ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಟ್ಲ್‌ಮೆಂಟ್‌ನಲ್ಲಿ ಮತ್ತೆ ಹಾಕಿ ಸಂಭ್ರಮ

ಎಚ್‌ಎಚ್‌ಎ ಆಶ್ರಯದ ಅಂತರರಾಜ್ಯ ಹಾಕಿ ಟೂರ್ನಿಗೆ ಚಾಲನೆ
Last Updated 9 ಜನವರಿ 2014, 6:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸುಮಾರು ಒಂದೂವರೆ ವರ್ಷ ವಿರಾ­ಮದ ನಂತರ ನಗರದ ‘ಹಾಕಿ ಗ್ರಾಮ’ ಸೆಟ್ಲ್‌­ಮೆಂಟ್‌ನಲ್ಲಿ ಮತ್ತೆ ಹಾಕಿ ಕಲರವ. ನಿತ್ಯ ಬೆಳಿಗ್ಗೆ ಹಾಕಿ ಸ್ಟಿಕ್‌ ಮತ್ತು ಆಟಗಾರರ ಕೇಕೆಯ ಶಬ್ದ ಕೇಳಿ ಬರುವ ಇಲ್ಲಿನ ಯಂಗ್‌ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌ ಮೈದಾ­ನದಲ್ಲಿ ಇನ್ನು ನಾಲ್ಕು ದಿನ ಬಿಸಿ­ಲಿನಲ್ಲೂ ಸೆಣಸಾಟ; ಸೋಲು–ಗೆಲುವಿನ ಲೆಕ್ಕಾ­ಚಾರ.

ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹುಬ್ಬಳ್ಳಿ ಹಾಕಿ ಅಕಾ­ಡೆಮಿಯ ಮೊದಲ ಟೂರ್ನಾಮೆಂಟ್‌ ಬುಧವಾರ ಆರಂಭಗೊಂಡಿದ್ದು ಹೊರರಾಜ್ಯದ ಐದು ಸೇರಿ­ದಂತೆ ಒಟ್ಟು ಹತ್ತು ತಂಡಗಳು ಪ್ರಶಸ್ತಿಯ ಕನಸಿ­ನೊಂದಿಗೆ ಕಾದಾಡುತ್ತಿವೆ. ನಗರದಲ್ಲಿ ನಡೆ­ಯುತ್ತಿ­ರುವ ಈ ವರ್ಷದ ಮೊದಲ ಹಾಕಿ ಟೂರ್ನಿ ಇದು.

ಲೀಗ್‌ ಹಂತದಲ್ಲಿ ಪ್ರತಿ ತಂಡಗಳು ಒಂದೊಂದು ಬಾರಿ ಮುಖಾಮುಖಿಯಾಗಲಿದ್ದು ಮೊದಲ ಹಂತ­ದ ಐದು ಪಂದ್ಯಗಳು ಬುಧವಾರ ಮುಕ್ತಾಯ­ಗೊಂಡಿವೆ; ಆಟಗಾರರು ಪ್ರೇಕ್ಷಕರಿಗೆ ಉತ್ತಮ ಹೋರಾ­ಟದ ಸವಿ ಉಣ ಬಡಿಸಿದ್ದಾರೆ. 11ನೇ ತಾರೀಕು ವರೆಗೆ ಪ್ರತಿದಿನ ತಲಾ ಐದು ಪಂದ್ಯಗಳು ನಡೆಯ­ಲಿದ್ದು 12ರಂದು ಫೈನಲ್‌ ಪಂದ್ಯ ನಡೆಯಲಿದೆ.

ಆತಿಥೇಯ ಹುಬ್ಬಳ್ಳಿ ಹಾಕಿ ಅಕಾಡೆಮಿ (ಎಚ್‌ಎಚ್‌ಎ), ಯಂಗ್‌ಸ್ಟಾರ್‌ ಸ್ಪೋರ್ಟ್ಸ್‌ ಕ್ಲಬ್‌, ಕಿಶೋರ್‌ ಕುಮಾರ್‌ ಹಾಕಿ ಕ್ಲಬ್‌, ವಾಸು ಇಲೆವೆನ್‌ ಹಾಗೂ ಗದಗದ ಹನುಮಾನ್‌ ಬ್ಲೆಸಿಂಗ್ಸ್‌ ಸ್ಥಳೀಯ ತಂಡಗಳು. ಕೊಲ್ಹಾಪುರದ ಮಹಾರಾಷ್ಟ್ರ ಕ್ರೀಡಾ ಮಂಡಲ್‌, ಚಾವಾ, ಔರಂಗಾಬಾದ್‌ನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌), ಇಸ್ಲಾಂಪುರದ ಸುಭದ್ರ ಡಾಂಗೆ, ಸಂಜಯ್‌ ಪಾಟೀಲ ಕ್ಲಬ್‌ ಹೊರಗಿನಿಂದ ಬಂದಿರುವ ತಂಡಗಳು.

ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ, ರಾಷ್ಟ್ರೀಯ ಹಾಕಿ ತಂಡದ ಬಾಗಿಲು ಬಡಿಯುತ್ತಿರುವ ಅನೇಕ ಆಟಗಾರರು ಈ ತಂಡಗಳಲ್ಲಿದ್ದು ಹುಬ್ಬಳ್ಳಿ ಮತ್ತು ಸುತ್ತಮುತ್ತಲ ಕ್ರೀಡಾ ಪ್ರೇಮಿಗಳ ಮನತಣಿಸ­ಲಿದ್ದಾರೆ. ಯಂಗ್‌ಸ್ಟಾರ್ ಸ್ಪೋರ್ಟ್ಸ್‌ ಕ್ಲಬ್‌ ತಂಡದಲ್ಲಿ ವಿಶ್ವ ಹಾಕಿ ಸೀರೀಸ್‌ನಲ್ಲಿ ಪಾಲ್ಗೊಂಡ ವಿನಾಯಕ ಬಿಜವಾಡ, ಮಾನುಪ್ಪಟಿ,  ಪ್ರತಿಭಾ­ವಂತ ಡ್ರ್ಯಾಗ್‌ ಫ್ಲಿಕ್ಕರ್‌ ದೀಪಕ್‌ ಬಿಜವಾಡ, ಬಿಜು ಇರಕಲ್‌ ಮುಂತಾದವರು ಇದ್ದಾರೆ. ಹುಬ್ಬಳ್ಳಿ ಹಾಕಿ ಅಕಾಡೆಮಿ ಶಾಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮಕ್ಕಳನ್ನು ಕಣಕ್ಕೆ ಇಳಿಸಿದ್ದು ಈಚೆಗೆ ನಡೆದ ರಾಷ್ಟ್ರಮಟ್ಟದ ಪೈಕಾ ಕ್ರೀಡಾಕೂಟದ ಹಾಕಿಯಲ್ಲಿ ಮಿಂಚಿದ ‘ಪುಟಾಣಿ’ ಹಾಕಿಪಟುಗಳು ಗಮನ ಸೆಳೆಯುತ್ತಿದ್ದಾರೆ.

ಉದ್ಘಾಟನೆ: ಬುಧವಾರ ನಡೆದ ಸರಳ ಸಮಾ­ರಂಭದಲ್ಲಿ ಪಾಲಿಕೆ ಸದಸ್ಯರಾದ ಲಕ್ಷ್ಮಿಬಾಯಿ ಯಮ­ನೂರ ಜಾಧವ ಮತ್ತು ಲಕ್ಷ್ಮಿಬಾಯಿ ಬಿಜ­ವಾಡ ಟೂರ್ನಿಯನ್ನು ಉದ್ಘಾಟಿಸಿದರು. ಕಾಂಗ್ರೆಸ್‌ ಮುಖಂಡ ಬಸವರಾಜ ಅಮ್ಮಿನಬಾವಿ ಅಧ್ಯಕ್ಷತೆ ವಹಿಸಿದ್ದರು. ವಾಸು ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ದೇವೇಂದ್ರ ಬಳ್ಳಾರಿ, ದುರ್ಗಾದೇವಿ ಯುವಕ ಮಂಡಳದ ಅಧ್ಯಕ್ಷ ಶಿವಪ್ಪ ಬಿಜವಾಡ, ಶಾಂತಿನಿಕೇತನ ಯುವಕ ಮಂಡಳದ ಅಧ್ಯಕ್ಷ ಸುರೇಶ ಗೋಕಾಕ, ಹುಬ್ಬಳ್ಳಿ ಹಾಕಿ ಅಕಾಡೆಮಿಯ ಅಧ್ಯಕ್ಷ ರಾಮು ಭಜಂತ್ರಿ, ವಕ್ತಾರ ಬಾಲು ಎಂ. ಹಲ­ಕುರ್ಕಿ ಮತ್ತಿತರರು ಉಪಸ್ಥಿತರಿದ್ದರು.

ಭಾಷಣ ತೊರೆದು ಶುಭ ಕೋರಿದ ಆತಿಥಿಗಳು
ಹುಬ್ಬಳ್ಳಿ ಹಾಕಿ ಅಕಾಡೆಮಿಯ ಅಂತರರಾಜ್ಯ ಹಾಕಿ ಟೂರ್ನಿಯ ಉದ್ಘಾಟನೆಗೆ ಬಂದಿದ್ದ ಅತಿಥಿ­ಗಳು ಭಾಷಣ ಮಾಡಲೊಲ್ಲದೆ ಆಟಗಾರರಿಗೆ ಶುಭ ಹಾರೈಸಿ ಆದರ್ಶ ಮೆರೆದರು.

ಟೂರ್ನಿಯ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದಂತೆ ಮೊದಲ ಪಂದ್ಯದ ಆಟಗಾರರು ಮೈದಾನದಲ್ಲಿ ಸಜ್ಜಾಗಿ ನಿಂತಿದ್ದರು. ಆಟಗಾರ ಪರಿಚಯ ಮಾಡಿಕೊಂಡು ವಾಪಸ್‌ ವೇದಿಕೆ ಮೇಲೆ ಬಂದ ಅತಿಥಿಗಳಲ್ಲಿ ಭಾಷಣ ಮಾಡುವಂತೆ ಸಂಘ­ಟಕರು ಕೋರಿದರು. ಆದರೆ ಮುಖ್ಯ ಅತಿಥಿಗಳಾಗಿದ್ದ ಲಕ್ಷ್ಮಿಬಾಯಿ ಯಮನೂರ ಜಾಧವ ಮತ್ತು ಲಕ್ಷ್ಮಿಬಾಯಿ ಬಿಜವಾಡ ‘ಭಾಷಣ ಬೇಡ, ಆಟ ನಡೆಯಲಿ’ ಎಂದು ಶುಭಾಶಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT