ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವರಾತ್ಮದ ಸಂಗೀತ ಸಂಜೆ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ಸಂಜೆಯ ಬೇಸರ ಕಳೆಯಲು ಫ್ರೀಡಂ ಪಾರ್ಕ್‌ಗೆ ಮಕ್ಕಳೊಂದಿಗೆ ಬಂದ ಕೆಲವರು ಅಲ್ಲಿ ಚಿಮ್ಮುವ ಕಾರಂಜಿಯತ್ತ ಮುಖಮಾಡಿ ನಿಂತು ತಂಪಾಗುತ್ತಿದ್ದರು. ಅಲ್ಲೇ ನಿಂತಿದ್ದ ಚಿಗುರು ಮೀಸೆಯ ತರುಣ ಮುನಿಸಿಕೊಂಡ ತನ್ನ ಗೆಳತಿಯ ಮುಖದಲ್ಲಿ ನಗು ಮೂಡಿಸುವ ಪ್ರಯತ್ನದಲ್ಲಿದ್ದ. ಹತ್ತಿರವಿದ್ದ ಕಟೌಟ್‌ಗಳ ಕಡೆ ಕೈ ತೋರಿಸಿ ಏನೇನೋ ಹೇಳುತ್ತಿದ್ದ. ಕೊನೆಗೂ ಅವಳ ಮುಖದಲ್ಲಿ ನಗೆಯುಕ್ಕಿತು.

`ಮಮ್ಮೀ ಪ್ಲೀಸ್... ಟೋಪಿ ಕೊಡಿಸು~ ಎಂಬ ಮಗುವಿನ ಒತ್ತಾಯಕ್ಕೆ ಮಣಿದ ತಾಯಿಯೊಬ್ಬಳು ಟೋಪಿ ಕೊಡಿಸಿದಾಗ ಅದನ್ನು ಹಿಂದೊಮ್ಮೆ, ಮುಂದೊಮ್ಮೆ ತಿರುಗಿಸಿ ತಲೆ ಮೇಲಿಟ್ಟು ತುಂಟ ನಗೆ ನಕ್ಕಿದ್ದು ತಾಯಿಯ ಕಣ್ಣಲ್ಲೂ ಪ್ರತಿಫಲಿಸಿತು.
`ಟೋಪಿ ಹಾಕೋದು ರಾಜಕಾರಣಿಗಳಲ್ವೇ? ಇವರೂ ಹಾಕೋಕೆ ಬಂದಿದ್ದಾರೆ ನೋಡಿ~ ಎಂದು ನಕ್ಕು ಪಾಳಿಯ ಹೊಣೆ ಜೊತೆಗಾರನಿಗೆ ವಹಿಸಿ ಮನೆ ಹೊರಟಿದ್ದ ಕಾವಲುಗಾರ.

... `ಸ್ವರಾತ್ಮ~ ತಂಡದ ಎರಡನೇ ಆಲ್ಬಂ `ಟೋಪಿವಾಲಾ~ ಬಿಡುಗಡೆಯ ಸಂದರ್ಭ ಫ್ರೀಡಂ ಪಾರ್ಕ್‌ನಲ್ಲಿ ಕಂಡುಬಂದ ಬಿಡಿ ಬಿಡಿ ಚಿತ್ರಗಳಿವು. ಗಂಟೆಗೂ ಮೊದಲೇ ಅಲ್ಲಿ ಸೇರಿದ್ದ ಜನ ಆಪ್ತೇಷ್ಟರಿಗೆ ಕುಳಿತಲ್ಲಿಂದಲೇ ಕರೆ ಮಾಡಿ ಆಹ್ವಾನಿಸುತ್ತಿದ್ದರು.

`ಸ್ವರಾತ್ಮ~ ತಂಡದ ಸಂಗೀತ ಕಾರ್ಯಕ್ರಮವಿದೆ ಎಂದು ಸ್ನೇಹಿತ ಹೇಳಿದ್ದರಿಂದ ಇಲ್ಲಿಗೆ ಬಂದೆ. ಇವರು ಏನಾದರೂ ಭಿನ್ನ ಶೈಲಿಯಲ್ಲಿ ಮಾಡುತ್ತಾರೆ. ನನಗಂತೂ ಈ ತಂಡದ ಹಾಡುಗಳು ಇಷ್ಟ. ಸೀಡಿ ಕೂಡ ತೆಗೆದುಕೊಂಡಿದ್ದೇನೆ~ ಎಂದ ಪ್ರಸನ್ನ ಕುಮಾರ್ ಎಲ್ಲರಿಗಿಂತ ಮುಂದೆ ಕುಳಿತು ಕೈಚೀಲದಿಂದ ಪುಟ್ಟ ಕ್ಯಾಮೆರಾವನ್ನು ಹೊರತೆಗೆದರು.

ಕಣ್ಣು ಕೋರೈಸುವ ದೀಪಗಳ ನಡುವಿನಿಂದ `ನಮಸ್ಕಾರ್ ಬೆಂಗಳೂರು~ ಎಂದು ಕೂಗುತ್ತಾ ಒಂದು ಗುಂಪು ಬಂತು. ನೆರೆದ ಜನರೂ ಚಪ್ಪಾಳೆಯ ಮೂಲಕ ಪ್ರತಿಕ್ರಿಯಿಸಿದರು.

`ಎಲ್ಲಿ ಹೋಗಲಿ ಶಿವನೇ ನೀನೇ ಹೇಳಯ್ಯಾ...~ ಎಂದು ಹಾಡು ಹೇಳಿ ಮುಗಿಸಿದಾಗ ಎಲ್ಲರೂ ಎದ್ದು ನಿಂತು ತಮ್ಮ ಹರ್ಷ ವ್ಯಕ್ತಪಡಿಸಿದರು. ಒಂದಾದ ಮೇಲೊಂದು ಹಾಡು ಹಾಡುತ್ತಲೇ `ಸ್ವರಾತ್ಮ~ದವರು ಪ್ರತಿಯೊಂದು ಹಾಡಿಗೂ ಭಿನ್ನ ಶೈಲಿಯಲ್ಲಿ ಹೆಜ್ಜೆಹಾಕುತ್ತಾ ಸಭಿಕರನ್ನು ರಂಜಿಸಿದರು. ಸಭೆಯೂ ಹೆಜ್ಜೆ ಹಾಕಿತು.

ಸಂಗೀತಪ್ರಿಯ ಸ್ನೇಹಿತರ ಸಂಗಮವೇ ಸ್ವರಾತ್ಮ. ಆರು ಜನರ ಚಿಕ್ಕ ತಂಡ. ಆದರೆ ಆಶಯ ಮಾತ್ರ ಸಮಾಜಮುಖಿ. ಈ ಹೊಸ ಆಲ್ಬಂನಲ್ಲಿ ರಾಜಕೀಯದಿಂದ ಮಾಧ್ಯಮದವರೆಗೂ, ಸಂಬಂಧಗಳಿಂದ ಕೊಳ್ಳುಬಾಕತನದವರೆಗೂ ಎಲ್ಲ ವಿಷಯಗಳನ್ನೂ ಪ್ರಾಮಾಣಿಕವಾಗಿ, ವ್ಯಂಗ್ಯವಾಗಿ ಕೆಲವೊಮ್ಮೆ ಚುಚ್ಚುಮಾತಿನಿಂದಲೇ ಎಚ್ಚರಿಸುತ್ತಾ, ಸಾಮಾಜಿಕ ಸಂದೇಶವನ್ನು ನೀಡಲಾಗಿದೆ.

`ಮೆಟ್ರೊ~ದೊಂದಿಗೆ ಮಾತಿಗಿಳಿದ ಗಾಯಕ ಪವನ್ ಕುಮಾರ್ ಕೆ.ಜೆ, `ನಾವು ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನೆ ತೆಗೆದುಕೊಂಡು ಹಾಡು ಕಟ್ಟಿದ್ದೇವೆ. ಇತ್ತೀಚೆಗಿನ ರಾಜಕೀಯ ಘಟನೆಗಳು, ರಾಜಕಾರಣಿಗಳ ಭರವಸೆ, ಜನರ ಬೇಸರ, ಒಂದು ಸಣ್ಣ ವಿಷಯವನ್ನು ದೊಡ್ಡದು ಮಾಡುವ ಮಾಧ್ಯಮಗಳು... ಹೀಗೆ ವಾಸ್ತವಗಳನ್ನೇ ಗೀತಸಾಹಿತ್ಯದಲ್ಲಿ ಬಳಸಿದ್ದೇವೆ. ಕೆಲವೊಮ್ಮೆ ರಾಜಕಾರಣಿಗಳಿಂದ ಬೆದರಿಕೆ ಬಂದ್ದ್ದಿದೂ ಇದೆ. ಇನ್ನೂ ಕೆಲವರು ನಕ್ಕು ನಮಗೆ ಪ್ರೋತ್ಸಾಹ ನೀಡ್ದ್ದಿದೂ ಇದೆ ಎಂದರು.

ಸಂಗೀತವೇ ಉಸಿರು...
ಗಿಟಾರ್ ವಾದಕ ಮತ್ತು ಗಾಯಕ ವರುಣ್ ಬೆಂಗಳೂರು ಮೂಲದವರು. ಬಿ.ಕಾಂ ಪದವೀಧರ. `ಸಂಗೀತ ಸಂಯೋಜನೆ ಮತ್ತು ವನ್ಯಜೀವಿಗಳು  ನನ್ನ ಆಸಕ್ತಿಯ ಕ್ಷೇತ್ರ. ಸಂಗೀತವೆಂದರೆ ಪ್ರಾಣ. ಇದರಲ್ಲಿಯೇ ಏನನ್ನಾದರೂ ಸಾಧನೆ ಮಾಡಬೇಕು~ ಎಂದು ಅವರು  ಹೇಳುತ್ತಾರೆ.

ವಾಸು ದೀಕ್ಷಿತ್ ಸಹ ಗಾಯಕ ಹಾಗೂ ಗಿಟಾರ್ ವಾದಕ. ಅಹ್ಮದಾಬಾದ್‌ನಲ್ಲಿ ಫಿಲ್ಮ್ ಮೇಕಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದಿಷ್ಟು ಅನುಭವವನ್ನೂ ಗಳಿಸಿರುವ ವಾಸು, ಸಿನಿಮಾಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ತಮ್ಮ ಮೇಲೆ ಫ್ರೆಡೀ ಮರ್ಕ್ಯುರಿ, ಜಿಮಿ ಹೆಂಡ್ರಿಕ್ಸ್ ಮುಂತಾದ ಜಾನಪದ ಕಲಾವಿದರ ಪ್ರಭಾವವಿದೆ ಎನ್ನುತ್ತಾರೆ. 
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT