ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಬಳಕೆಗೆ ನಿರ್ಬಂಧ ಸಲ್ಲದು

Last Updated 15 ಅಕ್ಟೋಬರ್ 2011, 9:45 IST
ಅಕ್ಷರ ಗಾತ್ರ

 ಗೋಣಿಕೊಪ್ಪಲು: ಹೊರರಾಜ್ಯಗಳಿಗೆ ಅಕ್ರಮವಾಗಿ ಸಾಗಿಸುತ್ತಿರುವ ಮರಳನ್ನು ತಡೆಗಟ್ಟಬೇಕು. ಮರಳು  ನೀತಿ ಜಾರಿಯಾಗುವವರೆಗೆ ಸ್ವಂತ ಬಳಕೆಗೆ ನಿರ್ಬಂಧ ಹೇರಬಾರದು ಎಂದು  ಶ್ರೀಮಂಗಲದಲ್ಲಿ  ಶುಕ್ರವಾರ ನಡೆದ  ಮರಳು ದಂಧೆ ಕುರಿತ ಸಾರ್ವಜನಿಕ ಸಭೆಯಲ್ಲಿ ಒತ್ತಾಯಿಸಲಾಯಿತು.

   ಶ್ರೀಮಂಗಲ  ಹೋಬಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಮಾತನಾಡಿ, ಶ್ರೀಮಂಗಲ ಭಾಗದಲ್ಲಿ ಹೆಚ್ಚು ಮರಳು ಕಂಡು ಬರುತ್ತಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಭಾಗದಲ್ಲಿ ಮರಳು ತೆಗೆಯಲು ಜಾಗ ಗುರುತಿಸಿಲ್ಲ. ಆದ್ದರಿಂದ ನೂತನ ಮರಳು ನೀತಿ ಈ ಭಾಗಕ್ಕೆ ಅನ್ವಯಿಸುವುದಿಲ್ಲ ಎಂದು ತಿಳಿಸಿದರು.

  ಹೀಗಿದ್ದರೂ ಅಧಿಕಾರಿಗಳು ಮತ್ತು  ಪೊಲೀಸರು ಕಿರುಕುಳ  ನೀಡುತ್ತಿದ್ದಾರೆ. ಇಲ್ಲಿನ ಜನತೆ ಮೊದಲಿನಿಂದಲೂ ಸ್ವಂತಕ್ಕೆ ಮರಳನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ನಿಬರ್ಂಧ ಹೇರಿರುವುದು ಖಂಡನೀಯ ಎಂದು ಜನರು ದೂರಿದರು.

  ಉದ್ಯೋಗ  ಖಾತ್ರಿ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಮರಳು ನೀತಿಯಿಂದ ತೊಂದರೆ ಎದುರಾಗಿದೆ. ಮರಳು ಸಿಗದೆ ಶೌಚಾಲಯ, ಇತರ ಕಟ್ಟಡ ನಿರ್ಮಾಣ  ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ ಎಂದರು.

  ಸ್ವಂತ ಬಳಕೆಗೆ ಮರಳು ತೆಗೆಯಲು ಅಡ್ಡಿಮಾಡುತ್ತಿರುವ ಅಧಿಕಾರಿಗಳು ಹೊರರಾಜ್ಯಕ್ಕೆ ಮರಳು  ಸಾಗಿಸುವ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

  ಮರಳು ದಂಧೆಕೋರರು ಅಧಿಕಾರಿಗಳಿಗೆ ಲಂಚ  ನೀಡಿ  ಹೆಚ್ಚಿನ ಬೆಲೆಗೆ  ಮರಳು ಮಾರುತ್ತಿದ್ದಾರೆ. ಈಗ ನೂತನ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಅದರಂತೆ 10 ಕಿ.ಮೀ ದೂರದವರೆಗೆ ಟ್ರ್ಯಾಕ್ಟರ್ ಮರಳಿಗೆ ರೂ.1500, ಸ್ವರಾಜ್‌ಮಜ್ದ ಲಾರಿ ಮರಳಿಗೆ ರೂ.5 ಸಾವಿರ ನೀಡುವಂತೆಯೂ ತೀರ್ಮಾನಿಸಲಾಯಿತು. ಈ ನಿರ್ಣಯಗಳನ್ನು ಸರ್ಕಾರ ಜಾರಿಗೆ ತರಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

  ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಣ್ಣುವಂಡ ನವೀನ್, ಶ್ರೀಮಂಗಲ ಕಂದಾಯಾಧಿಕಾರಿ ದಿವಾಕರ್ ಮಾಹಿತಿ ನೀಡಿದರು.

   ಸಾರ್ವಜನಿಕಾ ಹಿತರಕ್ಷಣಾ ಸಮಿತಿ ಹಾಗೂ ನಾಗರಿಕ ಹೋರಾಟ  ಸಮಿತಿ ಸಹಯೋಗದಲ್ಲಿ ನಡೆದ ಸಭೆಯಲ್ಲಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾಣೀರ ವಿಜಯ್ ನಂಜಪ್ಪ, ತಾ.ಪಂ. ಸದಸ್ಯ ಅರುಣ್ ಭೀಮಯ್ಯ, ಸ್ಥಳೀಯ ಗ್ರಾ.ಪಂ. ಉಪಾಧ್ಯಕ್ಷೆ ಪಂದ್ಯಂಡ ಮುತ್ತಮ್ಮ,ಸದಸ್ಯರಾದ  ಅಜ್ಜಮಾಡ ಜಯ, ವಾಣಿ ಮಾದಪ್ಪ,
  ದಾಕ್ಷಾಯಿಣಿ, ಟಿ ಶೆಟ್ಟಿಗೇರಿ ಗ್ರಾ.ಪಂ. ಸದಸ್ಯ ಮಚ್ಚಮಾಡ ಶ್ಯಾಮ್, ಕಾವೇರಿ ಸೇನೆಯ ಬೊಜ್ಜಂಗಡ ರಾಜು ಅಯ್ಯಪ್ಪ,  ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾದ ಮಾಣಿರ ಮುತ್ತಪ್ಪ,  ಚಿಮ್ಮಂಗಡ ಗಣೇಶ್, ಅಜ್ಜಮಾಡ ಶಂಕರು ನಾಚಪ್ಪ, ಕೋಟ್ರಮಾಡ ಅರುಣ್ ಅಪ್ಪಣ್ಣ, ಮಚ್ಚಮಾಡ ಬೋಪಯ್ಯ, ಮಂದಮಾಡ ತೇಜಪ್ಪ,  ಚೆಟ್ಟಂಗಡ ರಘುನಾಣಯ್ಯ, ಗುಡಿಯಂಗಡ ಗಣಪತಿ, ಬಾಚಂಗಡ ದೇವಯ್ಯ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT