು~ವಿನಿಂದ ಭೈರಪ್ಪನವರನ್ನು ಬಿಡುಗಡೆ ಮಾಡಿದ್ದು ಗಿರೀಶ್ ಕಾಸರವಳ್ಳಿ. ಭೈರಪ್ಪ ಸಮರ್ಥರಾದ ಲೇಖಕರಾಗಿರುವುದರಿಂದ ಅವರನ್ನು `ಐಡಿಯಾಲಜಿ~ಯೆಂಬ `ರಾಹು~ವಿನಿಂದ ಬಿಡುಗಡೆ ಮಾಡಿದ ತಕ್ಷಣ ಕೃತಿಯ ಒಳಗಿರುವ ಕಲೆ ಗೋಚರಿಸತೊಡಗುತ್ತದೆ. ನಮ್ಮ ಕೆಲವು ಎಡಪಂಥೀಯ ಲೇಖಕರೂ ಕೂಡಾ ಅವರ ಅಬ್ಬರದ ಮಾತಿನ ರತಿಯಲ್ಲಿ `ಕೇತು ಗ್ರಸ್ತ~ರಾಗಿರುತ್ತಾರೆ. ಒಟ್ಟಿನಲ್ಲಿ ಎಲ್ಲವೂ ಬೆಳಕನ್ನು ಮಾಯಮಾಡುವ ಗ್ರಹಣಗಳೇ.

ಗಿರೀಶ್ ನನ್ನ `ಘಟಶ್ರಾದ್ಧ~ ಕಥೆಯನ್ನು ಸಿನಿಮಾ ಮಾಡುವಾಗ ನಾನು ಹೇಳಿದ್ದಕ್ಕಿಂತ ಹೆಚ್ಚಿನದ್ದನ್ನು ಅವರು ಅದರಲ್ಲಿ ಓದಿದ್ದಾರೆ. ಬೋಳಿಸಿದ ತಲೆಯ ವಿಧವೆಯ ಕಥೆಯನ್ನು `ಕೇತು ಗ್ರಸ್ತ~ರಿಗೆ ಆಪ್ಯಾಯಮಾನವಾಗುವಂತೆ ಸಿನಿಮಾದ ಕೊನೆಯಲ್ಲಿ ಬೋಳಿಸಿದ ತಲೆಯ ಹೆಣ್ಣಾಗಿ ಮನಕರಗುವಂತೆ ತೋರಿಸುತ್ತಾರೆ. ಇದು ನನಗೆ ಅಷ್ಟು ಇಷ್ಟವಾಗದ ಸಿನಿಮೀಯ ಬದಲಾವಣೆ.

ಆದರೆ, ಇನ್ನೊಂದು ಅದ್ಭುತ ಬದಲಾವಣೆ ಇದೆ. ನಾಣಿಗೆ ಕಂದಾಚಾರ  ಮೀರಿ ಧೈರ್ಯ ಬರುವ ಘಳಿಗೆ. ಅವನು ನಾಗರ ಕಲ್ಲನ್ನು ಮುಟ್ಟುವ ಘಳಿಗೆಯೇ ಅವನ ಅಸ್ಮಿತೆ ಬೆಳೆಯುವ ಘಳಿಗೆ ಎಂದು ನಾನು ಕೊಂಚ ಗ್ರಹಿಸಿದ್ದೆ. ಅದನ್ನು ಗಿರೀಶ್ ಇನ್ನಷ್ಟು ಗಟ್ಟಿಯಾಗಿಸಿ ಒಂದೇ ಕಲ್ಲಿನ ಬದಲಿಗೆ ಹತ್ತು ನಾಗರ ಕಲ್ಲನ್ನು ಮುಟ್ಟಿಸಿಬಿಡುತ್ತಾರೆ.

ಬರಹಕ್ಕೂ ದೃಶ್ಯ ಮಾಧ್ಯಮಕ್ಕೂ ಇರುವ ವ್ಯತ್ಯಾಸ ಇದು. ಬರಹದಲ್ಲಿ ಒಂದು ಮಾತಿನಲ್ಲಿ ಆಗಿಬಿಡುವುದಕ್ಕೆ ಸಿನಿಮಾದಲ್ಲಿ ಒಂದು ಸುದೀರ್ಘ ದೃಶ್ಯ ಬೇಕಾಗುತ್ತದೆ. ಇದಕ್ಕೆ ಬದಲಾದ ಮಾತೂ ಇಲ್ಲಿ ನಿಜವೇ. ಈ ಮಾಧ್ಯಮಾಂತರದಲ್ಲಿ ಆಗಿರುವ ಎಲ್ಲಾ ಬದಲಾವಣೆಗಳನ್ನೂ ನಾನು ಒಪ್ಪಿಕೊಳ್ಳುತ್ತಿದ್ದೇನೆಂದಲ್ಲ. ಆದರೆ ಈ ಬದಲಾವಣೆಯಲ್ಲಿ ಅದು ಹೆಚ್ಚು ಅರ್ಥವಾಗುವ ಹಾಗೆ ಆಗಿರುವುದನ್ನು ಗಮನಿಸಿದ್ದೇನೆ. `ಸಂಸ್ಕಾರ~ ಸಿನಿಮಾದಲ್ಲೂ ಹೀಗೇ ಆಗಿದೆ. ನನ್ನ ಕಾದಂಬರಿಯಲ್ಲಿ ನಾರಣಪ್ಪನ ಹೆಣ ಅಮೂರ್ತವಾಗಿ ಉಳಿದುಕೊಂಡಿರುತ್ತದೆ. ಮುಸ್ಲಿಮರಿಂದ ಚಂದ್ರಿ ಅದನ್ನು ಸುಡಿಸಿಬಿಟ್ಟಿದ್ದಾಳೆಂದು ಯಾರಿಗೂ ಗೊತ್ತಿಲ್ಲ. ಅಗ್ರಹಾರದ ಎಲ್ಲರ ಮನಸ್ಸಿನೊಳಗೆ, ಪ್ರಾಣೇಶಾಚಾರ್ಯರ ಮನಸ್ಸಿನೊಳಗೆ ಇರುವ ಹೆಣ ಅದು. ಆದರೆ ಸಿನಿಮಾದಲ್ಲಿ ಸಸ್ಪೆನ್ಸ್‌ಗಾಗಿ ಗಿರೀಶ್ ಕಾರ್ನಾಡ್ ಮತ್ತು ಪಟ್ಟಾಭಿ ನಿಜವಾದ ಹೆಣವನ್ನೇ ಉಳಿಸಿಕೊಂಡಿದ್ದಾರೆ. ಇದನ್ನು ನನಗೆ ಒಪ್ಪಲು ಸಾಧ್ಯವಿಲ್ಲ. ಇದು ಸಿನಿಮಾ ಮತ್ತು ಸಾಹಿತ್ಯದ ನಡುವಣ ಪ್ರೀತಿಯ ಜಗಳವೂ ಹೌದು. ಒಂದು ವೇಳೆ ಬರ್ಗ್‌ಮನ್ ಈ ಕಥೆಯನ್ನು ಆರಿಸಿಕೊಂಡು ಸಿನಿಮಾ ಮಾಡಿದ್ದರೆ ಹೆಣ ಅಮೂರ್ತವಾಗಿಯೇ ಇರುತ್ತಿತ್ತು ಅನ್ನಿಸುತ್ತದೆ.

ಬರ್ಗ್‌ಮನ್‌ನಲ್ಲಿ ಇರುವ `ಡಾರ್ಕ್ ಏರಿಯಾ~ ಗಿರೀಶ್ ಕಾಸರವಳ್ಳಿಯವರಲ್ಲಿ ಇಲ್ಲ. ಇದು ಯಾಕಿಲ್ಲ ಎಂದು ಸೂಕ್ಷ್ಮವಾಗಿ ಆಲೋಚಿಸಿದರೆ ಒಂದು ಸಾಂಸ್ಕೃತಿಕ ಪ್ರಶ್ನೆ ಎದುರಾಗುತ್ತದೆ. ಭಾರತದ ಕಥನ ಪರಂಪರೆಯಲ್ಲೇ ಈ `ಡಾರ್ಕ್ ಏರಿಯಾ~ ಇಲ್ಲ.
 
ಪಶ್ಚಿಮ ಯಾವುದನ್ನು `ಈವಿಲ್~ ಎಂದು ಭಾವಿಸುತ್ತದೆಯೋ ಅಂಥದ್ದೊಂದು ಪರಿಕಲ್ಪನೆಯೇ ನಮ್ಮಲ್ಲಿ ಇಲ್ಲ. ಶಿವಮೊಗ್ಗದ ವಿಶ್ವವಿದ್ಯಾಲಯದಲ್ಲಿ ಹೊಸತೊಂದು ವಿಭಾಗವನ್ನೇ ಸೃಷ್ಟಿಸಿರುವ ಅಂತರರಾಷ್ಟ್ರೀಯ ಬುದ್ಧಿಜೀವಿಯೊಬ್ಬರು ಇದನ್ನು, `ನಮ್ಮಲ್ಲಿ `ಈವಿಲ್~ ಇಲ್ಲ. ಯಾಕೆಂದರೆ ಇಲ್ಲಿ `ರಿಲಿಜನ್~ ಇಲ್ಲದ್ದರಿಂದ `ಈವಿಲ್~ ಇರಲೇ ಇಲ್ಲ~ ಎಂದು ವಾದಿಸಬಹುದು. ಅದನ್ನು ನಾನು ಒಪ್ಪುವುದಿಲ್ಲ. 

ಪಶ್ಚಿಮ `ಈವಿಲ್~ ಎಂಬುದನ್ನು ಹಿಟ್ಲರ್‌ನಿಂದ ಆರಂಭಿಸಿ ದುರಾಸೆಯಿಂದ ಹುಟ್ಟಿದ ಎಲ್ಲಾ ಯುದ್ಧಗಳ ರೂಪದಲ್ಲಿ ನೋಡಿದೆ. ಅಷ್ಟೇಕೆ, ಈ ದುರಾಸೆಯಿಂದ ಎಷ್ಟೆಷ್ಟೋ ದೇಶಗಳ ಮೇಲೆ ದಾಳಿ ಮಾಡಿ ಅಲ್ಲಿ ಸಂಸ್ಕೃತಿಯನ್ನೇ ನಾಶ ಮಾಡಿ ಕ್ರಿಶ್ಚಿಯಾನಿಟಿಯನ್ನು ಹೇರಿದ ಕ್ರೌರ್ಯ ಕೂಡಾ ಒಂದು ಬಗೆಯ `ಈವಿಲ್~. ಒಂದರ್ಥದಲ್ಲಿ ಪಶ್ಚಿಮದ ಈ ಸಾಮ್ರಾಜ್ಯ ವಿಸ್ತರಣೆಯ ಪ್ರಯತ್ನವೇ ಒಂದು ರೀತಿಯಲ್ಲಿ `ಈವಿಲ್~ ಅನ್ನು ಆಧಾರವಾಗಿಟ್ಟುಕೊಂಡಿದ್ದ ಪ್ರಕ್ರಿಯೆ. ಪಶ್ಚಿಮದ ನಾಗರಿಕತೆಯ ಮಹತ್ ಚೈತನ್ಯಗಳು ಈ ಎಲ್ಲಾ  `ಈವಿಲ್~ಗಳಿಗೆ ಮುಖಾಮುಖಿಯಾಗಿ ಅವನ್ನು ಎದುರಿಸಿವೆ.

ನಮ್ಮಲ್ಲಿ `ಈವಿಲ್~ನ ಕಲ್ಪನೆ ಇಲ್ಲ. ಇಲ್ಲಿರುವುದು ಹ್ಯೂಬ್ರಿಸ್ ಅಥವಾ ದುರಹಂಕಾರ. ಅಂದರೆ ಒಂದು ಸಹಜ ವಿನಯವನ್ನು ಮೀರುವ ಗುಣ. ನಮ್ಮ ರಾಕ್ಷಸರು ಈ ಬಗೆಯ ದುರಹಂಕಾರಿಗಳು. ದೇವತೆಗಳಿಗಿರುವುದೆಲ್ಲವೂ ತಮಗೂ ಎಂದು ಜಗಳಕ್ಕಿಳಿದವರು. ಇವುಗಳನ್ನು ಬರೆದ ಆ ಕಾಲದ ಲೇಖಕರು ರಾಕ್ಷಸರ ದುರಹಂಕಾರವನ್ನು ತಪ್ಪು ಎಂದರು. ಆದರೆ ದೇವತೆಗಳ ದುರಹಂಕಾರವನ್ನು ಕ್ಷಮಿಸಿದರು. ಒಬ್ಬ ದೊಡ್ಡ ಲೇಖಕ ಈ ಮಿತಿಯನ್ನು ಮೀರಿ ಅವುಗಳ ಜೊತೆಗೆ ಮುಖಾಮುಖಿಯಾಗಬೇಕು. ನಮ್ಮಲ್ಲಿ ಕೂಡಾ ಭೂತದ ಜೊತೆಗೆ ಮುಖಾಮುಖಿಯಾಗುವ ಪ್ರಯತ್ನಗಳು ನಡೆದಿವೆ. ಕುವೆಂಪು ರಾವಣನ ಜೊತೆ ಮುಖಾಮುಖಿಯಾಗುತ್ತಾರೆ. ಆದರೆ ಅವರು ಭಾರತೀಯ ಸಂಸ್ಕೃತಿಯಲ್ಲಿರುವ ಎಲ್ಲವನ್ನೂ ಒಪ್ಪಿಕೊಳ್ಳುವ ಗುಣವೊಂದರ ದೃಷ್ಟಿಯಲ್ಲಿ ಈ ಮುಖಾಮುಖಿ ನಡೆಸಿದ್ದಾರೆ. ರಾವಣ ಕೂಡಾ ಕುವೆಂಪು ಅವರ ಕೃತಿಯಲ್ಲಿ ಸೀತೆಯ ಮಗುವಾಗಿಬಿಡುತ್ತಾನೆ. ಇದು ಭಾರತೀಯ ಸಂಸ್ಕೃತಿಯ ಒಂದು ದೊಡ್ಡ ರೂಪಕ. ಆದರೆ ಒಬ್ಬ ಲೇಖಕನಾಗಿ ನಾನು ಇದನ್ನು ಬೇರೊಂದು ಬಗೆಯಲ್ಲಿ ಮುಖಾಮುಖಿಯಾಗಲು ಬಯಸುತ್ತೇನೆ. `ಈವಿಲ್~ ಇದೆ ಎಂದಾದರೆ ಅದನ್ನು `ಈವಿಲ್~ ಆಗಿಯೇ ಎದುರಿಸಬೇಕು. ಕಾಫ್ಕಾ ಇದನ್ನು ತನ್ನ ಸಂಸ್ಕೃತಿಯಲ್ಲಿ ಮಾಡುತ್ತಾನೆ.

ಒಬ್ಬ ಭಾರತೀಯ ಲೇಖಕನಾಗಿ ಪಶ್ಚಿಮದಲ್ಲಿ ನನಗೆ ಅನ್ಯವಾದದ್ದನ್ನು ನೋಡಬೇಕೆಂದಿದ್ದರೆ ಪಶ್ಚಿಮದ ಲೇಖಕರು `ಈವಿಲ್~ ಅನ್ನು ನಿರ್ವಹಿಸುವ ಬಗೆಯನ್ನು ನೋಡಬೇಕು. ಅಲ್ಲಿಯೂ ಭಾರತೀಯರಂತೆಯೇ ಕೊಂಚ ಬೋಳೆ ಅನ್ನಿಸುವ ರೀತಿಯಲ್ಲಿ `ಈವಿಲ್~ ಅನ್ನು ನಿರ್ವಹಿಸಿರುವ ಉದಾಹರಣೆಗಳಿವೆ. `ಗ್ರೇಟ್‌ಡಿಕ್ಟೇಟರ್~ನ ಮೂಲಕ ಚಾಪ್ಲಿನ್ ಹಿಟ್ಲರ್‌ನನ್ನು ಒಂದು ನಗಲು ಅರ್ಹವಾದ ಪಾತ್ರವಾಗಿಸಿಬಿಡುತ್ತಾನೆ. ಈ ಕಾಲದಲ್ಲಿ ಹಿಟ್ಲರ್ ಯಹೂದ್ಯರನ್ನು ಸುಡುತ್ತಿದ್ದ ಎಂಬುದನ್ನು ನೆನಪಿಸಿಕೊಂಡು ಚಾಪ್ಲಿನ್‌ನ ಚಿತ್ರಣವನ್ನು ನೋಡಬೇಕು. ನನ್ನ ಮಟ್ಟಿಗೆ ಚಾಪ್ಲಿನ್‌ನದ್ದು ಭಾರತೀಯ ಮನಸ್ಸು. ಇದು ಲೀಲಾ ಜಗತ್ತು. ಇದರ ಒಂದು ಸಂದರ್ಭದಲ್ಲಿ ಹಿಟ್ಲರ್ ಬಂದಿದ್ದಾನೆ. ಆಮೇಲೆ ಅವನು ಹೋಗುತ್ತಾನೆ ಎಂಬ ಗ್ರಹಿಕೆ ಇದೆ. ಇದೊಂದು ದೊಡ್ಡ ದರ್ಶನವಲ್ಲವೇ ಎಂದು ಯಾರಾದರೂ ಕೇಳಬಹುದು. ನನ್ನ ಉತ್ತರ ಹೌದು ಎಂಬುದೇ. ಆದರೆ ನಾನೇ ಸಂಕಟಕ್ಕೊಳಗಾಗಿದ್ದ ಸಂದರ್ಭದಲ್ಲಿ ಅಥವಾ ನಾನೇ ಸಾಯುತ್ತಿರುವ ಯಹೂದ್ಯರ ಸ್ಥಾನದಲ್ಲಿದ್ದರೆ ಇದನ್ನು ದೊಡ್ಡ ದರ್ಶನ ಎಂದು ಒಪ್ಪಿಕೊಳ್ಳಲು ಸಾಧ್ಯವೇ?

ಇಯಾಗೋಗೆ ಡೆಸ್ಡೆಮೋನಾಳ ಮೇಲೆ ಪ್ರೀತಿಯೂ ಇರಲಿಲ್ಲ. ದ್ವೇಷವೂ ಇರಲಿಲ್ಲ. ಆದರೆ ಒಥೆಲೋ ಮತ್ತು ಅವಳ ನಡುವಿನ ಪ್ರೀತಿಗೆ ಅಡ್ಡಿಯಾಗಬೇಕು. ಅವರಿಬ್ಬರೂ ಕಷ್ಟಪಡುವುದನ್ನು ನೋಡಿ ಸಂತೋಷಿಸಬೇಕು ಅನ್ನುವಂಥ ಒಂದು ಪಾತ್ರವನ್ನು ಷೇಕ್ಸ್‌ಪಿಯರ್ ಸೃಷ್ಟಿಸಿದ್ದಾನೆ. ಇದೊಂದು ಬಗೆಯಲ್ಲಿ `ಈವಿಲ್~ಗೆ ಮುಖಾಮುಖಿಯಾಗುವ ಪ್ರಯತ್ನ. ಭಾರತೀಯ ಸಿನಿಮಾಗಳಲ್ಲಿ ನನಗೆ ಇದು ಕಂಡಿಲ್ಲ.
ಯೂರೋಪಿನ ಸಿನಿಮಾಗಳಲ್ಲಿ ಇದು ಇದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲಿನ ಸಾಹಿತ್ಯದಲ್ಲಂತೂ ಇದೆ. ಭೂಮಿಯ ಶಾಖ ಹೆಚ್ಚಾಗಿ ಭೂಮಿಯ ಸಮಸ್ತ ಜೀವಿಗಳೂ ನಾಶವಾಗುವ ಒಂದು ಸ್ಥಿತಿಯನ್ನು ಸೃಷ್ಟಿಸುವುದಕ್ಕಾಗಿ ಎಲ್ಲಾ ವಿಜ್ಞಾನಿಗಳೂ ಒಟ್ಟಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇವರ‌್ಯಾರೂ ವೈಯಕ್ತಿಕವಾಗಿ ಕೆಟ್ಟವರಲ್ಲ. ಆದರೆ ಇವರು ಮಾಡುತ್ತಿರುವುದು? ಪ್ರಕೃತಿ ಸೃಷ್ಟಿಸಿದ ಜೀವಿಗಳಲ್ಲೆಲ್ಲಾ ಅತ್ಯಂತ ನೀಚನೆಂದರೆ `ಮನುಷ್ಯ~ ಎಂದು ಹೇಳಬೇಕನ್ನಿಸುತ್ತದೆ. ಆದರೆ ಇದೇ ಮಾತಿಗೆ ಸಂಬಂಧಿಸಿದಂತೆ ದಾಸ್ತಯೋವಸ್ಕಿ `ಮನುಷ್ಯನಾಗಿಯೇ ಈ ಮಾತು ಹೇಳಬೇಕಾಗಿ ಬಂದಿರುವುದು ಇನ್ನೂ ದೊಡ್ಡ ನೀಚತನ ಅನ್ನಿಸುತ್ತಿದೆ~ ಎನ್ನುತ್ತಾನೆ. ಇದೇ ನಿಜವಾದ ಸೃಜನಶೀಲ ವ್ಯಕ್ತಿಯೊಬ್ಬನಿಗಿರುವ ದೊಡ್ಡ ಸವಾಲು. ಈ ಪ್ರಶ್ನೆಯನ್ನು ಎತ್ತಲಾಗದವನು ಭಾರತೀಯ ಸಂಸ್ಕೃತಿಯ ಸುಧಾರಣಾವಾದಿ ಯುಗದಲ್ಲೇ ಬದುಕಿಬಿಡುತ್ತಾನೆ.

ಈ ಸ್ಥಿತಿಯಲ್ಲೂ ಅತ್ಯಂತ ಭೀಕರವಾದ ಪ್ರಯೋಗಗಳನ್ನು ತನ್ನ ಮೇಲೇ ಮಾಡಿಕೊಳ್ಳುವ ಧೈರ್ಯವಿದ್ದದ್ದು ಗಾಂಧೀಜಿಗೆ. ಅವರಿಗೆ ಕ್ರೌರ್ಯಕ್ಕೂ ಕಾಮಕ್ಕೂ ಸಂಬಂಧವಿದೆ ಎಂದೇನೋ ಹೊಳೆದುಬಿಟ್ಟಿತ್ತು. ಇದ್ದು ತಪ್ಪೋ ಸರಿಯೋ ಎಂಬ ಚರ್ಚೆ ಈಗ ಬೇಡ. ಇದಕ್ಕೆ ಅವರು ನವಾಖಲಿಯಲ್ಲಿ ಮುಖಾಮುಖಿಯಾಗಿದ್ದು ಹೇಗೆ?

ಹುಡುಗಿಯರ ಜೊತೆ ಮಲಗಿ ತನ್ನಲ್ಲಿ ಇನ್ನೂ ಕಾಮ ಉಳಿದಿದೆಯೇ ಎಂದು ಪರೀಕ್ಷಿಸಿಕೊಳ್ಳುವ ಮೂಲಕ. ಆಚಾರ್ಯ ಕೃಪಲಾನಿ ಒಮ್ಮೆ ಗಾಂಧೀಜಿಯ ಬಳಿ, `ನೀವೇನೋ ನಿಮ್ಮನ್ನು ಪರೀಕ್ಷಿಸಿಕೊಳ್ಳುತ್ತೀದ್ದೀರಿ ಆ ಹೆಣ್ಣು ಮಕ್ಕಳ ಮನಸ್ಸು ಏನಾಗಿರಬಹುದು~ ಎಂಬ ಪ್ರಶ್ನೆಯನ್ನೆತ್ತಿದ್ದಾಗ ಗಾಂಧೀಜಿ ಬದಲಾದರು. ಗಾಂಧಿ ನಮ್ಮ ಕಾಲದ ಮಹಾ ಕ್ರಿಯೇಟಿವ್ ಜೀನಿಯಸ್. ಇಂಥವರೇ ಈ ಬಗೆಯ ಅತಿಗಳಿಗೆ ಮುಂದಾಗುವುದು. ಈವಿಲ್ ನನ್ನೊಳಗೂ ಇದೆಯೇ ಎಂಬ ಪ್ರಶ್ನೆ ಅವರನ್ನು ಕಾಡಿತ್ತು.

ದಾಸ್ತಯೋವಸ್ಕಿಗೂ ಅಷ್ಟೇ. ತಾನು ಅಂದುಕೊಳ್ಳುತ್ತಿರುವ ಕೆಡಕು, ಗುರುತಿಸುತ್ತಿರುವ ಕೆಡಕು, ಸಂಕಟ ತನ್ನೊಳಗೂ ಇದೆಯೇ ಎಂಬ ಪ್ರಶ್ನೆ ಅವನಿಗಿತ್ತು. ಈ ಬಗೆಯ ಪ್ರಶ್ನೆಗೆ ಎದುರಾಗಿ ಭಾರತೀಯ ಸಿನಿಮಾ ರೂಪುಗೊಂಡಿಲ್ಲ. ಅಷ್ಟೇಕೆ ಏಷ್ಯಾದ ಸಿನಿಮಾ ಕೂಡಾ ರೂಪುಗೊಂಡಿಲ್ಲ. ಧರ್ಮದ ಬಗ್ಗೆ ಅನುಮಾನ ಬಂದಾಗಲೆಲ್ಲಾ ಮಹತ್‌ಕೃತಿಗಳು ಬಂದವು. ಮಾರ್ಟಿನ್ ಲೂಥರ್‌ನ ಕಾಲದ ನಂತರದ ವೈಚಾರಿಕ ಶೋಧಗಳಲ್ಲಿ `ರಿಲಿಜನ್~ ಅನ್ನು ಅನುಮಾನಿಸಿದ್ದರಿಂದ ಮಹತ್‌ಕೃತಿಗಳು ಬಂದವು.

ಹಾಗೆಯೇ ಎಡಪಂಥೀಯರು ಸೋವಿಯತ್ ರಷ್ಯಾದಲ್ಲೂ ಬಂಗಾಳದಲ್ಲೂ ಅವರ ಕನಸು ನುಚ್ಚು ನೂರಾದದ್ದನ್ನು ಎದುರಿಸದಿದ್ದರೆ ಅವರು `ಕೇತು ಗ್ರಸ್ತ~ರಾಗಿಯೇ ಉಳಿದು, ಆದರೆ `ರಾಹು ಗ್ರಸ್ತ~ ಭೈರಪ್ಪನವರಿಗಿಂತ ಹೆಚ್ಚು ಮಾನವೀಯವಾಗಿ ಉಳಿದಿರುತ್ತಾರೆ. ಸೃಜನಶೀಲತೆಗಿದು ಅಗ್ನಿದಿವ್ಯದ ಕಾಲ.

ಭಾರತದಲ್ಲಿ ಯಾವುದನ್ನು ಭಾರತೀಯತೆ ಎಂದು ಕರೆಯುತ್ತಿದ್ದೇವೆಯೋ ಅಥವಾ ಯಾವುದನ್ನು ಭಾರತೀಯತೆ ಎಂದು ಭ್ರಮಿಸುವಂತೆ ಮಾಡಲಾಗಿದೆಯೋ ಅದರ ಮೂಲ ನೆಲೆಗಟ್ಟನ್ನೇ ಪ್ರಶ್ನಿಸದೇ ಇದ್ದರೆ ನಾವು ಕೇವಲ ಬಡಾಯಿಗಳಾಗಿ ಬಿಡುತ್ತೇವೆ.

ಅದರಿಂದಾಗಿಯೇ ನಾವು ಇವತ್ತು ಬಾಬಾ ರಾಮ್‌ದೇವ್‌ರಂಥರ ಆತ್ಮರತಿಯ ಪ್ರದರ್ಶನವನ್ನು ಕಾಣಬೇಕಾಗಿ ಬಂದಿದೆ. ಅಥವಾ ನಮಗೆ ಇನ್ನೂ ಪ್ರಿಯರಾಗಿ ಉಳಿದಿರುವ ಅಣ್ಣಾ ಹಜಾರೆ ಚಳವಳಿಯೂ ಬಾಯಿ ಬಡಾಯಿಯಾಗಿ ಕೊನೆಯಾಗುವ ಅಪಾಯವಿದೆ. ಪಾಪ ಮುದ್ದಾದ ಮುಖದ ಸಾಯಿಬಾಬ ಸತ್ತ ಮೇಲೆ ಬಹಿರಂಗವಾಗುತ್ತಿರುವ ಸತ್ಯಗಳನ್ನು ಬಡಪಾಯಿಗಳಾದ ಅವರ ಅಸಂಖ್ಯ ಭಕ್ತರು ಹೇಗೆ ಎದುರಿಸಿಯಾರು ಎನ್ನುವುದು ದುಃಖದ ಸಂಗತಿಯೇ. ಅವರ ಅಂತ್ಯ ಸಂಸ್ಕಾರಕ್ಕೆ ಯಾರು ಬರಲಿಲ್ಲ? ಸೋನಿಯಾರೂ ಬಂದರು- ಅವರಂತೂ ಅಪ್ಪಟ ಭಾರತೀಯಳಾಗಲು ಪಡುತ್ತಿರುವ ಶ್ರಮ ಒಂದೆರಡಲ್ಲ!

ಸತ್ಯಶೋಧನೆಯ ಗಾಂಧಿಯುಗ ಭರತ ವರ್ಷದಲ್ಲಿ ಕೊನೆಗೊಂಡಂತೆ ಕಾಣುತ್ತಿದೆ. ಅಗತ್ಯವಾದ ಸಮಾಜ ಸುಧಾರಣೆಯ ಯುಗದ ಪ್ರೇರಣೆಗಳನ್ನು ಅಲ್ಲಗಳೆಯದಂತೆ ಹೊರಬಂದು ಸತ್ಯದರ್ಶನ ಮಾಡಲಾರದ ಸಾಹಿತ್ಯವಾಗಲೀ ಸಿನಿಮಾವಾಗಲೀ ಹೇಳಿದ್ದನ್ನೇ ಹೇಳುತ್ತಿರುತ್ತದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಸುಬ್ಬಣ್ಣ ಆಪ್ತಸಮೂಹಗಳು ಸಂಯುಕ್ತವಾಗಿ ಏರ್ಪಡಿಸಿದ್ದ ಗಿರೀಶ್ ಕಾಸರವಳ್ಳಿ ಅವರ ಸಿನಿಮಾಗಳ ವಿಮರ್ಶೆ, ಸಂವಾದ ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾಡಿದ ಭಾಷಣದ ಪರಿಷ್ಕೃತ ರೂಪ. ಅಕ್ಷರರೂಪ: ಇಸ್ಮಾಯಿಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT