ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥಕ್ಕಾಗಿ ಪರಿಸರ ನಾಶ ಸಲ್ಲದು

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕನಕಪುರ: ಈ ದೇಶದಲ್ಲಿ ಜನಿಸಿದ ಪ್ರತಿಯೊಂದು ಮಗುವಿಗೂ ಹುಟ್ಟಿನಿಂದಲೇ ಮೂಲಭೂತ ಹಕ್ಕುಗಳು ಪ್ರಾಪ್ತವಾಗುತ್ತವೆ. ಹಾಗಾಗಿ ಈ ನೆಲದ ಸಂಪತ್ತನ್ನು ಅನುಭವಿಸುವಲ್ಲಿ ಎಲ್ಲರೂ ಸರಿಸಮಾನರು ಎಂದು ತಹಸೀಲ್ದಾರ್ ಎಚ್. ಜಿ. ಚಂದ್ರಶೇಖರಯ್ಯ ಹೇಳಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಸೇವಾ ಸಂಸ್ಥೆಯ ತಾಲ್ಲೂಕು ಘಟಕ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆವರಣದಲ್ಲಿ ಏರ್ಪಡಿಸಿದ್ದ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವು ಸ್ವಾರ್ಥಿಗಳು ವೈಯಕ್ತಿಕ ಲಾಭಕ್ಕಾಗಿ ಪರಿಸರವನ್ನು ಇನ್ನಿಲ್ಲದಂತೆ ನಾಶಗೊಳಿಸುತ್ತಿದ್ದಾರೆ. ಇಂತಹವರನ್ನು ಗಮನಿಸುತ್ತಾ ಪ್ರಜ್ಞಾವಂತರು ಕೈಕಟ್ಟಿಕೊಂಡು ಕೂರಬಾರದು. ಇವೆಲ್ಲಾ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಆದ್ದರಿಂದ ಇಂಥವರ ವಿರುದ್ಧ ಪ್ರತಿಯೊಬ್ಬರು ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದರು.

ವಿದ್ಯಾರ್ಥಿ ದೆಸೆಯಲ್ಲೇ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ಅವುಗಳ ಪರಿಕಲ್ಪನೆ ಸ್ಪಷ್ಟವಾಗುತ್ತದೆ. ಇದರಿಂದ ಪ್ರತಿಯೊಬ್ಬರೂ ಕಾನೂನು ಗೌರವಿಸುವುದನ್ನು ಕಲಿತು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಮಾನವ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸೇವಾ ಸಂಸ್ಥೆಗಳು ಕೆಲಸ ನಿರ್ವಹಿ ಸುತ್ತಿವೆ. ಇವುಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಸೇವಾ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಸಿ.ಡಿ.ಕಿರಣ್ ಮಾತನಾಡಿ, ಸಂವಿಧಾನ ಬದ್ಧವಾಗಿ ದೊರೆತಿರುವ ಹಕ್ಕುಗಳ ಬಗ್ಗೆ ನಮಗೆ ಗೌರವಿರಬೇಕು.  ನಮಗೆ ನೀಡಿರುವ ಹಕ್ಕನ್ನು ಸರಿಯಾಗಿ ಚಲಾಯಿಸದಿದ್ದರೆ ಅದನ್ನು ಕೇಳುವ ಪ್ರಶ್ನಿಸುವ ಹಕ್ಕೇ ಉಳಿಯುವುದಿಲ್ಲ. ನೈತಿಕ ಮಟ್ಟವನ್ನು ಕಳೆದುಕೊಂಡಾಗ ಸಹಜವಾಗಿಯೇ ಹಕ್ಕಗಳು ಉಲ್ಲಂಘನೆಯಾಗುತ್ತವೆ.

ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದಾಗ ಯಾವ ಹಕ್ಕುಗಳೂ ಉಲ್ಲಂಘನೆಯಾಗುವುದಿಲ್ಲ ಎಂದರು.  ರಾಜ್ಯದಲ್ಲಿ ಸೇವಾ ಸಂಸ್ಥೆಯನ್ನು ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭಿಸಲಾಗಿದ್ದು ಮಾನವ ಹಕ್ಕುಗಳ ಉಲ್ಲಂಘನೆ ತಡೆಗಟ್ಟಲು ಹಾಗೂ ಅಸಕ್ತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಸಂಸ್ಥೆಯು ಇಂದು 23 ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. ಪ್ರತಿ ತಾಲ್ಲೂಕಿನಲ್ಲೂ ಸೇವಾ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ತಾಲ್ಲೂಕಿನ ಜನತೆ ತಮ್ಮ ಹಕ್ಕುಗಳಿಗೆ  ಸಮಸ್ಯೆ ಬಂದಾಗ ಸಂಸ್ಥೆಯಿಂದ ಸೂಕ್ತ ನೆರವನ್ನು  ಪಡೆದುಕೊಳ್ಳಬಹುದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೇಷ್ಮೆ ವಿಸ್ತರಣಾಧಿಕಾರಿ ಕಿರಣಗೆರೆ ಜಗದೀಶ್ ಮಾತನಾಡಿ, ಅಪರಾಧ ಪ್ರಕರಣಗಳು ಹೆಚ್ಚಾಗಲು ನಮ್ಮಲಿರ‌್ಲುವ ತಾರತಮ್ಯ ಮತ್ತು ಅನಕ್ಷರತೆಯೇ ಕಾರಣ ಎಂದರು.
ಜನರಲ್ಲಿ ಜಾಗೃತಿ ಮೂಡಿಸಲು, ಹಕ್ಕುಗಳ ಬಗ್ಗೆ ತಿಳಿವಳಿಕೆ ನೀಡಲು ಆಯೋಗ ಮತ್ತು ಸೇವಾ ಸಂಸ್ಥೆಯ ಅನಿವಾರ್ಯತೆಯಿದೆ. ಹಕ್ಕುಗಳ ಉಲ್ಲಂಘನೆಯಾದಾಗ ನಿರ್ಭಿತಿಯಿಂದ ಹೇಳಿಕೊಂಡರೆ ಮುಂದೆ ಅಂತಹ ಉಲ್ಲಂಘನೆಯಾಗದಂತೆ ತಡೆಗಟ್ಟಬಹುದು.

ಆ ನಿಟ್ಟಿನಲ್ಲಿ ಸೇವಾ ಸಂಸ್ಥೆ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು. ಜಿಲ್ಲಾಧ್ಯಕ್ಷ ಎಂ. ಮಧುಗೌಡ ಮತ್ತು ತಾಲ್ಲೂಕು ಅಧ್ಯಕ್ಷ ಎಂ.ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿ, ತಾಲ್ಲೂಕಿನಲ್ಲಿ ಮಾನವ ಹಕ್ಕುಗಳ ಸೇವಾ ಸಂಸ್ಥೆಯನ್ನು ನೂತನವಾಗಿ ಪ್ರಾರಂಭಿಸಿ ಆಯೋಗದ ಜೊತೆ ಜೊತೆಗೆ ಕೆಲಸ ನಿರ್ವಹಿಸಲಾಗುವುದು. ತಾಲ್ಲೂಕಿನ ಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಶ್ರಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಶಿವಬಸವೇ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.
ಆರಕ್ಷಕ ಉಪನಿರೀಕ್ಷರುಗಳಾದ ಸಿ.ಕೃಷ್ಣಕುಮಾರ್, ಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶಿವರಾಮೇ ಗೌಡ, ಶಿಕ್ಷಣ ಸಂಯೋಜಕ  ಶಿವರಾಜು, ಮುಖ್ಯ ಶಿಕ್ಷಕ ದೊಡ್ಡವೀರೇಗೌಡ ಸೇವಾ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಶಿವಾನಂದ್, ಜಿಲ್ಲಾ ಮಹಿಳಾ ಕಾರ್ಯದರ್ಶಿ ಕಲ್ಪನಾ ಸುಂದರೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT