ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಕ್ಕಾಗಿ ಅಲೆಯುತ್ತಿರುವ ಕಾರ್ಗಿಲ್ ಯೋಧ

`ಕಾರ್ಗಿಲ್ ದಿವಸ್'ಗೆ ಇಂದು 14ನೇ ವರ್ಷ
Last Updated 26 ಜುಲೈ 2013, 6:48 IST
ಅಕ್ಷರ ಗಾತ್ರ

ಹಾವೇರಿ: ಕಾರ್ಗಿಲ್ ಯುದ್ಧ ಪೂರ್ಣಗೊಂಡು 14 ವರ್ಷ ಕಳೆದಿವೆ. ಆ ಯುದ್ಧದಲ್ಲಿ ಭಾಗವಹಿಸಿ ಬಂದ ಯೋಧನೊಬ್ಬ ಸರ್ಕಾರದ ಸೌಲಭ್ಯ ಪಡೆಯಲು ನಿತ್ಯ ಕಚೇರಿಗೆ ಅಲೆಯಬೇಕಾಗಿದೆ.

ಕಾರ್ಗಿಲ್ ಯುದ್ಧದಲ್ಲಿ ಶತ್ರು ಸೈನ್ಯದ ವಿರುದ್ಧ ಹೋರಾಟ ನಡೆಸಿದ ಜಿಲ್ಲೆಯ ಏಕೈಕ ಯೋಧ ಮಹಮ್ಮದ್ ಜಹಾಂಗೀರ್ ಖವಾಸ್ ಎಂಬುವರೇ ಸೌಲಭ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಯೋಧ.

ಮೇ 1, 1999 ರಿಂದ ಜುಲೈ 26 1999 ರವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ  ಭಾಗವಹಿಸಿದ್ದ ಖವಾಸ್, 2000 ರಲ್ಲಿ ನಿವೃತ್ತಿಯಾಗಿದ್ದಾರೆ. ಆ ಸಂದರ್ಭದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಖವಾಸ್ ಅವರಿಗೆ ಮಾನ, ಸಮ್ಮಾನ ನೀಡಿದ್ದಲ್ಲದೇ, ಅವರಿಗೊಂದು ನಿವೇಶನ, ಉದ್ಯೋಗಕ್ಕಾಗಿ ಐದು ಎಕರೆ ಜಮೀನು ನೀಡುವುದಾಗಿ ಭರವಸೆ ನೀಡಿದ್ದರು.

ಜಿಲ್ಲೆಯ ಜನಪ್ರತಿನಿಧಿಗಳ, ಜಿಲ್ಲಾಡಳಿತದ ಪ್ರೀತಿ, ವಿಶ್ವಾಸ ಹಾಗೂ ಸೌಲಭ್ಯಗಳ ಭರವಸೆಗಳಿಂದ ಸಂತೋಷಗೊಂಡಿದ್ದರು. ಆದರೆ, ಕೆಲವೇ ದಿನಗಳಲ್ಲಿ ಅವರಲ್ಲಿದ್ದ ಸಂತೋಷ ಕ್ರಮೇಣ ಮಾಯವಾಗತೊಡಗಿತು.

ಏಕೆಂದರೆ, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ನೀಡಿರುವ ನಿವೇಶನ, ಜಮೀನು ಹಾಗೂ ಉದ್ಯೋಗದ ಭರವಸೆ ಕೇವಲ ಭರವಸೆಗಳಾಗಿಯೇ ಉಳಿದಿರುವುದು ಹಾಗೂ ನಿರಂತರ ಹೋರಾಟದ ಫಲವಾಗಿ ನಗರಸಭೆಯಿಂದ ನಿವೇಶನ ಪಡೆಯಲು ಯಶಸ್ವಿಯಾಗಿದ್ದರೂ, ಈವರೆಗೆ ಆ ನಿವೇಶನದ ಪಟ್ಟಾ ನೀಡದಿರುವುದು ಅವರ ಬೇಸರಕ್ಕೆ ಕಾರಣವಾಗಿದೆ.

ಜಮೀನಿಗಾಗಿ ನಿಲ್ಲದ ಅಲೆದಾಟ: 2000ನೇ ಇಸ್ವಿಯಲ್ಲಿ ಐದು ಎಕರೆ ಜಮೀನು ನೀಡುವುದಾಗಿ  ಹೇಳಿದ ಜಿಲ್ಲಾಡಳಿತ ಮಾಜಿ ಯೋಧರಿಗೆ ಜಮೀನು ನೀಡುವುದಕ್ಕಾಗಿಯೇ ತಾಲ್ಲೂಕಿನ ನೆಗಳೂರು ಬಳಿ ರಿ.ಸ.ನಂ 559/ ಎಫ್ ಸರ್ಕಾರಿ ಪಡಾ ಜಮೀನು ಮೀಸಲಿರಿಸಿದೆ. ಇದೇ ಜಮೀನಿನಲ್ಲಿ ಖವಾಸ್ ಅವರಿಗೆ ಜಮೀನು ಕೊಡುವುದಾಗಿ ತಿಳಿಸಿ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿದೆ.

ಅಲ್ಲದೇ, ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿ ಹೀಗೆ ಹತ್ತು ವರ್ಷಗಳಿಂದ ಅಲೆದಾಡಿಸುತ್ತಿದೆ. ಆದರೆ, ಈವರೆಗೆ ಜಮೀನು ನೀಡುತ್ತಿಲ್ಲ. ಅಧಿಕಾರಿಗಳು ಒಬ್ಬರ ಮೇಲೆ ಇನ್ನೊಬ್ಬರು ಹೇಳುತ್ತಾ ಮುಂದೂಡುತ್ತಿದ್ದಾರೆ. ಏಕೆ ಎಂಬುದು ಮಾತ್ರ ತಿಳಿಯುತ್ತಿಲ್ಲ ಎನ್ನುತ್ತಾರೆ ಯೋಧ ಮಹಮ್ಮದ್ ಜಹಾಂಗೀರ್ ಖವಾಸ್.

ಭಾರತೀಯ ಸೇನೆಯಲ್ಲಿ ಚಾಲಕನಾಗಿ, ಹವಾಲ್ದಾರನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ನಗರದ ಕಂಪೆನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಜೀವನ ನಡೆಸುತ್ತಿದ್ದಾರೆ.

ಪತ್ನಿ, ಇಬ್ಬರು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳನ್ನು ಹೊಂದಿರುವ ಖವಾಸ್ ಅವರು, ತಮ್ಮ ದೊಡ್ಡ ಮಗಳ ಮದುವೆ ಮಾಡಿದ್ದಾರೆ. ಇನ್ನೊಬ್ಬಳು ಪಿಯುಸಿ ಓದುತ್ತಿದ್ದರೆ, ಮಗ ಖಾಸಗಿಯಾಗಿ ಕಂಪ್ಯೂಟರ್ ಸರ್ವಿಸ್‌ನಲ್ಲಿ ಕೆಲಸ ಮಾಡುತಿದ್ದಾನೆ. ಇನ್ನೊಬ್ಬ ಮಗ ಬುದ್ದಿಮಾಂದ್ಯ. ಆತ ವಯಸ್ಸಿಗೆ ಬಂದರೂ ಮನೆಯಲ್ಲಿಯೇ ಇದ್ದಾನೆ. ಇಂತಹ ದೊಡ್ಡ ಸಂಸಾರವನ್ನು ಸಾಗಿಸಲು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದೇನೆ. ಈ ನಡುವೆ ಸರ್ಕಾರದ ಸೌಲಭ್ಯ ಪಡೆಯಲು ಅಲೆದಾಟ ಜೀವನದಲ್ಲಿ ಜುಗುಪ್ಸೆಗೊಳ್ಳುವಂತೆ ಮಾಡಿದೆ ಎನ್ನುತ್ತಾರೆ ಅವರು.

ಈಗ ಶಾಸಕರಾದವರೇ 2000ನೇ ಇಸ್ವಿಯಲ್ಲಿ ಶಾಸಕರಾಗಿದ್ದರು. ತಮಗೆ ನೀಡಬೇಕಾದ ಸೌಲಭ್ಯಗಳ ಬಗ್ಗೆ ಅವರಿಗೂ ಗೊತ್ತಿದೆ. ಈ ಸರ್ಕಾರವಾದರೂ ಗಮನ ಹರಿಸಿ ಆದಷ್ಟು ಬೇಗ ಭರವಸೆಯಂತೆ ತಮಗೆ ಜಮೀನು ನೀಡಬೇಕೆಂಬುದು ಖವಾಸ್ ಅವರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT