ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ನ್ಯೂನತೆ: ಮರುಪಾವತಿಗೆ ಆದೇಶ

Last Updated 11 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಕೊಪ್ಪಳ: ದ್ವಿಚಕ್ರ ವಾಹನದ ಸರ್ವೀಸಿಂಗ್ ಸಂದರ್ಭದಲ್ಲಿ ಸೇವಾ ನ್ಯೂನತೆಯಿಂದಾಗಿ ವಾಹನದ ಎಂಜಿನ್ ಸೀಜ್ ಆಗಿರುವ ಹಿನ್ನೆಲೆಯಲ್ಲಿ ನಗರದ ಸಾಯಿ ಬಜಾಜ್ ಶೋರೂಂ ಮಾಲಿಕರು ಫಿರ್ಯಾದುದಾರಗೆ ವಾಹನದ ಮೊತ್ತ, ಪರಿಹಾರ ಹಾಗೂ ಪ್ರಕರಣದ ಖರ್ಚು ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.

ತಾಲ್ಲೂಕಿನ ಭಾಗ್ಯನಗರದ ಕೇಶಪ್ಪಾ ಭೀಮಪ್ಪ ಬೂತಾ ಎಂಬುವವರೇ ಈ ಪ್ರಕರಣದ ಅರ್ಜಿದಾರರಾಗಿದ್ದು, ಇವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ವೇದಿಕೆಯ ಅಧ್ಯಕ್ಷ ಕೆ.ವಿ.ಕೃಷ್ಣಮೂರ್ತಿ, ಸದಸ್ಯರಾದ ಶಿವರೆಡ್ಡಿ.ಬಿ.ಗೌಡ ಹಾಗೂ ವೇದಾ ಜೋಷಿ ಅವರನ್ನು ಒಳಗೊಂಡ ಪೀಠ ಮೇಲಿನಂತೆ ತೀರ್ಪು ನೀಡಿದೆ.

ಅರ್ಜಿದಾರ ಕೇಶಪ್ಪ ಬೂತಾ ತಮ್ಮ ದ್ವಿಚಕ್ರ ವಾಹನವನ್ನು ಉಚಿತ ಸರ್ವೀಸ್‌ಗಾಗಿ 9.6.2010ರಂದು ನಗರದ ಸಾಯಿ ಬಜಾಜ್ ಶೋ ರೂಂಗೆ ಬಿಟ್ಟು, ಎಂಜಿನ್ ಆಯಿಲ್ ಬದಲಾಯಿಸಲು ಸೂಚಿಸಿದ್ದರು.

ಮರು ದಿನ ಶೋರೂಂ ನಿಂದ ಸ್ವಲ್ಪ ದೂರ ಚಲಿಸಿದ ನಂತರ ವಾಹನ ಏಕಾಏಕಿ ನಿಂತುಹೋಯಿತು. ಅಲ್ಲಿಯೇ ಸಮೀಪದಲ್ಲಿರುವ ಮುನೀರ್ ಆಟೋ ವರ್ಕ್ಸ್‌ನಲ್ಲಿ ವಾಹನವನ್ನು ತಪಾಸಣೆಗೆ ಒಳಪಡಿಸಿದಾಗ, ವಾಹನದ ಎಂಜಿನ್‌ನಲ್ಲಿ ಎಂಜಿನ್ ಆಯಿಲ್ ಇಲ್ಲದೇ ಇರುವುದರಿಂದ ಸೀಜ್ ಆಗಿದೆ ಎಂಬುದಾಗಿ ಮೆಕಾನಿಕ್ ತಿಳಿಸಿದ್ದ.

ನಂತರ, ಅರ್ಜಿದಾರ ಬಜಾಜ್ ಶೋ ರೂಂಗೆ ಹೋಗಿ ಸದರಿ ವಿಷಯವನ್ನು ತಿಳಿಸಿ, ಅದನ್ನು ಬದಲಾಯಿಸಿಕೊಡುವಂತೆ ಅನೇಕ ಬಾರಿ ಕೇಳಿಕೊಂಡರೂ ಶೋ-ರೂಂ ನವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರ ಕೇಶಪ್ಪ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.

ಪ್ರತಿವಾದಿ ಬಜಾಜ್ ಶೋರೂಂ ನವರು ಗ್ರಾಹಕರ ವೇದಿಕೆಯಲ್ಲಿ ವಾದ ಮಂಡಿಸಿ, ವಾಹನದ ಫ್ರೀ-ಸರ್ವೀಸ್ ಮಾಡುವ ಸಮಯದಲ್ಲಿ ಎಂಜಿನ್ ಆಯಿಲ್‌ಅನ್ನು ಬದಲಾಯಿಸಿ ಹೊಸ ಎಂಜಿನ್ ಆಯಿಲ್ ಹಾಕಲಾಗಿದೆ.

ಎಂಜಿನ್ ಸೀಜ್ ಆಗಲು ಆಯಿಲ್ ಇಲ್ಲದೇ ಇರುವುದು ಕಾರಣವಲ್ಲ, ಬದಲಾಗಿ ಫಿರ್ಯಾದುದಾರರ ನಿರ್ಲಕ್ಷತನದಿಂದ ಅಥವಾ ಯಾರಾದರೂ ವಾಹನದಲ್ಲಿ ಉಸುಕು ಹಾಕಿರಬಹುದು ಎಂದು ತಕರಾರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ವೇದಿಕೆಯು ನಿಜಾಂಶ ತಿಳಿಯಲು ಕಮಿಷನರ್ ರವರನ್ನು ನೇಮಿಸಿತು. ನಂತರ ಅವರ ವರದಿಯನುಸಾರ ವಾಹನದಲ್ಲಿ ಎಂಜಿನ್ ಆಯಿಲ್ ಇಲ್ಲದೇ ಇಲ್ಲದಿರುವುದರಿಂದ ಫಿರ್ಯಾದುದಾರರ ವಾಹನದ ಎಂಜಿನ್ ಸೀಜ್ ಆಗಿದ್ದು, ಅದನ್ನು ಬದಲಾಯಿಸದೇ ಇರುವುದು ಎದುರುದಾರರ ಸೇವಾ ನ್ಯೂನತೆ ಎಂದು ಕಮೀಶನರ್ ವರದಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಫಿರ್ಯಾದುದಾರರ ವಾಹನದ ಎಂಜಿನ್ ಬದಲಾಯಿಸಿ ಕೊಡಲು ಇಲ್ಲವೇ ಹಳೆಯ ವಾಹನವನ್ನು ಹಿಂಪಡೆದು ಅದರ ಬೆಲೆ ರೂ. 37,035ಗಳನ್ನು ಹಿಂದಿರುಗಿ ಕೊಡುವಂತೆ ಹಾಗೂ ಮಾನಸಿಕ ಹಿಂಸೆಗೆ ಪರಿಹಾರವಾಗಿ ರೂ. 5,000, ಪ್ರಕರಣದ ಖರ್ಚು ರೂ. 2,000 ಹಾಗೂ ಕಮಿಷನರ್‌ರವರ ಖರ್ಚು-ವೆಚ್ಚ ರೂ. 2,000 ಗಳನ್ನು 90 ದಿನಗಳ ಒಳಗಾಗಿ ಎದುರುದಾರರು ಫಿರ್ಯಾದುದಾರರಿಗೆ ನೀಡಲು ವೇದಿಕೆ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT