ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟಕ್ಕೆ ಸಿಲಿಂಡರ್ ಬಳಕೆ

ಬೋಧಗಯಾ: ವಿಧ್ವಂಸಕ ಕೃತ್ಯಕ್ಕೆ ಉಗ್ರರ ಹೊಸ ವಿಧಾನ, ಒಬ್ಬನ ವಶ
Last Updated 8 ಜುಲೈ 2013, 19:37 IST
ಅಕ್ಷರ ಗಾತ್ರ

ಗಯಾ/ಪಟ್ನಾ/ನವದೆಹಲಿ (ಪಿಟಿಐ): ಬೋಧಗಯಾದಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಉಗ್ರರು ಸಣ್ಣ ಗಾತ್ರದ ಅನಿಲ ಸಿಲಿಂಡರ್‌ಗಳನ್ನು  ಬಳಸಿದ್ದು, ಕಾಶ್ಮೀರದ ಹೊರಗಡೆ ಸ್ಫೋಟದ ಕೃತ್ಯಕ್ಕೆ ಸಿಲಿಂಡರ್ ಬಳಸಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ.

ಈ ಸಿಲಿಂಡರ್‌ಗಳಲ್ಲಿ ಅಮೋನಿಯಂ ನೈಟ್ರೇಟ್, ಗಂಧಕ, ಪೊಟಾಷಿಯಂ ದ್ರಾವಣ ಮತ್ತು ಸಿಡಿಯುವಂತಹ ಸಣ್ಣ ಸಣ್ಣ ಗಾತ್ರದ ಘನ ಮಿಶ್ರಣಗಳನ್ನು ತುಂಬಲಾಗಿತ್ತು. ಆದರೆ, ಇವು ಕಡಿಮೆ ತೀವ್ರತೆಯ ಸ್ಫೋಟಕಗಳಾಗಿವೆ ಎಂದು ಗೃಹ ಸಚಿವಾಲಯಕ್ಕೆ ಸಲ್ಲಿಸಲಾಗಿರುವ ಪ್ರಾಥಮಿಕ ವರದಿಯಲ್ಲಿ ಹೇಳಲಾಗಿದೆ.

ಈ ಮಧ್ಯೆ, ಭಾನುವಾರ ಸ್ಫೋಟಗೊಂಡಿದ್ದು ಒಟ್ಟು 10 ಬಾಂಬ್‌ಗಳು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮಹಾರಾಷ್ಟ್ರದಲ್ಲೂ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಟ್ನಾದಲ್ಲೂ ದೃಢಪಡಿಸಿದ್ದಾರೆ. ಈ ಮೊದಲು ಒಂಬತ್ತು ಬಾಂಬ್‌ಗಳು ಸ್ಫೋಟಗೊಂಡಿದ್ದವು ಎಂದು ಹೇಳಲಾಗಿತ್ತು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಷ್ಟ್ರೀಯ ಭದ್ರತಾ ದಳ (ಎನ್‌ಎಸ್‌ಜಿ) ತಂಡಗಳು ಬೋಧಗಯಾ ಪಟ್ಟಣ ಮತ್ತು ಮಹಾಬೋಧಿ ದೇವಾಲಯದಲ್ಲಿ ಭಾನುವಾರದಿಂದಲೇ ಸಾಕ್ಷ್ಯಗಳನ್ನು ಸಂಗ್ರಹ ಕಾರ್ಯದಲ್ಲಿ ತೊಡಗಿವೆ.

ಘಟನೆ ಸಂಬಂಧ ಪೊಲೀಸರು ಒಬ್ಬ ಸ್ಥಳೀಯನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಮಹಾಬೋಧಿ ದೇವಾಲಯದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಚಿತ್ರೀಕರಣವಾಗಿರುವ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದೆ.

ಮೂರು ನಾಲ್ಕು ಉಗ್ರರಿಂದ ಕೃತ್ಯ- ಶಂಕೆ: ಮೂರು ನಾಲ್ಕು ಉಗ್ರರು ಬಾಂಬ್ ಇರಿಸಿರಬಹುದೆಂದು ಶಂಕಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ  ವಿಶ್ಲೇಷಿಸಿದಾಗ ಕನಿಷ್ಠ ಮೂರು ನಾಲ್ಕು ಉಗ್ರರು ಬಾಂಬ್‌ಗಳನ್ನು ಚೀಲ ಇಲ್ಲವೇ ರಟ್ಟಿನ ಡಬ್ಬಗಳಲ್ಲಿ ತಂದು ಇರಿಸಿರುವ ಸಾಧ್ಯತೆ ಇದೆ. ಆದರೆ, ದೃಶ್ಯಾವಳಿಯ ಬಿಂಬಗಳು ಶಂಕಿತರನ್ನು ನಿಖರವಾಗಿ ಗುರುತಿಸುವಷ್ಟು ಸ್ಪಷ್ಟವಾಗಿಲ್ಲ ಎಂದು ಗೃಹ ಸಚಿವಾಲಯದ ಮೂಲಗಳು ಹೇಳಿವೆ.
7ನೇ ಪುಟ ನೋಡಿ

ಸ್ಫೋಟಕ್ಕೆ ಸಿಲಿಂಡರ್ ಬಳಕೆ
ವಿಧ್ವಂಸಕರು ಈಗ ಸಣ್ಣ ಗಾತ್ರದ ಸಿಲಿಂಡರ್‌ಗಳನ್ನು ಬಳಸಿ ಸ್ಫೋಟಿಸುವ ಹೊಸ ವಿಧಾನ  ಕಂಡುಕೊಂಡಿದ್ದಾರೆ. ಇದರ ಸಂಯೋಜನೆ ಕೂಡ ಸುಧಾರಿತ ಸ್ಫೋಟಕ ಸಾಧನದಲ್ಲಿ (ಐಇಡಿ) ಬಳಸುವ ತಂತ್ರಜ್ಞಾನದಂತೆಯೇ ಇರುತ್ತದೆ.

ಸರಣಿ ಬಾಂಬ್ ಸ್ಫೋಟಿಸಿದ ಸಮಯ ಮತ್ತು ಕಡಿಮೆ ಪ್ರಮಾಣದ ಸ್ಫೋಟಕ  ಬಳಸಿರುವುದನ್ನು ನೋಡಿದರೆ, ಉಗ್ರರು ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವ ಸಂದೇಶವನ್ನು ಈ ಮೂಲಕ ನೀಡಿದಂತೆ ಇದೆ ಎಂದು ಮೂಲಗಳು ತಿಳಿಸಿವೆ.

ಬೋಧಗಯಾಕ್ಕೆ ನಿತ್ಯ ಅಂದಾಜು ಮೂರು ಸಾವಿರ ವಿದೇಶಿ ಯಾತ್ರಿಗಳು ಮತ್ತು ನೂರಾರು ಸಂಖ್ಯೆಯಲ್ಲಿ  ದೇಶಿಯಾತ್ರಿಗಳು ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಭದ್ರತೆ ಕಲ್ಪಿಸುವುದೂ ಕೂಡ ಕಷ್ಟಕರ ಕೆಲಸ ಎಂದೂ ಮೂಲಗಳು ಮಾಹಿತಿ ನೀಡಿವೆ.

ಮಹಾಬೋಧಿ ದೇವಾಲಯಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಭದ್ರತೆ ಒದಗಿಸುವಂತೆ ಬಿಹಾರದಿಂದ ಯಾವುದೇ ಪ್ರಸ್ತಾವ ಬಂದಿಲ್ಲ. ಇಂತಹ ಪ್ರಸ್ತಾವ ಬಂದರೆ ಅದನ್ನು ಪರಿಶೀಲಿಸಲಾಗುವುದು. ಈವರೆಗೂ ಧಾರ್ಮಿಕ ಕ್ಷೇತ್ರಗಳಿಗೆ ಸಿಐಎಸ್‌ಎಫ್ ಭದ್ರತೆ ಒದಗಿಸಿಲ್ಲ. ಕೆಲವು ಕಡೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಭದ್ರತೆಯನ್ನು ಮಾತ್ರ ಕಲ್ಪಿಸಲಾಗಿದೆ ಎಂದು ಗೃಹ ಸಚಿವಾಲಯ ಮೂಲಗಳು ಹೇಳಿವೆ.

ವಶಕ್ಕೆ ಪಡೆದವ ಸ್ಥಳೀಯ: ಮಹಾಬೋಧಿ ದೇವಾಲಯದಲ್ಲಿ ಸಾಕ್ಷ್ಯ ಸಂಗ್ರಹ ನಡೆಸುತ್ತಿದ್ದಾಗ ಮತದಾರರ ಚೀಟಿಯೊಂದು ದೊರಕಿದೆ. ಇದರ ಆಧಾರದ ಮೇಲೆ ಗಯಾ ಜಿಲ್ಲೆಯ ಬಾರಾಚಟ್ಟಿ ಗ್ರಾಮದ ವಿನೋದ್ ಕುಮಾರ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಿಚಾರಣೆ ನಡೆಯುತ್ತಿದೆ ಎಂದು ಬಿಹಾರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಭಯಾನಂದ ಪಟ್ನಾದಲ್ಲಿ ತಿಳಿಸಿದ್ದಾರೆ.

`ಘಟನಾ ಸ್ಥಳದಲ್ಲಿ ಟೈಂ ಬಾಂಬ್‌ಗಳನ್ನು ಎಲ್ಲೆಲ್ಲಿ ಇರಿಸಬೇಕು ಎಂದು ಸ್ಥಳ ಗುರುತು ಮಾಡಿಕೊಂಡ ಚೀಟಿಯೊಂದು ದೊರೆತಿದೆ. ಸ್ಥಳಗಳ ಹೆಸರನ್ನು ಇಂಗ್ಲಿಷ್ ಮತ್ತು ಉರ್ದುವಿನಲ್ಲಿ ಬರೆಯಲಾಗಿದೆ. ಸ್ಥಳದಲ್ಲಿ ಟಿಎನ್‌ಟಿ (ಟ್ರೈನೈಟ್ರೊಟಾಲ್ವೀನ್) ಅಥವಾ ಬೇರೆ ಸ್ಫೋಟಕಗಳನ್ನು ಬಳಸಿದ ಪುರಾವೆ ದೊರೆತಿಲ್ಲ' ಎಂದು ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಕೇಂದ್ರಕ್ಕೆ ಪ್ರಸ್ತಾವ: 2002ರಲ್ಲೇ ವಿಶ್ವಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಮಹಾಬೋಧಿ ದೇವಾಲಯಕ್ಕೆ ಸಿಐಎಸ್‌ಎಫ್ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಈ ಕುರಿತು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುವುದಾಗಿ ಹೇಳಿದ್ದಾರೆ.

`ಸ್ಫೋಟದ ಹಿಂದೆ ಮಾವೊವಾದಿಗಳ ಕೈವಾಡ ಏನಾದರೂ ಇದೆಯೇ' ಎಂಬ ಪ್ರಶ್ನೆಗೆ ನುಣುಚಿಕೊಳ್ಳುವ ಉತ್ತರ ನೀಡಿದ ನಿತೀಶ್ ಮತ್ತು ಡಿಜಿಪಿ, `ಅದು ತನಿಖೆ ನಂತರವಷ್ಟೆ ಗೊತ್ತಾಗಲಿದೆ' ಎಂದಿದ್ದಾರೆ.

ಸಿಸಿಟಿವಿ ದೃಶ್ಯಾವಳಿ: ಮಹಾಬೋಧಿ ವೃಕ್ಷದ ಎಡ ಭಾಗದಲ್ಲಿ ನಸುಕಿನ 5.25ಕ್ಕೆ ಮೊದಲ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೂ ಕೆಲ ಸಮಯ ಮೊದಲು ಒಬ್ಬ ಯುವಕ ಮತ್ತು ಯುವತಿಯೊಬ್ಬಳು ರಸ್ತೆಯಲ್ಲಿ ನಡೆದುಹೋಗುತ್ತಿದ್ದರು. ಸ್ಫೋಟದ ಶಬ್ದದಿಂದ ವಿಚಲಿತರಾದ ಅವರು, ಕ್ಷಣ ಕಾಲ ತಬ್ಬಿಬ್ಬಾಗಿ ನಿಂತು ನಂತರ ಅಲ್ಲಿಂದ ಬೇಗ ಬೇಗನೆ ಹೊರಟು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡಿದೆ.

ಮತ್ತೊಂದು ದೃಶ್ಯದಲ್ಲಿ 30 ವರ್ಷದ ಯುವಕನೊಬ್ಬ ಸ್ಫೋಟ ಸಂಭವಿಸುವುದಕ್ಕೂ ಕೆಲ ನಿಮಿಷ ಮೊದಲು ಆ ಸ್ಥಳದಲ್ಲಿ ಕಾಣಿಸಿಕೊಂಡು, ನಂತರ ಸ್ಥಳದಿಂದ ನಿರ್ಗಮಿಸಿರುವುದು ಕಂಡು ಬಂದಿದೆ.

ಸ್ಫೋಟದಿಂದ ಉಂಟಾದ ಹೊಗೆ ಮತ್ತು ಆ ಸಮಯದಲ್ಲಿ ದೇವಾಲಯದ ಆವರಣದೊಳಗೆ 100ಕ್ಕೂ ಜನರಿದ್ದ ದೃಶ್ಯಗಳು ಕೂಡ ಕ್ಯಾಮೆರಾದಲ್ಲಿ ದಾಖಲಾಗಿವೆ.

ಎರಡನೇ ಸ್ಫೋಟವು ಮಹಾಬೋಧಿ ದೇವಾಲಯದಿಂದ 50 ಮೀಟರ್ ಅಂತರದಲ್ಲಿರುವ ರತ್ನಗಿರಿ ಮಂದಿರದ ಬಳಿ ಸಂಭವಿಸಿದೆ. ಇದರ ಶಬ್ದ ಮಾತ್ರ ದಾಖಲಾಗಿದೆ. ಮೂರನೇ ದೃಶ್ಯಾವಳಿಯಲ್ಲಿ ತಾರಾದೇವಿ ದೇಗುಲದ ಬಳಿ ಸಂಭವಿಸಿದ ಸ್ಫೋಟದಿಂದ ಉಂಟಾದ ಹೊಗೆ ಮತ್ತು ಭಯಭೀತರಾದ ಯಾತ್ರಿಗಳು ಓಡಿಹೋಗುತ್ತಿರುವ ದೃಶ್ಯಗಳು ಚಿತ್ರೀಕರಣಗೊಂಡಿವೆ.

ಗಾಯಾಳುಗಳು ಪ್ರಾಣಾಪಾಯದಿಂದ ಪಾರು: ಸ್ಫೋಟದಿಂದ ಗಾಯಗೊಂಡಿರುವ ಇಬ್ಬರು ವಿದೇಶಿ ಬಿಕ್ಕುಗಳು ಪ್ರಾಣಾಪಾಯದಿಂದ ದೂರವಾಗಿದ್ದಾರೆ ಎಂದು ಗಯಾದ ಅನುಗ್ರಹ ನಾರಾಯಣ ಮಗಧ ವೈದ್ಯಕೀಯ ಕಾಲೇಜಿನ ಆಸ್ಪತ್ರೆ ಮೂಲಗಳು ಹೇಳಿವೆ.

ಉಗ್ರರು ಇರಿಸಿದ್ದು 13 ಬಾಂಬ್- ಶಿಂಧೆ
ತಾಲೆಗಾಂವ್ (ಮಹಾರಾಷ್ಟ್ರ):
  ಮಹಾಬೋಧಿ ದೇವಾಲಯದ ಆವರಣದಲ್ಲಿ ಉಗ್ರರು 13 ಬಾಂಬ್‌ಗಳನ್ನು ಇರಿಸಿದ್ದರು. 10 ಬಾಂಬ್‌ಗಳು ಸ್ಫೋಟಿಸಿವೆ. ಮೂರನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸೋಮವಾರ ಹೇಳಿದ್ದಾರೆ.

ಮುನ್ನೆಚ್ಚರಿಕೆ ನಿರ್ಲಕ್ಷ್ಯ?
ಪಟ್ನಾ: ಕಳೆದ ಆರು ತಿಂಗಳಲ್ಲಿ ಕೇಂದ್ರ ಗುಪ್ತಚರ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯ ಎರಡು ಬಾರಿ ಭಯೋತ್ಪಾದಕರ ದಾಳಿಯ ಸಾಧ್ಯತೆಗಳ ಬಗ್ಗೆ ಸೂಚನೆ ನೀಡಿದ್ದರೂ ಬೋಧಗಯಾದ ಮಹಾಬೋಧಿ ದೇವಾಲಯದ ಬಾಗಿಲಲ್ಲಿ ಅಳವಡಿಸಲಾಗಿರುವ ಲೋಹ ಶೋಧಕವನ್ನು ದಾಟುವಾಗ ತಪಾಸಣೆ ಮಾಡುವ ವ್ಯವಸ್ಥೆ ಇರಲಿಲ್ಲ.

ಭಾನುವಾರ ಬಾಂಬ್ ಸ್ಫೋಟ ಸಂಭವಿಸುವವರೆಗೂ ದೇವಾಲಯಕ್ಕೆ ಯಾರಾದರೂ ಪ್ರವೇಶಿಸಬಹುದಾಗಿತ್ತು. ಇಲ್ಲಿ ಇಬ್ಬರು ಖಾಸಗಿ ಭದ್ರತಾ ಸಿಬ್ಬಂದಿಯ ಕಾವಲು ಬಿಟ್ಟರೆ ಬೇರೆ ಭದ್ರತಾ ವ್ಯವಸ್ಥೆ ಇರಲಿಲ್ಲ.

ಸರ್ಫುಲ್ ರೆಹಮಾನ್ ಮತ್ತು ಸಹಿದುರ್ ರೆಹಮಾನ್ ಎಂಬಿಬ್ಬರು ಭಯೋತ್ಪಾದಕರು ಬಿಹಾರಕ್ಕೆ ನುಸುಳಿದ್ದಾರೆ, ಎಚ್ಚರ ವಹಿಸಬೇಕು ಎಂದು ಗುಪ್ತಚರ ಇಲಾಖೆ ಮುನ್ಸೂಚನೆ ನೀಡಿದ್ದರೂ ವಿಶ್ವವಿಖ್ಯಾತ ದೇವಾಲಯಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಿರಲಿಲ್ಲ.

ದೇವಾಲಯಕ್ಕೆ ಅಳವಡಿಸಿರುವ 22 ಸಿಸಿಟಿವಿಗಳಲ್ಲಿ 16 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. 2012ರ ಅಕ್ಟೋಬರ್ ಮತ್ತು 2013ರ ಜೂನ್‌ನಲ್ಲಿ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಹೇಳಲಾಗಿದೆ.

ಪೊಲೀಸರಿಂದ ಲೋಪ ಆಗಿಲ್ಲ: ನಿತೀಶ್
ಪಟ್ನಾ: ಬೋಧಗಯಾ ಅಥವಾ ರಾಷ್ಟ್ರದ ಇತರೆಡೆ ಈ ಮೊದಲು ನಡೆದ ಉಗ್ರರ ದಾಳಿಗಳನ್ನು ಮನುಷ್ಯ ಮಾತ್ರರಿಂದ ತಡೆಯಲು ಸಾಧ್ಯವಿರಲಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಸೋಮವಾರ ಹೇಳಿದ್ದಾರೆ.

ಕಟ್ಟೆಚ್ಚರದ ಹಿನ್ನೆಲೆಯಲ್ಲಿ ಮಹಾಬೋಧಿ ದೇವಾಲಯದ ಒಳಗೆ ಮತ್ತು ಹೊರಗೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ರಾಜ್ಯದ ಪೊಲೀಸರಿಂದ ಯಾವುದೇ ಲೋಪ ಆಗಿಲ್ಲ. ಆದರೆ ಇಂತಹ ದಾಳಿಗಳನ್ನು ತಡೆಯಲು ಸಾಧ್ಯವೆಂದು ಹೇಳಲು ಯಾರಿಗೂ ಆಗುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

(ಪಿಟಿಐ ವರದಿ):  ಬುದ್ಧಗಯಾ ದೇವಾಲಯಕ್ಕೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಅವರು ಸೋಮವಾರವೂ ತಳ್ಳಿ ಹಾಕಿದ್ದಾರೆ.

ಮೈತ್ರಿ ತೊರೆದ ಬಳಿಕ ರಾಜ್ಯ ಸರ್ಕಾರ `ದುರ್ಬಲ'ವಾಗಿದೆ ಎಂಬ ಬಿಜೆಪಿಯ ಆರೋಪವನ್ನು ನಿರಾಕರಿಸಿದ ಅವರು, ಬಿಜೆಪಿಯು ಅಧಿಕಾರಕ್ಕಾಗಿ ಹತಾಶೆಯಿಂದ ಆರ್‌ಜೆಡಿ ಜೊತೆ ಕೈ ಜೋಡಿಸಿ ಇಂತಹ ಆರೋಪ ಮಾಡುತ್ತಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT