ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸ್ವಾದ್ ಕೇಸರಿಯಾ' ಬಲ್ಲಿರಾ ಸವಿಯ...

Last Updated 30 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ರಸಾಸ್ವಾದ

ಬೆಚ್ಚನೆ ಹೊದ್ದು ಮಲಗುವ ಚಾದರದಿಂದ ಹಿಡಿದು ತೊಡುವ ಉಡುಗೆಯ ವಿಷಯದಲ್ಲೂ ಮನಸ್ಸು ಬೆಚ್ಚಗಿನ ಭಾವವನ್ನು ಬಯಸುವಂತೆ ಮಾಡುವುದು ಚಳಿಗಾಲದ ಮಹಾತ್ಮೆ. ಹೀಗಿರುವಾಗ ಚಳಿಗಾಲಕ್ಕೆ ಖಾರ ಮತ್ತು ಬಿಸಿಬಿಸಿಯಾದ ಆಹಾರ ಸೇವಿಸುವುದರಲ್ಲಿರುವ ಮಜವೇ ಬೇರೆ.

ಜನರ ಇಂತಹ ಆಶಯಗಳನ್ನು ಗ್ರಹಿಸಿರುವ ರಾಜಧಾನಿ ಹೋಟೆಲ್ (ಯುಬಿ ಸಿಟಿ) ಜನವರಿ ಒಂದರವರೆಗೆ `ಸ್ವಾದ್ ಕೇಸರಿಯಾ' ಎಂಬ ಚಳಿಗಾಲದ ಆಹಾರೋತ್ಸವವನ್ನು ಏರ್ಪಡಿಸಿದೆ.

ರಾಜಸ್ತಾನ ಹಾಗೂ ಗುಜರಾತ್‌ನ ಸ್ವಾದಿಷ್ಟ ತಿನಿಸುಗಳನ್ನು ಮೆಲ್ಲಲು ಇಲ್ಲಿ ಅವಕಾಶವಿದ್ದು 32 ಬಗೆಯ ಖಾದ್ಯಗಳು ಗ್ರಾಹಕರ ಮನತಣಿಸುತ್ತಿವೆ. ಹೋಟೆಲ್ ಒಳಗೆ ಕಾಲಿಡುತ್ತಿದ್ದಂತೆ ಗಿಜಿಗುಡುವ ಗ್ರಾಹಕರ ಮಧ್ಯೆಯೂ ಸ್ವಾಗತ ದೊರೆಯುತ್ತದೆ. ಹತ್ತಾರು ಬೌಲ್‌ಗಳನ್ನು ಒಳಗೊಂಡ ದೊಡ್ಡ ಪ್ಲೇಟ್ ಮುಂದೆ ಕೂರುತ್ತಿದ್ದಂತೆ ಬಗೆಬಗೆಯ ಪದಾರ್ಥಗಳು ಹಾಜರಾಗುತ್ತವೆ.

ಪ್ರತಿ ಒಂದು ವ್ಯಂಜನ ಬಡಿಸುವಾಗಲೂ ಅದರ ಹೆಸರು ಹೇಳುತ್ತಾ, `ಇನ್ನೂ ಸ್ವಲ್ಪ', `ರುಚಿ ನೋಡಿ' ಎಂದು ಕಾಳಜಿ ವಹಿಸುವ ಪರಿ ಮನೆಯನ್ನು ನೆನಪಿಸುತ್ತದೆ. 32 ಬಗೆಯ ಪದಾರ್ಥ! ಆದರೆ ಪ್ರತಿದಿನವೂ ಮೆನು ಬದಲಾಗುತ್ತದೆ ಎಂಬುದು ವಿಶೇಷ. ಪ್ರಾರಂಭದಲ್ಲಿ ನೀಡುವ ರಸಂನಿಂದಲೇ ನಾಲಿಗೆಗೆ ರುಚಿ ಹತ್ತುತ್ತದೆ. ಗುಗ್ರಾ, ಕಟ್ಟಾ ಢೋಲ್ಕಾ, ದಾಲ್ ಪಕ್ವಾನ್, ದಾಲ್ ಬಟಿ ಚುರ್ಮಾ, ಅರಾವಲಿ ಪನೀರ್, ತಂದಲಿಯಾ ವಾಡಿ, ದಮ್ ಆಲೂ ಪಾಲಕ್, ಬೈಂಗನ್ ಬರ್ತಾ, ಜೈಪುರಿ ಗಟ್ಟಾ... ಹೀಗೆ ಒಂದಾದ ಮೇಲೊಂದು ವೈವಿಧ್ಯಮಯ ಪದಾರ್ಥ...

ರೋಟಿಗೆ ಕಾಂಡ್‌ಕಡಿ, ಸ್ವೀಟ್ ದಾಲ್, ಹರಿಮೂಂಗ್ ಕಿ ದಾಲ್, ಫ್ರೈಡ್ ದಾಲ್ ಕಾಂಬಿನೇಷನ್. ಹೀಗೆ ಹತ್ತಾರು ಬಗೆಯ ಖಾದ್ಯಗಳನ್ನು ತಿಂದು ಮುಗಿಸುತ್ತಿದ್ದಂತೆ ಸ್ಟೀಮ್ಡ ರೈಸ್, ಕೇಸರಿ ಪಲಾವ್, ಕಿಚಡಿ ತಟ್ಟೆಯಲ್ಲಿ ಹಾಜರಾಗುತ್ತದೆ. ಸಾಕು ಸಾಕು ಎಂದರೆ `ಮೊಸರನ್ನವನ್ನೂ ಸ್ವಲ್ಪ ಹಾಕಿಕೊಳ್ಳಿ. ಉಪ್ಪಿನಕಾಯಿ ಜೊತೆಯಲ್ಲಿ ಸೇರಿಸಿಕೊಳ್ಳಿ' ಎಂಬ ಒತ್ತಾಯ.

ಅಂದಹಾಗೆ ಬೂಂದಿ ಗುಲಾಬ್ ಜಾಮೂನು, ಹಲ್ವಾ, ಬಾಸುಂದಿ, ಮಾಲ್ಪುವಾ ವಿತ್ ರಬ್ಡಿ ಮುಂತಾದವುಗಳನ್ನು ಸವಿಯಲೇಬೇಕು. ನಾಲಿಗೆಯಿಂದ ಹೊಟ್ಟೆಯವರೆಗೂ ಸಾಗುವ ಹಾದಿಯುದ್ದಕ್ಕೂ ಸಿಹಿ ಬೀರುತ್ತಾ ಹೋಗುವ ಇವುಗಳನ್ನು ಮತ್ತೆ ಮತ್ತೆ ಚಪ್ಪರಿಸುವ ಮನಸ್ಸಾಗುತ್ತದೆ.

`ಚಳಿಗಾಲದಲ್ಲಿ ಮನಸ್ಸು ಬಯಸುವ ಆಹಾರ ಪದ್ಧತಿಯೇ ಬೇರೆ. ಮೊದಲು ಅವರೆಕಾಳು ಎಲ್ಲಾ ಕಾಲಕ್ಕೂ ಸಿಗುತ್ತಿರಲಿಲ್ಲ. ಅದು ಚಳಿಗಾಲದ ತರಕಾರಿ. ಈಗ ಹಾಗೇನಿಲ್ಲ ಬಿಡಿ. ಚಳಿಗಾಲದ ತರಕಾರಿ ಹಾಗೂ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಚಳಿಗಾಲದ ಆಹಾರವನ್ನು ಗ್ರಾಹಕರಿಗೆ ಉಣಬಡಿಸುತ್ತಿದ್ದೇವೆ. ದಾಲ್ ಪಕ್ವಾ, ಜವಾರಿ ರೋಟ್ಲಾ ದೇಹಕ್ಕೆ ಉಷ್ಣವಾಗಿರುವುದರಿಂದ ಚಳಿಗಾಲಕ್ಕೆ ಹೇಳಿ ಮಾಡಿಸಿದ ಖಾದ್ಯ. ನಾವು ಅಡುಗೆ ಮಾಡುವ ರೀತಿಯನ್ನು ಎಲ್ಲರಿಗೂ ನೋಡಲು ಅವಕಾಶವಿದೆ. ಸ್ವಚ್ಛತೆ ನಮ್ಮ ಆದ್ಯತೆ' ಎಂದು `ರಾಜಧಾನಿ' ವಿಶೇಷತೆ ಬಗ್ಗೆ ವಿವರಿಸಿದರು ಸಹಾಯಕ ವ್ಯವಸ್ಥಾಪಕ ಮಹೇಶ್ ಗೌಡ.

`ಆತಿಥ್ಯ ನೀಡುವ ಸಿಬ್ಬಂದಿ ಸಾಂಪ್ರದಾಯಿಕ ದಿರಿಸಿನಲ್ಲಿದ್ದಾರೆ. `ಉಂದಿಯು' ಗುಜರಾತಿನಲ್ಲಿ ಅತ್ಯಂತ ವಿಶೇಷವಾದ ತಿನಿಸು. ಸುಮಾರು 18 ಬಗೆಯ ತರಕಾರಿಗಳನ್ನು ಹಾಕಿ ಮಾಡುವ ಈ ಪದಾರ್ಥ ಚಳಿಗಾಲದ ವಿಶೇಷ. ಚಳಿಗಾಲಕ್ಕೆ ವಿವಿಧ ತಿನಿಸಿನ ಸವಿ ಮೆಲ್ಲಲು ಇಷ್ಟಪಡುವವರಿಗೆ ಊಟದ ಸಮಯ ಮಧ್ಯಾಹ್ನ 12ರಿಂದ 3.30. ಹಾಗೂ ಸಂಜೆ 7ರಿಂದ 11' ಎಂದು ವಿವರಿಸಿದರು ಮಾರುಕಟ್ಟೆ ಮತ್ತು ಕಾರ್ಯಾಚರಣೆ ವ್ಯವಸ್ಥಾಪಕ ಸುಶೀಲೇಂದ್ರ ಎಂ.ಎನ್.

ಚಳಿಗಾಲದ ಆಹಾರೋತ್ಸವದಲ್ಲಿ ಒಂದು ಥಾಲಿಗೆ ರೂ. 425. ಜನವರಿ ಒಂದರವರೆಗೆ ಈ ಚಳಿಗಾಲದ ವಿಶೇಷ ಊಟ ಲಭ್ಯವಿದೆ.
www://rajdhani.co.in/ Rajdhani_outlets.html ನಲ್ಲಿ ಮಾಹಿತಿ ಸಂಗ್ರಹಿಸಬಹುದು. ಸಂಪರ್ಕಕ್ಕೆ- 080 2213 3400/98860 99229.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT