ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು ಕಂಡ ಮನದಲ್ಲಿ ಗೆಲುವಿನ ತುಡಿತ

ಇಂದು ಸನ್‌ರೈಸರ್ಸ್ ಎದುರು ಪಂದ್ಯ, ತಿರುಗೇಟು ನೀಡಲು ರಾಯಲ್ ಚಾಲೆಂಜರ್ಸ್ ಪಣ
Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಲಿಷ್ಠ ಬ್ಯಾಟ್ಸ್‌ಮನ್‌ಗಳ ದಂಡೇ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪೆಟ್ಟು ತಿಂದ ಹುಲಿಯಂತಾಗಿದೆ. ಗರ್ಜಿಸಲು ಹೋಗಿ ತಾನೇ ತೋಡಿದ ಹಳ್ಳದಲ್ಲಿ ಬಿದ್ದು ಒದ್ದಾಡುತ್ತಿದೆ. ಮನದಲ್ಲಿ ಕಾಡುತ್ತಿರುವ `ಸೂಪರ್' ಸೋಲಿನ ಸೇಡಿಗೆ ತಿರುಗೇಟು ನೀಡಲು ಹವಣಿಸುತ್ತಿದೆ.

ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಆರ್‌ಸಿಬಿಗೆ ಮತ್ತೊಂದು ಸೋಲಿನ ರುಚಿ ತೋರಿಸುವ ಆಸೆ ಹೊಂದಿದೆ. ಆದ್ದರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ನಡುವಿನ ಹಣಾಹಣಿ ಸಾಕಷ್ಟು ಕುತೂಹಲ ಮೂಡಿಸಿದೆ. ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸನ್‌ರೈಸರ್ಸ್ ಸಾರಥ್ಯ ವಹಿಸಿಕೊಂಡಿರುವ ಕುಮಾರ ಸಂಗಕ್ಕಾರ ಇಬ್ಬರಿಗೂ ಇದು ಪ್ರತಿಷ್ಠೆಯ ಪಂದ್ಯವಾಗಿದೆ.

ಭಾನುವಾರ ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್ ಗೆಲುವು ಪಡೆದಿತ್ತು. ಆ ಸೋಲಿಗೆ `ಮುಯ್ಯಿ' ತೀರಿಸಲು ಚಾಲೆಂಜರ್ಸ್‌ಗೆ ಈಗ ಅವಕಾಶ ಲಭಿಸಿದೆ. ಆದರೆ, ಹಿಂದಿನ ಪಂದ್ಯದಲ್ಲಾದ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಿದೆ.

ಗೇಲ್ ಜಪ: `ಕ್ರಿಸ್ ಗೇಲ್ ಆರ್ಭಟಿಸಲಿ ಆರ್‌ಸಿಬಿ ಗೆಲ್ಲಲಿ' ಎಂದು ರಾಯಲ್ ಚಾಲೆಂಜರ್ಸ್ ತಂಡದ ಆಟಗಾರರೂ ಸೇರಿದಂತೆ ಎಲ್ಲ ಕ್ರಿಕೆಟ್ ಪ್ರಿಯರು ಜಪಿಸುತ್ತಿದ್ದಾರೆ. ಕೊಹ್ಲಿ, ಎ.ಬಿ. ಡಿವಿಲಿಯರ್ಸ್, ತಿಲಕರತ್ನೆ ದಿಲ್ಶಾನ್ ಅವರಂತಹ ಬಲಿಷ್ಠ ಬ್ಯಾಟ್ಸ್ ಮನ್‌ಗಳು ತಂಡದಲ್ಲಿದ್ದರೂ ಗೇಲ್ ಅವರನ್ನೆ ಹೆಚ್ಚು ನೆಚ್ಚಿಕೊಳ್ಳಲಾಗಿದೆ. ಇದು ತಂಡದ ನಿರಾಸೆಗೆ ಕಾರಣವಾಗುತ್ತಿದೆ. ಹೈದರಾಬಾದ್‌ನ ಪಂದ್ಯವೇ ಇದಕ್ಕೆ ಸಾಕ್ಷಿ.

ಮುತ್ತಿನ ನಗರಿಯಲ್ಲಿ ಸನ್‌ರೈಸರ್ಸ್ ಎದುರು ಒಂದು ರನ್ ಗಳಿಸಿ ಗೇಲ್ ಪೆವಿಲಿಯನ್ ಸೇರಿಕೊಂಡಾಗ ಉಳಿದ ಬ್ಯಾಟ್ಸ್‌ಮನ್‌ಗಳು ಜಿದ್ದಿಗೆ ಬಿದ್ದವರಂತೆ ಅವರ ಹಾದಿ ಹಿಡಿದರು. ಕೊಹ್ಲಿ ಹಾಗೂ ಹೆನ್ರಿಕ್ಸ್ ಹೊರತು ಪಡಿಸಿದರೆ ಉಳಿದ್ಯಾವ ಆಟಗಾರರು ಎರಂಡಕಿಯ ಮೊತ್ತ ಮುಟ್ಟಲಿಲ್ಲ. ಆದ್ದರಿಂದ ಗೇಲ್ ಜೊತೆಗೆ ಉಳಿದ ಬ್ಯಾಟ್ಸ್ ಮನ್‌ಗಳು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಇಲ್ಲವಾದರೆ, ಮತ್ತೊಂದು ನಿರಾಸೆ ತಪ್ಪಿದ್ದಲ್ಲ.

ಎರಡು ಪಂದ್ಯಗಳಿಂದ ದಿಲ್ಶಾನ್ ಐದು ರನ್ ಮಾತ್ರ ಗಳಿಸಿದ್ದಾರೆ. ಮಯಾಂಕ್ ಅಗರ್‌ವಾಲ್ (8) ಸಹ ಎರಡಂಕಿಯ ಮೊತ್ತ ಮುಟ್ಟಿಲ್ಲ. ಆದ್ದರಿಂದ ಈ ಬ್ಯಾಟ್ಸ್‌ಮನ್‌ಗಳು ಲಯ ಕಂಡುಕೊಳ್ಳುವುದು ಅಗತ್ಯವಾಗಿದೆ. ಸೋಲಿನ ಸಂಕಷ್ಟದಿಂದ ಪರದಾಡುತ್ತಿದ್ದರೂ, ಆರ್‌ಸಿಬಿ ತಂಡದ ಪ್ರಮುಖ ಆಟಗಾರರು ಸೋಮವಾರ ಅಭ್ಯಾಸಕ್ಕೆ ಹಾಜರಾಗಲಿಲ್ಲ. ಗೇಲ್, ಕೊಹ್ಲಿ ಕ್ರೀಡಾಂಗಣದತ್ತ ಸುಳಿಯಲಿಲ್ಲ.

ಕಳೆದುಕೊಂಡಿರುವ ವಿಶ್ವಾಸವನ್ನು ಪಡೆದುಕೊಳ್ಳಲು ಮಂಗಳವಾರದ ಪಂದ್ಯದಲ್ಲಿ ಆರ್‌ಸಿಬಿಗೆ ಗೆಲುವು ಅಗತ್ಯವಾಗಿದೆ. ಗುರುವಾರ ಇದೇ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಇನ್ನೊಂದು ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ನರನ್ನು ಮಣಿಸಬೇಕಾದರೆ, ಸನ್‌ರೈಸರ್ಸ್ ಎದುರು ಗೆಲುವಿನ ರಸದೂಟ ಸವಿಯುವುದು ಕೊಹ್ಲಿ ಪಾಳೆಯಕ್ಕೆ ಅಗತ್ಯವಿದೆ.

ಹೆಚ್ಚಿದ ಭರವಸೆ: ಬ್ಯಾಟಿಂಗ್‌ನಲ್ಲಿ ಗೇಲ್ ಮೇಲೆ ಎಷ್ಟೊಂದು ಭರವಸೆಯಿದೆಯೋ, ಬೌಲಿಂಗ್‌ನಲ್ಲಿ ವೇಗಿ ಆರ್. ವಿನಯ್ ಕುಮಾರ್ ಮೇಲೂ ಅಷ್ಟೇ ನಿರೀಕ್ಷೆಯಿದೆ. ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಎರಡೂ ಪಂದ್ಯಗಳ ಕೊನೆಯ ಓವರ್‌ನಲ್ಲಿ ಬಲಗೈ ವೇಗಿ ನೀಡಿರುವ ಪ್ರದರ್ಶನ ಈ ರೀತಿಯ ನಿರೀಕ್ಷೆ ಮೂಡಲು ಕಾರಣ. `ದಾವಣಗೆರೆ ಎಕ್ಸ್‌ಪ್ರೆಸ್' ಎರಡು ಪಂದ್ಯಗಳಿಂದ ನಾಲ್ಕು ವಿಕೆಟ್ ಪಡೆದಿದ್ದಾರೆ.

ಎಡಗೈ ವೇಗಿ ಜಹೀರ್ ಖಾನ್ ಗಾಯದಿಂದ ಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ. ಡಿವಿಲಿಯರ್ಸ್ ಮಂಗಳವಾರ ಬೆಳಿಗ್ಗೆ ತಂಡವನ್ನು ಸೇರಿಕೊಳ್ಳಲಿದ್ದು, ಆಡುವ ನಿರೀಕ್ಷೆಯಿದೆ. ಈ ಕುರಿತು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್‌ಸಿಬಿ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್ ಸುಳಿವು ಬಿಟ್ಟುಕೊಟ್ಟರು.

ಉತ್ಸಾಹದ ಚಿಲುಮೆ: ಹೊಸ ಹೆಸರು ಹಾಗೂ ಲಾಂಛನದೊಂದಿಗೆ `ಚೊಚ್ಚಲ' ಐಪಿಎಲ್ ಆಡುತ್ತಿರುವ ಸನ್‌ರೈಸರ್ಸ್ ತಂಡ ಈಗ ಉತ್ಸಾಹದ ಚಿಲುಮೆ. ಈ ತಂಡ ತನ್ನ ಮೊದಲ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಗೆಲುವು ಸಾಧಿಸಿತ್ತು.

ಇದರ ಜೊತೆಗೆ ಬಲಿಷ್ಠ ಆಟಗಾರರನ್ನು ಹೊಂದಿರುವ ಆರ್‌ಸಿಬಿಯನ್ನು ಸೋಲಿಸಿದ್ದು, ಉತ್ಸಾಹವನ್ನು ಇಮ್ಮಡಿಸಿದೆ. ಗೆಲುವಿನ `ಮೂಡ್'ನಲ್ಲಿರುವ ಸಂಗಕ್ಕಾರ ಬಳಗದವರು ಸೋಮವಾರ ಅಭ್ಯಾಸ ನಡೆಸದೇ ಹೋಟೆಲ್‌ನಲ್ಲಿಯೇ ವಿಶ್ರಾಂತಿ ಪಡೆದರು. ಈ ತಂಡ ಒಟ್ಟು ನಾಲ್ಕು ಅಂಕಗಳಿಂದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಗೆಲುವಿನ ತುತ್ತು: `ಮುತ್ತಿನ ನಗರಿಯಲ್ಲಿ ಜಾರಿ ಹೋದ ಗೆಲುವಿನ ತುತ್ತು ಉದ್ಯಾನನಗರಿಯಲ್ಲಿ ಲಭಿಸಲಿ' ಎಂದು ಆರ್‌ಸಿಬಿ ತಂಡದ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಅವರ ಪ್ರಾರ್ಥನೆಗೆ ಫಲ ಲಭಿಸುವುದೇ ಎನ್ನುವುದು ಈಗ ಉಳಿದಿರುವ ಕುತೂಹಲ.

                                                             ತಂಡಗಳು
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಅಭಿಮನ್ಯು ಮಿಥುನ್, ಅಭಿನವ್ ಮುಕುಂದ್, ಆ್ಯಂಡ್ರ್ಯೂ ಮೆಕ್ ಡೂನಾಲ್ಡ್, ಚೇತೇಶ್ವರ ಪೂಜಾರ, ಕ್ರಿಸ್ಟೋಫರ್ ಬಾರ್ನ್‌ವೆಲ್, ಡೇನಿಯಲ್ ವೆಟೋರಿ, ಹರ್ಷಲ್ ಪಟೇಲ್, ಕೆ.ಪಿ. ಅಪ್ಪಣ್ಣ, ಮೊಯ್ಸಿಸ್ ಹೆನ್ರಿಕ್ಸ್, ಕ್ರಿಸ್ ಗೇಲ್, ತಿಲಕರತ್ನೆ ದಿಲ್ಯಾನ್, ಮಯಾಂಕ್ ಅಗರ್‌ವಾಲ್, ಡೇನಿಯನ್ ಕ್ರಿಸ್ಟಿಯನ್, ಕರುಣ್ ನಾಯರ್, ಅರುಣ್ ಕಾರ್ತಿಕ್, ಜಯದೇವ್ ಉನದ್ಕತ್, ಆರ್. ವಿನಯ್ ಕುಮಾರ್, ಮುತ್ತಯ್ಯ ಮುರಳೀಧರನ್, ಮುರಳಿ ಕಾರ್ತಿಕ್, ಪಂಕಜ್ ಸಿಂಗ್ ಪಿ. ಪ್ರಶಾಂತ್.

ಸನ್‌ರೈಸರ್ಸ್ ಹೈದರಾಬಾದ್:  ಕುಮಾರ ಸಂಗಕ್ಕಾರ (ನಾಯಕ), ಅಕ್ಷತ್ ರೆಡ್ಡಿ, ಆಶಿಶ್ ರೆಡ್ಡಿ, ಡೇಲ್ ಸ್ಟೈನ್, ಪಾರ್ಥಿವ್ ಪಟೇಲ್, ಕ್ಯಾಮರೂನ್ ವೈಟ್, ಹನುಮ ವಿಹಾರಿ, ತಿಸ್ಸಾರ ಪೆರೇರಾ, ಡಿ.ಬಿ. ರವಿತೇಜಾ, ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ನತಾನ್ ಮೆಕ್ಲಮ್, ಅಂಕಿಂತ್ ಶರ್ಮಾ, ಆನಂದ್ ರಾಜನ್, ಬಿಪ್ಲವ್ ಸಾಮಂತ್ರಯೆ, ಕ್ರಿಸ್ ಲ್ಯಾನ್, ಡರೆನ್ ಸಮಿ, ಕರಣ್ ಶರ್ಮಾ, ಪ್ರಶಾಂತ್ ಪದ್ಮನಾಭನ್, ಸಚಿನ್ ರಾಣಾ, ಶಿಖರ್ ಧವನ್, ಸುದೀಪ್ ತ್ಯಾಗಿ ಹಾಗೂ ವೀರ್‌ಪ್ರತಾಪ್ ಸಿಂಗ್.

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು;  ಆರಂಭ: ಸಂಜೆ 4ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT