ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಿಸದಿರಲು ಕಲ್ಮಾಡಿ ನಿರ್ಧಾರ

Last Updated 13 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸುರೇಶ್ ಕಲ್ಮಾಡಿ ಅವರು ಮುಂಬರುವ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಮಾತ್ರವಲ್ಲ ಕ್ರೀಡೆಯ ಆಡಳಿತದಿಂದ ದೂರ ಸರಿಯುವ ಸೂಚನೆ ನೀಡಿ ಅಚ್ಚರಿಗೆ ಕಾರಣರಾಗಿದ್ದಾರೆ.

ಶನಿವಾರ ಈ ಮಹತ್ವದ ನಿರ್ಧಾರ ಪ್ರಕಟಿಸಿದ ಕಲ್ಮಾಡಿ, ಮುಂದಿನ ತಲೆಮಾರಿನ ಕ್ರೀಡಾ ಆಡಳಿತಗಾರರಿಗೆ ಹಾದಿಯೊದಗಿಸುವುದಾಗಿ ನುಡಿದಿದ್ದಾರೆ. ಕಲ್ಮಾಡಿ 16 ವರ್ಷಗಳ ಕಾಲ ಐಒಎ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಕಲ್ಮಾಡಿ ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿದ್ದರು.

ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು. ಮಾತ್ರವಲ್ಲ ನವೆಂಬರ್ 25 ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿಯೂ ತಿಳಿಸಿದ್ದರು. ಆದರೆ ಇದೀಗ ಅವರ ಹಠಾತ್ ನಿರ್ಧಾರ ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.

`ನಾಲ್ಕು ಅವಧಿಗಳ ಕಾಲ ಐಒಎ ಅಧ್ಯಕ್ಷನಾಗಿದ್ದುಕೊಂಡು ನಾನು ದೇಶದ ಕ್ರೀಡೆಗಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ಹೊಸಬರಿಗೆ ಅವಕಾಶ ಮಾಡಿಕೊಡುತ್ತಿದ್ದೇನೆ~ ಎಂದು ಕಲ್ಮಾಡಿ ನುಡಿದರು. `ಕುಟುಂಬ ಹಾಗೂ ನನ್ನ ಕ್ಷೇತ್ರವಾಗಿರುವ ಪುಣೆಯ ಮೇಲೆ ಗಮನ ಹರಿಸುವುದು ನನ್ನ ಗುರಿ. ನನ್ನ ನಾಯಕತ್ವದ ಮೇಲೆ ವಿಶ್ವಾಸವಿರಿಸಿದ್ದ ಎಲ್ಲ ಕ್ರೀಡಾ ಫೆಡರೇಷನ್‌ಗಳಿಗೆ ಹಾಗೂ ಕ್ರೀಡಾ ವೃತ್ತಿಪರರಿಗೆ ಕೃತಜ್ಞತೆ ಸಲ್ಲಿಸುವೆನು.

ಮುಂದಿನ ದಿನಗಳಲ್ಲಿ ಭಾರತ ಪ್ರಮುಖ ಕ್ರೀಡಾಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ನನ್ನದು~ ಎಂದು ಅವರು ಹೇಳಿದರು.  ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮತ್ತು ಐಒಎ ನಡುವೆ ಇತ್ತೀಚೆಗೆ `ಮಾತಿನ ಸಮರ~ ನಡೆದಿತ್ತು. ಅದರ ಬೆನ್ನಲ್ಲೇ ಕಲ್ಮಾಡಿ ನಿರ್ಧಾರ ಹೊರಬಿದ್ದಿದೆ. ಕಲ್ಮಾಡಿ ಅವರನ್ನು ಎಲ್ಲ ರೀತಿಯ ಹುದ್ದೆಗಳಿಂದ ಅಮಾನತು ಮಾಡುವಂತೆ ಐಒಸಿಯು ಭಾರತ ಒಲಿಂಪಿಕ್ ಸಂಸ್ಥೆ ಮೇಲೆ ಒತ್ತಡ ಹೇರಿತ್ತು.ಆದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಐಒಎ ನಿರಾಕರಿಸಿತ್ತು.

ಒಂದು ವಾರದ ಹಿಂದೆಯಷ್ಟೇ ಐಒಎಗೆ ಪತ್ರ ಬರೆದಿದ್ದ ಐಒಸಿ, ಕಲ್ಮಾಡಿ ಹಾಗೂ ಅವರ ಬೆಂಬಲಿಗರಾಗಿರುವ ಲಲಿತ್ ಭಾನೋಟ್ ಮತ್ತು ವಿ.ಕೆ. ಮಲ್ಹೋತ್ರ ಅವರನ್ನು ಹುದ್ದೆಯಿಂದ ತಕ್ಷಣ ವಜಾಗೊಳಿಸಬೇಕೆಂದು ತಿಳಿಸಿತ್ತು. ಮಾತ್ರವಲ್ಲ ಮುಂಬರುವ ಚುನಾವಣೆಯಲ್ಲಿ    ಸ್ಪರ್ಧಿಸದಿರುವಂತೆ ಕಲ್ಮಾಡಿಗೆ ಸೂಚಿಸಿತ್ತು.

ಕಲ್ಮಾಡಿ ಹಿಂದೆ ಸರಿದಿರುವ ಕಾರಣ ಐಒಎ ಚುನಾವಣೆಯ ಹಾದಿ ಸುಗಮವಾದಂತಾಗಿದೆ. ಭಾರತ ಬಾಕ್ಸಿಂಗ್ ಫೆಡರೇಷನ್ ಮುಖ್ಯಸ್ಥ ಅಭಯ್ ಚೌತಾಲಾ ಮತ್ತು ಐಒಎ ಕಾರ್ಯದರ್ಶಿ ರಣಧೀರ್ ಸಿಂಗ್ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ನೇರ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT