ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯಕ್ಕೆ ಅಲೆದಾಟ; ಅಂಗವಿಕಲರಿಗೆ ಪ್ರಾಣಸಂಕಟ!

ಇಂದು ವಿಶ್ವ ಅಂಗವಿಕಲರ ದಿನ, ಅವರಿಗೆ ಬೇಕು ಆತ್ಮವಿಶ್ವಾಸದ ನುಡಿ
Last Updated 3 ಡಿಸೆಂಬರ್ 2013, 5:49 IST
ಅಕ್ಷರ ಗಾತ್ರ

ದಾವಣಗೆರೆ: ಬಡತನದ ಬೇಗೆ; ಅದರ ಮಧ್ಯದಲ್ಲಿಯೇ ಹುಟ್ಟಿದಾಗಿನಿಂದ ಕಾಡಿದ ಅಂಗವಿಕಲತೆ. ಪುಟ್ಟ ಜಮೀನು, ಬರಗಾಲದಿಂದ ಬೆಂದುಹೋದ ಕುಟುಂಬ! ತುತ್ತು ಅನ್ನಕ್ಕಾಗಿ ಪೋಷಕರ ವಲಸೆ. ಇರುವ ಒಬ್ಬ ಮಗನಿಗೂ ಹೀಗಾಯಿತಲ್ಲಾ ಎಂಬ ಕೊರಗು, ಆ ಚಿಂತೆಯಲ್ಲಿಯೇ ದಿನದೂಡುವ ಪರಿಸ್ಥಿತಿ, ಇದರ ನಡುವೆ ಶಿಕ್ಷಣ ಕೊಡಿಸುವ ಹೊಣೆಗಾರಿಕೆ... ಹೀಗೆ ತಾಲ್ಲೂಕು ಕಚೇರಿ ಎದುರು ಅಂಗವಿಕಲ ಶಾಂತರಾಜ್‌ ‘ಶಾಂತ’ವಾಗಿಯೇ ತಮ್ಮ ಕುಟುಂಬದ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ಹೋದರು.

ಹೌದು, ಅಂಗವಿಕಲರು ಸರ್ಕಾರ ನೀಡುವ ಸೌಲಭ್ಯ ಪಡೆಯಲು ಪರದಾಡುವ ಸ್ಥಿತಿಯಿದೆ ಎಂದು ಹೇಳಲು ಮಾತ್ರ ಆತ ಮರೆಯಲಿಲ್ಲ!
ಸಾಧನ ಸಲಕರಣೆಗಳಾದ ಗಾಲಿಕುರ್ಚಿ (ವೀಲ್‌ ಚೇರ್‌), ಟ್ರೈಸಿಕಲ್‌, ಊರುಗೋಲು, ಬ್ರೈಲ್‌ವಾಚ್‌ ಪಡೆಯಲು ಅದಾಯ ಪ್ರಮಾಣ ಪತ್ರ ನೀಡಬೇಕು. ಜತೆಗೆ, ಸ್ವಯಂ ಉದ್ಯೋಗ ಒದಗಿಸಿಕೊಡುವ ‘ಆಧಾರ’ ಯೋಜನೆ, ಬುದ್ಧಿಮಾಂದ್ಯ ವ್ಯಕ್ತಿಗಳ ತಂದೆ, ತಾಯಿ ಪೋಷಕರ ವಿಮಾ ಯೋಜನೆ ಪಡೆಯಲು ಆದಾಯದ ಮಿತಿ ನಿಗದಿ ಮಾಡಲಾಗಿದೆ. ಅಂಗವಿಕಲರು ಪ್ರಮಾಣ ಪತ್ರ ಮಾಡಿಸುವುದು ಕಷ್ಟ. ಕಚೇರಿಯಿಂದ ಕಚೇರಿಗೆ ಅಲೆಯಬೇಕು. ಪ್ರಮಾಣ ಪತ್ರ ವಿಳಂಬವಾದರೆ ಸೌಲಭ್ಯಗಳು ಸಿಗುವುದಿಲ್ಲ. ಇದರಿಂದ ವಿನಾಯಿತಿ ನೀಡಬೇಕು ಎಂಬುದು ಅವರ ಆಗ್ರಹ.

ಶೇ 40ರಷ್ಟು ಅಂಗವಿಕಲತೆ ಹೊಂದಿರುವವರು ‘ಅಂಗವಿಕಲರು’ ಎಂದು ಗುರುತಿಸಿಕೊಳ್ಳುತ್ತಾರೆ. 1988ರ ವರೆಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿತ್ತು. ಬಳಿಕ ಅಂಗವಿಕಲರಿಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಯಿತು. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಮಟ್ಟದ ಕಚೇರಿ ತೆರೆಯಲಾಗಿದೆ. ಆದರೆ, ಕಚೇರಿಗೆ ಅಗತ್ಯ ಸಿಬ್ಬಂದಿ ನೇಮಕವಾಗಿಲ್ಲ. ದಾವಣಗೆರೆಯ ಕಚೇರಿಯಲ್ಲಿ ಅಂಗವಿಕಲರ ಕಲ್ಯಾಣಾಧಿಕಾರಿ, ಯೋಜನಾ ಸಹಾಯಕ, ಟೈಪಿಸ್ಟ್‌ ಹಾಗೂ ಗ್ರೂಪ್‌ ‘ಡಿ’ ನೌಕರರು ಮಾತ್ರ ಇದ್ದಾರೆ. ಇದರಿಂದ ಅಂಗವಿಕಲರಿಗೆ ಸಮರ್ಪಕ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ.

ಕರಡು ನನೆಗುದಿಗೆ..!: ಹಿಮೋಫಿಲಿಯಾ, ತಲೆಸಿಮಿಯಾ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವರನ್ನು ಅಂಗವಿಕಲರ ವ್ಯಾಪ್ತಿಗೆ ತರಬೇಕು ಎಂದು 2011ರಲ್ಲಿ ಕೇಂದ್ರ ಸರ್ಕಾರ ನೇಮಿಸಿದ್ದ ಸಮಿತಿಯೊಂದು ವರದಿ ನೀಡಿದೆ. ಆದರೆ, ಅದಕ್ಕೆ ಸಂಸತ್ತಿನಲ್ಲಿ ಒಪ್ಪಿಗೆ ದೊರೆತಿಲ್ಲ. ಇದರಿಂದ ಸಂಕಷ್ಟ ತಪ್ಪಿಲ್ಲ. ಬಜೆಟ್‌ನಲ್ಲಿ ಶೇ 3ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕೆ ಮೀಸಲಿಡಬೇಕು ಎಂಬ ನಿಯಮವಿದೆ. ಆದರೆ, ಅದು ಜಾರಿಗೆ ಬರುತ್ತಿಲ್ಲ. ಇದರಿಂದ ಅಂಗವಿಕಲರಿಗೆ ಸಿಗಬೇಕಾದ ಸೌಲಭ್ಯಗಳು ಅನ್ಯರ ಪಾಲಾಗುತ್ತಿವೆ. ಹಕ್ಕು ಪಡೆಯಲು ಪ್ರತಿಭಟನೆಗಳು ನಿಂತಿಲ್ಲ. ಜೀವಕ್ಕೆ ರಕ್ಷಣೆಯಿಲ್ಲದೇ ಅತೃಪ್ತಿ ಜೀವನ ಮುಂದುವರಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಜಿಲ್ಲೆಯಲ್ಲಿ ಅಂಗವಿಕಲರ ಶಿಕ್ಷಣಕ್ಕಾಗಿ ಮೂರು ವಿಶೇಷ ಶಾಲೆಗಳಿವೆ. ಡಿಸಿಎಂ ಲೇಔಟ್‌ನ ಮೌನೇಶ್ವರ ಕಿವುಡು ಮತ್ತು ಮೂಕರ ವಸತಿಶಾಲೆ, ಲಕ್ಷ್ಮೀ ಫ್ಲೋರ್‌ ಮಿಲ್‌ ಬಳಿಯ ಆಶಾಕಿರಣ ವಸತಿಶಾಲೆ (ಕೌಶಲ ಕಲಿಸಲು ಪ್ರಾರಂಭಿಸಲಾಗಿದೆ), ಹರಿಹರದ ಅಮರಾವತಿಯಲ್ಲಿ ದೈಹಿಕ ಅಂಗವಿಕಲರ ಶಾಲೆಯಿದೆ. ಆದರೆ, ಏನೂ ಅರಿಯದ ಪೋಷಕರು ಅಂಗವಿಕಲ ಮಕ್ಕಳನ್ನು ಸಾಮಾನ್ಯ ಶಾಲೆಗೆ ಸೇರಿಸುತ್ತಾರೆ. ಅಲ್ಲಿನ ಶಿಕ್ಷಕರೂ ವಿಶೇಷ ಶಾಲೆಗಳಿಗೆ ಸೇರಿಸಲು ಶಿಫಾರಸು ಮಾಡುತ್ತಿಲ್ಲ. ಇದರಿಂದ ಅವರಿಗೆ ವಿಶೇಷ ರೀತಿಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಂಗವಿಕಲ ಮಕ್ಕಳಿದ್ದರೆ ವಿಶೇಷ ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡುತ್ತಾರೆ ಅಧಿಕಾರಿಯೊಬ್ಬರು.

ಏನೇನು ಸೌಲಭ್ಯ?: ಸಾಮಾನ್ಯ ವ್ಯಕ್ತಿಯೊಬ್ಬ ಅಂಗವಿಕಲ ಮಹಿಳೆಯನ್ನು ಮದುವೆಯಾದರೆ ಸರ್ಕಾರ ₨ 50 ಸಾವಿರ ಪ್ರೋತ್ಸಾಹಧನ ನೀಡುತ್ತದೆ. ಈ ಯೋಜನೆ ಪ್ರಸಕ್ತ ಸಾಲಿನಿಂದ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ ಈ ಸೌಲಭ್ಯಕ್ಕಾಗಿ 8 ಅರ್ಜಿಗಳೂ ಬಂದಿವೆ. ಜತೆಗೆ, ಅಂಗವಿಕಲ ಮಹಿಳೆಯ ಎರಡು ಹೆರಿಗೆಗೆ ಶಿಶುಪಾಲನೆ ಸಲುವಾಗಿ ಪ್ರತಿ ತಿಂಗಳು ₨ 2 ಸಾವಿರ ನೀಡಲಾಗುತ್ತದೆ. ಅಲ್ಲದೇ, ಅಂಗವಿಕಲರ ಕಲ್ಯಾಣಕ್ಕೆ ಪಾಲಿಕೆಯಲ್ಲಿ ಸುಮಾರು ₨ 60 ಲಕ್ಷದಷ್ಟು ಹಣವಿದೆ. ಅದನ್ನು ಪ್ರಸಕ್ತ ವರ್ಷ ಸದುಪಯೋಗ ಮಾಡಿಕೊಳ್ಳಲಾಗುವುದು ಎಂದು ಹೇಳುತ್ತಾರೆ ಅಧಿಕಾರಿಗಳು.

ವ್ಯವಸ್ಥಿತ ಜಾಲ!
‘ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಅಂಗವಿಕಲರನ್ನು ಗುರುತಿಸಲು ಜಿಲ್ಲಾ ವೈದ್ಯಕೀಯ ಮಂಡಳಿಯಿದೆ. ಆದರೆ, ಅಲ್ಲಿ ನಿಜವಾದ ಅಂಗವಿಕಲರನ್ನು ಗುರುತಿಸಿ ಪ್ರಮಾಣ ಪತ್ರ ಕೊಡುವ ಕೆಲಸ ನಡೆಯುತ್ತಿಲ್ಲ. ಮಧ್ಯವರ್ತಿಗಳ ಹಾವಳಿಯಿಂದ ನಿಜವಾದ ಅಂಗವಿಕಲರನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯವಸ್ಥಿತ ಜಾಲವೊಂದು ಕೆಲಸ ಮಾಡುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಂಗವಿಕಲರೊಬ್ಬರು ಆರೋಪಿಸುತ್ತಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ದೈಹಿಕ ಅಂಗವಿಕಲತೆ, ಶ್ರವಣದೋಷ, ಬುದ್ಧಿಮಾಂದ್ಯತೆ, ದೃಷ್ಟಿದೋಷ, ಮಾನಸಿಕ ಅಸ್ವಸ್ಥತೆ, ಬಹುವಿಧದ ಅಂಗವಿಕಲತೆ ಹಾಗೂ ಕುಷ್ಠರೋಗ ನಿವಾರಿತರನ್ನು ಪತ್ತೆಮಾಡಿ ಪ್ರಮಾಣ ಪತ್ರ ನೀಡುವ ವ್ಯವಸ್ಥೆಯಿದೆ. ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ವೈದ್ಯಕೀಯ ಮಂಡಳಿಯಿದ್ದು, ದೃಷ್ಟಿದೋಷ, ದೈಹಿಕ ಅಂಗವಿಕಲತೆಗೆ ಮಾತ್ರ ಪ್ರಮಾಣ ಪತ್ರ ನೀಡಲಾಗುತ್ತದೆ. ಶೇ 40ರಷ್ಟು ಅಂಗವಿಕಲ್ಯ ಇದ್ದವರಿಗೆ ದೃಢೀಕರಣ ಪತ್ರ ನೀಡಬೇಕು. ಆದರೆ, ಹಣ ನೀಡಿದರೆ ಕಡಿಮೆ ಅಂಗವಿಕಲತೆವುಳ್ಳವರಿಗೂ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಆರೋಪಿಸುತ್ತಾರೆ ಅವರು.

ಪುನರ್ವಸತಿ ಕೇಂದ್ರ ಆರಂಭ
ನಗರದ ಮೋದಿ ಕಾಂಪೌಂಡ್‌ನಲ್ಲಿ ಜಿಲ್ಲಾ ಎಸ್‌ಎಸ್‌ ಮೆಡಿಕಲ್‌ ಕಾಲೇಜು ಸಹಯೋಗದಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಕಾರ್ಯಾರಂಭವಾಗಿದೆ. ಜಿಲ್ಲಾಧಿಕಾರಿ ನೇತೃತ್ವ ವಹಿಸುತ್ತಾರೆ. ಪ್ರತಿವರ್ಷ ಅದಕ್ಕೆ ₨ 19 ಲಕ್ಷ ಅನುದಾನವೂ ಬಿಡುಗಡೆ ಆಗುತ್ತದೆ. ಅದು ಅಂಗವಿಕಲರ ಕಲ್ಯಾಣಕ್ಕೆ ಬಳಕೆಯಾಗಬೇಕು ಎಂಬುದು ಎಲ್ಲರ ಹಂಬಲ.

ಅಂಗವಿಕಲರ ತಪಾಸಣೆ ನಡೆಸುವುದು, ಅರಿವು ಮೂಡಿಸುವುದು, ಅಗತ್ಯ ಸಾಧನ ಸಲಕರಣೆ ವಿತರಣೆ ಮಾಡುವುದು, ದೈಹಿಕ, ಔದ್ಯೋಗಿಕ, ವಾಕ್‌ಚಿಕಿತ್ಸೆ ಸೇವೆ ಒದಗಿಸುವುದು ಕೇಂದ್ರದ ಪ್ರಮುಖ ಉದ್ದೇಶಗಳು.

ವೃತ್ತಿ ತರಬೇತಿ ಕೇಂದ್ರವೂ ಮಂಜೂರು
ಅಂಗವಿಕಲರಿಗಾಗಿ ವೃತ್ತಿ ತರಬೇತಿ ಕೇಂದ್ರವೊಂದು ದಾವಣಗೆರೆಯಲ್ಲಿ ನಿರ್ಮಾಣವಾಗಲಿದೆ! ಅದಕ್ಕಾಗಿ ದೇವರಾಜ ಅರಸು ಬಡಾವಣೆಯ ಅಂಧ ಹೆಣ್ಣುಮಕ್ಕಳ ಸರ್ಕಾರಿ ಶಾಲೆಯಲ್ಲಿ ಜಾಗ ನಿಗದಿ ಮಾಡಲಾಗಿದೆ. ಹಿಂದುಳಿದ ಪ್ರದೇಶಾಭಿವೃದ್ಧಿ ಅನುದಾನದ ಅಡಿ ₨ 70 ಲಕ್ಷ ಅನುದಾನ ಮಂಜೂರಾಗಿದ್ದು, ಅಲ್ಲಿ ಅಂಗವಿಕಲರಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಾಗುವ ಎಲ್ಲ ರೀತಿಯ ತರಬೇತಿ ನೀಡಲಾಗುವುದು. ಅಂಗವಿಕಲರಿಗೆ ಬರುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಜಿ.ಎಸ್‌.ಶಶಿಧರ್‌ ಹಾಗೂ ಯೋಜನಾ ಸಹಾಯಕ ಅಧಿಕಾರಿ ಉಮೇಶ್‌.

ದಾವಣಗೆರೆ ಸಂಸ್ಥೆಗೆ ಪ್ರಶಸ್ತಿ 
ಅಂಗವಿಕಲರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ನಗರದ ವಿನಾಯಕ ಎಜುಕೇಷನ್‌ ಸೊಸೈಟಿಗೆ ಪ್ರಸಕ್ತ ಸಾಲಿನ ರಾಜ್ಯ ಪ್ರಶಸ್ತಿ ಒಲಿದಿದೆ.

ಡಿಸಿಎಂ ಟೌನ್‌ಶಿಪ್‌ನಲ್ಲಿರುವ ಶಾಲೆಯಲ್ಲಿ 1ರಿಂದ 10ನೇ ತರಗತಿಯ ತನಕ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಡಿ.3ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಚ್‌.ವಿ.ಗೋಪಾಲಪ್ಪ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT