ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಮೊರಾರ್ಜಿ ವಸತಿ ಶಾಲೆ

Last Updated 2 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಕೂಡಲಸಂಗಮ: ವಸತಿ ಗೃಹದಲ್ಲಿಯೇ ತರಗತಿಗಳು, ವಿದ್ಯಾರ್ಥಿಗಳಿಗೆ ಮಲಮೂತ್ರ ವಿಸರ್ಜನೆಗೆ ಬಯಲು ಜಾಗವೇ ಗತಿ, ಆರ್ಥಿಕ ವರ್ಷ ಮುಗಿಯುತ್ತಾ ಬಂದರೂ ಬಟ್ಟೆ ಇಲ್ಲ, ತರಗತಿಗೆ ಸಮವಸ್ತ್ರವೇ ಇಲ್ಲ...ಇದು ಹುನಗುಂದ ತಾಲ್ಲೂಕಿನ ದನ್ನೂರು ಮೊರಾರ್ಜಿ ವಸತಿ ಶಾಲೆಯ ಸ್ಥಿತಿ. ಶಾಲೆ ಆರಂಭಗೊಂಡು ಮೂರು ವರ್ಷಗಳಾದರೂ ಮೂಲ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಕಷ್ಟದಲ್ಲೇ ಕಲಿಯುವಂತಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಮೂಲಕ ಈ ಶಾಲೆಯು ಸದ್ಯ ಸರಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿ ನಡೆಯುತ್ತಿದೆ. 6 ರಿಂದ 8ನೇ ತರಗತಿಯವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಓದು, ವಸತಿ ಹಾಗೂ ಕಾರ್ಯಾಲಯ ಸೇರಿ ಒಟ್ಟು 6 ಕೊಠಡಿಗಳಿವೆ. ಈ ಪೈಕಿ ಒಂದು ಕಾರ್ಯಾಲಯ, ಒಂದು ಅಡುಗೆ ಕೋಣೆ. ಉಳಿದ 4 ಕೊಠಡಿಗಳಲ್ಲಿ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿನಿಯರು ವಾಸ್ತವ್ಯ ಮಾಡುವ ವಸತಿಗೃಹದಲ್ಲಿ 6ನೇ ತರಗತಿ ಹಾಗೂ ವಿದ್ಯಾರ್ಥಿಗಳ ವಸತಿಗೃಹದಲ್ಲಿ 7ನೇ ತರಗತಿ ಮತ್ತು 8ನೇ ತರಗತಿಗೆ ಪ್ರತ್ಯೇಕ ಕೊಠಡಿ ಇದೆ.

ಈ ಶಾಲೆಯಲ್ಲಿ 24 ವಿದ್ಯಾರ್ಥಿನಿಯರು ಹಾಗೂ 80 ವಿದ್ಯಾರ್ಥಿಗಳು ಸೇರಿ ಒಟ್ಟು 104 ವಿದ್ಯಾರ್ಥಿಗಳಿದ್ದಾರೆ. 24 ವಿದ್ಯಾರ್ಥಿನಿಯರು ಒಂದೇ ಕೊಠಡಿಯಲ್ಲಿ ವಾಸ್ತವ್ಯ ಮಾಡುತ್ತಾರೆ. 80 ವಿದ್ಯಾರ್ಥಿಗಳಿಗೆ ವಸತಿಗಾಗಿ 2 ಕೊಠಡಿಗಳಿವೆ. ತರಗತಿಗಳು ನಡೆಯುವ ಕೊಠಡಿಯಲ್ಲಿಯೇ ವಸತಿ ವ್ಯವಸ್ಥೆ ಇರುವುದರಿಂದ ಮಕ್ಕಳು ಬಟ್ಟೆ ಮತ್ತು ಇತರ ಸಾಮಗ್ರಿಯನ್ನು ಇಟ್ಟುಕೊಳ್ಳಲು ಮತ್ತು ಅಭ್ಯಾಸ ಮಾಡಲು ತೊಂದರೆ ಅನುಭವಿಸಬೇಕಾಗಿದೆ.

ಸರಕಾರ ಈ ಶಾಲೆಗೆಂದು ಡೆಸ್ಕ್‌ಗಳನ್ನು ನೀಡಿದೆಯಾದರೂ ಅವುಗಳನ್ನು ಇಡಲು ಜಾಗವಿಲ್ಲ. ಹೀಗಾಗಿ ಡೆಸ್ಕ್‌ಗಳು ಕಾರ್ಯಾಲಯದ ಮುಂದೆ ಅನಾಥವಾಗಿ ಬಿದ್ದಿವೆ. ವಿಜ್ಞಾನ ಶಿಕ್ಷಕರು ಇಲ್ಲದಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ. ಶಾಲೆಯು ಧನ್ನೂರ ಗ್ರಾಮದಿಂದ ಕೊಂಚ ದೂರ ಇರುವ ಕಾರಣ ಮಕ್ಕಳು ಯಾವ ವೇಳೆಯಲ್ಲಿ ಏನು ಮಾಡುತ್ತಾರೆ ಎಂಬುದೇ ತಿಳಿಯುವುದಿಲ್ಲ ಎನ್ನುತ್ತಾರೆ ದನ್ನೂರ ಗ್ರಾಮದ ಗ್ರಾಮಸ್ಥರು.

ಶಾಲೆಯ 104 ಮಕ್ಕಳಿಗೆ ಒಂದೇ ಸ್ನಾನ ಗೃಹ ಹಾಗೂ ಶೌಚಾಲಯ ಇದ್ದು, ಅದನ್ನು ವಿದ್ಯಾರ್ಥಿನಿಯರ ಉಪಯೋಗಕ್ಕೆ ನೀಡಲಾಗಿದೆ. ಇವುಗಳನ್ನು ಉಪಯೋಗಿಸಲು  ಶಾಲೆಯ ಆವರಣದಲ್ಲಿರುವ ಕೊಳವೆ ಬಾವಿಯಿಂದ ನೀರು ಪಡೆಯಬೇಕು. ಬಟ್ಟೆ ತೊಳೆಯಲು ಸಹ ಜಾಗ ಇಲ್ಲ. ಬಟ್ಟೆಗಳನ್ನು ಶಾಲಾ ಆವರಣದಲ್ಲಿಯೇ ಹಾಕುವಂತಾಗಿದೆ.ಸಂಬಂಧಪಟ್ಟ ಇಲಾಖೆಯಿಂದ  ಈ ವರ್ಷ ಇನ್ನೂ ಸಮವಸ್ತ್ರ ವಿತರಣೆಯಾಗಿಲ್ಲ. ಈ  ಕುರಿತು ಶಾಲೆಯ ಮುಖ್ಯಸ್ಥರಾದ ಎಸ್.ಕೆ.ಹುಲ್ಯಾಳಮಠ ಅವರನ್ನು ದೂರವಾಣಿಯಲ್ಲಿ ಸಂರ್ಪಕಿಸಿದಾಗ ‘ಸರಕಾರ ಸೌಲಭ್ಯ ಕೊಟ್ಟಿಲ್ಲ ಅದಕ್ಕೆ ನಾವು ಏನ ಮಾಡಬೇಕು’ ಎನ್ನುವ ಉತ್ತರವಷ್ಟೇ ದೊರೆಯಿತು.

ಹೊಸ ಕಟ್ಟಡ-ಭರವಸೆ:  ಹುನಗುಂದ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಅಧಿಕಾರಿ ರವಿ ಇದ್ದಲಗಿ ಈ ಕುರಿತು ಪ್ರತಿಕ್ರಿಯಿಸಿ ‘ನೂತನ ಕಟ್ಟಡಕ್ಕೆ 5 ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದ್ದು ಅನುದಾನ ಬಿಡುಗಡೆ ಆದ ತಕ್ಷಣ ಕಟ್ಟಡ ನಿರ್ಮಾಣ ಮಾಡಲಾಗುವುದು. ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಸಬಹುದು. ಆದರೆ ದನ್ನೂರಿನಲ್ಲಿ ಬಾಡಿಗೆ ಕಟ್ಟಡಗಳೇ ಇಲ್ಲದೇ ಇರುವುದರಿಂದ ಅನಿವಾರ್ಯವಾಗಿ ಇರುವ ಕಟ್ಟಡಗಳಲ್ಲಿ ಶಾಲೆ ನಡೆಸುವುದು ಅನಿವಾರ್ಯ’ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT